ರಕ್ಷಿತಾ ಸಖತ್ ಬ್ರಿಲಿಯಂಟ್; ಬಕ್ರಾ ಮಾಡಲು ಬಂದ ಜಾನ್ವಿ-ಅಶ್ವಿನಿಗೆ ಮಣ್ಣು ಮುಕ್ಕಿಸಿದ ಶೆಟ್ಟಿ
Rakshita Shetty In Bigg Boss: ರಕ್ಷಿತಾ ಶೆಟ್ಟಿ ದೊಡ್ಮನೆಯಲ್ಲಿ ಅದ್ಭುತವಾಗಿ ಆಟವಾಡುತ್ತಿದ್ದಾರೆ. ಭಾಷೆಯ ಸಮಸ್ಯೆ ಇದ್ದರೂ, ಅವರು ಅಶ್ವಿನಿ ಮತ್ತು ಜಾನ್ವಿಯವರ ತಂತ್ರಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಗೆಜ್ಜೆ ಸದ್ದು ಮಾಡಿ ಎಲ್ಲರನ್ನೂ ಹೆದರಿಸಲು ಪ್ರಯತ್ನಿಸಿದಾಗ, ರಕ್ಷಿತಾ ಚಾಣಾಕ್ಷತನದಿಂದ ಅವರ ನಾಟಕವನ್ನು ಬಯಲು ಮಾಡಿದ್ದಾರೆ.

ರಕ್ಷಿತಾ ಶೆಟ್ಟಿ (Rakshita Shetty) ಅವರು ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದವರು. ಅವರಿಂದ ಹೆಚ್ಚಿನ ನಿರೀಕ್ಷೆ ಇತ್ತು. ಆ ನಿರೀಕ್ಷೆಗೆ ತಕ್ಕಂತೆ ಅವರು ಆಟ ಆಡುತ್ತಿದ್ದಾರೆ. ಭಾಷೆ ವಿಚಾರ ಒಂದು ಅವರಿಗೆ ಕಷ್ಟ ಆಗುತ್ತಿದೆ. ಆದರೆ, ಆಟದಲ್ಲಿ ಮಾತ್ರ ಸಖತ್ ಸ್ಪೀಡ್ ಇದ್ದಾರೆ. ಇಡೀ ಮನೆಯನ್ನು ಬಕ್ರಾ ಮಾಡಲು ಬಂದ ಅಶ್ವಿನಿ ಹಾಗೂ ಜಾನ್ವಿಗೆ ಅವರು ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಇದು ಅವರ ಹೆಚ್ಚುಗಾರಿಕೆ.
ಅಶ್ವಿನಿ ಹಾಗೂ ಜಾನ್ವಿ ದೊಡ್ಮನೆಯಲ್ಲಿ ಜೊತೆಯಾಗಿ ಆಡುತ್ತಿದ್ದಾರೆ. ಅಶ್ವಿನಿ ಹೇಳಿದಂತೆ ಜಾನ್ವಿ ಕೇಳುತ್ತಿದ್ದಾರೆ. ಅವರ ಆಟಕ್ಕೆ ಇದು ಹಿನ್ನಡೆ ಕೂಡ ತರುತ್ತಿದೆ. ರಕ್ಷಿತಾ ಅವರನ್ನು ಈ ಇಬ್ಬರೂ ಟಾರ್ಗೆಟ್ ಮಾಡಿದಂತೆ ಕಾಣಿಸುತ್ತಿದೆ. ರಕ್ಷಿತಾ ಅವರು ರಾತ್ರಿ ವೇಳೆ ಬಾತ್ರೂಂ ಏರಿಯಾದಲ್ಲಿ ಡ್ಯಾನ್ಸ್ ಮಾಡಿದ್ದರಂತೆ. ಇದೇ ವಿಚಾರ ಇಟ್ಟುಕೊಂಡು ಅಶ್ವಿನಿ ಹಾಗೂ ಜಾನ್ವಿ ಬಾಯಿಗೆ ಬಂದಂತೆ ಹೇಳಿದ್ದರು. ‘ರಾ..ರಾ..’ ಎಂದು ರಕ್ಷಿತಾ ಡ್ಯಾನ್ಸ್ ಮಾಡಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿಸಿದ್ದರು.
ಈ ವಿಚಾರ ರಕ್ಷಿತಾ ಕಿವಿಗೂ ಬಿದ್ದಿದೆ. ಅವರು ಇತರರ ಬಳಿ ಈ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಆಗ ಮನೆಯವರೆಲ್ಲರೂ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಆ ಬಳಿಕ ಮಧ್ಯರಾತ್ರಿ ಅಶ್ವಿನಿ ಮತ್ತು ಜಾನ್ವಿ ಮನೆಯವರನ್ನು ಹೆದರಿಸೋಕೆ ಮುಂದಾದರು. ಗೆಜ್ಜೆಯನ್ನು ಅಲ್ಲಾಡಿಸಿ, ಮನೆಯವರನ್ನು ಭಯ ಬೀಳಿಸಿದರು. ‘ಎಲ್ಲಿಯೋ ಗೆಜ್ಜೆ ಶಬ್ದ ಕೇಳುತ್ತಿದೆ’ ಎಂದು ಎಲ್ಲರನ್ನೂ ಎಬ್ಬಿಸಿದರು.
ಮನೆಯ ಎಲ್ಲರಿಗೂ ಗೆಜ್ಜೆ ಶಬ್ದ ಕೇಳಿದ್ದೇನೋ ನಿಜ. ಆದರೆ, ಆ ಶಬ್ದ ಎಲ್ಲಿಂದ ಬಂತು ಎಂಬುದು ಮಾತ್ರ ತಿಳಿಯಲೇ ಇಲ್ಲ. ಅಶ್ವಿನಿ ಹಾಗೂ ಜಾನ್ವಿ ಹೊರ ಹೋದಾಗ, ರಕ್ಷಿತಾ ಅವರು ನೇರವಾಗಿ ಜಾನ್ವಿ ಬೆಡ್ ಬಳಿ ತೆರಳಿ ಅಲ್ಲಿದ್ದ ಗೆಜ್ಜೆಯನ್ನು ತೆಗೆದುಕೊಂಡರು. ನಂತರ ಇದನ್ನು ಗಿಲ್ಲಿ ನಟನಿಗೆ ನೀಡಿದರು.
ಇದನ್ನೂ ಓದಿ: ಕಂಬಳದಲ್ಲಿ ಗೆದ್ದವರಿಗೆ ಅವಮಾನ? ರಕ್ಷಿತಾ ಶೆಟ್ಟಿ ಭಾಷೆ ಕೇಳಿ ಕಂಗಾಲಾದ ಮಲ್ಲಮ್ಮ
ಗೆಜ್ಜೆ ಶಬ್ದ ಮಾಡಿದ್ದು ರಕ್ಷಿತಾ ಎಂದು ಗಿಲ್ಲಿ ಅಂದುಕೊಂಡಿದ್ದರು. ಆದರೆ, ಈ ಕೆಲಸ ಮಾಡಿದ್ದು ಜಾನ್ವಿ ಎಂಬ ವಿಚಾರ ತಿಳಿದು ಅವರಿಗೆ ಶಾಕ್ ಆಗಿದೆ. ಆ ಬಳಿಕ ಜಾನ್ವಿ ಹಾಗೂ ಅಶ್ವಿನಿ ಬೆಡ್ಗೆ ತೆರಳಿ ಗೆಜ್ಜೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಅದು ಎಲ್ಲಿಯೂ ಸಿಗಲೇ ಇಲ್ಲ. ‘ಹೋದ್ರೆ ಹೋಯ್ತು ಬಿಡು. ನಾವಾಗೇ ಯಾರ ಬಳಿಯೂ ಅದನ್ನು ಕೇಳೋದು ಬೇಡ’ ಎಂದು ಜಾನ್ವಿ ಬಳಿ ಅಶ್ವಿನಿ ಹೇಳಿದ್ದಾರೆ. ಈ ಮೂಲಕ ಇಬ್ಬರಿಗೂ ರಕ್ಷಿತಾ ಮಣ್ಣು ಮುಕ್ಕಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Thu, 16 October 25








