ನಿಜವಾಗಿಯೂ ಸುದೀಪ್ ಬಿಗ್ ಬಾಸ್ನಲ್ಲಿ ಇರಲ್ವ? ಇಲ್ಲಿದೆ ಅಸಲಿಯತ್ತು
Bigg Boss Kannada Season 11: ಸುದೀಪ್ ಅವರು ಬೇರೆ ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಿಗೆ ಅವರು ಮೂರ್ನಾಲ್ಕು ಸಿನಿಮಾ ಮಾಡುವ ಭರವಸೆ ನೀಡಿದ್ದಾರೆ. ಇಷ್ಟೊಂದು ಸಿನಿಮಾ ಕೆಲಸಗಳು ಇರುವಾಗ ಅವರಿಗೆ ಬಿಗ್ ಬಾಸ್ ನಿರೂಪಣೆ ಮಾಡಲು ಸಾಧ್ಯವಿಲ್ಲ ಎಂದೆನಿಸಿತೋ ಎನ್ನುವ ಪ್ರಶ್ನೆ ಮೂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಬಾರಿ ಸುದೀಪ್ ಅವರು ಇರುತ್ತಾರಾ ಅಥವಾ ಇರಲ್ವಾ ಅನ್ನೋದು ಎಲ್ಲರ ಎದುರು ಇರುವ ದೊಡ್ಡ ಪ್ರಶ್ನೆ. ಸುದೀಪ್ ಇರುವುದಿಲ್ಲ ಎನ್ನುವ ರೀತಿಯಲ್ಲೇ ಪ್ರೋಮೋ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಅಸಲಿಗೆ ಅವರು ಬಿಗ್ ಬಾಸ್ನಲ್ಲಿ ಇರ್ತಾರೆ ಎನ್ನುತ್ತಿವೆ ನಂಬಲರ್ಹ ಮೂಲಗಳು.
‘ಬಿಗ್ ಬಾಸ್ ಕನ್ನಡ ಸೀಸನ್ 10’ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಇದನ್ನು ಸುದೀಪ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಈಗ 11ನೇ ಸೀಸನ್ಗೆ ಸಿದ್ಧತೆ ನಡೆದಿದೆ. ಈ ಸೀಸನ್ ಅಕ್ಟೋಬರ್ ವೇಳೆಗೆ ಆರಂಭ ಆಗುವ ನಿರೀಕ್ಷೆ ಇದೆ. ಅದಕ್ಕೂ ಮೊದಲೂ ಪ್ರೋಮೋಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ವಾಹಿನಿ ಕಡೆಯಿಂದ ಸುದೀಪ್ ಇರುವುದಿಲ್ಲ ಎಂದು ತೋರಿಸುವ ಪ್ರಯತ್ನ ನಡೆಯುತ್ತಿದೆ.
ಹೌದು, ಈ ಮೊದಲು ರಿಲೀಸ್ ಆದ ‘ಬಿಗ್ ಬಾಸ್’ ಪ್ರೋಮೋದಲ್ಲಿ ಸುದೀಪ್ ಹ್ಯಾಶ್ಟ್ಯಾಗ್ ಇತ್ತು. ಹೊಸ ಪ್ರೋಮೋ ರಿಲೀಸ್ ಆಗುವುದಕ್ಕೂ ಒಂದು ದಿನ ಮೊದಲು ಆ ಹ್ಯಾಶ್ಟ್ಯಾಗ್ ತೆಗೆಯಲಾಯಿತು. ಈಗ ರಿಲೀಸ್ ಆಗಿರೋ ಹೊಸ ಪ್ರೋಮೋದಲ್ಲಿ ಬೇರೆಯವರ ನಗು ಕೇಳಿಸಿದೆ. ಇದು ಉದ್ದೇಶಪೂರ್ವಕವಾಗಿ ಹಾಕಲಾದ ಧ್ವನಿ ಎಂದು ಅನೇಕರು ಊಹಿಸಿದ್ದಾರೆ.
ಸುದೀಪ್ ಅವರು 10 ವರ್ಷಗಳ ಕಾಲ ಅಂದರೆ ಒಂದು ದಶಕ ಬಿಗ್ ಬಾಸ್ ನಡೆಸಿಕೊಟ್ಟಿದ್ದಾರೆ. ಈ ಪೈಕಿ ಅವರು ಬಿಗ್ ಬಾಸ್ ನಿರೂಪಣೆ ತಪ್ಪಿಸಿದ್ದು ಕೆಲವೇ ಕೆಲವು ಬಾರಿ ಮಾತ್ರ. ಅವರಿಗೆ ಬಿಗ್ ಬಾಸ್ ಮೇಲೆ ಅಪಾರ ಪ್ರೀತಿ ಇದೆ. ಈ ಕಾರಣದಿಂದಲೇ ಅವರು ಬಿಗ್ ಬಾಸ್ ನಡೆಸಿಕೊಡೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಸುದೀಪ್ ಬರ್ತಾರೆ ಎಂದು ಕಾದು ಕೂತವರಿಗೆ ಶಾಕ್ ಕೊಟ್ಟ ಕಲರ್ಸ್ ಕನ್ನಡ
ಸದ್ಯ ಸುದೀಪ್ ಇರುವುದಿಲ್ಲವೇ ಎನ್ನುವ ಪ್ರಶ್ನೆ ಎತ್ತಿದರೆ ಹೈಪ್ ಸೃಷ್ಟಿ ಆಗುತ್ತದೆ. ಕುತೂಹಲ ಮತ್ತಷ್ಟು ಕೆರಳುತ್ತದೆ ಎಂಬುದು ವಾಹಿನಿಯವರ ಆಲೋಚನೆ ಇರಬಹುದು. ಒಟ್ಟಿನಲ್ಲಿ ಈ ಬಾರಿ ಸುದೀಪ್ ಇರೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.