Dog Sathish: ಬಿಗ್ಬಾಸ್ಗೆ ಹೋಗಲು 25 ಲಕ್ಷಕ್ಕೆ ಬಟ್ಟೆ ಖರೀದಿ: ಯಾರು ಈ ಡಾಗ್ ಸತೀಶ್?
Bigg Boss Kannada Season 12: ಬಿಗ್ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿದ್ದು ಮೂರನೇ ಸ್ಪರ್ಧಿಯಾಗಿ ಡಾಗ್ ಸತೀಶ್ ಅವರು ಎಂಟ್ರಿ ಕೊಟ್ಟಿದ್ದಾರೆ. ಡಾಗ್ ಸತೀಶ್ ಅವರು ಕೋಟ್ಯಂತರ ಬೆಲೆಯ ನಾಯಿಗಳನ್ನು ಖರೀದಿಸುವುದು ಮಾರಾಟ ಮಾಡುವುದು ಮಾಡುತ್ತಾರೆ. ತಮ್ಮನ್ನು ತಾವು ವಿಶ್ವದ ನಂಬರ್ 1 ಡಾಗ್ ಬ್ರೀಡರ್ ಎಂದು ಕರೆದುಕೊಳ್ಳುವ ಡಾಗ್ ಸತೀಶ್ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ...

ಬಿಗ್ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿದ್ದು ಒಬ್ಬೊಬ್ಬರಾಗಿ ಸ್ಪರ್ಧಿಗಳು ಮನೆಯ ಒಳಗೆ ಹೋಗುತ್ತಿದ್ದಾರೆ. ಈಗಾಗಲೇ ಮೂರು ಸ್ಪರ್ಧಿಗಳು ಮನೆ ಸೇರಿದ್ದಾಗಿದೆ. ಮೊದಲ ಸ್ಪರ್ಧಿಯಾಗಿ ನಟ ಕಾಕ್ರೂಚ್ ಸುಧಿ ಬಂದಿದ್ದಾರೆ. ಎರಡನೇ ಸ್ಪರ್ಧಿಯಾಗಿ ನಟಿ ಕಾವ್ಯಾ ಮನೆ ಪ್ರವೇಶ ಮಾಡಿದ್ದಾರೆ. ಮೂರನೇ ಸ್ಪರ್ಧಿಯಾಗಿ ಖ್ಯಾತ ಡಾಗ್ ಬ್ರೀಡರ್ ಆಗಿರುವ ಡಾಗ್ ಸತೀಶ್ ಎಂಟ್ರಿ ಕೊಟ್ಟಿದ್ದಾರೆ. ಕೋಟ್ಯಂತರ ಮೌಲ್ಯದ ನಾಯಿಗಳನ್ನು ಖರೀದಿಸುವ, ಮಾರಾಟ ಮಾಡುವುದೇ ಇವರ ಉದ್ಯೋಗ. ಇವರ ಹಿನ್ನೆಲೆ ಏನು?
ಡಾಗ್ ಸತೀಶ್ ಅವರದ್ದು ಎಳವೆಯಿಂದಲೇ ನಾಯಿಗಳ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಅವರು ಹತ್ತನೇ ತರಗತಿಯಲ್ಲಿದ್ದಾಗಲೇ ನಾಯಿಗಳ ಮಾರಾಟದಲ್ಲಿ ತೊಡಗಿಕೊಂಡಿದ್ದರಂತೆ. ನಾಯಿಗಳನ್ನು ಬ್ರೀಡ್ ಮಾಡುತ್ತಿದ್ದರಂತೆ. ಬಗೆ ಬಗೆಯ ನಾಯಿಗಳನ್ನು ತಂದು, ಬ್ರೀಡ್ ಮಾಡಿ ಮರಿಗಳನ್ನು ಮಾರಾಟ ಮಾಡುತ್ತಿದ್ದರಂತೆ. ಅವರು ಹತ್ತನೇ ತರಗತಿಯಲ್ಲಿದ್ದಾಗಲೇ ದಿನಕ್ಕೆ ಹತ್ತು ಸಾವಿರ ರೂಪಾಯಿ ಗಳಿಸುತ್ತಿದ್ದರಂತೆ.
ತಮ್ಮನ್ನು ತಾವು ವಿಶ್ವದ ನಂಬರ್ 1 ಡಾಗ್ ಬ್ರೀಡರ್ ಎಂದು ಹೇಳಿಕೊಳ್ಳುವ ಸತೀಶ್ ಅವರು, ಡಾಗ್ ಬ್ರೀಡಿಂಗ್ನಲ್ಲಿ ಹಲವು ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರಂತೆ. ಅವರ ಬಳಿ 100 ಕೋಟಿ ಬೆಲೆಯ ನಾಯಿ ಒಂದಿದೆಯಂತೆ. ಟರ್ಕೀಶ್ ಬ್ರೋಸ್ ಹೆಸರಿನ ನಾಯಿಯೊಂದನ್ನು ಸಾಕಿದ್ದಾರಂತೆ. ಸುದೀಪ್ ಅವರಂತೂ ಆ ನಾಯಿಯ ಬೆಲೆ ಕೇಳಿ ಹೌಹಾರಿ ಹೋದರು. ಅಷ್ಟು ಬೆಲೆಯ ಆ ನಾಯಿ ಮಾತನಾಡುತ್ತಾ ಎಂದು ಪ್ರಶ್ನೆ ಕೇಳಿ ಎಲ್ಲರನ್ನೂ ನಗಿಸಿದರು.
ಡಾಗ್ ಸತೀಶ್ ಅವರು ಭಾರಿ ಶ್ರೀಮಂತರಂತೆ. ಬಿಗ್ಬಾಸ್ ಮನೆಗೆ ಬರಬೇಕಾದರೆ ಬರೋಬ್ಬರಿ 25 ಲಕ್ಷ ರೂಪಾಯಿ ಹಣ ಕೊಟ್ಟು ಬಟ್ಟೆಗಳನ್ನು ಖರೀದಿ ಮಾಡಿದ್ದಾರಂತೆ. ಇದು ಕೇಳಿ ಸುದೀಪ್ ಶಾಕ್ ಆದರು. ಗೆದ್ದರೆ ಇಲ್ಲಿ ಕೊಡುವುದು ಕೇವಲ 50 ಲಕ್ಷ, ಅದರ ಅರ್ದದಷ್ಟು ಬಟ್ಟೆಯನ್ನೇ ಖರೀದಿಸಿದ್ದೀರಲ್ಲ ಎಂದರು. ಅದಕ್ಕೆ ಸತೀಶ್, ‘ನನಗೆ ಇಂದು ಹೈದರಾಬಾದ್ನಲ್ಲಿ ಒಂದು ಮೀಟಿಂಗ್ ಇತ್ತು, ಸೆವೆನ್ ಸ್ಟಾರ್ ಹೋಟೆಲ್ನಲ್ಲಿ ಮೀಟಿಂಗ್ ಫಿಕ್ಸ್ ಆಗಿತ್ತು, ಆ ಮೀಟಿಂಗ್ ಅಟೆಂಡ್ ಆಗಿದ್ದರೆ ನನಗೆ 65 ಲಕ್ಷ ರೂಪಾಯಿ ಹಣ ಬರುತ್ತಿತ್ತು. ಆದರೆ ನನಗೆ ಬಿಗ್ಬಾಸ್ ಮುಖ್ಯ ಎಂದು ಅದನ್ನು ಬಿಟ್ಟು ಬಂದೆ’ ಎಂದಿದ್ದಾರೆ ಡಾಗ್ ಸತೀಶ್.
ಬಿಗ್ಬಾಸ್ ಮನೆಗೆ ಹೋಗಬೇಕು ಎಂದು ಕಳೆದ ಎಂಟು ವರ್ಷಗಳಿಂದಲೂ ಪ್ರಯತ್ನ ಪಡುತ್ತಲೇ ಇದ್ದರಂತೆ ಡಾಗ್ ಸತೀಶ್, ಅವರ ಕನಸು ಈ ಬಾರಿ ನನಸಾಗಿದೆ. ಹೊರಗೆ ಐಶಾರಾಮಿ ಜೀವನ ನಡೆಸುತ್ತಿದ್ದ ಡಾಗ್ ಸತೀಶ್, ಬಿಗ್ಬಾಸ್ ಮನೆಯಲ್ಲಿ ಸರಳವಾಗಿ, ಸೀಮಿತ ಸಂಪನ್ಮೂಲಗಳ ನಡುವೆ ಬದುಕಬಲ್ಲರೆ, ಇದ್ದರೂ ಎಷ್ಟು ದಿನ ಇರಬಲ್ಲರು? ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Sun, 28 September 25




