Bigg Boss Finale: ಬಿಗ್ ಬಾಸ್ ಫಿನಾಲೆ ಕಿಚ್ಚು ಶುರು; ಹೆಚ್ಚಿತು ಐವರು ಸ್ಪರ್ಧಿಗಳ ಎದೆಬಡಿತ
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 8ರ ಫಿನಾಲೆ ನಡೆಯುತ್ತಿದೆ. ಮಂಜು ಪಾವಗಡ ಗೆಲ್ಲಬಹುದು ಎಂದು ಒಂದು ವರ್ಗದ ವೀಕ್ಷಕರು ಅಭಿಪ್ರಾಯಪಟ್ಟಿದ್ದರೆ, ಅರವಿಂದ್ ಗೆಲ್ಲುತ್ತಾರೆ ಎಂಬುದು ಮತ್ತೊಂದು ವರ್ಗದ ವೀಕ್ಷಕರ ಅಭಿಪ್ರಾಯ. ದಿವ್ಯಾ ಉರುಡುಗ, ವೈಷ್ಣವಿ ಗೌಡ ಹಾಗೂ ಪ್ರಶಾಂತ್ ಸಂಬರಗಿ ಕೂಡ ಕಣದಲ್ಲಿದ್ದಾರೆ.
115ಕ್ಕೂ ಹೆಚ್ಚು ದಿನಗಳ ಕಾಲ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ ಕನ್ನಡ ಬಿಗ್ ಬಾಸ್ (Bigg Boss) ಸೀಸನ್ 8ಕ್ಕೆ ಈಗ ಫಿನಾಲೆ ಸಮಯ. ಆ.7 ಮತ್ತು 8ರಂದು ಅದ್ದೂರಿಯಾಗಿ ಫಿನಾಲೆ (Bigg Boss Finale) ಕಾರ್ಯಕ್ರಮ ನಡೆಯುತ್ತಿದೆ. ನೋಡನೋಡುತ್ತಿದ್ದಂತೆಯೇ ಒಂದು ಕಲರ್ಫುಲ್ ಜರ್ನಿಗೆ ತೆರೆ ಬೀಳಲಿದೆ. ಇಷ್ಟು ದಿನಗಳ ಕಾಲ ಎಲ್ಲ ಏಳುಬೀಳುಗಳನ್ನು ಎದುರಿಸಿಕೊಂಡು ಬಂದ ಐವರು ಸ್ಪರ್ಧಿಗಳಿಗೆ ಇಂದು ಮತ್ತು ನಾಳೆ ಬಹುಮುಖ್ಯ ದಿನ. ದಿವ್ಯಾ ಉರುಡುಗ, ಮಂಜು ಪಾವಗಡ (Manju Pavagada), ಅರವಿಂದ್ ಕೆಪಿ, ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ಗೌಡ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಯಾರು ವಿನ್ನರ್ (Bigg Boss Winner) ಎಂದು ಕಿಚ್ಚ ಸುದೀಪ್ ಘೋಷಿಸುವ ಆ ಕ್ಷಣಕ್ಕಾಗಿ ಕಾತರ ಹೆಚ್ಚಾಗಿದೆ.
ಬಿಡದಿಯಲ್ಲಿರುವ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಫಿನಾಲೆಗೆ ವೇದಿಕೆ ಸಜ್ಜಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಶೂಟಿಂಗ್ ಆರಂಭ ಆಗಿದೆ. ಸಂಜೆ ಕಲರ್ಫುಲ್ ಆಗಿ ಬಿತ್ತರ ಆಗುವ ಕಾರ್ಯಕ್ರಮವನ್ನು ಬೆಳಗ್ಗೆ 10 ಗಂಟೆಯಿಂದಲೇ ಚಿತ್ರಿಸಲಾಗುತ್ತಿದೆ. ವೇದಿಕೆ ಮೇಲೆ ನಟ-ನಟಿಯರ ಡ್ಯಾನ್ಸ್ ಪರ್ಫಾರ್ಮೆನ್ಸ್, ಕಿಚ್ಚನ ಮಸ್ತ್ ನಿರೂಪಣೆ ಸೇರಿದಂತೆ ಅನೇಕ ರಂಗುರಂಗಿನ ಕ್ಷಣಗಳ ಚಿತ್ರೀಕರಣ ನಡೆಯುತ್ತಿದೆ.
ಕಿರುತೆರೆ ವೀಕ್ಷಕರಿಗಂತೂ ಬಿಗ್ ಬಾಸ್ ಫಿನಾಲೆ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಯಾರು ವಿನ್ನರ್ ಆಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಫಿನಾಲೆ ತಯಾರಿಯ ಒಂದು ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಕಮೆಂಟ್ ಮಾಡಿದ ಅನೇಕರು ತಮ್ಮ ಕಾತರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಫಿನಾಲೆಗೆ ಬಂದಿರುವ ಎಲ್ಲ 5 ಸ್ಪರ್ಧಿಗಳು ತಮ್ಮದೇ ಪ್ಲಸ್ ಮತ್ತು ಮೈನಸ್ ಗುಣಗಳ ಕಾರಣಕ್ಕೆ ಕೌತುಕ ಮೂಡಿಸಿದ್ದಾರೆ. ಮಂಜು ಪಾವಗಡ ಗೆಲ್ಲಬಹುದು ಎಂದು ಒಂದು ವರ್ಗದ ವೀಕ್ಷಕರು ಅಭಿಪ್ರಾಯಪಟ್ಟಿದ್ದರೆ, ಅರವಿಂದ್ ಗೆಲ್ಲುತ್ತಾರೆ ಎಂಬುದು ಮತ್ತೊಂದು ವರ್ಗದ ವೀಕ್ಷಕರ ಅಭಿಪ್ರಾಯ. ದಿವ್ಯಾ ಉರುಡುಗ, ವೈಷ್ಣವಿ ಗೌಡ ಹಾಗೂ ಪ್ರಶಾಂತ್ ಸಂಬರಗಿ ಕೂಡ ವೀಕ್ಷಕರಿಂದ ಹೆಚ್ಚು ವೋಟ್ಗಳನ್ನು ಪಡೆದಿದ್ದರೆ ಅವರಲ್ಲಿ ಒಬ್ಬರು ಬಿಗ್ ಬಾಸ್ ಟ್ರೋಫಿ ಎತ್ತಿಹಿಡಿಯಬಹುದು. ಈ ಎಲ್ಲ ಕೌತುಕಕ್ಕೆ ಭಾನುವಾರ ರಾತ್ರಿ ತೆರೆ ಬೀಳಲಿದೆ.
ಇದನ್ನೂ ಓದಿ:
ಬಿಗ್ ಬಾಸ್ನಿಂದ ಎಲಿಮಿನೇಟ್ ಆದ ಮೇಲೂ ದಿವ್ಯಾಗೆ ಮಂಜು ಮೇಲಿನ ಭಾವನೆ ಬದಲಾಗಿಲ್ಲ; ಇಲ್ಲಿದೆ ವಿಡಿಯೋ ಸಾಕ್ಷಿ
Published On - 9:31 am, Sat, 7 August 21