AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಂ ಐಸೋಲೇಶನ್​ನಲ್ಲಿ ಇರುವವರು ಮತ್ತು ಅವರ ಮನೆಯವರು ಹೇಗಿರಬೇಕು? ಇಲ್ಲಿದೆ ಮಾರ್ಗಸೂಚಿ

AIIMS Delhi Home Isolation Guidelines: ಸೋಂಕಿತ ವ್ಯಕ್ತಿಯನ್ನು ನೋಡಿಕೊಳ್ಳುವ ವ್ಯಕ್ತಿಯೂ ಮೂರು ಲೇಯರ್​ ಇರುವ ಮಾಸ್ಕ್ ಧರಿಸಬೇಕು. ಕೈಗಳಿಗೆ ಗ್ಲೌಸ್ ಬಳಸಬೇಕು. ಸೋಂಕಿತ ವ್ಯಕ್ತಿಗೆ ಅವರು ಇರುವ ಕೋಣೆಯಲ್ಲಿಯೇ ಊಟ, ಉಣಿಸು ನೀಡಬೇಕು.

ಹೋಂ ಐಸೋಲೇಶನ್​ನಲ್ಲಿ ಇರುವವರು ಮತ್ತು ಅವರ ಮನೆಯವರು ಹೇಗಿರಬೇಕು? ಇಲ್ಲಿದೆ ಮಾರ್ಗಸೂಚಿ
ಪ್ರಾತಿನಿಧಿಕ ಚಿತ್ರ
guruganesh bhat
| Updated By: Skanda|

Updated on: May 10, 2021 | 7:41 AM

Share

ಕೊವಿಡ್​ನ ಸೌಮ್ಯ ಲಕ್ಷಣಗಳಿದ್ದರೆ ಮನೆಯಲ್ಲಿಯೇ ಪ್ರತ್ಯೇಕ ವಾಸ ಮಾಡುವ ಮೂಲಕ ಸೋಂಕಿತರು ಗುಣಮುಖರಾಗಬಹುದು. ಹೋಂ ಐಸೋಲೇಶನ್ ಇತರರಿಗೆ ಕೊವಿಡ್ ಹರಡದಂತೆ ತಡೆಯುವ ಸುಲಭ ಮಾರ್ಗವೂ ಹೌದು. ಹಾಗಾದರೆ ಹೋಂ ಐಸೊಲೇಶನ್​ನಲ್ಲಿ ಹೇಗಿರಬೇಕು? ಪ್ರತ್ಯೇಕ ವಾಸದಲ್ಲಿ ಇರುವವರಿಗೆ ಊಟ ತಿಂಡಿಗಳ ವ್ಯವಸ್ಥೆ ಮಾಡುವವರು ಹೇಗೆ ವರ್ತಿಸಬೇಕು? ಈ ಪ್ರಶ್ನೆಗಳಿಗೆ ದೆಹಲಿ ಏಮ್ಸ್​ನ ಡಾ.ಸೌರಭ್ ಮಿತ್ತಲ್ ಸರಳವಾಗಿ ವಿವರಿಸಿದ್ದಾರೆ.

ಹೋಂ ಐಸೋಲೇಶನ್ ಕೊವಿಡ್ ಸೋಂಕು ಹರಡದಂತೆ ತಡೆಯಲು ಇರುವ ಅತ್ಯುತ್ತಮ ಮಾರ್ಗ. ಸರ್ಕಾರವೇ ಹೇಳಿದಂತೆ ಕೊವಿಡ್​ ಸೋಂಕು ತಗುಲಿಯೂ ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆಗಳೇನೂ ಕಾಣಿಸಿಕೊಳ್ಳದಿದ್ದರೆ ನೀವು ಹೋಂ ಐಸೋಲೇಶನ್​ನಲ್ಲಿ ಇರಬಹುದು. ಇದರಿಂದ ಆಸ್ಪತ್ರೆಗಳಲ್ಲಿ ಹೆಚ್ಚು ದಟ್ಟಣೆಯೂ ಸೃಷ್ಟಿಯಾಗುವುದಿಲ್ಲ. ಅಗತ್ಯ ಇರುವವರಿಗೆ ಬೆಡ್​ಗಳು ಸಿಗುತ್ತವೆ. ಯಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿರುತ್ತದೋ ಅಂಥವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಆದರೆ ನೆನಪಿಡಿ, ನೀವು ಹೋಂ ಐಸೋಲೇಶನ್ನಲ್ಲಿ ಇರಬೇಕೋ ಅಥವಾ ಆಸ್ಪತ್ರೆಗೆ ದಾಖಲಾಗಬೇಕೋ ಎಂಬುದನ್ನು ವೈದ್ಯರೇ ನಿರ್ಧರಿಸಬೇಕು.

ಹೋಂ ಐಸೋಲೇಶನ್​ನಲ್ಲಿ ಇರುವವರಿಗೆ ಪ್ರತ್ಯೇಕ ಕೋಣೆಯಲ್ಲಿ ಪ್ರತ್ಯೇಕ ಬಾತ್​ರೂಂ ಸಹ ಇರಬೇಕು. ಕೊವಿಡ್ ಸೋಂಕಿತರು ಬಳಸುವ ಶೌಚಾಲಯ ಮತ್ತು ಸ್ನಾನದ ಕೋಣೆಯನ್ನು ಮನೆಯ ಇತರರು ಬಳಸಬಾರದು. ಎಚ್​ಐವಿ ಅಥವಾ ಇಮ್ಯುನೋಕಂಪ್ರಮೈಸ್ಡ್ ರೋಗಿಗಳು, ವಯೋವೃದ್ಧರು ನೇರವಾಗಿ ಹೋಂ ಐಸೋಲೇಶನ್ ಮಾಡುವಂತಿಲ್ಲ. ಕೊವಿಡ್ ಸೋಂಕು ತಗುಲಿದರೆ ವೈದ್ಯರ ಸೂಕ್ತ ಸಲಹೆಯಂತೆಯೇ ಚಿಕಿತ್ಸೆ ಪಡೆಯಬೇಕು. ಈ ವಿಷಯದಲ್ಲಿ ಯಾರೂ ಸಹ ಸ್ವಯಂ ನಿರ್ಧಾರ ಕೈಗೊಳ್ಳುವಂತಿಲ್ಲ.

ಇಡೀ ದಿನವೂ ನಿಗಾ ಇರಲಿ ಹೋಂ ಐಸೋಲೇಶನ್​ನಲ್ಲಿ ಇರುವವರನ್ನು ದಿನದ 24 ಗಂಟೆಗಳ ಕಾಲವೂ ಮನೆಯವರು ನಿಗಾದಲ್ಲಿಡಬೇಕು. ಅವರ ಆರೋಗ್ಯದ ಕುರಿತು ಸದಾ ಒಂದು ಕಣ್ಣಿಟ್ಟಿರಬೇಕು. ಅವರು ಔಷಧಗಳನ್ನು ಮರೆಯದೇ ಸೇವಿಸುವಂತೆ ನೋಡಿಕೊಳ್ಳಬೇಕು. ಜತೆಗೆ ಹೋಂ ಐಸೋಲೇಶನ್​ನಲ್ಲಿ ಇರುವ ವ್ಯಕ್ತಿಯ ಆರೋಗ್ಯದ ಕುರಿತು ವೈದ್ಯರಿಗೆ ಮಾಹಿತಿ ನೀಡುತ್ತಿರಬೇಕು. ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಹೋಂ ಐಸೋಲೆಶನ್​ನಲ್ಲಿ ಇರುವವರ ಬಳಿ ಆಕ್ಸಿಮೀಟರ್ ಇದ್ದರೆ ಬಹಳ ಚೆನ್ನ. ಉಸಿರಾಟದಲ್ಲಿ ಯಾವುದೇ ವ್ಯತ್ಯಯ ಕಂಡುಬಂದಲ್ಲಿ ಅಥವಾ ದೇಹಕ್ಕೆ ಆಕ್ಸಿಜನ್ ಕೊರತೆ ಉಂಟಾದಲ್ಲಿ ಆಕ್ಸಿಮೀಟರ್​ ಬಳಸಿ ತಿಳಿದುಕೊಳ್ಳಬಹುದು.

ಮನೆಯ ಇತರ ವ್ಯಕ್ತಿಗಳು ಜತೆ ಹೋಂ ಐಸೋಲೇಶನ್​ನಲ್ಲಿ ಇರುವವರು ಬಳಸಿದ ವಸ್ತುಗಳನ್ನು ಬಳಸುವಂತಿಲ್ಲ. ಆದಷ್ಟು ಅಂತರ ಕಾಪಾಡಿಕೊಳ್ಳಬೇಕು. ಅದರಲ್ಲೂ ಮಕ್ಕಳು ಮತ್ತು ವೃದ್ಧರು ಪ್ರತ್ಯೇಕವಾಸದಲ್ಲಿ ಇರುವವರಿಂದ ಸ್ವಲ್ಪ ಹೆಚ್ಚೇ ಅಂತರ ಕಾಪಾಡಿಕೊಳ್ಳಬೇಕು.

ಮೂರು ಲೇಯರ್ ಮಾಸ್ಕ್ ಬಳಸಿ ಹೋಂ ಐಸೋಲೇಶನ್​ನಲ್ಲಿ ಇರುವ ಸೋಂಕಿತ ವ್ಯಕ್ತಿ ಮೂರು ಲೇಯರ್​ನ ಮಾಸ್ಕ್ ಬಳಸಬೇಕು. ಅಂತಹ ಮಾಸ್ಕ್​ನ್ನು ಎಂಟು ಗಂಟೆಗಳ ಕಾಲ ಬಳಸಿದ ನಂತರ ಸೋಡಿಯಂ ಹೈಪೋಕ್ಲೋರೈಟ್​ನಿಂದ ಸ್ವಚ್ಛಗೊಳಿಸಬೇಕು. ಮನೆಯಲ್ಲಿ ಆಗಾಗ ಮುಟ್ಟುವ ವಸ್ತುಗಳು, ಉದಾಹರಣೆಗೆ, ಟಿವಿ ರಿಮೋಟ್, ಟೇಬಲ್, ಕುರ್ಚಿ, ಬಾಗಿಲು ಇಂತಹ ವಸ್ತುಗಳನ್ನು ಫಿನಾಯ್ಲ್​ನಿಂದ ಸ್ವಚ್ಛಗೊಳಿಸಬೇಕು.

ಸೋಂಕಿತ ವ್ಯಕ್ತಿಯನ್ನು ನೋಡಿಕೊಳ್ಳುವ ವ್ಯಕ್ತಿಯೂ ಮೂರು ಲೇಯರ್​ ಇರುವ ಮಾಸ್ಕ್ ಧರಿಸಬೇಕು. ಕೈಗಳಿಗೆ ಗ್ಲೌಸ್ ಬಳಸಬೇಕು. ಸೋಂಕಿತ ವ್ಯಕ್ತಿಗೆ ಅವರು ಇರುವ ಕೋಣೆಯಲ್ಲಿಯೇ ಊಟ ನೀಡಬೇಕು. ನಂತರ 40 ಸೆಕೆಂಡುಗಳ ಕಾಲ ಸಾಬೂನು ಅಥವಾ ಆಲ್ಕೊಹಾಲ್ ಇರುವ ಮಾರ್ಜಕದಿಂದ ಕೈತೊಳೆದುಕೊಳ್ಳಬೇಕು. ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನೂ ಹೀಗೇ ಶುಚಿಗೊಳಿಸಬೇಕು. ಆದರೆ, ಯಾವುದೇ ಕಾರಣಕ್ಕೂ ಸೋಂಕಿತರ ನೇರ ಸಂಪರ್ಕಕ್ಕೆ ಬರಬಾರದು.

ವೈದ್ಯರ ಸೂಚನೆ ಪಾಲಿಸಿ ಸೋಂಕಿತರು ಪೌಷ್ಠಿಕ ಆಹಾರ, ಬಿಸಿ ಊಟ, ನೀರು, ಬೇಳೆಕಾಳು, ತರಕಾರಿಗಳನ್ನು ಸೇವಿಸಬೇಕು. ಸೇವಿಸುವ ಆಹಾರದಲ್ಲಿ ಸಿ ವಿಟಮಿನ್ ಇರುವಂತೆ ನೋಡಿಕೊಳ್ಳುವುದು ಉತ್ತಮ. ಅಲ್ಲದೇ ಸಿ ವಿಟಮಿನ್, ಜಿಂಕ್ ಮಾತ್ರೆಗಳನ್ನು ಸಹ ವೈದ್ಯರ ಸೂಚನೆ ಮೇರೆಗೆ ಅವರು ಸೇವಿಸಬಹುದು. ಕೆಲ ನಿಮಿಷ ಹಬೆ ಸೇವಿಸಬಹುದು.

ರೆಮ್​ಡೆಸಿವಿರ್ ಅಥವಾ ಯಾವುದೇ ಔಷಧಗಳನ್ನು ವೈದ್ಯರ ಸಲಹೆ ಸೂಚನೆಯ ನಂತರವೇ ಪಡೆಯಬಹುದು. ಸೋಂಕಿತರು ಅಥವಾ ಮನೆಯ ಸದಸ್ಯರು ಸ್ವಯಂ ಚಿಕಿತ್ಸೆಗೆ ಯಾವುದೇ ಕಾರಣಕ್ಕೂ ಮುಂದಾಗಬಾರದು. ದೇಶದ ಸ್ಯಾಚುರೇಶನ್ ಪ್ರಮಾಣವು ಶೇಕಡಾ 94ಕ್ಕಿಂತ ಕಡಿಮೆಯಾದಲ್ಲಿ, ಉಸಿರಾಟದಲ್ಲಿ ತೊಂದರೆ ಅಥವಾ ಇನ್ನು ಯಾವುದೇ ಸಮಸ್ಯೆಯಾದರೂ ತಕ್ಷಣವೇ ಆಸ್ಪತ್ರೆಯನ್ನು ಸಂಪರ್ಕಿಸಬೇಕು.

ಸೋಂಕು ತಗುಲಿ 10 ದಿನಗಳ ನಂತರ ಅಥವಾ 3 ದಿನ ಸ್ವಲ್ಪವೂ ಜ್ವರ ಕಾಣಿಸಿಕೊಳ್ಳದಿದ್ದರೆ ಹೋಂ ಐಸೋಲೇಶನ್​ನಿಂದ ಹೊರಬರಬಹುದು. ನಂತರ ಮತ್ತೊಮ್ಮೆ ಕೊವಿಡ್ ಪರೀಕ್ಷೆಯ ಅಗತ್ಯವಿಲ್ಲ. ಆದರೆ ಈ ಮುನ್ನ ವೈದ್ಯರ ಸಲಹೆ ಪಡೆಯಬೇಕು.

ಇದನ್ನೂ ಓದಿ: Coronavirus: ಗಾಳಿಯ ಮೂಲಕ ಕೊವಿಡ್-19 ಹರಡುವುದು ಹೇಗೆ? ತಜ್ಞರು ಏನಂತಾರೆ?

ಕೊರೊನಾ ಸೋಂಕಿನಿಂದ ಗುಣಮುಖರಾದ ಮೇಲೆ ನಿಮ್ಮ ಟೂತ್​ಬ್ರಷ್​, ಟಂಗ್​ ಕ್ಲೀನರ್​ ಬದಲಿಸಲು ಮರೀಲೇಬೇಡಿ; ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ

(Covid 19 home isolation guidelines here is full details in Kannada )