‘ನನ್ನ ಚಿತ್ರಕ್ಕೂ ಹಣ ಹಾಕಿ’; ಫ್ಯಾಮಿಲಿ ಮ್ಯಾನ್ ಹಿಟ್ ಆದರೂ ಈ ನಟನಿಗೆ ಸಿಗುತ್ತಿಲ್ಲ ಆಫರ್
‘ದಿ ಫ್ಯಾಮಿಲಿ ಮ್ಯಾನ್’ ಹಾಗೂ ‘ದಿ ಫ್ಯಾಮಿಲಿ ಮ್ಯಾನ್ 2’ ಎರಡರಲ್ಲೂ ಶರದ್ ನಟಿಸಿದ್ದಾರೆ. ಕೆಲವೇ ಹೊತ್ತು ಇವರು ಸ್ಕ್ರೀನ್ ಮೇಲೆ ಕಾಣಿಸಿಕೊಂಡರೂ, ಇವರು ಮಾಡಿರುವ ಅರವಿಂದ್ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ.
‘ದಿ ಫ್ಯಾಮಿಲಿ ಮ್ಯಾನ್ 2’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ವೆಬ್ ಸೀರಿಸ್ನಲ್ಲಿ ನಟಿಸಿದ ಶರದ್ ಕೇಲ್ಕರ್ (ಪಾತ್ರದ ಹೆಸರು ಅರವಿಂದ್) ಪ್ರಿಯಾಮಣಿ (ಸುಚಿತ್ರಾ) ಸಹೋದ್ಯೋಗಿ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೆ, ಇಡೀ ವೆಬ್ ಸೀರಿಸ್ಗೆ ಇವರಿಬ್ಬರ ಗೆಳೆತನ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಈ ವೆಬ್ ಸೀರಿಸ್ ಹಿಟ್ ಆದರೂ ಶರದ್ಗೆ ಅವಕಾಶಗಳು ಸಿಗುತ್ತಿಲ್ಲ ಎನ್ನುವ ಬೇಸರ ಇದೆಯಂತೆ.
‘ನಾನು ಯಾವುದೇ ವೆಬ್ ಸೀರಿಸ್ಗೆ ಸಹಿ ಹಾಕಿಲ್ಲ. ನಿರ್ಮಾಪಕರು ಸಿನಿಮಾ ಮಾಡುತ್ತಾರೆ ಎಂದರೆ ಸಾಕಷ್ಟು ಬಾರಿ ಯೋಚಿಸುತ್ತಾರೆ. ನನ್ನ ಇಟ್ಟುಕೊಂಡು ಸಿನಿಮಾ ಮಾಡೋಕೆ ಯಾರೂ ಮುಂದೆ ಬರುತ್ತಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ. ನಿರ್ಮಾಪಕರು ನನ್ನ ಸಿನಿಮಾಗೂ ಹಣ ಹಾಕಲಿ ಎಂದು ನಾನು ಕೋರಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.
‘ನನ್ನ ವಯಸ್ಸು 44. ನನ್ನ ಕೆರಿಯರ್ನಲ್ಲಿ ನಾನು ಪೋಷಕ ಪಾತ್ರಗಳನ್ನು ಮಾತ್ರ ಮಾಡಿದ್ದೇನೆ. ನನಗೆ ನಟನಾಗಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇದೆ. ಆದರೆ, ಈವರೆಗೆ ಅದು ಸಾಧ್ಯವಾಗಿಲ್ಲ. ದಯವಿಟ್ಟು ನನಗೂ ಒಂದು ಅವಕಾಶ ಕೊಡಿ’ ಎಂದು ಶರದ್ ಮನವಿ ಮಾಡಿಕೊಂಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಅಭಿಜೀತ್ ವಾರಾಂಗ್ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ‘ದೇಜಾ ವು’ದಲ್ಲಿ ಶರದ್ ನಟಿಸುತ್ತಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇದರ ಜತೆಗೆ ‘ಬುಜ್: ದಿ ಪ್ರೈಡ್ ಆಫ್ ಇಂಡಿಯಾ’ದಲ್ಲಿಯೂ ಶರದ್ ಕಾಣಿಸಿಕೊಂಡಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್’ ಹಾಗೂ ‘ದಿ ಫ್ಯಾಮಿಲಿ ಮ್ಯಾನ್ 2’ ಎರಡರಲ್ಲೂ ಶರದ್ ನಟಿಸಿದ್ದಾರೆ. ಕೆಲವೇ ಹೊತ್ತು ಇವರು ಸ್ಕ್ರೀನ್ ಮೇಲೆ ಕಾಣಿಸಿಕೊಂಡರೂ, ಇವರು ಮಾಡಿರುವ ಅರವಿಂದ್ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಆದಾಗ್ಯೂ, ಶರದ್ಗೆ ಆಫರ್ಗಳ ಕೊರತೆ ಇದೆ.