Vanshika: ‘ಗಿಚ್ಚಿ ಗಿಲಿಗಿಲಿ’ ಶೋ ಗೆದ್ದ ಬಳಿಕ ವಂಶಿಕಾ-ಶಿವು ಮೊದಲ ರಿಯಾಕ್ಷನ್
Gicchi Gili Gili Winner: ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ನಟನೆಗೆ ಎಲ್ಲರೂ ಮನ ಸೋತಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ ಶೋ ಗೆಲ್ಲಿಸಿದ ಎಲ್ಲರಿಗೂ ಆಕೆ ಪ್ರೀತಿಭರಿತವಾಗಿ ಧನ್ಯವಾದ ಅರ್ಪಿಸಿದ್ದಾಳೆ.
‘ಕಲರ್ಸ್ ಕನ್ನಡ’ (Colors Kannada) ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಗಿಚ್ಚಿ ಗಿಲಿಗಿಲಿ’ (Gicchi Gili Gili) ಶೋ ಅಂತ್ಯವಾಗಿದೆ. ಈ ಕಾರ್ಯಕ್ರಮದ ಫಿನಾಲೆಯಲ್ಲಿ ವಂಶಿಕಾ ಅಂಜನಿ ಕಶ್ಯಪ್ (Vanshika) ಹಾಗೂ ಶಿವು ವಿನ್ ಆಗಿದ್ದಾರೆ. 5 ತಿಂಗಳ ಕಾಲ ಈ ಶೋ ನಡೆದುಬಂತು. ಟ್ರೋಫಿ ಗೆದ್ದ ಬಳಿಕ ವಂಶಿಕಾ ಮೊದಲ ರಿಯಾಕ್ಷನ್ ನೀಡಿದ್ದಾಳೆ. ಕಿರುತೆರೆ ಮೂಲಕ ಆಕೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿದೆ. ಅವಳ ಚುರುಕುತನಕ್ಕೆ ಎಲ್ಲರೂ ಬೆರಗಾಗಿದ್ದಾರೆ. ‘ಈ ಶೋ ಗೆದ್ದಿದ್ದು ತುಂಬ ಖುಷಿ ಆಗಿದೆ’ ಎಂದು ಆಕೆ ನಗು ಚೆಲ್ಲಿದ್ದಾಳೆ. ಶಿವು ಜೊತೆ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದ ವಂಶಿಕಾ, ತನ್ನ ಮಾತುಗಳನ್ನು ಹಂಚಿಕೊಂಡಿದ್ದಾಳೆ. ನಿರ್ಣಾಯಕರಾದ ಸೃಜನ್ ಲೋಕೇಶ್, ಸಾಧು ಕೋಕಿಲ ಮತ್ತು ಶ್ರುತಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ಶಿವು.
ಅನೇಕ ಸ್ಕಿಟ್ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ವಂಶಿಕಾ ಹಾಗೂ ಶಿವು ವಿನ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಶೋಗೆ ಮೊದಲು ಮಂಜು ಪಾವಗಡ ಅವರು ನಿರೂಪಕನಾಗಿದ್ದರು. ನಂತರ ನಿರಂಜನ್ ದೇಶಪಾಂಡೆ ಬಂದರು. 10 ಜೋಡಿಗಳಾಗಿ 20 ಕಲಾವಿದರು ಇದರಲ್ಲಿ ಪರ್ಫಾರ್ಮೆನ್ಸ್ ನೀಡಿ ಗಮನ ಸೆಳೆದಿದ್ದರು. ಅಂತಿಮವಾಗಿ ಶಿವು-ವಂಶಿಕಾ ಜೋಡಿಗೆ ‘ಗಿಚ್ಚಿ ಗಿಲಿಗಿಲಿ’ ಟ್ರೋಫಿ ಸಿಕ್ಕಿತು.
ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ನಟನೆಗೆ ಎಲ್ಲರೂ ಮನ ಸೋತಿದ್ದಾರೆ. ಶೋ ಗೆಲ್ಲಿಸಿದ ಎಲ್ಲರಿಗೂ ಆಕೆ ಪ್ರೀತಿಭರಿತವಾಗಿ ಧನ್ಯವಾದ ಅರ್ಪಿಸಿದ್ದಾಳೆ. ‘ಲವ್ ಯೂ..’ ಎನ್ನುತ್ತ ತನ್ನ ಅಭಿಮಾನಿಗಳಿಗೆ ಆಕೆ ಫ್ಲೈಯಿಂಗ್ ಕಿಸ್ ನೀಡಿದ್ದಾಳೆ. ಕನ್ನಡದ ಕಿರುತೆರೆಯಲ್ಲಿ ವಂಶಿಕಾಗೆ ಇದು ಎರಡನೇ ಗೆಲುವು. ಈ ಹಿಂದೆ ‘ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲೂ ಆಕೆ ವಿನ್ನರ್ ಆಗಿದ್ದಳು. ಆ ಶೋ ಮೂಲಕ ಆಕೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತ್ತು. ನಂತರ ‘ಗಿಚ್ಚಿ ಗಿಲಿ ಗಿಲಿ’ ಕಾರ್ಯಕ್ರಮದಲ್ಲೂ ವಂಶಿಕಾ ಎಲ್ಲರ ಮನ ಗೆದ್ದಳು.
View this post on Instagram
ಒಟ್ಟಾರೆ ಈ ರಿಯಾಲಿಟಿ ಶೋ ಜರ್ನಿ ಹೇಗಿತ್ತು? ರಿಹರ್ಸಲ್ ನಡೆಯುವಾಗ ವಂಶಿಕಾ ಎಷ್ಟು ತರಲೆ ಮಾಡುತ್ತಿದ್ದಳು? ತಮ್ಮ ಸ್ಕಿಟ್ ಆಯ್ಕೆ ಯಾವ ರೀತಿ ಇರುತ್ತಿತ್ತು.. ಎಂಬಿತ್ಯಾದಿ ವಿಷಯಗಳ ಬಗ್ಗೆ ಶಿವು ಅವರು ಲೈವ್ ಬಂದು ಮಾತನಾಡಿದ್ದಾರೆ. ಶೋ ಗೆದ್ದ ಖುಷಿಗೆ ವಂಶಿಕಾ ಕುಣಿದು ಕುಪ್ಪಳಿಸಿದ್ದಾಳೆ. ಈಗ ಆಕೆಗೆ ಸಿನಿಮಾ ಅವಕಾಶಗಳು ಹರಿದು ಬರುತ್ತಿವೆ. ಬಾಲ ಕಲಾವಿದೆಯಾಗಿ ಅವಳಿಗೆ ಸಖತ್ ಡಿಮ್ಯಾಂಡ್ ಸೃಷ್ಟಿ ಆಗಿದೆ. ‘ವಂಶಿಕಾಳದ್ದು ವಯಸ್ಸಿಗೂ ಮೀರಿದ ಪ್ರತಿಭೆ’ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:42 am, Tue, 20 September 22