ಕಿವಿ ಹಿಡಿದು ಮಂಡಿ ಬಗ್ಗಿಸಿ ಬಿಗ್ಬಾಸ್ಗೆ ಕ್ಷಮೆ ಕೇಳಿದ ಡ್ರೋನ್ ಪ್ರತಾಪ್: ಮಾಡಿದ ತಪ್ಪೇನು?
Drone Prathap: ಬಿಗ್ಬಾಸ್ ಮನೆಯ ಜನಪ್ರಿಯ ಸ್ಪರ್ಧಿ ಆಗಿರುವ ಡ್ರೋನ್ ಪ್ರತಾಪ್, ಬುಧವಾರ ಪ್ರಸಾರವಾದ ಎಪಿಸೋಡ್ನಲ್ಲಿ ಕಿವಿ ಹಿಡಿದುಕೊಂಡು, ಮಂಡಿ ತಗ್ಗಿಸಿ ಬಿಗ್ಬಾಸ್ ಬಳಿ ಕ್ಷಮೆ ಕೇಳಿದರು. ಅಷ್ಟಕ್ಕೂ ಪ್ರತಾಪ್ ಮಾಡಿದ ತಪ್ಪೇನು?
ಬಿಗ್ಬಾಸ್ (Bigg Boss) ಕನ್ನಡ ಸೀಸನ್ 10ರ ಜನಪ್ರಿಯ ಸ್ಪರ್ಧಿ ಡ್ರೋನ್ ಪ್ರತಾಪ್ (Drone Prathap). ಕಳೆದ ವಾರ ನಾಮಿನೇಷನ್ನಲ್ಲಿದ್ದ ಸದಸ್ಯರ ಪೈಕಿ ಅತ್ಯಂತ ಹೆಚ್ಚು ಮತಗಳನ್ನು ಪಡೆದಿರುವುದು ಡ್ರೋನ್ ಪ್ರತಾಪ್. ಕಳೆದ ಕೆಲವು ವಾರಗಳಲ್ಲಿ ಮನೆಯ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ಡ್ರೋನ್ ಪ್ರತಾಪ್, ಇತ್ತೀಚೆಗೆ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬ್ಯಾಚ್ ಸೇರಿಬಿಟ್ಟಿದ್ದಾರೆ. ಈ ವಾರ ತಂಡದ ಕ್ಯಾಪ್ಟನ್ ಆಗಿದ್ದಾಗ ಪ್ರತಾಪ್ ತೆಗೆದುಕೊಂಡ ಕೆಲವು ಅತಿರೇಕದ ನಿರ್ಣಯಗಳು ಅವರ ತಂಡಕ್ಕೆ ಹೀನಾಯ ಸೋಲು ತಂದಿರುವುದು ಮಾತ್ರವೇ ಅಲ್ಲದೆ ಕೆಲವು ವಿರೋಧಿಗಳನ್ನು ಸಹ ಸೃಷ್ಟಿಸಿದೆ.
ಬುಧವಾರದ ಎಪಿಸೋಡ್ನಲ್ಲಿ ಡ್ರೋನ್ ಪ್ರತಾಪ್, ಕಿವಿ ಹಿಡಿದುಕೊಂಡು, ಮಂಡಿ ತಗ್ಗಿಸಿ ಬಿಗ್ಬಾಸ್ ಕ್ಷಮೆ ಕೇಳಿದ್ದಾರೆ ಅದೂ ಕೇವಲ ಒಂದು ಬಾರಿ ಅಲ್ಲ ಬದಲಿಗೆ ಹಲವು ಬಾರಿ. ಪ್ರತಾಪ್ ಹುಡುಗಾಟಕ್ಕೆ ಮಾಡಿದ ಸಣ್ಣ ತಪ್ಪಿಗೆ ನೀಡಿರುವ ಶಿಕ್ಷೆಯಿದು. ಆಗಿದ್ದಿಷ್ಟು, ತುಕಾಲಿ ಸಂತೋಷ್, ಮೈಕ್ ಧರಿಸದೆ ಮನೆಯಲ್ಲಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಬಿಗ್ಬಾಸ್, ತುಕಾಲಿ ಅವರಿಗೆ ಅವರ ಮೈಕ್ ಎಲ್ಲಿ ಎಂದು ಕೇಳಿದರು. ತುಕಾಲಿ ಸಂತೋಷ್ ಗೆ ಸಹ ತಮ್ಮ ಮೈಕ್ ಎಲ್ಲಿದೆ ಎಂದು ಗೊತ್ತಿರಲಿಲ್ಲ. ಆಗ ಬಿಗ್ಬಾಸ್, ನಿಮ್ಮ ಮೈಕ್ ಸಿಗುವವರೆಗೆ ನೀವು ಮಾತನಾಡುವಂತಿಲ್ಲ ಎಂದು ಹೇಳಿದರು.
ಅಸಲಿಗೆ ಡ್ರೋನ್ ಪ್ರತಾಪ್ ಅವರೇ ತುಕಾಲಿ ಅವರ ಮೈಕ್ ಅನ್ನು ಬಚ್ಚಿಟ್ಟಿದ್ದಾರೆಂಬುದು ಗೊತ್ತಾಯ್ತು. ಆಗ ಕೆಲವರು, ಮೈಕ್ ಬಚ್ಚಿಟ್ಟ ಪ್ರತಾಪ್ಗೂ ಶಿಕ್ಷೆ ನೀಡಬೇಕು ಎಂದರು. ಆಗ ಬಿಗ್ಬಾಸ್ ‘ಅವರು ಮಾಡಿದ ತಪ್ಪಿಗೂ ಶಿಕ್ಷೆ ಸಿಗಲಿದೆ’ ಎಂದರು. ಶಿಕ್ಷೆಗೆ ಹೆದರಿದ ಪ್ರತಾಪ್, ಕೂಡಲೇ ಓಡಿ ಹೋಗಿ ಬಚ್ಚಿಟ್ಟಿದ್ದ ಮೈಕ್ ತಂದು ತುಕಾಲಿ ಅವರಿಗೆ ಕೊಟ್ಟರು. ಬಳಿಕ, ಮೈಕ್ ಬಚ್ಚಿಟ್ಟಿದ್ದ ಪ್ರತಾಪ್ಗೆ ಶಿಕ್ಷೆ ನೀಡುವ ಅಧಿಕಾರವನ್ನು ಬಿಗ್ಬಾಸ್, ಮೈಖಲ್ಗೆ ನೀಡಿದರು.
ಇದನ್ನೂ ಓದಿ:ನಂಬಿಸಿ ಮೋಸ ಮಾಡಿದ್ರಾ ಡ್ರೋನ್ ಪ್ರತಾಪ್? ಕ್ಯಾಪ್ಟನ್ಸಿ ಓಟದಿಂದ ನಮ್ರತಾ ಔಟ್
ಮಾಡಿದ ತಪ್ಪಿಗೆ ಲಿವಿಂಗ್ ಏರಿಯಾದಲ್ಲಿರುವ ಎಲ್ಲ ಕ್ಯಾಮೆರಾಗಳಿಗೂ ಹೋಗಿ ಕಿವಿ ಹಿಡಿದುಕೊಂಡು ಕ್ಷಮೆ ಕೇಳಿ, ಮೈಕ್ ವಿಚಾರದಲ್ಲಿ ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಹೇಳು ಎಂದರು ಮೈಕಲ್. ಸರಿಯೆಂದು ಡ್ರೋನ್ ಪ್ರತಾಪ್, ಸಹ ಲಿವಿಂಗ್ ಏರಿಯಾದ ಎಲ್ಲ ಮೈಕ್ಗಳ ಬಳಿ ಹೋಗಿ ಕಿವಿ ಹಿಡಿದುಕೊಂಡು ತಪ್ಪಾಯ್ತು ಬಿಗ್ಬಾಸ್, ಮೈಕ್ ವಿಚಾರದಲ್ಲಿ ಇನ್ನೊಮ್ಮೆ ಹೀಗೆ ತಪ್ಪು ಮಾಡುವುದಿಲ್ಲ ಎಂದು ಕ್ಷಮೆ ಕೇಳಿದರು.
ಬಿಗ್ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದರು. ಆದರೆ ಮೊದಲ ಬಾರಿ ತಂಡವನ್ನು ಒಟ್ಟಾಗಿ ಕರೆದುಕೊಂಡು ಹೋಗಿ ಗೆದ್ದಂತೆ ಎರಡನೇ ಬಾರಿ ಗೆಲ್ಲಲಾಗಲಿಲ್ಲ. ಆರಂಭದಲ್ಲಿಯೇ ಏಕಪಕ್ಷೀಯ, ಉದ್ಧಟತನದ ನಿರ್ಧಾರಗಳಿಂದ ತಮ್ಮ ತಂಡವನ್ನು ತಾವೇ ಬಲಹೀನಗೊಳಿಸಿದರು. ಇದರಿಂದಾಗಿ ಪ್ರತಾಪ್ ತಂಡಕ್ಕೆ ಹೀನಾಯ ಸೋಲಾಯ್ತು. ಪ್ರತಾಪ್ ತಂಡದ ಯಾರೊಬ್ಬರೂ ಸಹ ಕ್ಯಾಪ್ಟೆನ್ಸಿ ಟಾಸ್ಕ್ಗೆ ಅಹರ್ತೆ ಗಿಟ್ಟಿಸಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ