ಸಿನಿಮಾ ಸೋತಿದ್ದಕ್ಕೆ ಪ್ರೇಕ್ಷಕರನ್ನು ದೂಷಿಸಿದ ನಯನತಾರಾ ಪತಿ; ಇದು ಸರಿ ಅಲ್ಲ ಎಂದ ಫ್ಯಾನ್ಸ್
ನಯನತಾರಾ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ನಿರ್ದೇಶನದ 'LIK' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದಕ್ಕೆ ನೆಗೆಟಿವ್ ವಿಮರ್ಶೆಗಳನ್ನು ಮತ್ತು ಪ್ರೇಕ್ಷಕರನ್ನು ದೂಷಿಸಿದ್ದಾರೆ. ಒಟಿಟಿಯಲ್ಲಿ ಮೆಚ್ಚುಗೆ ಗಳಿಸುತ್ತಿದ್ದರೂ, ಥಿಯೇಟರ್‌ಗಳಲ್ಲಿ ನಷ್ಟವಾಯಿತು ಎಂದಿದ್ದಾರೆ. ಇದಕ್ಕೆ ಪ್ರೇಕ್ಷಕರು ಮತ್ತು ಅಭಿಮಾನಿಗಳು, 'ಹಣ ಕೊಟ್ಟು ನೋಡಿದ ಮೇಲೆ ವಿಮರ್ಶಿಸುವ ಹಕ್ಕು ಇದೆ' ಎಂದು ಪ್ರತಿಕ್ರಿಯಿಸಿದ್ದು, ವಿಘ್ನೇಶ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮಿಳು ನಿರ್ದೇಶಕ, ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Shivan) ಆ್ಯಕ್ಷನ್ ಕಟ್ ಹೇಳಿದ್ದ ‘ಲವ್ ಇನ್ಶೂರೆನ್ಸ್ ಕಂಪನಿ’ (LIK) ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾಗಿತ್ತು. ಪ್ರದೀಪ್ ರಂಗನಾಥನ್, ಎಸ್.ಜೆ. ಸೂರ್ಯ ಹಾಗೂ ಕೃತಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ ದೊಡ್ಡ ಸೋಲು ಕಂಡಿತ್ತು. ಆದರೆ, ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ವಿಘ್ನೇಶ್ ಹೇಳಿಕೊಂಡಿದ್ದಾರೆ. ಪ್ರೇಕ್ಷಕರು ತಮ್ಮ ಕೈ ಹಿಡಿದಿಲ್ಲ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.
‘ಎಲ್ಐಕೆ’ ಚಿತ್ರವನ್ನು ಬರೋಬ್ಬರಿ 190 ಕೋಟಿ ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಪ್ರದೀಪ್ ರಂಗನಾಥ್ ಅವರ ಸಿನಿಮಾಗಳಿಗೆ ದೊಡ್ಡ ಗೆಲುವು ಸಿಗುತ್ತಿರುವುದರಿಂದ ಇಷ್ಟು ಹೂಡಿಕೆ ಮಾಡಲಾಗಿತ್ತು. ಆದರೆ ಆನ್‌ಲೈನ್ ನೆಗೆಟಿವಿಟಿ ಹಾಗೂ ಕಳಪೆ ವಿಮರ್ಶೆಗಳ ಕಾರಣದಿಂದಾಗಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ 66 ಕೋಟಿ ಮಾತ್ರ ಗಳಿಸಲು ಶಕ್ತವಾಗಿ ಭಾರಿ ನಷ್ಟ ಅನುಭವಿಸಿತ್ತು.
ಒಟಿಟಿಯಲ್ಲಿ ಸಿನಿಮಾ ನೋಡಿದ ಹಲವರು ಚಿತ್ರವನ್ನು ಮೆಚ್ಚಿಕೊಳ್ಳುತ್ತಿರುವುದನ್ನು ಕಂಡು ವಿಘ್ನೇಶ್ ಶಿವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಚಿತ್ರದ ಸೋಲಿನ ಹಿಂದಿನ ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಅಸಮಾಧಾನ ಹೊರಹಾಕಿರುವ ವಿಘ್ನೇಶ್ ಶಿವನ್, ‘ಸಿನಿಮಾ ಒಟಿಟಿಗೆ ಬಂದ ಮೇಲೆ ನನಗೆ ಸಾಕಷ್ಟು ಮೆಸೇಜ್‌ಗಳು ಬರುತ್ತಿವೆ. ಆನ್‌ಲೈನ್‌ನಲ್ಲಿ ಹರಡಿದ್ದ ವಿಪರೀತ ನೆಗೆಟಿವ್ ರಿವ್ಯೂಗಳನ್ನು ನೋಡಿ ನಾವು ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಅವಕಾಶ ಮಿಸ್ ಮಾಡಿಕೊಂಡೆವು ಎಂದು ಜನರು ಹೇಳುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
‘ಕೆಲವು ಸಿನಿಮಾಗಳು ನೆಗೆಟಿವ್ ರಿವ್ಯೂಗಳ ಮಧ್ಯೆಯೂ ಗೆಲ್ಲುತ್ತವೆ. ಆದರೆ ಇನ್ನು ಕೆಲವು ಸಿನಿಮಾಗಳಿಗೆ ಅದು ಸಾಧ್ಯವಾಗುವುದಿಲ್ಲ. ಚಿತ್ರರಂಗದವರಿಂದ ಬೆಂಬಲ ಸಿಗದೇ ಹೋದಾಗ, ಸಾರ್ವಜನಿಕರ ಅಭಿಪ್ರಾಯ ಬದಲಾಗುತ್ತದೆ ಮತ್ತು ಅದು ಚಿತ್ರದ ಭವಿಷ್ಯವನ್ನೇ ಬದಲಾಯಿಸಿಬಿಡುತ್ತದೆ. ಕೇವಲ ತಮ್ಮ ಬುದ್ಧಿವಂತಿಕೆ ಮತ್ತು ಅಹಂ ಪ್ರದರ್ಶಿಸಲು ಬರೆಯುವ ಇಂತಹ ವಿಮರ್ಶೆಗಳು ಚಿತ್ರವನ್ನು ಹತ್ತಿಕ್ಕುವುದಲ್ಲದೆ, ಮಹತ್ವಾಕಾಂಕ್ಷೆಯ ಸಿನಿಮಾ ನಿರ್ದೇಶಕರ ಕನಸುಗಳನ್ನು ಹೊಸಕಿ ಹಾಕುತ್ತವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
#LIK – #VigneshShivan pens down a note stating that many people may have missed his film due to the overwhelming negative reviews, which could have discouraged audiences from giving it a chance in theatres. Initially he had mentioned he is not satisfied with the box office… pic.twitter.com/DxPUBb04ll
— Movies Singapore (@MoviesSingapore) May 31, 2026
ಚಿತ್ರ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಸಿನಿಮಾ ಪ್ರದರ್ಶನ ಚೆನ್ನಾಗಿಯೇ ಇತ್ತು. ಆದರೆ ಆ ನಂತರ ದಿಢೀರನೆ ಸಿನಿಮಾದ ಬಗ್ಗೆ ನೆಗೆಟಿವ್ ಟ್ರೆಂಡ್ ಸೃಷ್ಟಿಸಲಾಯಿತು. ಈ ಆಘಾತದಿಂದ ನಾನಿನ್ನೂ ಪೂರ್ತಿಯಾಗಿ ಹೊರಬರಲು ಸಾಧ್ಯವಾಗಿಲ್ಲ. ಸಿನಿಮಾ ಮಾಡುವಾಗ ಮತ್ತು ಅದನ್ನು ರಿಲೀಸ್ ಮಾಡುವಾಗ ಎದುರಿಸಿದ ಕಷ್ಟಗಳ ನಂತರ ಇಂತಹ ಫಲಿತಾಂಶ ಬಂದಿರುವುದು ನಿಜಕ್ಕೂ ನೋವು ತಂದಿದೆ. ಕಷ್ಟಪಟ್ಟು ಮಾಡುವ ತಮಿಳು ಸಿನಿಮಾಗಳಿಗೆ ಪ್ರೇಕ್ಷಕರು ಸ್ವಲ್ಪ ಉದಾರತೆ ತೋರಿಸಬೇಕು’ ಎಂದು ಅವರು ವಿನಂತಿಸಿದ್ದಾರೆ.
ಇದನ್ನೂ ಓದಿ: ವಿವಾಹಕ್ಕೂ ಮೊದಲು ನಯನತಾರಾ-ವಿಘ್ನೇಶ್ ಮಧ್ಯೆ ಆಗಿತ್ತು ಒಪ್ಪಂದ; ಇನ್ನೂ ಇದೆ ಆ ಡೀಲ್
ವಿಘ್ನೇಶ್ ಮಾತನ್ನು ಅನೇಕರು ಟೀಕಿಸಿದ್ದಾರೆ. ಜನರು ಹಣ ಕೊಟ್ಟು ನೋಡಿದ ಮೇಲೆ ಸಿನಿಮಾ ಹೇಗಿದೆ ಎಂಬುದನ್ನು ಹೇಳುವ ಹಕ್ಕು ಇರುತ್ತದೆ ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Mon, 1 June 26





