ವಿಶ್ವ ಜನಪ್ರಿಯ ವೆಬ್ ಸರಣಿ ಈಗ ಹಿಂದಿಯಲ್ಲಿ: ಬಿಡುಗಡೆ ದಿನಾಂಕ ಪ್ರಕಟ

Breaking Bad: ವಿಶ್ವದ ಅತ್ಯುತ್ತಮ ವೆಬ್ ಸರಣಿ ಎನಿಸಿಕೊಂಡಿರುವ 'ಬ್ರೇಕಿಂಗ್ ಬ್ಯಾಡ್' ಇನ್ನು ಮುಂದೆ ಹಿಂದಿಯಲ್ಲಿ ಪ್ರಸಾರವಾಗಲಿದೆ.

ವಿಶ್ವ ಜನಪ್ರಿಯ ವೆಬ್ ಸರಣಿ ಈಗ ಹಿಂದಿಯಲ್ಲಿ: ಬಿಡುಗಡೆ ದಿನಾಂಕ ಪ್ರಕಟ
ಬ್ರೇಕಿಂಗ್ ಬ್ಯಾಡ್
Follow us
ಮಂಜುನಾಥ ಸಿ.
|

Updated on: Aug 08, 2023 | 5:55 PM

ಭಾರತದಲ್ಲಿ ಹಾಲಿವುಡ್​ಗೆ (Hollywood) ಸರಿಸಮನಾದ ಗುಣಮಟ್ಟದ ಸಿನಿಮಾಗಳು ನಿರ್ಮಾಣ ಹಿಂದೆಯೂ ಆಗಿವೆ, ಈಗಲೂ ಆಗುತ್ತಿವೆ. ಆದರೆ ಟಿವಿ ಶೋ, ಸರಣಿಗಳ ವಿಷಯದಲ್ಲಿ ಭಾರತದ ಕಂಟೆಂಟ್ ಹಾಗೂ ಹಾಲಿವುಡ್​ ಅನ್ನು ಹೋಲಿಸುವಂತೆಯೇ ಇಲ್ಲ. ಭಾರತದ ಪ್ರಸ್ತುತ ಟಿವಿ ಕಂಟೆಂಟ್ ಗುಣಮಟ್ಟ ಬಹಳ ಕಳಪೆಯಾಗಿದೆ ಎಂಬುದನ್ನು ನಿರಾಕರಿಸಲಾಗದು. ಆದರೆ ಟಿವಿ ಶೋಗಳ (Web Series) ವಿಷಯದಲ್ಲಿ ಹಾಲಿವುಡ್​ ಸದಾ ಮುಂದಿದೆ. ಕೆಲವು ಅತ್ಯದ್ಭುತ ಟಿವಿ ಶೋಗಳನ್ನು ಹಾಲಿವುಡ್ ನಿರ್ಮಾಣ ಮಾಡಿದೆ. ಅದರಲ್ಲಿ ಒಂದಾಗಿರುವ ವಿಶ್ವ ವಿಖ್ಯಾತ ವೆಬ್ ಸರಣಿ ಅಥವಾ ಟಿವಿ ಸರಣಿ ಈಗ ಹಿಂದಿಯಲ್ಲಿ ಬರಲಿದೆ.

ಐಎಂಬಿಡಿ ಪಟ್ಟಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದಿರುವ ಏಕೈಕ ಶೋ ‘ಬ್ರೇಕಿಂಗ್ ಬ್ಯಾಡ್’ ಇದೀಗ ಹಿಂದಿಯಲ್ಲಿ ಬರುತ್ತಿದೆ. ಈ ವೆಬ್ ಸರಣಿಯ ಎಲ್ಲ ಸೀಸನ್​ ಹಾಗೂ ಸರಣಿಗಳನ್ನು ಹಿಂದಿಗೆ ಡಬ್ ಮಾಡಲಾಗಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ವಿಶೇಷವೆಂದರೆ ಬಾಲಿವುಡ್​ನ ಕೆಲವು ಖ್ಯಾತ ನಾಮ ನಟ, ನಟಿಯರು ಈ ಶೋಗೆ ಹಿಂದಿಯಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಅದರ ಕುರಿತು ಒಂದು ಜಾಹೀರಾತು ಟ್ರೈಲರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.

ಬ್ಯಾಡ್​ಮ್ಯಾನ್ ಆಫ್ ಬಾಲಿವುಡ್ ಎಂದು ಕರೆಯಲಾಗುವ ಗುಲ್ಷನ್ ಗ್ರೋವರ್ ‘ಬ್ರೇಕಿಂಗ್ ಬ್ಯಾಡ್’ ವೆಬ್ ಸರಣಿಯ ಹಿಂದಿ ಡಬ್ಬಿಂಗ್​ನಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಜಾಹೀರಾತಿನಲ್ಲಿಯೂ ನಟಿಸಿದ್ದಾರೆ. ‘ಬ್ರೇಕಿಂಗ್ ಬ್ಯಾಡ್’ ವಿಶ್ವದ ಅತ್ಯುತ್ತಮ ವೆಬ್ ಸರಣಿಗಳಲ್ಲಿ ಒಂದು. ಐಎಂಡಿಬಿಯಲ್ಲಿ 10ಕ್ಕೆ 9.5 ರೇಟಿಂಗ್ ಹೊಂದಿರುವ ಏಕೈಕ ವೆಬ್ ಸರಣಿ. ಜೊತೆಗೆ ಟಿವಿಶೋಗಳಿಗೆ ನೀಡಲಾಗುವ ಬಹುತೇಕ ಎಲ್ಲ ಪ್ರಮುಖ ಪ್ರಶಸ್ತಿಗಳನ್ನು ಸಹ ಈ ವೆಬ್ ಸರಣಿ ಬಾಚಿಕೊಂಡಿದೆ.

ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾಯಿಂದಾಗಿ ಅಮೆಜಾನ್​ಗೆ ಭಾರಿ ನಷ್ಟ: ವರದಿ ಕೇಳಿದ ಸಿಇಓ, ಸಮಂತಾ ವೆಬ್​ಸರಣಿಗೂ ಸಂಕಷ್ಟ?

2008 ರಲ್ಲಿ ಆರಂಭವಾದ ಈ ಟಿವಿ ಸರಣಿ 2013ರ ವರೆಗೆ ಪ್ರಸಾರವಾಯ್ತು. ಈ ವರೆಗೆ ಬರೋಬ್ಬರಿ 5 ಸೀಸನ್​ನಲ್ಲಿ 62 ಎಪಿಸೋಡ್ ಪ್ರಸಾರವಾಗಿದೆ. ‘ಬ್ರೇಕಿಂಗ್ ಬ್ಯಾಡ್​’ ನ ಪ್ರಸಾರ 2013ರಲ್ಲಿಯೇ ಅಂತ್ಯವಾಗಿದೆ. ಹತ್ತು ಕೊನೆಯ ಎಪಿಸೋಡ್ ಪ್ರಸಾರವಾಗಿ ಹತ್ತು ವರ್ಷವಾಗಿದ್ದರೂ ಸಹ ಈಗಲೂ ಈ ವೆಬ್ ಸರಣಿ ಅತ್ಯುತ್ತಮ ವೆಬ್​ಸರಣಿಗಳಲ್ಲಿ ಒಂದು ಎನಿಸಿಕೊಂಡಿದೆ.

ಒಬ್ಬ ರಸಾಯನಶಾಸ್ತ್ರ ಶಿಕ್ಷಕ ಹಾಗೂ ಅವನ ಕೆಟ್ಟ ವಿದ್ಯಾರ್ಥಿ ಸೇರಿಕೊಂಡು ಮಾದಕ ವಸ್ತು ತಯಾರಿಸಿ ಮಾರಾಟ ಮಾಡಿ ಆ ನಂತರ ಇಡೀ ಒಂದು ಪ್ರದೇಶದ ಡಾನ್​ಗಳಾಗುವ ಮಟ್ಟಕ್ಕೆ ಬೆಳೆವ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ಪ್ರತಿ ಸೀಸನ್​ನಿಂದ ಸೀಸನ್​ಗೆ, ಎಪಿಸೋಡ್​ನಿಂದ ಎಪಿಸೋಡ್​ಗೆ ಗುಣಮಟ್ಟವನ್ನು, ಕುತೂಹಲವನ್ನು ಹೆಚ್ಚಿಸಿಕೊಂಡೇ ಹೋದ ‘ಬ್ರೇಕಿಂಗ್ ಬ್ಯಾಡ್’ ಇದೇ ಕಾರಣಕ್ಕೆ ಇಂದಿಗೂ ಅತ್ಯುತ್ತಮ ವೆಬ್ ಸರಣಿ ಎನಿಸಿಕೊಂಡಿದೆ. ‘ಬ್ರೇಕಿಂಗ್ ಬ್ಯಾಡ್’ ಇದೀಗ ಜೀ ಕೆಫೆ ಚಾನೆಲ್​ನಲ್ಲಿ ಆಗಸ್ಟ್ 28ರಿಂದ ಹಿಂದಿಯಲ್ಲಿ ಪ್ರಸಾರವಾಗಲಿದೆ. ಜೀ ಕೆಫೆಯಲ್ಲಿ ಪ್ರಸಾರವಾಗುವ ಜೊತೆಗೆ ಜೀ5 ಒಟಿಟಿಯಲ್ಲಿಯೂ ಲಭ್ಯವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ