AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮಗುವಿನ ಹೊಟ್ಟೆ ತುಂಬಿದೆಯೇ ಎಂದು ತಿಳಿಯುವುದು ಹೇಗೆ?

ನನ್ನ ಮಗು ಸರಿಯಾಗಿ ಹಾಲು ಕುಡಿಯುತ್ತಿದೆಯೇ? ಎಂಬ ಅನುಮಾನ ಎಲ್ಲ ಹೊಸ ತಾಯಂದಿರಿಗೂ ಇದ್ದೇ ಇರುತ್ತದೆ. ಹಾಗಾದರೆ, ನಿಮ್ಮ ಮಗು ಹಸಿದುಕೊಂಡಿದೆಯೇ? ಅಥವಾ ಆ ಮಗುವಿನ ಹೊಟ್ಟೆ ತುಂಬಿದೆಯೇ? ಎಂದು ನಿಮಗೆ ಗೊತ್ತಾಗುವುದು ಹೇಗೆ?

ನಿಮ್ಮ ಮಗುವಿನ ಹೊಟ್ಟೆ ತುಂಬಿದೆಯೇ ಎಂದು ತಿಳಿಯುವುದು ಹೇಗೆ?
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 14, 2023 | 12:38 PM

ಮಗುವನ್ನು ಹೆತ್ತ ತಾಯಿಗೆ ತನ್ನ ಮಗುವಿನ ಆರೋಗ್ಯದಲ್ಲಿ ಕೊಂಚ ಬದಲಾವಣೆಯಾದರೂ ಸಹಿಸಿಕೊಳ್ಳಲು ಆಗುವುದಿಲ್ಲ. ಮಗು ಎಷ್ಟೇ ಹಾಲು ಕುಡಿದರೂ ಆ ಮಗುವಿಗೆ ಹೊಟ್ಟೆ ತುಂಬಿತೇ? ಇಲ್ಲವೇ? ಎಂಬ ಅನುಮಾನ ಆಕೆಯನ್ನು ಕಾಡುತ್ತಲೇ ಇರುತ್ತದೆ. ಕೆಲವು ಮಕ್ಕಳು 15ರಿಂದ 30 ನಿಮಿಷದವರೆಗೂ ಎದೆಹಾಲು ಕುಡಿಯುತ್ತಾರೆ. ಆದರೆ, ಇನ್ನು ಕೆಲವು ಮಕ್ಕಳಿಗೆ 10 ನಿಮಿಷ ಹಾಲು ಕುಡಿದರೂ ಹೊಟ್ಟೆ ತುಂಬಿ ಬಿಡುತ್ತದೆ. ಪ್ರತಿಯೊಂದು ಮಗುವೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ನಾವು ಒಂದಕ್ಕೊಂದನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಹಾಗಾದರೆ, ನಿಮ್ಮ ಮಗು ಹಸಿದುಕೊಂಡಿದೆಯೇ? ಅಥವಾ ಆ ಮಗುವಿನ ಹೊಟ್ಟೆ ತುಂಬಿದೆಯೇ? ಎಂದು ನಿಮಗೆ ಗೊತ್ತಾಗುವುದು ಹೇಗೆ?

ನನ್ನ ಮಗು ಸರಿಯಾಗಿ ಹಾಲು ಕುಡಿಯುತ್ತಿದೆಯೇ? ಎಂಬ ಅನುಮಾನ ಎಲ್ಲ ಹೊಸ ತಾಯಂದಿರಿಗೂ ಇದ್ದೇ ಇರುತ್ತದೆ. ಆದರೆ, ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ. ಒಂದುವೇಳೆ ನಿಮ್ಮ ಮಗುವಿಗೆ ಹೊಟ್ಟೆ ತುಂಬದಿದ್ದರೆ ಆ ಮಗು ಸುಮ್ಮನೇ ಇರಲು ಸಾಧ್ಯವೇ ಇಲ್ಲ. ಹಾಗಂತ ಮಗು ಅಳುತ್ತಿರುವುದಕ್ಕೆಲ್ಲ ಹೊಟ್ಟೆ ಹಸಿವೇ ಕಾರಣವೆಂದು ನಿರ್ಧರಿಸಬೇಡಿ. ನವಜಾತ ಶಿಶುವಿಗೆ 4 ತಿಂಗಳವರೆಗೂ ಪ್ರತಿ 2 ಗಂಟೆಗೊಮ್ಮೆ ಹಾಲು ಕುಡಿಸುತ್ತಲೇ ಇರಬೇಕು. ಆಗ ಮಾತ್ರ ಮಗು ಚೆನ್ನಾಗಿ ಬೆಳವಣಿಗೆಯಾಗಲು ಸಾಧ್ಯ. ನಿಮ್ಮ ಮಗು ಒಂದುವೇಳೆ 2 ಗಂಟೆಗೊಮ್ಮೆ ಹಾಲು ಕುಡಿಯದಿದ್ದರೂ ನೀವು ಚಿಂತಿಸಬೇಕಾಗಿಲ್ಲ. ಆ ಮಗುವಿಗೆ ಹೊಟ್ಟೆ ಹಸಿವಾದರೆ ಅದು ತಾನಾಗೇ ತನ್ನ ಭಾಷೆಯಲ್ಲಿ ನಿಮಗೆ ತಿಳಿಸುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮಗುವಿನ ಕೋಮಲ ತ್ವಚೆಯ ಕಾಳಜಿ ಮಾಡುವುದು ಹೇಗೆ?

ನೀವು ಸ್ತನ್ಯಪಾನ ಮಾಡುತ್ತಿದ್ದರೆ ನಿಮ್ಮ ಪುಟ್ಟ ಮಗು ಸುಮಾರು 10 ರಿಂದ 20 ನಿಮಿಷಗಳ ಕಾಲ ನಿರಂತರವಾಗಿ ಎದೆಹಾಲು ಕುಡಿಯುತ್ತದೆ. ಆದರೆ, ಇನ್ನು ಕೆಲವು ಮಕ್ಕಳು ಅರ್ಧ ಗಂಟೆಯವರೆಗೂ ಕುಡಿಯುತ್ತಾರೆ. ಆ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಆದರೆ, ಮಗು ಸರಿಯಾಗಿ ಹಾಲು ಕುಡಿಯುತ್ತಿದೆಯೇ? ಮಗು ಹಾಲನ್ನು ನುಂಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.

ನೀವು ಎದೆಹಾಲು ನೀಡುತ್ತಿರಲಿ ಅಥವಾ ಬಾಟಲ್ ಫೀಡಿಂಗ್ ಮಾಡುತ್ತಿರಲಿ ನಿಮ್ಮ ಮಗು ಬೆಳೆಯುತ್ತಾ ಹೋದಂತೆ ಅವರ ಹಸಿವು ಹೆಚ್ಚಾಗುತ್ತದೆ. ನಿಮ್ಮ ಮಗುವಿನ ಹೊಟ್ಟೆ ತುಂಬಿದೆ ಎಂಬುದಕ್ಕೆ ಕೆಲವು ಸಂಕೇತಗಳನ್ನು ನೀವು ಗಮನಿಸಬಹುದು.

– ಹೊಟ್ಟೆ ತುಂಬಿದ ಕೂಡಲೆ ಮಗು ನಿಮ್ಮ ಸ್ತನ ಅಥವಾ ಬಾಟಲಿಯಿಂದ ಬಾಯಿಯನ್ನು ಹೊರಗೆ ತೆಗೆಯುತ್ತದೆ.

– ಹಾಲು ಕುಡಿಯುತ್ತಿರುವಾಗಲೇ ಮಗು ನಿದ್ರೆ ಮಾಡುತ್ತದೆ.

– ಹಾಲು ಸಾಕೆನಿಸಿದಾಗ ಮಗು ತಲೆ ಅಲ್ಲಾಡಿಸುತ್ತದೆ ಅಥವಾ ಬಾಯಿ ಮುಚ್ಚಿಕೊಳ್ಳುತ್ತದೆ.

ನಿಮ್ಮ ಮಗುವಿನ ಹೊಟ್ಟೆ ತುಂಬಿಸುವುದು ಎಷ್ಟು ಮುಖ್ಯವೋ ಅದಕ್ಕೆ ಅತಿಯಾಗಿ ಹೊಟ್ಟೆ ತುಂಬಿಸದಿರುವುದು ಕೂಡ ಅಷ್ಟೇ ಮುಖ್ಯ. ನಿಮ್ಮ ಮಗುವಿಗೆ ನೀವು ನೀಡುತ್ತಿರುವ ಹಾಲು ಸಾಕಾಗುತ್ತಿದೆ ಎಂಬುದಕ್ಕೆ ಕೆಲವು ಸಾಕ್ಷಿಗಳಿವು:

– ಮಗು ದಿನಕ್ಕೆ 8ರಿಂದ 9 ಬಾರಿಯಾದರೂ ಮೂತ್ರ ವಿಸರ್ಜನೆ ಮಾಡಿದರೆ ಹಾಲು ಸಾಕಾಗುತ್ತಿದೆ ಎಂದು ಅರ್ಥ. ಮಲ ವಿಸರ್ಜನೆ 5 ದಿನಗಳಿಗೊಮ್ಮೆ ಮಾಡಿದರೂ ತೊಂದರೆಯೇನಿಲ್ಲ. ಆದರೆ, ಮೂತ್ರ ವಿಸರ್ಜನೆ ಮಾತ್ರ ಎಷ್ಟು ಮಾಡಿದರೂ ಒಳ್ಳೆಯದೇ.

– ಪ್ರತಿ ತಿಂಗಳೂ ಮಗುವಿನ ತೂಕ ಚೆಕ್ ಮಾಡಿಸಲು ಮರೆಯಬೇಡಿ. ಮಗುವಿನ ತೂಕ ಹೆಚ್ಚಾಗುತ್ತಿದೆ ಎಂದರೆ ಮಗುವಿಗೆ ಸಾಕಷ್ಟು ಹಾಲು ಸಿಗುತ್ತಿದೆ ಎಂದರ್ಥ.

– ನಿಮ್ಮ ಮಗು ಆ್ಯಕ್ಟಿವ್ ಆಗಿ ಮತ್ತು ಸಂತೋಷವಾಗಿದ್ದರೆ ಮಗುವಿಗೆ ಎದೆಹಾಲು ಸಾಕಾಗುತ್ತಿದೆ ಎಂದರ್ಥ. ಚೆನ್ನಾಗಿ ತಿನ್ನುವ ಮಗು ಚಟುವಟಿಕೆಯಿಂದ ಇರುತ್ತದೆ. ಹಸಿದಿರುವ ಮಗು ಹಠ ಮಾಡುತ್ತದೆ.

ಇದನ್ನೂ ಓದಿ: ಮಕ್ಕಳಿಗೆ ಹಸುವಿನ ಹಾಲಿನ ಬದಲು ಮೇಕೆ ಹಾಲು ಕೊಡಬಹುದೇ?

ನಿಮ್ಮ ಮಗು ಸಾಕಷ್ಟು ತಿನ್ನುತ್ತಿಲ್ಲ ಎಂಬುದರ ಲಕ್ಷಣಗಳಿವು:

– ಮಗು ಕಪ್ಪು ಬಣ್ಣದ ಮಲ ವಿಸರ್ಜನೆ ಮಾಡಿದರೆ.

– ಹಾಲು ಕುಡಿಯುವ ಬದಲು ಯಾವಾಗಲೂ ನಿದ್ರೆ ಮಾಡುತ್ತಿದ್ದರೆ.

– ಮಗುವನ್ನು ನಿಮ್ಮ ಎದೆಯ ಮೇಲೆ ಒತ್ತಿಕೊಂಡಾಗ ದೂರ ಹೋದರೆ.

– ಹಾಲು ಕುಡಿದ ನಂತರವೂ ಹಠ ಮಾಡಿದರೆ, ಅಳಲು ಶುರು ಮಾಡಿದರೆ.

– ದಿನಕ್ಕೆ 6ಕ್ಕಿಂತ ಕಡಿಮೆ ಬಾರಿ ಮೂರ್ತ ವಿಸರ್ಜನೆ ಮಾಡಿದರೆ.

ಈ ಸಂದರ್ಭಗಳಲ್ಲಿ ನೀವು ತಕ್ಷಣ ಮಕ್ಕಳ ತಜ್ಞರನ್ನು ಭೇಟಿಯಾಗಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ