ತ್ರಿವಿಕ್ರಂನೇ ಭವ್ಯಾಗೆ ಗಿಫ್ಟ್ ಆಗಿ ಕೊಟ್ಟ ಸುದೀಪ್; ಜೊತೆಗೆ ಸಿಕ್ತು ಒಂದು ಎಚ್ಚರಿಕೆ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಮತ್ತು ತ್ರಿವಿಕ್ರಂ ಅವರ ನಡುವೆ ಆಪ್ತ ಸ್ನೇಹ ಬೆಳೆದಿದೆ. ವರ್ಷಾಂತ್ಯದ ಗಿಫ್ಟ್ ಎಕ್ಸ್‌ಚೇಂಜ್‌ನಲ್ಲಿ ಭವ್ಯಾ ತ್ರಿವಿಕ್ರಂಗೆ ಉಡುಗೊರೆ ನೀಡಿದರು. ಸುದೀಪ್ ಅವರು ಈ ಬಾಂಧವ್ಯದ ಬಗ್ಗೆ ಗಮನಿಸಿ, ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಿದರು.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಅವರ ಬಾಂಡಿಗೆ ಹೆಚ್ಚುತ್ತಲೇ ಇದೆ. ಇಬ್ಬರ ಮಧ್ಯೆ ಒಳ್ಳೆಯ ಆಪ್ತತೆ ಬೆಳೆದಿದೆ. ಈ ಬಾಂಡಿಗ್ ಸುದೀಪ್ ಗಮನಕ್ಕೂ ಬಂದಿದೆ. ಈ ವಿಚಾರ ವೀಕೆಂಡ್ನಲ್ಲಿ ಚರ್ಚೆಗೆ ಬಂದಿದೆ. ಸುದೀಪ್ ಅವರು ಭವ್ಯಾಗೆ ತ್ರಿವಿಕ್ರಂ ಅವರನ್ನೇ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮುಂದೆ ನಡೆಯಬಹುದಾದ ಘಟನೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ವರ್ಷಾಂತ್ಯ ಬಂದಿದೆ. ಹೀಗಾಗಿ, ಪರಸ್ಪರ ಗಿಫ್ಟ್ ಎಕ್ಸ್ಚೇಂಜ್ ಮಾಡಿಕೊಳ್ಳುವ ಅವಕಾಶವನ್ನು ಸುದೀಪ್ ನೀಡಿದರು. ತಮ್ಮ ಬಳಿ ಇರುವ ಅತ್ಯಮೂಲ್ಯ ವಸ್ತುವನ್ನು ಮತ್ತೊಬ್ಬರಿಗೆ ಕೊಡಬೇಕು. ಆಗ ಭವ್ಯಾ ಗೌಡ ಅವರು ತ್ರಿವಿಕ್ರಂನ ಹೊಗಳಿದರು. ‘ಅವರು ನೋಡೋಕೆ ಒರಟನಂತೆ ಕಂಡರೂ ತುಂಬಾನೇ ಮೃದು. ಅವರ ಆ ಗುಣ ಇಷ್ಟ. ಅವರು ಬಂದು ಕಣ್ಣೀರು ಒರೆಸುತ್ತಾರೆ’ ಎಂದು ಭವ್ಯಾ ಹೊಗಳುತ್ತಾ ಶರ್ಟ್ನ ಗಿಫ್ಟ್ ಕೊಟ್ಟರು.
ಈ ವೇಳೆ ಸುದೀಪ್ ಅವರು ಒಂದು ಎಚ್ಚರಿಕೆ ಕೊಟ್ಟರು. ‘ತ್ರಿವಿಕ್ರಂನ ನಾನು ಹತ್ತಿರದಿಂದ ಕಂಡಿದ್ದೇನೆ. ಅವರು ಸಿಕ್ಕಿದ್ರು ಅಂತ ನಿಮ್ಮ ಜೊತೆಗಿದ್ದವರನ್ನು ಬಿಟ್ಟುಕೊಳ್ಳಬೇಡಿ. ಆಮೇಲೆ ಮುಂದೆ ಕಣ್ಣೀರು ಒರೆಸೋಕೆ ಅವರೇ ಬೇಕಾಗುತ್ತದೆ’ ಎಂದು ಕಿವಿಮಾತು ಹೇಳಿದರು. ಇದನ್ನು ಭವ್ಯಾ ಅವರು ಹಾಸ್ಯದ ರೂಪದಲ್ಲೇ ಸ್ವೀಕರಿಸಿದರು. ನಂತರ ತ್ರಿವಿಕ್ರಂ ಅವರು ಭವ್ಯಾಗೆ ಜೆರ್ಸಿ ಕೊಟ್ಟರು.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಕಡೆಯಿಂದ ಚೈತ್ರಾಗೆ ಸಿಕ್ತು ಎಂದೂ ಮರೆಯಲಾಗದ ಗಿಫ್ಟ್
ಎಲ್ಲರೂ ಗಿಫ್ಟ್ ಎಕ್ಸ್ಚೇಂಜ್ ಮಾಡಿಕೊಂಡ ಬಳಿಕ ಚೈತ್ರಾ ಹಾಗೂ ರಜತ್ಗೆ ಮಾತ್ರ ಯಾವ ಉಡುಗೊರೆಯೂ ಸಿಕ್ಕಿಲ್ಲ. ಈ ವೇಳೆ ಸುದೀಪ್ ಅವರು ತಮ್ಮ ಕಿವಿಗೆ ಹಾಕಿದ್ದ ಚಿಕ್ಕದಾದ ರಿಂಗ್ನ ಚೈತ್ರಾ ಹಾಗೂ ರಜತ್ಗೆ ಕಳುಹಿಸಿದರು. ಈ ವೇಳೆ ಭವ್ಯಾ ಗೌಡ ಅವರು, ‘ನಮಗೂ ಏನಾದರೂ ಉಡುಗೊರೆ ಕೊಡಿ’ ಎಂದು ಕೋರಿದರು. ಆಗ ಸುದೀಪ್, ‘ತ್ರಿವಿಕ್ರಂನ ಗಿಫ್ಟ್ ಆಗಿ ಕೊಟ್ಟಿದೀವಲ್ಲ’ ಎಂದರು. ಇದನ್ನು ಕೇಳಿ ಎಲ್ಲರೂ ನಕ್ಕರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.