ಕೊನೆಗೂ ಈಡೇರಲಿಲ್ಲ ಪ್ರಾರ್ಥನೆ: 42ನೇ ವಯಸ್ಸಿಗೆ ಕಿರುತೆರೆ ನಟ ಮಂಡ್ಯ ರವಿ ನಿಧನ
ಮಂಡ್ಯ ರವಿ ಅವರಿಗೆ ಕಾಮಾಲೆ ರೋಗ ಇತ್ತು. ಇದರ ಜೊತೆಗೆ ಕಿಡ್ನಿ ಸಮಸ್ಯೆ ಕಾಡಿತ್ತು. ಈ ಕಾರಣಕ್ಕೆ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗಿಲ್ಲ.
ಬಣ್ಣದ ಲೋಕಕ್ಕೆ ಒಂದಾದಮೇಲೆ ಒಂದರಂತೆ ಶಾಕ್ ಎದುರಾಗುತ್ತಲೇ ಇದೆ. ಕಳೆದ ಎರಡು ವರ್ಷಗಳಲ್ಲಿ ಹಿರಿತೆರೆ ಹಾಗೂ ಕಿರುತೆರೆಯ ಅನೇಕ ಕಲಾವಿದರು ಇಹಲೋಕ ತ್ಯಜಿಸಿದ್ದಾರೆ. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಿರುತೆರೆ ಕಲಾವಿದ ಮಂಡ್ಯ ರವಿ (Mandya Ravi) ಅವರು ಇಂದು (ಸೆಪ್ಟೆಂಬರ್ 14) ಸಂಜೆ 6 ಗಂಟೆ ಸಂದರ್ಭದಲ್ಲಿ ನಿಧನ ಹೊಂದಿದ್ದಾರೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಅವರ ನಿಧನದಿಂದ ಬಣ್ಣದ ಲೋಕಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಒಂದೊಳ್ಳೆಯ ಕಲಾವಿದನನ್ನು ಕಳೆದುಕೊಂಡಿದ್ದಕ್ಕೆ ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ.
ಮಂಡ್ಯ ರವಿ ಅವರಿಗೆ ಕಾಮಾಲೆ ರೋಗ ಇತ್ತು. ಇದರ ಜೊತೆಗೆ ಕಿಡ್ನಿ ಸಮಸ್ಯೆ ಕಾಡಿತ್ತು. ಈ ಕಾರಣಕ್ಕೆ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗಿಲ್ಲ. ಹೀಗಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಕುಟುಂಬದವರು ಮಂಡ್ಯದತ್ತ ಅವರ ಪಾರ್ಥಿವ ಶರೀರ ಕೊಂಡೊಯ್ಯುತ್ತಿದ್ದಾರೆ. ರವಿ ಅವರ ನಿಧನದಿಂದ ಕುಟುಂಬದವರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅನೇಕ ಕಲಾವಿದರು ರವಿ ನಿಧನವಾರ್ತೆ ಕೇಳಿ ಬೇಸರ ಹೊರಹಾಕಿದ್ದಾರೆ.
ಮಂಡ್ಯ ರವಿ ಅವರ ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಗೊಂದಲ ಕಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅವರ ತಂದೆ, ‘ನನ್ನ ಮಗನಿಗೆ ತೀವ್ರ ಅನಾರೋಗ್ಯ ಕಾಡಿದೆ. ಅವರು ಬದುಕೋದು ಅನುಮಾನ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಅವರು ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿ’ ಎಂದಿದ್ದರು. ಆದರೆ, ಈ ಪ್ರಾರ್ಥನೆ ಫಲಿಸಿಲ್ಲ.
ಇದನ್ನೂ ಓದಿ: ‘ನನ್ನ ಮಗ ನಿಧನ ಹೊಂದಿಲ್ಲ, ಆರೋಗ್ಯ ಸ್ಥಿತಿ ತುಂಬಾನೇ ಗಂಭೀರವಾಗಿದೆ’; ಮಂಡ್ಯ ರವಿ ತಂದೆಯ ಸ್ಪಷ್ಟನೆ
‘ಮಗಳು ಜಾನಕಿಯ ‘ಚಂದು ಭಾರ್ಗಿ’ ರವಿ ಅಸ್ತಂಗತ. ಇನ್ನೂ 42, ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ. ಅತ್ಯಂತ ಆಘಾತಕಾರಿ’ ಎಂದು ನಿರ್ದೇಶಕ ಟಿ.ಎನ್. ಸೀತಾರಾಮ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸೀತಾರಾಮ್ ಅವರ ಹಲವು ಧಾರಾವಾಹಿಗಳಲ್ಲಿ ನಟಿಸಿ ರವಿ ಗಮನ ಸೆಳೆದಿದ್ದರು. ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಅವರು ನಿರ್ವಹಿಸಿದ್ದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಸಿನಿಮಾಗಳಲ್ಲೂ ರವಿ ನಟಿಸಿದ್ದಾರೆ.
Published On - 7:37 pm, Wed, 14 September 22