ವಂತಾರದಿಂದ ಕೊಲ್ಹಾಪುರಿಗೆ ಮಾಧುರಿ ರಿಟರ್ನ್ಸ್; ಕೊಲ್ಹಾಪುರದ ಜನರಿಗಿರುವ ಭಾವನೆಗೆ ಬೆಲೆಕೊಟ್ಟು ಆನೆಯನ್ನು ಮರಳಿಸುತ್ತಿರುವ ವಂತಾರ
ಕೊಲ್ಹಾಪುರದಿಂದ ಆರೈಕೆಗೆಂದು ಕರೆತರಲಾಗಿದ್ದ ಮಾಧುರಿ ಆನೆಯನ್ನು ಅದರ ತವರಿನ ಸ್ಥಳಕ್ಕೆ ಮರಳಿಸಲು ವಂತಾರ ನಿರ್ಧರಿಸಿದೆ. ಮಹಾದೇವಿ ಎಂದೇ ಹೆಸರಾಗಿರುವ ಈ ಆನೆಯ ಬಗ್ಗೆ ಕೊಲ್ಹಾಪುರಿ ಜನರಿಗಿರುವ ಭಾವನೆಯನ್ನು ಗೌರವಿಸಿ ವಂತಾರ ಈ ಕ್ರಮ ತೆಗೆದುಕೊಂಡಿದೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಕೆಲ ಷರತ್ತುಗಳೊಂದಿಗೆ ಆನೆಯನ್ನು ವಂತಾರ ಬೀಳ್ಕೊಡುತ್ತಿದೆ.

ಮುಂಬೈ, ಸೆಪ್ಟೆಂಬರ್ 11: ಗುಜರಾತ್ನ ಜಾಮ್ನಗರದಲ್ಲಿರುವ ವಂತಾರಾದಲ್ಲಿ ಆರೈಕೆ ಪಡೆಯುತ್ತಿದ್ದ ಮಾಧುರಿ ಹೆಸರಿನ ಆನೆಯು ತನ್ನ ತವರೂರಿಗೆ ಮರಳುತ್ತಿದೆ. ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಮಾಧುರಿಯನ್ನು ಕಳುಹಿಸಿಕೊಡಲು ವಂತಾರ ಒಪ್ಪಿಕೊಂಡಿದೆ. ಅನಂತ್ ಅಂಬಾನಿ ನಿರ್ವಹಿಸುತ್ತಿರುವ ವಂತಾರ ಸಂಸ್ಥೆಯು ಈ ಸಂಬಂಧ ಹೇಳಿಕೆ ನೀಡಿದ್ದು, ಕೊಲ್ಹಾಪುರದ ಜನರ ಭಾವನೆಗಳಿಗೆ ಬೆಲೆ ನೀಡಿ ಮಾಧುರಿಯನ್ನು ಅದರ ಮೂಲ ಸ್ಥಳಕ್ಕೆ ಕಳುಹಿಸುತ್ತಿರುವುದಾಗಿ ತಿಳಿಸಿದೆ. ಕೊಲ್ಹಾಪುರದಲ್ಲಿ ಮಾಧುರಿ ಹೆಸರಿನ ಈ ಆನೆಯನ್ನು ಮಹಾದೇವಿ ಎಂದೂ ಪ್ರೀತಿ ಮತ್ತು ಭಕ್ತಿಯಿಂದ ಕರೆಯಲಾಗುತ್ತದೆ.
ಉನ್ನತ ಮಟ್ಟದ ಸಮಿತಿ (HPC) ನೀಡಿದ ನಿರ್ದೇಶನದಂತೆ 2025ರ ಜುಲೈ 30ರಂದು ಜಾಮ್‌ನಗರದ ‘ವಂತಾರ’ (Vantara) ಕೇಂದ್ರಕ್ಕೆ ಕರೆತರಲಾಯಿತು. ಮುಂಬೈ ಹೈಕೋರ್ಟ್ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್ ಕೂಡ ಈ ಕ್ರಮಕ್ಕೆ ಸಮ್ಮತಿಸಿದ್ದವು. ಮಾಧುರಿಯನ್ನು ವಶಕ್ಕೆ ತೆಗೆದುಕೊಳ್ಳುವ ಉದ್ದೇಶ ವಂತಾರಾಗೆ ಇರಲಿಲ್ಲ. ಸಮಿತಿಯ ಆದೇಶದ ಮೇರೆಗೆ ಆನೆಯನ್ನು ಇರಿಸಿಕೊಂಡು ಆರೈಕೆ ಮಾಡಲಾಗಿತ್ತು ಎಂದು ವಂತಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಕೊಲ್ಹಾಪುರದ ಜನರಿಗೆ ಮಾಧುರಿಯ ಮೇಲಿರುವ ಭಾವನಾತ್ಮಕ ಬಾಂಧವ್ಯವನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ. ಮಹಾರಾಷ್ಟ್ರ ಸರ್ಕಾರ, ಅದರ ಅಧಿಕಾರಿಗಳು, ಸಂಬಂಧಪಟ್ಟವರು ಮತ್ತು ಸ್ಥಳೀಯ ಸಮುದಾಯದೊಂದಿಗೆ ನಡೆದ ಚರ್ಚೆಯ ನಂತರ, 2025ರ ಆಗಸ್ಟ್ 6ರಂದೇ ಜನರ ಭಾವನೆಗಳಿಗೆ ಗೌರವ ನೀಡುವುದಾಗಿಯೂ ಮತ್ತು ಸಕ್ಷಮ ಪ್ರಾಧಿಕಾರಗಳ ನಿರ್ದೇಶನಗಳಿಗೆ ಬದ್ಧವಾಗಿರುವುದಾಗಿಯೂ ಸ್ಪಷ್ಟಪಡಿಸಲಾಗಿತ್ತು ಎಂದು ವಂತಾರ ಸ್ಪಷ್ಟಪಡಿಸಿದೆ.

ಮಹಾದೇವಿ ಅಕಾ ಮಾಧುರಿ ಆನೆ
ಇದರ ನಂತರ, ಸುಪ್ರೀಂ ಕೋರ್ಟ್ ಎಲ್ಲಾ ಕಕ್ಷಿದಾರರಿಗೆ ತಮ್ಮ ಮೇಲ್ಮನವಿಗಳನ್ನು ಹೆಚ್‌ಪಿಸಿ (HPC) ಮುಂದೆ ಮಂಡಿಸಲು ಸೂಚಿಸಿತು. ಎಲ್ಲಾ ವಾದಗಳನ್ನು ಆಲಿಸಿ, ವರದಿಗಳನ್ನು ಪರಿಶೀಲಿಸಿ ಹಾಗೂ ನಂದನಿಯ ವಸತಿ ಸೌಕರ್ಯವನ್ನು ತನಿಖೆ ಮಾಡಿದ ನಂತರ, ಹೆಚ್‌ಪಿಸಿಯು 2026ರ ಸೆಪ್ಟೆಂಬರ್ 9 ರಂದು ಕೆಲವು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಮಾಧುರಿಯನ್ನು ಮರಳಿ ಕೊಲ್ಹಾಪುರಕ್ಕೆ ಕರೆದೊಯ್ಯಲು ಅನುಮತಿ ನೀಡಿದೆ.
ವಿಧಿಸಲಾದ ಪ್ರಮುಖ ಷರತ್ತುಗಳು: ಮಾಧುರಿಯನ್ನು ಯಾವುದೇ ಮೆರವಣಿಗೆ ಅಥವಾ ಇತರ ಕಾರ್ಯಕ್ರಮಗಳಿಗೆ ಬಳಸುವಂತಿಲ್ಲ. ಆನೆಗೆ ದಿನದ 24 ಗಂಟೆಯೂ ಸೂಕ್ತ ಆರೈಕೆ ಮತ್ತು ನಿರಂತರ ಮೇಲ್ವಿಚಾರಣೆ ಸಿಗಬೇಕು. ಪ್ರತಿ ಹದಿನೈದು ದಿನಗಳಿಗೊಮ್ಮೆ (ಪಾಕ್ಷಿಕ) ಆನೆಯ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಯಬೇಕು.

ಮಹಾದೇವಿ ಅಕಾ ಮಾಧುರಿ ಆನೆ
ವಂತಾರ ಸಂಸ್ಥೆಯು ಹೆಚ್‌ಪಿಸಿಯ ಅಧಿಕಾರವನ್ನು ಗೌರವಿಸುತ್ತದೆ ಮತ್ತು ಅದರ ಎಲ್ಲಾ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸುತ್ತದೆ. ಮಾಧುರಿಯ ಕುರಿತು ನಮ್ಮ ನಿಲುವು ಯಾವಾಗಲೂ ಪಶುವೈದ್ಯಕೀಯ ವಿಜ್ಞಾನ ಮತ್ತು ಆಕೆಯ ಕಲ್ಯಾಣವನ್ನು ಆಧರಿಸಿದೆ. ನಿರಂತರ ವೈದ್ಯಕೀಯ ಉಪಚಾರದಿಂದಾಗಿ ಆಕೆಯ ಆರೋಗ್ಯ ಸ್ಥಿರಗೊಂಡಿದೆಯಾದರೂ, ದೀರ್ಘಕಾಲದ ಸವಾಲುಗಳು ಸಂಪೂರ್ಣವಾಗಿ ಗುಣವಾಗಿಲ್ಲ. ಆಕೆಗೆ ನಿರಂತರ ಬೆಂಬಲ, ಸೂಕ್ತ ನಿರ್ವಹಣೆ ಮತ್ತು ನಿಯಮಿತ ಪಶುವೈದ್ಯಕೀಯ ಉಸ್ತುವಾರಿಯ ಅಗತ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
View this post on Instagram
ಆಕೆಯನ್ನು ಕೊಲ್ಹಾಪುರಕ್ಕೆ ಮರಳಿಸುವುದರೊಂದಿಗೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಮಾಧುರಿಯ ಸ್ಥಳಾಂತರ ಸುಗಮವಾಗಿ ನಡೆಯಲು ಮತ್ತು ಆಕೆಗೆ ಅಗತ್ಯವಿರುವ ವಸತಿ ಸೌಕರ್ಯ, ವೈದ್ಯಕೀಯ ಮೂಲಸೌಕರ್ಯ, ಸಲಕರಣೆಗಳು ಹಾಗೂ ಔಷಧಗಳು ಸರಿಯಾಗಿ ದೊರೆಯುವಂತೆ ಮಾಡಲು ವಂತಾರ ಶ್ರಮಿಸಿದೆ. ಹೆಚ್‌ಪಿಸಿ ನಿರ್ದೇಶನದಂತೆ, ವಂತಾರ ಸಂಸ್ಥೆಯ ಪಶುವೈದ್ಯರು ಪ್ರತಿ ಹದಿನೈದು ದಿನಗಳಿಗೊಮ್ಮೆ ಕೊಲ್ಹಾಪುರಕ್ಕೆ ತೆರಳಿ ಆನೆಯ ವೈದ್ಯಕೀಯ ತಪಾಸಣೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ. ಮಾಧುರಿ ಎಲ್ಲೇ ಇದ್ದರೂ ಆಕೆಯ ಆರೈಕೆ ಮತ್ತು ಕಲ್ಯಾಣ ನಿರಂತರವಾಗಿ ಮುಂದುವರಿಯಬೇಕು ಎಂಬುದೇ ನಮ್ಮ ಆಶಯ ಎಂದು ವಂತಾರ ಭರವಸೆ ನೀಡಿದೆ.

ಮಹಾದೇವಿ ಅಕಾ ಮಾಧುರಿ ಆನೆ
ನಂದನಿಯಲ್ಲಿ ಮಾಧುರಿ ಉಳಿದುಕೊಳ್ಳಲಿರುವ ವಸತಿ ಸೌಕರ್ಯದ ನವೀಕರಣಕ್ಕೂ ವಂತಾರ ಸಹಕರಿಸಿದೆ. ಪ್ರಸ್ತುತ ಲಭ್ಯವಿರುವ ಮೂಲಸೌಕರ್ಯದಲ್ಲಿ ಅತ್ಯುತ್ತಮ ವ್ಯವಸ್ಥೆಯನ್ನು ಮಾಡಲಾಗಿದೆ. ಮಠದ ಜಮೀನಿನಲ್ಲಿ ರಸ್ತೆ ಹಾದುಹೋಗುವ ನಗರಾಭಿವೃದ್ಧಿ ನಿಯಮಗಳ ಕಾರಣದಿಂದಾಗಿ ಪ್ರಸ್ತುತ ಹಂತದಲ್ಲಿ ಹೆಚ್ಚಿನ ಮೂಲಸೌಕರ್ಯ ವಿಸ್ತರಣೆಗೆ ಮಿತಿಗಳಿದ್ದವು. ಮಾಧುರಿ ಹೊಸ ಪರಿಸರಕ್ಕೆ ಹೊಂದಿಕೊಂಡ ನಂತರ, ಆ ಸೌಕರ್ಯವನ್ನು ಮತ್ತಷ್ಟು ಸುಧಾರಿಸಲು ಮಠಕ್ಕೆ ನೆರವಾಗಲು ವಂತಾರ ಸದಾ ಸಿದ್ಧವಾಗಿದೆ. ನ್ಯಾಯಾಲಯ ಅಥವಾ ಸಕ್ಷಮ ಪ್ರಾಧಿಕಾರಗಳು ನಿರ್ದೇಶಿಸಿದರೆ ಈ ಮೇಲ್ದರ್ಜೆಗೇರಿಸುವಿಕೆಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಾಗುವುದು ಎಂದು ವನ್ಯಜೀವಿ ಸಂರಕ್ಷಣೆ, ಆರೈಕೆ ಕೇಂದ್ರವಾದ ವಂತಾರ ತಿಳಿಸಿದೆ.
ಖಚಿತ ಸಂಗತಿಗಳು, ಪಶುವೈದ್ಯಕೀಯ ವಿಜ್ಞಾನ, ಜವಾಬ್ದಾರಿಯುತ ಆರೈಕೆ, ಕಾನೂನು ಚೌಕಟ್ಟಿಗೆ ಗೌರವ ಮತ್ತು ಜೀವ ರಕ್ಷಣೆಯ ನಿರಂತರ ಬದ್ಧತೆಯೇ ನಿಜವಾದ ಪ್ರಾಣಿ ಕಲ್ಯಾಣ ಎಂದು ವಂತಾರ ನಂಬುತ್ತದೆ. ನೀಡಿದ ಮಾರ್ಗದರ್ಶನಕ್ಕಾಗಿ ಗೌರವಾನ್ವಿತ ಸುಪ್ರೀಂ ಕೋರ್ಟ್, ಮಾನ್ಯ ಮುಂಬೈ ಹೈಕೋರ್ಟ್ ಮತ್ತು ಹೆಚ್‌ಪಿಸಿಗೆ ವಂತಾರ ಕೃತಜ್ಞತೆ ಸಲ್ಲಿಸುತ್ತದೆ. ಮಹಾರಾಷ್ಟ್ರ ಹಾಗೂ ಗುಜರಾತ್ ಸರ್ಕಾರಗಳು ಮತ್ತು ಅವರ ಅಧಿಕಾರಿಗಳು ನೀಡಿದ ಸಹಕಾರಕ್ಕೆ ಧನ್ಯವಾದಗಳು. ಮಾಧುರಿಯ ಮೇಲಿರುವ ಕಾಳಜಿಗಾಗಿ ಶ್ರೀ ಮಠ ಮತ್ತು ಕೊಲ್ಹಾಪುರದ ಜನರಿಗೆ ನಾವು ಆಭಾರಿಯಾಗಿದ್ದೇವೆ. ಮಾಧುರಿಯ ಪರಿಸ್ಥಿತಿಯನ್ನು ಹೆಚ್‌ಪಿಸಿ ಗಮನಕ್ಕೆ ತಂದ ‘ಪೇಟಾ ಇಂಡಿಯಾ’ (PETA India) ಪಾತ್ರವನ್ನು ನಾವು ಗುರುತಿಸುತ್ತೇವೆ ಮತ್ತು ಪ್ರಾಣಿ ಕಲ್ಯಾಣದಲ್ಲಿ ನಮ್ಮ ದೀರ್ಘಕಾಲದ ಸಹಯೋಗವನ್ನು ಗೌರವಿಸುತ್ತೇವೆ ಎಂದು ಅನಂತ್ ಅಂಬಾನಿ ಸ್ಥಾಪಿತವಾದ ಈ ಕೇಂದ್ರದಿಂದ ಹೇಳಿಕೆ ಬಂದಿದೆ.

ಮಹಾದೇವಿ ಅಕಾ ಮಾಧುರಿ ಆನೆ
ಮಾಧುರಿಯ ಕ್ಷೇಮವೇ ವಂತಾರದ ಮೊದಲ ಆದ್ಯತೆಯಾಗಿದೆ. ಆಕೆಯ ಆರೋಗ್ಯ, ಕಲ್ಯಾಣ ಮತ್ತು ಗೌರವದ ಕುರಿತಾದ ನಮ್ಮ ಬದ್ಧತೆಯು ಆಕೆ ಎಲ್ಲಿದ್ದಾಳೆ ಎನ್ನುವುದರ ಮೇಲೆ ಬದಲಾಗುವುದಿಲ್ಲ. ಆಕೆಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸುರಕ್ಷಿತ, ಸಂತೋಷದ ಜೀವನವನ್ನು ಹಾರೈಸುತ್ತೇವೆ ಎಂದು ವಂತಾರ ಹೇಳಿದೆ.
(ಇದು ವಂತಾರ ಸಂಸ್ಥೆಯಿಂದ ಬಿಡುಗಡೆಯಾದ ಪತ್ರಿಕಾಹೇಳಿಕೆ ಆಧರಿಸಿ ಮಾಡಿರುವ ಸುದ್ದಿ)
Published On - 5:14 pm, Fri, 11 September 26




