ಒಂದೇ ವಾರದಲ್ಲಿ ಎರಡು ದೊಡ್ಡ ಹೊಡೆತ ತಿಂದ ರಾಶಿಕಾ; ಕಣ್ಣೀರು ಹಾಕಿದ ನಟಿ
ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಒಂದೇ ವಾರದಲ್ಲಿ ಎರಡು ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಕ್ಯಾಪ್ಟನ್ಸಿ ರೇಸ್ನಲ್ಲಿ ಅವರು ಸ್ಥಾನ ಕಳೆದುಕೊಂಡಿದ್ದಲ್ಲದೆ, ಮನೆಯಿಂದ ಬಂದ ಪತ್ರವನ್ನೂ ಪಡೆಯಲು ಸಾಧ್ಯವಾಗಲಿಲ್ಲ. ಸ್ಪರ್ಧಿಗಳ ಒಮ್ಮತದ ಕೊರತೆಯಿಂದ ಈ ಎರಡೂ ಅವಕಾಶಗಳು ಕೈ ತಪ್ಪಿದ್ದು, ರಾಶಿಕಾ ಕಣ್ಣೀರು ಹಾಕಿದ್ದಾರೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ರಾಶಿಕಾ ಶೆಟ್ಟಿ ಅವರು ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಇತ್ತೀಚೆಗೆ ಅವರು ಅಶ್ವಿನಿ ಗೌಡ ಹಾಗೂ ರಿಷಾ ಗೌಡ ಜೊತೆ ಹೆಚ್ಚು ಬೆರೆಯುತ್ತಿದ್ದಾರೆ. ಮೊದಲು ಸೂರಜ್ ಜೊತೆ ಆಪ್ತವಾಗಿದ್ದ ಅವರು, ಈಗ ಅವರಿಂದ ಆದಷ್ಟು ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಮಧ್ಯೆ ರಾಶಿಕಾ ಅವರು ಏಳು ದಿನಗಳ ಅಂತರದಲ್ಲಿ ಎರಡೆರಡು ಬಾರಿ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.
ಕಳೆದ ವಾರ ರಾಶಿಕಾ ಅವರು ಬ್ಲ್ಯೂ ಟೀಂನ ಪ್ರತಿನಿಧಿಸಿದ್ದರು. ಈ ತಂಡ ಗೆದ್ದಿದ್ದರಿಂದ ಒಬ್ಬರನ್ನು ಕ್ಯಾಪ್ಟನ್ಸಿ ರೇಸ್ಗೆ ಆಯ್ಕೆ ಮಾಡಬೇಕಿತ್ತು. ಒಮ್ಮತದ ನಿರ್ಧಾರ ಬರಬೇಕು ಎಂದು ಬಿಗ್ ಬಾಸ್ ಸೂಚಿಸಿದ್ದರು. ಎಲ್ಲರೂ ರಾಶಿಕಾ ಹೆಸರನ್ನು ತೆಗೆದುಕೊಂಡರು. ಆದರೆ, ಗಿಲ್ಲಿ ನಟ ಮಾತ್ರ ಇದಕ್ಕೆ ಒಪ್ಪಲೇ ಇಲ್ಲ. ಹೀಗಾಗಿ ಈ ಆಯ್ಕೆಯನ್ನು ಬಿಗ್ ಬಾಸ್ ಹಿಂದಕ್ಕೆ ಪಡೆದರು. ಇದರಿಂದ ರಾಶಿಕಾ ಕ್ಯಾಪ್ಟನ್ ಆಗಬೇಕು ಎಂಬ ಕನಸು ಭಗ್ನವಾಯಿತು.
ಈ ವಾರವೂ ರಾಶಿಕಾಗೆ ಇದೇ ರೀತಿಯ ಪರಿಸ್ಥಿತಿ ಬಂದೊದಗಿತು. ರಾಶಿಕಾ ಹಾಗೂ ರಕ್ಷಿತಾ ಶೆಟ್ಟಿಗೆ ಮನೆಯಿಂದ ಲೆಟರ್ ಕಳುಹಿಸಲಾಗಿತ್ತು. ಎಲ್ಲರ ಒಮ್ಮತದಿಂದ ಒಬ್ಬರಿಗೆ ಲೆಟರ್ ಕೊಡಿಸೋ ನಿರ್ಧಾರಕ್ಕೆ ಬರಬೇಕು ಎಂದು ಬಿಗ್ ಬಾಸ್ ಸೂಚಿಸಿದರು. ಗಿಲ್ಲಿ, ಕಾವ್ಯಾ, ಸ್ಪಂದನಾ ಮೊದಲಾದವರು ರಕ್ಷಿತಾಗೆ ಲೆಟರ್ ಕೊಡಬೇಕು ಎಂದರು. ಅಶ್ವಿನಿ, ರಿಷಾ ಮೊದಲಾದವರು ರಾಶಿಕಾಗೆ ಪತ್ರ ಸಿಗಬೇಕು ಎಂದು ವಾದಿಸಿದರು. ಆದರೆ, ಅಂತಿಮವಾಗಿ ಯಾವುದೇ ಒಮ್ಮತ ಬಂದಿಲ್ಲ. ಹೀಗಾಗಿ, ಇಬ್ಬರಿಗೂ ಪತ್ರ ಕೈ ತಪ್ಪಿದೆ.
ಇದನ್ನೂ ಓದಿ: ಕಾವ್ಯಾಗೋಸ್ಕರ ದೊಡ್ಡ ತ್ಯಾಗ ಮಾಡಿದ ಗಿಲ್ಲಿ; ಸಿಕ್ತು ಪ್ರೀತಿಯ ಅಪ್ಪುಗೆ
ಯಾವಾಗ ಒಮ್ಮತದ ನಿರ್ಧಾರ ಬರಬೇಕು ಎಂದು ಬಿಗ್ ಬಾಸ್ ಸೂಚಿಸಿದರೋ ಆಗಲೇ ರಾಶಿಕಾಗೆ ಪತ್ರ ಕೈ ತಪ್ಪುತ್ತದೆ ಎಂಬುದು ಸ್ಪಷ್ಟವಾಗಿತ್ತು. ಮನೆಯ ಪತ್ರ ಕೈ ತಪ್ಪಿದ್ದರಿಂದ ಅವರು ಕಣ್ಣೀರು ಹಾಕಿದರು. ನನಗೆ ಏಕೆ ಹೀಗೆಲ್ಲ ಆಗುತ್ತದೆ ಎಂದು ಬಿಕ್ಕಿ ಬಿಕ್ಕಿ ಅತ್ತರು. ಪತ್ರ ಕಳೆದುಕೊಂಡಿದ್ದಕ್ಕೆ ರಕ್ಷಿತಾ ಅವರು ಹೆಚ್ಚು ಡ್ರಾಮಾ ಕ್ರಿಯೇಟ್ ಮಾಡಲಿಲ್ಲ. ಇದನ್ನು ಪ್ರಬುದ್ಧವಾಗಿ ಹ್ಯಾಂಡಲ್ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




