BBK9: ಬಿಗ್ ಬಾಸ್ನಲ್ಲಿ ಮತ್ತೆ ಪ್ರಶಾಂತ್ ಸಂಬರಗಿ, ದೀಪಿಕಾ, ಅನುಪಮಾ ಗೌಡ; ಇದು ದೊಡ್ಮನೆಯ ದೊಡ್ಡ ಟ್ವಿಸ್ಟ್
Bigg Boss Kannada Season 9: ಸೆಪ್ಟೆಂಬರ್ 24ರಿಂದ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಪ್ರಸಾರ ಆರಂಭಿಸಲಿದೆ. ಮಾಜಿ ಸ್ಪರ್ಧಿಗಳಿಗೂ ಈ ಬಾರಿ ಚಾನ್ಸ್ ಸಿಗುತ್ತಿದೆ.
ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎಂದು ಕರೆಸಿಕೊಳ್ಳುವ ‘ಬಿಗ್ ಬಾಸ್’ ಎಂದರೆ ಅದರಲ್ಲಿ ಟ್ವಿಸ್ಟ್ಗಳು ಸರ್ವೇ ಸಾಮಾನ್ಯ. ಅದೇ ರೀತಿ ಕನ್ನಡ ಬಿಗ್ ಬಾಸ್ (Bigg Boss Kannada) ಹೊಸ ಸೀಸನ್ ಆರಂಭಕ್ಕೂ ಮುನ್ನವೇ ದೊಡ್ಡ ಸರ್ಪ್ರೈಸ್ ಎದುರಾಗಿದೆ. ಸೆಪ್ಟೆಂಬರ್ 24ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಶುರುವಾಗಲಿದೆ. ಈ ಸೀಸನ್ನಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬ ಕೌತುಕ ಮನೆ ಮಾಡಿದೆ. ಹೊಸದಾಗಿ ಬರುವ ಸ್ಪರ್ಧಿಗಳ ಜೊತೆಯಲ್ಲಿ ಮಾಜಿ ಸ್ಪರ್ಧಿಗಳು ಕೂಡ ಇರಲಿದ್ದಾರೆ ಎಂಬುದು ಖಚಿತವಾಗಿದೆ. ಈ ಬಗ್ಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿ ಕಡೆಯಿಂದಲೇ ಮಾಹಿತಿ ಹೊರಬಿದ್ದಿದೆ. ಈ ಕುರಿತು ತಿಳಿಸಲು ಪ್ರೋಮೋ ಹಂಚಿಕೊಳ್ಳಲಾಗಿದ್ದು ಇದರಲ್ಲಿ ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್ ಮುಂತಾದವರು ಕಾಣಿಸಿಕೊಂಡಿದ್ದಾರೆ.
ಪ್ರಸ್ತುತ ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೊದಲ ಸೀಸನ್ ನಡೆಯುತ್ತಿದ್ದು, ಕೊನೇ ಹಂತಕ್ಕೆ ಬಂದಿದೆ. ಈ ವಾರ ಅದಕ್ಕೆ ತೆರೆ ಬೀಳಲಿದೆ. ನಂತರ ಉಳಿಯುವುದು ಒಂದು ವಾರ ಗ್ಯಾಪ್ ಮಾತ್ರ. ಸೆಪ್ಟೆಂಬರ್ 24ರಿಂದ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಪ್ರಸಾರ ಆರಂಭಿಸಲಿದೆ. ಎಂದಿನಂತೆ ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
‘ಪ್ರವೀಣರ ಜೊತೆ ನವೀನರು’ ಎಂಬ ಕ್ಯಾಪ್ಷನ್ನೊಂದಿಗೆ 9ನೇ ಸೀಸನ್ನ ಬಿಗ್ ಬಾಸ್ ಪ್ರೋಮೋ ಹಂಚಿಕೊಳ್ಳಲಾಗಿದೆ. ಮಾಜಿ ಸ್ಪರ್ಧಿಗಳಾದ ದೀಪಿಕಾ ದಾಸ್, ಪ್ರಶಾಂತ್ ಸಂಬರಗಿ, ಅನುಪಮಾ ಗೌಡ ಅವರು ಕದ್ದು-ಮುಚ್ಚಿ ತಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡು ಬಿಗ್ ಬಾಸ್ಗೆ ಮನೆಗೆ ಓಡೋಡಿ ಬರುತ್ತಿರುವುದನ್ನು ಇದರಲ್ಲಿ ತೋರಿಸಲಾಗಿದೆ. ತಮ್ಮಿಷ್ಟದ ಹಳೇ ಸ್ಪರ್ಧಿಗಳನ್ನು ಮತ್ತೆ ದೊಡ್ಮನೆಯಲ್ಲಿ ನೋಡಲು ವೀಕ್ಷಕರು ಕಾದಿದ್ದಾರೆ. ಇನ್ನೂ ಯಾರೆಲ್ಲ ಈ ಬಾರಿ ಚಾನ್ಸ್ ಪಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.
ಶುರುವಾಗ್ತಿದೆ ಟೀವಿ ಸೀಸನ್; ಪ್ರವೀಣರ ಜೊತೆ ನವೀನರು!#ಬಿಬಿಕೆ9 GRAND PREMIERE, ದ ಬಿಗ್ಗೆಸ್ಟ್ ಸೀಸನ್ | ಸೆಪ್ಟೆಂಬರ್ 24 ಸಂಜೆ 6, ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ @KicchaSudeep pic.twitter.com/MOz7GmRvLA
— Colors Kannada (@ColorsKannada) September 15, 2022
ಸೆ.24ರ ಸಂಜೆ 6 ಗಂಟೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ನಂತರ ಪ್ರತಿ ದಿನ 9 ಗಂಟೆಗೆ ಸಂಚಿಕೆಗಳು ಪ್ರಸಾರ ಆಗಲಿವೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ಇರುವ ಕೆಲವು ಸ್ಪರ್ಧಿಗಳು ಕೂಡ ಟಿವಿ ಸೀಸನ್ಗೆ ಎಂಟ್ರಿ ಪಡೆಯಲಿದ್ದಾರೆ. ಹಳಬರ ಜೊತೆ ಹೊಸಬರು ನಡೆಸುವ ಈ ಹಣಾಹಣಿ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:23 pm, Thu, 15 September 22