
ತಮಿಳು ಚಿತ್ರರಂಗದಲ್ಲಿ ಈ ಅಕ್ಟೋಬರ್ ತಿಂಗಳು ಅತ್ಯಂತ ಕುತೂಹಲಕಾರಿ ಬಾಕ್ಸ್ ಆಫೀಸ್ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ದಳಪತಿ ವಿಜಯ್ ಅಭಿನಯದ ಹಿಟ್ ಸಿನಿಮಾ ‘ತಿರುಪಾಚಿ’ ಚಿತ್ರಮಂದಿರಗಳಿಗೆ ಮರಳುತ್ತಿದೆ. ಇದೇ ವೇಳೆ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಸಿಗ್ಮಾ’ ಕೂಡ ತೆರೆಗೆ ಬರಲಿದೆ. ಈ ಇಬ್ಬರ ಚಿತ್ರಗಳು ಬೆನ್ನಬೆನ್ನಿಗೆ ಬಿಡುಗಡೆಯಾಗುತ್ತಿರುವುದು ಭಾರಿ ಕುತೂಹಲ ಮೂಡಿಸಿದೆ.
ವರದಿಗಳ ಪ್ರಕಾರ ವಿಜಯ್ ನಟನೆಯ ‘ತಿರುಪಾಚಿ’ ಸಿನಿಮಾ ಅಕ್ಟೋಬರ್ 1 ರಂದು ಮರುಬಿಡುಗಡೆಯಾಗಲಿದೆ. ಮರುದಿನವೇ ಅಂದರೆ ಅಕ್ಟೋಬರ್ 2 ರಂದು ಜೇಸನ್ ಸಂಜಯ್ ಅವರ ‘ಸಿಗ್ಮಾ’ ಚಿತ್ರಮಂದಿರಕ್ಕೆ ಬರಲಿದೆ. ಹೀಗಾಗಿ ಬಾಕ್ಸ್ ಆಫೀಸ್‌ನಲ್ಲಿ ಅಪ್ಪ ಮತ್ತು ಮಗನ ನಡುವೆ ನೇರ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ. ಈ ಅಪರೂಪದ ಮುಖಾಮುಖಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
2005 ರಲ್ಲಿ ತೆರೆಕಂಡ ‘ತಿರುಪಾಚಿ’ ಚಿತ್ರದಲ್ಲಿ ವಿಜಯ್ ಮತ್ತು ತ್ರಿಷಾ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದರು. ಪೇರರಸು ನಿರ್ದೇಶನದ ಈ ಸಿನಿಮಾ ತಂಗಿಯ ಮೇಲಿನ ಅಣ್ಣನ ಬಾಂಧವ್ಯದ ಕಥೆಯನ್ನು ಹೊಂದಿತ್ತು. ಅಣ್ಣ ತಂಗಿಯಂದಿರ ಪಾತ್ರಗಳು ಮತ್ತು ಮಾಸ್ ಆಕ್ಷನ್ ದೃಶ್ಯಗಳು ಪ್ರೇಕ್ಷಕರನ್ನು ಅಪಾರವಾಗಿ ರಂಜಿಸಿದ್ದವು. ಆಗಿನ ಕಾಲಕ್ಕೆ ಈ ಚಿತ್ರವು ಸುಮಾರು 32 ಕೋಟಿ ರೂಪಾಯಿ ಗಳಿಸಿ ಸೂಪರ್ ಹಿಟ್ ಎನಿಸಿಕೊಂಡಿತ್ತು.
ಇನ್ನೊಂದೆಡೆ ಜೇಸನ್ ಸಂಜಯ್ ನಟನಾಗುವ ಬದಲು ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಹೀಗಾಗಿ ಅವರ ಮೊದಲ ಚಿತ್ರ ‘ಸಿಗ್ಮಾ’ ಮೇಲೆ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಸಿನಿಮಾದ ಕಥೆಯ ವಿವರಗಳನ್ನು ಚಿತ್ರತಂಡ ಗುಪ್ತವಾಗಿಟ್ಟಿದೆ. ಆದಾಗ್ಯೂ ಇದೊಂದು ಸಾಹಸಮಯ ನಿಧಿ ಶೋಧ ಮತ್ತು ಕಾಮಿಡಿ ಆಕ್ಷನ್ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಿನಿಮಾ ವೇದಿಕೆಯಲ್ಲಿ ರಾಜಕೀಯ ಸದ್ದು; ‘ಟಿವಿಕೆ’ ಜಪಕ್ಕೆ ಪ್ರತಿಕ್ರಿಯಿಸಿದ ಜೇಸನ್ ಸಂಜಯ್
ಪ್ರಸ್ತುತ ಜೇಸನ್ ಸಂಜಯ್ ತಮ್ಮ ಮೊದಲ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯಸಿಯಾಗಿದ್ದಾರೆ. ಚಿತ್ರದ ಯಶಸ್ಸಿನ ಮೇಲೆ ತಮ್ಮ ಪೂರ್ಣ ಗಮನ ನೆಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ನಂತರವಷ್ಟೇ ಮುಂದಿನ ನಿರ್ದೇಶನ ಅಥವಾ ನಟನೆಯ ಬಗ್ಗೆ ಯೋಚಿಸುವುದಾಗಿ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳ ಬಾಕ್ಸ್ ಆಫೀಸ್ ಕದನ ತೀವ್ರ ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.