ಕರಿಮಣಿ ಸೀರಿಯಲ್: ಮಾರ್ಚ್ 24ರಂದು ಬಯಲಾಗಲಿದೆ ಬ್ಲ್ಯಾಕ್ ರೋಸ್ ಮುಖ
‘ಕರಿಮಣಿ’ ಧಾರಾವಾಹಿಯ ಪ್ರೇಕ್ಷಕರೆಲ್ಲ ಬ್ಲ್ಯಾಕ್ ರೋಸ್ ಯಾರು ಎಂಬುದನ್ನು ತಿಳಿಯಲು ಕಾಯುತ್ತಿದ್ದಾರೆ. ಆ ಪಾತ್ರದ ಗುರುತು ಬಯಲಾಗುವ ಸಮಯ ಕೂಡ ಈಗ ಬಂದಿದೆ. ಶೀಘ್ರದಲ್ಲೇ ಈ ರಹಸ್ಯ ಬಹಿರಂಗ ಆಗಲಿದೆ. ಕರ್ಣನಿಗೆ ಕಾಟ ಕೊಡುತ್ತಿರುವ ಬ್ಲ್ಯಾಕ್ ರೋಸ್ ಯಾರು ಎಂಬುದು ಮಾರ್ಚ್ 24ಕ್ಕೆ ತಿಳಿಯಲಿದೆ.

‘ಕಲರ್ಸ್ ಕನ್ನಡ’ (Colors Kannada) ವಾಹಿನಿಯ ಜನಪ್ರಿಯ ಧಾರಾವಾಹಿ ‘ಕರಿಮಣಿ’ಯಲ್ಲಿ ಬ್ಲ್ಯಾಕ್ ರೋಸ್ ಪಾತ್ರದಿಂದ ಕೌತುಕ ಹೆಚ್ಚಾಗಿದೆ. ಹೀರೋ ಕರ್ಣನನ್ನು ನಾಶ ಮಾಡುವ ಏಕೈಕ ಉದ್ದೇಶ ಹೊಂದಿರುವ ಈ ಬ್ಲ್ಯಾಕ್ ರೋಸ್ ಯಾರು ಎಂಬ ಪ್ರಶ್ನೆ ಪ್ರೇಕ್ಷಕರ ತಲೆಯಲ್ಲಿ ಕೊರೆಯುತ್ತಿದೆ. ಆ ಪ್ರಶ್ನೆಗೆ ಉತ್ತರ ಸಿಗುವ ಸಮಯ ಈಗ ಹತ್ತಿರ ಆಗಿದೆ. ಹೌದು, ಮಾರ್ಚ್ 24ರ ಸಂಚಿಕೆಯಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಸೋಮವಾರ (ಮಾ.24) ಸಂಜೆ 6 ಗಂಟೆಗೆ ಪ್ರಸಾರ ಆಗಲಿರುವ ‘ಕರಿಮಣಿ’ (Karimani) ಸಂಚಿಕೆಯಲ್ಲಿ ಬ್ಲಾಕ್ ರೋಸ್ (Black Rose) ಯಾರು ಎಂಬುದು ಬಯಲಾಗಲಿದೆ. ‘ಕಲರ್ಸ್ ಕನ್ನಡ’ದಲ್ಲಿ ಸೋಮವಾರದಿಂದ ಶುಕ್ರವಾರ ಪ್ರತಿ ಸಂಜೆ 6 ಗಂಟೆಗೆ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ‘ವೃದ್ಧಿ ಪ್ರೊಡಕ್ಷನ್ಸ್’ ಮೂಲಕ ‘ಕರಿಮಣಿ’ ನಿರ್ಮಾಣ ಆಗಿದೆ.
ಈಗಾಗಲೇ ತಿಳಿದಿರುವಂತೆ ‘ಕರಿಮಣಿ’ ಧಾರಾವಾಹಿಯಲ್ಲಿ ವಿಶೇಷವಾದ ಪಾತ್ರಗಳಿವೆ. ರೆಗ್ಯುಲರ್ ಚೌಕಟ್ಟಿನ ಹೊರಗೆ ಈ ಪಾತ್ರಗಳನ್ನು ಕಟ್ಟಿಕೊಡಲಾಗಿದೆ. ಆ ಮೂಲಕ ಮನರಂಜನೆ ನೀಡಲಾಗುತ್ತದೆ. ಈ ಸೀರಿಯಲ್ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಲು ಕತೆಗಾರ ಸೋಮು ಹೊಯ್ಸಳ ಪಾತ್ರ ಮುಖ್ಯವಾಗಿದೆ. ಇದು ಕರ್ಣನ ಕನಸುಗಳನ್ನು ನಾಶ ಮಾಡುವ ಉದ್ದೇಶದಿಂದಲೇ ಹುಟ್ಟಿರುವ ಬ್ಯಾಡ್ ಬಾಯ್ ಪಾತ್ರ. ಆದರೆ ಅದು ಗಂಡೋ ಅಥವಾ ಹೆಣ್ಣೋ ಎಂಬುದು ಸಹ ಸಸ್ಪೆನ್ಸ್ ಆಗಿ ಉಳಿದಿದೆ. ಗಂಡಿನ ಧ್ವನಿಯಲ್ಲಿ ಮಾತನಾಡುವ ಬ್ಲ್ಯಾಕ್ ರೋಸ್ ಹೆಣ್ಣಾಗಿರಬಹುದಲ್ಲ ಎಂದು ಕೂಡ ಕೆಲವರು ಊಹಿಸಿದ್ದಾರೆ. ಅದಕ್ಕೆಲ್ಲ ಸದ್ಯದಲ್ಲೇ ಉತ್ತರ ಸಿಗಲಿದೆ.
ಹೇಗಿದೆ ಬ್ಲಾಕ್ ರೋಸ್ ಪಾತ್ರ?
ಯಾವಾಗಲೂ ಕಪ್ಪು ಬಣ್ಣದ ಬಟ್ಟೆಯಲ್ಲೇ ಕಾಣಿಸಿಕೊಳ್ಳುವ ಪಾತ್ರ ಇದೆ. ಆದರೆ ಜನರ ಎದುರು ಮುಖ ಕಾಣಿಸಿಲ್ಲ. ನೀಲಿ ಕಣ್ಣುಗಳಷ್ಟೇ ಜನರಿಗೆ ಕಾಣಿಸಿವೆ. ಕರ್ಣನ ಫ್ಯಾಮಿಲಿಯಲ್ಲಿ ಅವನಿಗೆ ಹತ್ತಿರದ ಸಂಬಂಧಿಗಳಲ್ಲೇ ಯಾರೋ ಒಬ್ಬರು ಬ್ಲ್ಯಾಕ್ ರೋಸ್ ಆಗಿರಬಹುದು ಎಂದುಕೊಂಡಿರುವವರು ಅನೇಕರಿದ್ದಾರೆ. ಆ ಬಗ್ಗೆ ಪ್ರೇಕ್ಷಕರ ತಲೆಯಲ್ಲಿ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ. ವನಜಾ, ನಳಿನಿ ಅಥವಾ ವೆಂಕಟೇಶ್ ಆಗಿರಬಹುದಾ ಎಂದು ಪ್ರೇಕ್ಷಕರು ಊಹಿಸುತ್ತಲೇ ಇದ್ದಾರೆ.
ಇದನ್ನೂ ಓದಿ: ಮತ್ತೆ ಕಿರುತೆರೆಯಲ್ಲಿ ಒಂದಾಗುತ್ತಾ ‘ಕನ್ನಡತಿ’ ಜೋಡಿ? ‘ಕರ್ಣ’ ಧಾರಾವಾಹಿ ಬಗ್ಗೆ ಮೂಡಿದೆ ಕುತೂಹಲ
ಕರ್ಣನ ನಾಶಕ್ಕಾಗಿ ಬ್ಲ್ಯಾಕ್ ರೋಸ್ ಹಲವು ಪ್ರಯತ್ನಗಳನ್ನು ಮಾಡಿದ್ದಾನೆ. ತನ್ನ ಬೆನ್ನ ಹಿಂದೆ ಬಿದ್ದಿರುವ ಈ ವ್ಯಕ್ತಿ ಯಾರು ಎಂದು ಕರ್ಣ ಕೂಡ ಹುಡುಕುತ್ತಿದ್ದಾನೆ. ಆದರೆ ಉತ್ತರ ಸಿಗದೇ ವಿಫಲನಾಗಿದ್ದಾನೆ. ಈ ಪಾತ್ರದಿಂದ ಸಾಹಿತ್ಯ ಸಹ ಕಷ್ಟ ಎದುರಿಸಿದ್ದಾಳೆ. ಅಲ್ಲದೇ ಕರ್ಣ ಮತ್ತು ಸಾಹಿತ್ಯ ನಡುವೆ ಭಿನ್ನಾಭಿಪ್ರಾಯ ಕೂಡ ಉಂಟಾಗಿದೆ. ಇದಕ್ಕೆಲ್ಲ ಕಾರಣ ಆಗಿರುವ ಕರ್ಣನ ಮುಖ ಬಹಿರಂಗ ಆಗುವ ಸಮಯಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.