AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ವರ್ಷಗಳ ಬಳಿಕ ಅಪ್ಪನ ಜೊತೆ ಮಾತನಾಡಿದ ಡ್ರೋನ್ ಪ್ರತಾಪ್: ತಂದೆ, ಮಗನಿಗೆ ಹೇಳಿದ್ದೇನು?

Drone Prathap: ಮೂರು ವರ್ಷದಿಂದ ಅಪ್ಪನ ಧ್ವನಿ ಕೇಳದಿದ್ದ ಡ್ರೋಪ್ ಪ್ರತಾಪ್ ಬಿಗ್​ಬಾಸ್ ಮನೆಯಲ್ಲಿ ಇಂದು ಅಪ್ಪನೊಂದಿಗೆ ಮಾತನಾಡಿದರು. ಅತ್ತರು, ಮಾಡಿದ ತಪ್ಪಿಗೆ ಕ್ಷಮೆ ಕೇಳಿದರು. ಡ್ರೋನ್ ಪ್ರತಾಪ್ ತಂದೆ ಏನು ಹೇಳಿದರು?

ಮೂರು ವರ್ಷಗಳ ಬಳಿಕ ಅಪ್ಪನ ಜೊತೆ ಮಾತನಾಡಿದ ಡ್ರೋನ್ ಪ್ರತಾಪ್: ತಂದೆ, ಮಗನಿಗೆ ಹೇಳಿದ್ದೇನು?
ಮಂಜುನಾಥ ಸಿ.
|

Updated on:Nov 18, 2023 | 10:57 PM

Share

ಡ್ರೋನ್ ಪ್ರತಾಪ್ (Drone Prathap) ಬಿಗ್​ಬಾಸ್ ಮನೆಯಲ್ಲಿ ಚೆನ್ನಾಗಿ ಆಟವಾಡುತ್ತಿದ್ದಾರೆ. ಮನೆಗೆ ಬಂದಾಗ ವೀಕ್ ಆಟಗಾರ ಎನಿಸಿಕೊಂಡಿದ್ದ ಮನೆ ಸ್ಪರ್ಧಿಗಳಿಗೆ ವ್ಯಂಗ್ಯಕ್ಕೆ, ಹಾಸ್ಯದ ಸರಕಾಗಿದ್ದ ಪ್ರತಾಪ್ ಈಗ ಮನೆಯ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ, ಮಾತ್ರವಲ್ಲದೆ ಮೊದಲ ವಾರಗಳಲ್ಲಿ ಯಾರಿಂದ ಹಾಸ್ಯಕ್ಕೆ ಒಳಗಾಗಿದ್ದರೋ ಅವರಿಂದಲೇ ಭೇಷ್ ಎನಿಸಿಕೊಂಡಿದ್ದಾರೆ. ಚೆನ್ನಾಗಿಯೇ ಆಡುತ್ತಿರುವ ಅವರಿಗೆ ಅವರ ಮನೆಯ ನೆನಪು ಆಗಾಗ್ಗೆ ಕಾಡುತ್ತಲೇ ಇತ್ತು, ತಂದೆಯನ್ನು ನೋಡಬೇಕು, ಮಾತನಾಡಬೇಕು ಎಂದು ಹೇಳುತ್ತಲೇ ಇರುತ್ತಿದ್ದರು. ಪ್ರತಾಪ್​ರ ಬಯಕೆಯನ್ನು ಬಿಗ್​ಬಾಸ್ ಈಡೇರಿಸಿದೆ.

ಈ ವಾರದ ವೀಕೆಂಡ್ ಪಂಚಾಯಿತಿ ಆರಂಭಿಸಿದ ಸುದೀಪ್ ಟಾಸ್ಕ್ ಗೆದ್ದು ಮನೆಯಿಂದ ಬಂದ ಪತ್ರಗಳನ್ನು ಸ್ವೀಕರಿಸಿದ ಸ್ಪರ್ಧಿಗಳ ಬಳಿ ಆ ಬಗ್ಗೆ ಮಾತನಾಡಿದರು. ಪ್ರತಾಪ್ ಗೆ ಪತ್ರ ಸಿಕ್ಕಿರಲಿಲ್ಲ, ಅದರ ಬಗ್ಗೆ ಕೇಳಿದ ಸುದೀಪ್, ಪತ್ರ ಸಿಕ್ಕಿದ್ದರೆ ಆ ಪತ್ರದಲ್ಲಿ ನೀವು ಏನು ನಿರೀಕ್ಷೆ ಮಾಡುತ್ತಿದ್ದಿರಿ? ಎಂದು ಕೇಳಿದರು. ಅದಕ್ಕೆ ಪ್ರತಾಪ್ ನಾನು ಪತ್ರವನ್ನಷ್ಟೆ ನಿರೀಕ್ಷೆ ಮಾಡುತ್ತಿದ್ದೆ ಎಂದರು. ಮುಂದುವರೆದ ಸುದೀಪ್ ನೀವು ಏನು ಹೇಳುತ್ತಿದ್ದಿರಿ ಎಂದಾಗ ಭಾವುಕಗೊಂಡ ಪ್ರತಾಪ್, ಅಳುತ್ತಲೇ ‘ಅಪ್ಪ’ ಎಂದು ಮಾತು ಆರಂಭಿಸಿದರು. ನೀವು ಅಪ್ಪ ಎಂದು ಕರೆದ ಧ್ವನಿಯಲ್ಲಿ ನಿಜಾಯ್ತಿಯಿತ್ತು ಇನ್ನೊಮ್ಮೆ ಕರೆಯಿರಿ ಎಂದರು. ಪ್ರತಾಪ್ ಮತ್ತೆ ಅಪ್ಪ ಎಂದಾಗ, ಆ ಕಡೆಯಿಂದ ಪ್ರತಾಪ್​ರ ತಂದೆ ಹಲೋ ಎಂದರು.

ಅಪ್ಪನ ಧ್ವನಿ ಕೇಳಿ ಡ್ರೋನ್ ಪ್ರತಾಪ್​ರ ದುಃಖದ ಕಟ್ಟೆ ಒಡೆಯಿತು. ಪ್ರತಾಪ್ ಕೈಯಲ್ಲಿ ಅಳು ತಡೆಯಲಾಗಲಿಲ್ಲ. ಆದರೆ ಅವರ ತಂದೆ, ಸ್ಥಿತಪ್ರಜ್ಞರಾಗಿಯೇ ಮಾತನಾಡಿದರು, ‘ಯಾಕೋ ಅಳುತ್ತೀಯ’, ಹಾಗೆಲ್ಲ ಅಳಬಾರದು. ಸುಮ್ಮನಿರು’’ ಎಂದರು. ಅಪ್ಪನ ಮಾತಿನಿಂದ ತಮ್ಮನ್ನು ತುಸು ಸಂಭಾಳಿಸಿಕೊಂಡ ಪ್ರತಾಪ್, ‘ಅಪ್ಪ ಸಾರಿ ಅಪ್ಪ, ಕ್ಷಮಿಸಿಬಿಡು ಅಪ್ಪ. ನಾನು ತಪ್ಪು ಮಾಡಿದೆ ಅಪ್ಪ’ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಬಗ್ಗೆ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಮಾತು

ಮಗನ ಕ್ಷಮೆಯನ್ನು ಸ್ವೀಕಾರ ಮಾಡಿದಂತೆಯೇ ಮಾತನಾಡಿದ ಪ್ರತಾಪ್​ರ ತಂದೆ, ‘ಬಿಡು ಅದೆಲ್ಲ. ಅಲ್ಲಿ ಚೆನ್ನಾಗಿ ಆಡುತ್ತಿದ್ದೀಯ. ನಾವೆಲ್ಲ ದಿನವೂ ನೋಡುತ್ತಿದ್ದೀವಿ. ಊರವರು ನೋಡುತ್ತಿದ್ದಾರೆ. ಊರವರು ಚೆನ್ನಾಗಿ ಆಡುತ್ತಿದ್ದೀಯ ಅನ್ನುತ್ತಿದ್ದಾರೆ ಚೆನ್ನಾಗಿ ಆಡು ಎಂದರು. ಮುಂದುವರೆದು, ಮಗ ಕ್ಷಮೆ ಕೇಳಿದಾಗ ಅದನ್ನೆಲ್ಲ ನಾವು ತಲೆಗೆ ಹಾಕಿಕೊಂಡಿಲ್ಲ ಎಂದೂ ಸಹ ಹೇಳಿದರು. ಬಳಿಕ ಪ್ರತಾಪ್, ತಂಗಿ, ತಾಯಿಯ ಯೋಗಕ್ಷೇಮ ವಿಚಾರಿಸಿದರು. ಪ್ರತಾಪ್​ರ ತಂದೆ, ಸುದೀಪ್, ಬಿಗ್​ಬಾಸ್ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸು ಎಂದು ಹೇಳಿ ಮಾತು ಮುಗಿಸಿದರು.

ಮೂರು ವರ್ಷಗಳಿಂದಲೂ ಅದುಮಿಟ್ಟುಕೊಂಡಿದ್ದ ಮಾತುಗಳನ್ನು ಡ್ರೋನ್ ಪ್ರತಾಪ್ ಆಡಿದರು. ತಾವು ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳಿದರು. ಸುದೀಪ್ ಸಹ ನೀವು ತಪ್ಪು ಮಾಡಿದ್ದೀರೆಂದು ಒಪ್ಪಿಕೊಳ್ಳುತ್ತೀರಾ ಎಂದಾಗ ನಾನು ತಪ್ಪು ಮಾಡಿರುವುದಾಗಿ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 pm, Sat, 18 November 23