ಹೈದರಾಬಾದ್ನಿಂದ ಹೊರ ಹೋಗಲಿದೆಯೇ ತೆಲುಗು ಚಿತ್ರರಂಗ
Tollywood: ಸಂಧ್ಯಾ ಚಿತ್ರಮಂದಿರದ ಪ್ರಕರಣ ಅಲ್ಲು ಅರ್ಜುನ್ vs ತೆಲಂಗಾಣ ಸರ್ಕಾರ ಎಂಬಂತಾಗಿದೆ. ಅಲ್ಲು ಅರ್ಜುನ್ ಪ್ರಕರಣವನ್ನು ನೆಪವಾಗಿಟ್ಟಿಕೊಂಡು ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗಕ್ಕೆ ನೀಡಲಾಗುತ್ತಿದ್ದ ಸೌಲಭ್ಯಗಳಿಗೆ ಕತ್ತರಿ ಹಾಕಿದೆ. ಇದರ ಬೆನ್ನಲ್ಲೆ ಟಾಲಿವುಡ್ ಅನ್ನು ಹೈದರಾಬಾದ್ನಿಂದ ಆಂಧ್ರ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಕಳೆದ ಹಲವು ವರ್ಷಗಳಿಂದ ಅತ್ಯುತ್ತಮ ಸಿನಿಮಾ, ಭಾರಿ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ಸದ್ದಾಗಿದ್ದ ತೆಲುಗು ಚಿತ್ರರಂಗ ಇತ್ತೀಚೆಗೆ ಕೆಟ್ಟ ಕಾರಣಗಳಿಗೆ ಸುದ್ದಿಯಾಗಿದೆ. ಕೆಲ ವರ್ಷಗಳ ಹಿಂದೆ ಆಂಧ್ರ ಪ್ರದೇಶ ಸರ್ಕಾರ ತೆಲುಗು ಚಿತ್ರರಂಗಕ್ಕೆ ಬಿಸಿ ಮೇಲೆ ಬಿಸಿ ಮುಟ್ಟಿಸಿತ್ತು, ಈಗ ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗಕ್ಕೆ ಬಿಸಿ ಮುಟ್ಟಿಸುತ್ತಿದೆ. ಅಲ್ಲು ಅರ್ಜುನ್ಗೆ ಸಂಕಷ್ಟದ ಮೇಲೆ ಸಂಕಷ್ಟ ತಂದೊಡ್ಡುತ್ತಿರುವ ತೆಲಂಗಾಣ ಸರ್ಕಾರ, ತೆಲುಗು ಚಿತ್ರರಂಗಕ್ಕೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ಸಹ ರದ್ದು ಮಾಡಿರುವುದಾಗಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೆ ಟಾಲಿವುಡ್ (ತೆಲುಗು ಚಿತ್ರರಂಗ) ತೆಲಂಗಾಣದ ಭಾಗವಾಗಿರುವ ಹೈದರಾಬಾದ್ನಿಂದ ಹೊರಬಂದು ಆಂಧ್ರ ಪ್ರದೇಶದ ಯಾವುದಾದರೂ ನಗರದಲ್ಲಿ ನೆಲಗೊಳ್ಳಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಕನ್ನಡ ಚಿತ್ರರಂಗವನ್ನು ಬೆಂಗಳೂರಿನ ಗಾಂಧಿನಗರದಿಂದ ಗುರುತಿಸುವಂತೆ, ತೆಲುಗು ಚಿತ್ರರಂಗವನ್ನು ಹೈದರಾಬಾದ್ನಿಂದ ಗುರುತಿಸಲಾಗುತ್ತದೆ. ಆದರೆ ಈಗ ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗ ಮೇಲೆ ಮಾಡುತ್ತಿರುವ ‘ವಿಚ್ ಹಂಟ್’ ನೋಡಿದ ಕೆಲವರು ತೆಲುಗು ಚಿತ್ರರಂಗ ಹೈದರಾಬಾದ್ನಿಂದ ಹೊರಗೆ ಬರುವ ಮೂಲಕ ತೆಲಂಗಾಣ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎನ್ನುತ್ತಿದ್ದಾರೆ. ಕೆಲವರು ಇದರ ಪರವಾಗಿದ್ದರೆ ಕೆಲವು ಈ ವಾದದ ವಿರುದ್ಧ ಸಹ ಇದ್ದಾರೆ.
ಇದೇ ಸಂದರ್ಭದಲ್ಲಿ ಆಂಧ್ರದ ಕೆಲವು ಸಚಿವರು, ಮುಖಂಡರು, ತೆಲುಗು ಚಿತ್ರರಂಗದ ವಿರುದ್ಧ ತೆಲಂಗಾಣ ಸರ್ಕಾರ ಉದ್ದೇಶಪೂರ್ವಕ ದಾಳಿ ಮಾಡುತ್ತಿದ್ದು, ತೆಲುಗು ಸಿನಿಮಾ ಪ್ರಮುಖರು ಟಾಲಿವುಡ್ ಕಾರ್ಯಕ್ರೇತ್ರವನ್ನು ಹೈದರಾಬಾದ್ನಿಂದ ಆಂಧ್ರದ ವಿಶಾಖಪಟ್ಟಣ ಅಥವಾ ಇನ್ಯಾವುದೇ ನಗರಕ್ಕೆ ಬದಲಾಯಿಸಬೇಕು ಎಂದಿದ್ದಾರೆ. ಕೆಲ ದಿನಗಳ ಹಿಂದೆ ನಟ, ಆಂಧ್ರ ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್ ಸಹ ಆಂಧ್ರದಲ್ಲಿ ಪ್ರತ್ಯೇಕ ‘ಸಿನಿಮಾ ನಗರ’ ನಿರ್ಮಾಣ ಮಾಡುವ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ:ನನ್ನ ಶಾಪದಿಂದಲೇ ತೆಲುಗು ಚಿತ್ರರಂಗಕ್ಕೆ ಈ ಗತಿ ಬಂತು: ವೇಣುಸ್ವಾಮಿ
ಆದರೆ ಹೈದರಾಬಾದ್ನಿಂದ ಟಾಲಿವುಡ್ ಅನ್ನು ಹೊರಗೆ ತರುವುದು ಸುಲಭದ ಕಾರ್ಯವಲ್ಲ. ರಾಮೋಜಿ ಫಿಲಂ ಸಿಟಿ, ಅಣ್ಣಪೂರ್ಣ ಸ್ಟುಡಿಯೋ ಸೇರಿದಂತೆ ಹಲವು ಸಿನಿಮಾ ಸಂಬಂಧಿ ದೊಡ್ಡ ಸ್ಟುಡಿಯೋಗಳು, ಡಬ್ಬಿಂಗ್, ರೀರೆಕಾರ್ಡಿಂಗ್ ಸಿನಿಮಾಕ್ಕೆ ಸಂಬಂಧಿಸಿದ ಹಲವು ದೊಡ್ಡ ಸಂಸ್ಥೆಗಳು ಹೈದರಾಬಾದ್ನಲ್ಲಿ ನೆಲೆಗೊಂಡಿವೆ. ಮೂಲಸೌಕರ್ಯದ ದೃಷ್ಟಿಯಿಂದಲೂ ಹೈದರಾಬಾದ್ ಸಿನಿಮಾ ಮಂದಿಗೆ ಹೆಚ್ಚು ಅನುಕೂಲಕರ ಪ್ರದೇಶ, ಈಗ ಒಮ್ಮೆಲೆ ಚಿತ್ರರಂಗವನ್ನು ಸ್ಥಳಾಂತರಗೊಳಿಸುವುದು ಸುಲಭದ ಮಾತಲ್ಲ.
ಈ ಹಿಂದೆ ಆಂಧ್ರದಲ್ಲಿ ಜಗನ್ ಸರ್ಕಾರ ಇದ್ದಾಗಲೂ ಸಹ ಜಗನ್, ತೆಲುಗು ಚಿತ್ರರಂಗದ ಮೇಲೆ ಕೆಲ ಮಿತಿಗಳನ್ನು ಹೇರಿ ಚಿತ್ರರಂಗವನ್ನು ಸರ್ಕಾರದ ಮಿತಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದರು. ಆಗ ಚಿತ್ರರಂಗದ ಮಂದಿ ಜಗನ್ ಸರ್ಕಾರವನ್ನು ಟಕುವಾಗಿ ಟೀಕಿಸಿದ್ದು ಮಾತ್ರವೇ ಅಲ್ಲದೆ ಎಲ್ಲರೂ ಒಟ್ಟಾಗಿ ಸರ್ಕಾರವನ್ನು ಇಳಿಸುವಲ್ಲಿ ಮುಖ್ಯ ಪಾತ್ರವನ್ನೂ ವಹಿಸಿದ್ದರು. ಈಗ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಸಹ ತೆಲುಗು ಚಿತ್ರರಂಗದ ವಿರೋಧ ಕಟ್ಟಿಕೊಳ್ಳುತ್ತಿದ್ದು, ಚಿತ್ರರಂಗದವರು ತೆಲಂಗಾಣ ಸರ್ಕಾರವನ್ನೂ ಇಳಿಸಲು ಶಕ್ತರಾಗುತ್ತಾರೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ