38 ವರ್ಷ ಕಳೆದರೂ ‘ರಾಮಾಯಣ’ ಧಾರಾವಾಹಿ ದಾಖಲೆ ಯಾರೂ ಮುರಿದಿಲ್ಲ; ಇಲ್ಲಿದೆ ಲೆಕ್ಕ
ಎಷ್ಟೇ ವರ್ಷಗಳು ಕಳೆದರೂ ರಾಮಾಯಣದ ಬಗ್ಗೆ ಜನರಿಗೆ ಇರುವ ಆಸಕ್ತಿ ಕಡಿಮೆ ಆಗುವುದಿಲ್ಲ. ಎಂಥೆಂಥಾ ಶೋಗಳು ಬಂದರೂ ‘ರಾಮಾಯಣ’ವನ್ನು ಹಿಂದಿಕ್ಕಲು ಯಾವುದಕ್ಕೂ ಸಾಧ್ಯವಾಗಿಲ್ಲ. ಬಿಬಿಸಿ ವರದಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಟಿಆರ್ಪಿ ಪಡೆದ ಧಾರಾವಾಹಿ ಇದು. 38 ವರ್ಷ ಕಳೆದರೂ ಕೂಡ ಆ ದಾಖಲೆ ಹಾಗೆಯೇ ಇದೆ.

ಭಾರತದಲ್ಲಿ ಕಿರುತೆರೆ ಬಿಸ್ನೆಸ್ ತುಂಬ ದೊಡ್ಡದು. ಪ್ರತಿ ದಿನ ಕೋಟ್ಯಂತರ ಮಂದಿ ಮನೆಯಲ್ಲಿ ಕುಳಿತು ಧಾರಾವಾಹಿ (TV Serial) ನೋಡುತ್ತಾರೆ. ಜನರನ್ನು ಸೆಳೆದುಕೊಳ್ಳಲು ಸೀರಿಯಲ್ ತಂಡಗಳು ಇನ್ನಿಲ್ಲದ ತಂತ್ರಗಳನ್ನು ರೂಪಿಸುತ್ತವೆ. ವೀಕ್ಷಕರನ್ನು ಸೆಳೆಯಲು ಹೊಸ ಹೊಸ ಸೀರಿಯಲ್ಗಳು ಬರುತ್ತಲೇ ಇವೆ. ಆದರೆ ಆ ಯಾವ ಧಾರಾವಾಹಿಗಳು ಕೂಡ ‘ರಾಮಾಯಣ’ (Ramayan) ಮಾಡಿದ ದಾಖಲೆಯನ್ನು ಮುರಿಯಲು ಸಾಧ್ಯವಾಗುತ್ತಿಲ್ಲ! ಹೌದು, ‘ರಾಮಾಯಣ’ ಸೀರಿಯಲ್ ಪ್ರಸಾರವಾಗಿ 38 ವರ್ಷಗಳು ಕಳೆದಿದ್ದರೂ ಸಹ ಅದರ ಟಿಆರ್ಪಿ (Ramayan TRP) ಹಿಂದಿಕ್ಕಲು ಬೇರೆ ಯಾವುದೇ ಧಾರಾವಾಹಿಗೆ ಸಾಧ್ಯವಾಗಿಲ್ಲ.
ರಮಾನಂದ್ ಸಾಗರ್ ಅವರು ‘ರಾಮಾಯಣ’ ಧಾರಾವಾಹಿಗೆ ನಿರ್ದೇಶನ ಮಾಡಿದ್ದರು. 1987ರ ಜನವರಿ 25ರಿಂದ 1988ರ ಜುಲೈ 31ರ ತನಕ ಈ ಧಾರಾವಾಹಿ ಪ್ರಸಾರ ಆಯಿತು. ಅರುಣ್ ಗೋವಿಲ್ ಅವರು ರಾಮನಾಗಿ ನಟಿಸಿದರು. ದೀಪಿಕಾ ಚಿಕ್ಲಿಯಾ ಅವರು ಸೀತೆಯ ಪಾತ್ರ ಮಾಡಿದರು. ಲಕ್ಷ್ಮಣನಾಗಿ ಸುನಿಲ್ ಲಹರಿ ಕಾಣಿಸಿಕೊಂಡರು. ಅರವಿಂದ್ ತ್ರಿವೇದಿ ಅವರು ರಾವಣನ ಪಾತ್ರಕ್ಕೆ ಜೀವ ತುಂಬಿದರು. ಆಂಜನೇಯನಾಗಿ ಧಾರಾ ಸಿಂಗ್ ಮಿಂಚಿದರು. ಕಿರುತೆರೆ ವೀಕ್ಷಕರು ಈ ಧಾರಾವಾಹಿಯನ್ನು ಸಖತ್ ಇಷ್ಟಪಟ್ಟರು.
‘ರಾಮಾಯಣ’ ಧಾರಾವಾಹಿಯ ಒಟ್ಟು ಎಪಿಸೋಡ್ಗಳ ಸಂಖೆ 78. ‘ಬಿಬಿಸಿ’ ವರದಿಯ ಪ್ರಕಾರ, 66 ಕೋಟಿ ಜನರು ಈ ಧಾರಾವಾಹಿ ವೀಕ್ಷಿಸಿದ್ದಾರೆ. ಮೊದಲ ಬಾರಿ ಪ್ರಸಾರ ಆದಾಗ ಹಾಗೂ ಮರು ಪ್ರಸಾರ ಆದಾಗ ಸೇರಿ ಭಾರಿ ಸಂಖ್ಯೆಯ ವೀಕ್ಷಕರು ಈ ಸೀರಿಯಲ್ ನೋಡಿದರು. ಇಂದ್ರಜಿತ್-ಲಕ್ಷ್ಮಣನ ನಡುವಿನ ಯುದ್ಧದ ಸಂಚಿಕೆ ಬರೋಬ್ಬರಿ 77 ಟಿವಿಆರ್ (ಟಿಆರ್ಪಿ) ಪಡೆದಿತ್ತು! ಇದು ಭಾರತದ ಕಿರುತೆರೆ ಇತಿಹಾಸದಲ್ಲೇ ಅತಿ ಹೆಚ್ಚು!
ಇದನ್ನೂ ಓದಿ: ರಾಮಾಯಣ ಸಿನಿಮಾಗೆ ಶೂಟಿಂಗ್ ಆರಂಭಿಸಿದ ರಾಕಿಂಗ್ ಸ್ಟಾರ್ ಯಶ್
‘ರಾಮಾಯಣ’ಕ್ಕೆ ಹೋಲಿಸಿದರೆ ‘ಮಹಾಭಾರತ’ ಸೀರಿಯಲ್ 22.9 ಟಿಆರ್ಪಿ ಪಡೆದಿತ್ತು. ನಾಗಿನ್ ಹಾಗೂ ಬಿಗ್ ಬಾಸ್ ಶೋನಗಳು 10ರಿಂದ 12 ಟಿಆರ್ಪಿ ಪಡೆದವು. ‘ಕ್ಯೂ ಕಿ ಸಾಸ್ ಬಿ ಕಭಿ ಬಹೂ ಥಿ’ ಧಾರಾವಾಹಿ 22.4 ಟಿಆರ್ಪಿ ಪಡೆಯಿತು. ಆದರೆ ಈ ಯಾವ ಶೋಗಳು ಕೂಡ ‘ರಾಮಾಯಣ’ದ ದಾಖಲೆಯನ್ನು ಮುರಿಯಲು ಸಾಧ್ಯವಾಗಲೇ ಇಲ್ಲ.
ಬೇಸರದ ಸಂಗತಿ ಏನೆಂದರೆ, ‘ರಾಮಾಯಣ’ ಧಾರಾವಾಹಿಗೆ ಇಷ್ಟೆಲ್ಲ ಜನಪ್ರಿಯತೆ ಸಿಕ್ಕರೂ ಕೂಡ ಅದರಲ್ಲಿ ನಟಿಸಿದ ಕಲಾವಿದರಿಗೆ ನಿರೀಕ್ಷಿತ ಪ್ರಮಾಣದ ಸಕ್ಸಸ್ ಸಿಗಲಿಲ್ಲ. ‘ರಾಮಾಯಣ’ ಸೀರಿಯಲ್ನಲ್ಲಿ ಅರುಣ್ ಗೋವಿಲ್, ದೀಪಿಕಾ ಚಿಕ್ಲಿಯಾ ಮುಂತಾದವರು ಮಿಂಚಿದರೂ ಕೂಡ ನಂತರದ ಪ್ರಾಜೆಕ್ಟ್ಗಳಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಯಾಕೆಂದರೆ, ಅವರನ್ನು ಬೇರೆ ಪಾತ್ರಗಳಲ್ಲಿ ನೋಡಲು ಜನರು ಇಷ್ಟಪಡಲಿಲ್ಲ!
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








