ಮೈಖಲ್-ವಿನಯ್ಗೆ ಸುದೀಪ್ ಕ್ಲಾಸ್, ಖಡಕ್ ಎಚ್ಚರಿಕೆ, ಚಪ್ಪಾಳೆ ಸಿಕ್ಕಿದ್ದು ಯಾರಿಗೆ?
Bigg Boss Kannada: ವೀಕೆಂಡ್ ಪಂಚಾಯ್ತಿಗೆ ಆಗಮಿಸಿದ ಕಿಚ್ಚ ಸುದೀಪ್ ವಿನಯ್, ಮೈಖಲ್ ಸೇರಿದಂತೆ ಇನ್ನೂ ಕೆಲವರಿಗೆ ಸಖತ್ ಕ್ಲಾಸ್ ತೆಗೆದುಕೊಂಡರು.
ಮನೆಯ ಸದಸ್ಯರು ವಾರವೆಲ್ಲ ಮಾಡಿರುವ ಕಿತಾಪತಿ, ಜಗಳ, ಇನ್ನೊಬ್ಬ ಸದಸ್ಯರಿಗೆ ಮಾಡಿರುವ ಅನ್ಯಾಯ, ತೋರಿರುವ ಅಹಂಕಾರ ಎಲ್ಲದಕ್ಕೂ ವಾರದ ಕೊನೆಯಲ್ಲಿ ತಕ್ಕ ತಿರುಗೇಟು ಸಿಗುತ್ತದೆ. ಮನೆಯಲ್ಲಿ ಯಾರೇ ತಪ್ಪು ಮಾಡಿದರೂ, ಪರೋಕ್ಷವಾಗಿ ಹೆದರಿಸಿದರೂ ಸಹ ಮನೆಯ ಸದಸ್ಯರು ಹೇಳುವುದು ಒಂದೇ ವೀಕೆಂಡ್ ಬರಲಿ ನೋಡೋಣ ಎಂದು ಅದಕ್ಕೆ ಕಾರಣ, ಸುದೀಪ್ (Sudeep) ಮೇಲಿನ ನಂಬಿಕೆ, ಅವರು ಸರಿಯಾಗಿ ನ್ಯಾಯ ವಿತರಣೆ ಮಾಡುತ್ತಾರೆಂಬ ಭರವಸೆ. ತಮ್ಮ ಮೇಲಿಟ್ಟಿರುವ ಭರವಸೆಯನ್ನು ಬಹುತೇಕ ಉಳಿಸಿಕೊಂಡಿದ್ದಾರೆ ಸುದೀಪ್.
ಈ ವಾರ ಅಂಥಹಾ ಹಲವು ತಪ್ಪುಗಳಾಗಿದ್ದವು, ಮನೆಯ ಹಲವು ಸದಸ್ಯರು ದುರ್ವರ್ತನೆ ತೋರಿದ್ದರು. ಇತರೆ ಸದಸ್ಯರ ಬಗ್ಗೆ ತುಚ್ಛವಾಗಿ ಮಾತನಾಡಿದ್ದರು. ಬೇಕೆಂದೇ ನಿಯಮ ಮುರಿದು ಅಹಂ ಪ್ರದರ್ಶಿಸಿದ್ದರು. ವಾರದಿಂದ ಅದನ್ನೆಲ್ಲ ಗಮನಿಸಿದ್ದ ಸುದೀಪ್ ಶನಿವಾರದ ಎಪಿಸೋಡ್ನಲ್ಲಿ ಮನೆಯ ಕೆಲವು ಸದಸ್ಯರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಅದರಲ್ಲಿ ಪ್ರಮುಖವಾದವರು ವಿನಯ್ ಹಾಗೂ ಮೈಖಲ್.
ಮೈಖಲ್, ಈ ವಾರ ಮನೆಯಲ್ಲಿ ಹಲವು ನಿಯಮಗಳನ್ನು ಮುರಿದಿದ್ದರು. ಮನೆಯ ಕೆಲವು ಸದಸ್ಯರ ಮುಂದೆ ಬಹಿರಂಗವಾಗಿ ಹೇಳಿಯೇ ಕೆಲವು ನಿಯಮಗಳನ್ನು ಮುರಿದಿದ್ದರು. ಉದ್ದೇಶಪೂರ್ವಕವಾಗಿ ಅಶಿಸ್ತು ತೋರಿದ್ದರು. ಹಾಗಾಗಿ ಸುದೀಪ್ ಮೈಖಲ್ ಅನ್ನು ವಿಶೇಷವಾಗಿ ಕ್ಲಾಸ್ ತೆಗೆದುಕೊಂಡರು. ಇನ್ನೊಮ್ಮೆ ಅಶಿಸ್ತು ತೋರಿದರೆ ಸರಿ ಇರೊಲ್ಲ ಎಂದು ಎಚ್ಚರಿಕೆ ಕೊಟ್ಟರು. ವಿನಯ್ ಸಹ, ಕ್ಯಾಪ್ಟನ್ ಆಗಿದ್ದಾಗ ತನಿಷಾ ನೀಡಿದ ಆದೇಶವನ್ನು ಪಾಲಿಸಿರಲಿಲ್ಲ, ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುದೀಪ್, ಇಷ್ಟವಾದರೆ ಶೋನಲ್ಲಿ ಇರಿ ಇಲ್ಲವಾದರೆ ಹೊರಗೆ ಹೋಗಿಬಿಡಿ ಎಂದರು. ಇಬ್ಬರೂ ಸಹ ಕ್ಷಮೆ ಕೋರಿದರು.
ಇದನ್ನೂ ಓದಿ:‘ಸುದೀಪ್ ಸರ್ಗೆ ಹೇಗೆ ಮುಖ ತೋರಿಸಬೇಕೆಂಬುದೇ ತಿಳಿಯುತ್ತಿಲ್ಲ’; ವಿನಯ್ಗೆ ಆತಂಕ
ತುಕಾಲಿ ಸಂತೋಷ್ಗೂ ಸಹ ಕ್ಲಾಸ್ ತೆಗೆದುಕೊಂಡರು ಸುದೀಪ್, ಅವರು ಮಾತನಾಡುವಾಗ ಕೈ ಎತ್ತದೆ, ಅನುಮತಿ ಪಡೆಯದೆ ಮಧ್ಯದಲ್ಲಿ ಮಾತನಾಡಿದ್ದಕ್ಕೆ ಸುದೀಪ್ ತುಸು ಖಾರವಾಗಿಯೇ ತುಕಾಲಿಗೆ ಬೈದರು. ಅಲ್ಲದೆ, ವಾರದ ಮಧ್ಯದಲ್ಲಿ ಮನೆಯ ಹೆಣ್ಣು ಮಕ್ಕಳನ್ನು ಸಾಧಾರಣವಾದ ಫಿಗರ್ಗಳು ಎಂದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮನೆಯಲ್ಲಿ ನಡೆದ ಹಣ ವಿತರಣೆ ಟಾಸ್ಕ್ನಲ್ಲಿ ವೈಯಕ್ತಿಕ ಅಹಂಗಳ ಕಾರಣಕ್ಕೆ ಸರಿಯಾಗಿ ಹಣ ವಿಂಗಡನೆ ಮಾಡಿಕೊಳ್ಳದ ಬಗ್ಗೆಯಂತೂ ಮನೆಯ ಎಲ್ಲ ಸದಸ್ಯರಿಗೂ ಸಾಮೂಹಿಕವಾಗಿ ಟೀಕೆ ಮಾಡಿದರು. ಇದೇ ವಿಷಯವನ್ನು ನಾಳೆ ಅಂದರೆ ಭಾನುವಾರದ ಎಪಿಸೋಡ್ನಲ್ಲಿಯೂ ಚರ್ಚೆ ಮಾಡುವುದಾಗಿ ಸುದೀಪ್ ಹೇಳಿದ್ದಾರೆ.
ಈ ವಾರವೂ ಕಳೆದು ಹೋಗಿದ್ದ ಲಕ್ಷುರಿ ವಸ್ತುಗಳನ್ನು ಮರಳಿ ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ, ಹಾಗೂ ಇಷ್ಟು ದಿನ ತೋರದಿದ್ದ ತಮ್ಮ ಭಿನ್ನ ಮುಖವನ್ನು ಮನೆಯವರೆದುರು ತೋರಿದ ವರ್ತೂರು ಸಂತೋಷ್ಗೆ ಕಿಚ್ಚ ತಮ್ಮ ಚಪ್ಪಾಳೆ ನೀಡಿದರು. ವರ್ತೂರು ಅವರು, ಕಾರ್ತಿಕ್ ರೀತಿ ನಟಿಸಿ ಎಲ್ಲರನ್ನೂ ನಗಿಸಿದ್ದು ಸುದೀಪ್ಗೆ ಬಹಳ ಇಷ್ಟವಾಯ್ತಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ