ಕೊವಿಡ್​ 19 ಚಿಕಿತ್ಸೆಗೆ ವರವಾಗಲಿದೆಯೇ ಪಶು ಔಷಧಿ ಐವೆರ್ಮೆಕ್ಟಿನ್?

Ivermectin for Covid 19: ಈ ವರ್ಷದ ಜನವರಿ ತಿಂಗಳಿನಲ್ಲಷ್ಟೇ ಐವೆರ್ಮೆಕ್ಟಿನ್ ಔಷಧಿಯನ್ನು ಡಾಕ್ಸಿಸೈಕ್ಲಿನ್ ಜೀವನಿರೋಧಕದ ಜೊತೆ ಪ್ರಯೋಗಕ್ಕೆ ಒಪ್ಪಿಗೆ ನೀಡಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯು ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ದತ್ತಾಂಶದ ಅಗತ್ಯವಿದೆ ಎಂದಿದ್ದು, ಇದರ ಪೂರ್ಣ ಪ್ರಮಾಣದ ಬಳಕೆಗೆ ಹಸಿರು ನಿಶಾನೆ ನೀಡದಿದ್ದರೂ ಸಹ, ಕೆಲ ದೇಶಗಳಲ್ಲಿ ಇದರ ಬಳಕೆ ಈಗಾಗಲೇ ಪ್ರಾರಂಭವಾಗಿದೆ.

ಕೊವಿಡ್​ 19 ಚಿಕಿತ್ಸೆಗೆ ವರವಾಗಲಿದೆಯೇ ಪಶು ಔಷಧಿ ಐವೆರ್ಮೆಕ್ಟಿನ್?
ಪ್ರಾತಿನಿಧಿಕ ಚಿತ್ರ
Follow us
Skanda
|

Updated on: May 10, 2021 | 8:35 AM

ಕೊರೊನಾ ಚಿಕಿತ್ಸೆಗೆ ಪಶುಗಳ ಔಷಧಿ ಬಳಕೆಯಾಗುತ್ತಿದೆಯೇ? ಈ ಪ್ರಶ್ನೆ ಕೆಲವರಿಗೆ ಬಂದಿರಲು ಸಾಕು. ಅನೇಕ ದಿನಗಳಿಂದ ಹೆಚ್ಚಿದ ಕೊವಿಡ್ ಎರಡನೇ ಅಲೆ, ರೆಮ್​ಡೆಸಿವಿರ್ ಮತ್ತು ಆಮ್ಲಜನಕ ಅಭಾವ ಇವೆಲ್ಲವೂ ವೈದ್ಯಲೋಕವನ್ನು ಪಶು ಔಷಧಿ ಬಳಸುವ ಅನಿವಾರ್ಯ ಸಂದರ್ಭಕ್ಕೆ ದೂಡಿದೆಯೇ? ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನೇಕರಿಗೆ ದನದ ಔಷಧಿ ಬಳಸಿ ಕೊರೊನಾ ಚಿಕಿತ್ಸೆ ನಡೆಯುತ್ತಿದೆಯೆಂಬ ಭಾವನೆ ಸಹ ಬಂದಿರಲು ಸಾಕು. ಇದು ನಿಜವೇ? ಹೌದು, ಇದು ನಿಜ. ಇತ್ತೀಚೆಗೆ ಕೊವಿಡ್ 19 ರ ಚಿಕಿತ್ಸೆಯಲ್ಲಿ ಬಹಳ ಸಾಮಾನ್ಯವಾಗಿ ಬಳಕೆಯಾಗುತ್ತಿರುವುದು ಐವೆರ್ಮೆಕ್ಟಿನ್ ಎಂಬ ಪಶುಗಳಿಗೆ ಬಳಸುವ ಔಷಧಿ! ಅನೇಕ ದಿನಗಳಿಂದಲೂ ಸಹ ಪಶುಗಳಲ್ಲಿ ಈ ಐವೆರ್ಮೆಕ್ಟಿನ್ ಔಷಧಿ ಬಹು ಜನ(ದನ)ಪ್ರಿಯವಾಗಿದೆ. ಪಶುಗಳಲ್ಲಿ ಇದರ ಬಳಕೆ ಬಹುಮುಖವಾದದ್ದು. ದುಂಡುಹುಳು ನಾಶಕವಾಗಿ, ಉಣ್ಣೆ ನಾಶಕವಾಗಿ, ಗಾಯದ ಹುಳದ ನಾಶಕವಾಗಿ, ಚರ್ಮರೋಗದ ಚಿಕಿತ್ಸೆಗೆ ಪಶುವೈದ್ಯಕೀಯದಲ್ಲಿ ಬಳಸಲಾಗುತ್ತದೆ. ಪಶುಗಳ ಔಷಧಿಯನ್ನು ಮನುಜನಲ್ಲಿ ಬಳಸಬಾರದೆಂದೇನೂ ಇಲ್ಲ. ಅನೇಕ ಔಷಧಗಳು ಮಾನವ ಚಿಕಿತ್ಸೆ ಮತ್ತು ಪಶುಚಿಕಿತ್ಸೆ ಎರಡರಲ್ಲಿಯೂ ಬಳಕೆಯಾಗುತ್ತಿವೆ. ಆದರೆ ಕೇವಲ ಪಶುಗಳಿಗೆಂದೇ ಮೀಸಲಾದ ಔಷಧಿಯನ್ನು ಮಾನವನಲ್ಲಿ ಬಳಸಬಾರದೆಂಬ ನಿಯಮವಿದೆ. ಎರಡೂ ಔಷಧಿಗಳ ತಯಾರಿಕೆಯಲ್ಲಿ ಏಕರೀತಿಯ ಮಾನದಂಡ ಮತ್ತು ಗುಣಮಟ್ಟವನ್ನು ನಿಗದಿಪಡಿಸಲಾಗಿದೆ.

ಈ ಔಷಧ ಹೇಗೆ ಉಗಮವಾಯಿತು ಎಂಬುದು ಆಸಕ್ತಿದಾಯಕ. ಜಪಾನಿನ ಸೂಕ್ಷ್ಮಾಣುತಜ್ಞ ಸಟೋಶಿ ಒಮುರಾ ಎಂಬಾತ 1960ರ ದಶಕದಲ್ಲಿ ಹೊಸ ಸೂಕ್ಷ್ಮಾಣುನಾಶಕದ ಪತ್ತೆಯಲ್ಲಿ ತೊಡಗಿದ್ದಾಗ ಆಕಸ್ಮಾತ್ತಾಗಿ ದೊರಕಿದ ಔಷಧ ಇದು. ಈತ ಜಪಾನಿನ ಸುತ್ತಮುತ್ತಲಿನ ಮಣ್ಣಿನ ಮಾದರಿಯನ್ನು ಪಡೆದು ಅವುಗಳಿಂದ ಬ್ಯಾಕ್ಟಿರಿಯಾಗಳನ್ನು ಪ್ರತ್ಯೇಕಿಸಿ ಅವುಗಳ ಸ್ರವಿಕೆಯು ಸೂಕ್ಷ್ಮಾಣುನಾಶಕವೇ ಎಂದು ಪರಿಶೀಲಿಸುತ್ತಿದ್ದ. ಆಗ ಸುಮಾರು 10 ಸಾವಿರ ಕಿಲೋಮೀಟರ್ ದೂರದಲ್ಲಿ ಮರ್ಕ್ ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತನ ಸ್ನೇಹಿತ ವಿಲಿಯಮ್ ಕ್ಯಾಂಬೆಲ್ ಎಂಬ ಪಶುವೈದ್ಯಕೀಯ ವಿಜ್ಞಾನಿಗೆ ಈ ಮಣ್ಣಿನ ಮಾದರಿಯಿಂದ ಪ್ರತ್ಯೇಕಿಸಿದ ಸೂಕ್ಷ್ಮಾಣುಜೀವಿಗಳನ್ನು ಕಳಿಸಿದ. ಆಶ್ಚರ್ಯವೆಂಬಂತೆ ಟೋಕಿಯೋದ ಸನಿಹದ ಗೋಲ್ಫ್ ಆಟದ ಮೈದಾನದ ಸಮೀಪದಿಂದ ಸಂಗ್ರಹಿಸಿದ ಮಣ್ಣಿನ ಮಾದರಿಯಲ್ಲಿ ಸಿಕ್ಕ ಸ್ಟ್ರೆಪ್ಟೋಮೈಸಿಸ್ ಎವರ್ಮೆಕ್ಟಾಲಿಸ್ ಎಂಬ ಹೊಸ ಪ್ರಬೇಧದ ಸೂಕ್ಷ್ಮಾಣು ಜೀವಿಯ ಪ್ರಸರಕದಲ್ಲಿ ಪಡೆದ ವಸ್ತುವೊಂದು ಜಾನುವಾರುಗಳ ಹೊಟ್ಟೆಯಲ್ಲಿರುವ ದುಂಡು ಹುಳದ ಮೇಲೆ ಅಪಾರ ಪರಿಣಾಮ ಹೊಂದಿತ್ತು. ಈ ಔಷಧಿಯ ಕಂಡುಹಿಡಿಯುವಿಕೆಯಲ್ಲಿ ಸಹಸ್ರಾರು ವಿಜ್ಞಾನಿಗಳ ಪರಿಶ್ರಮವಿದೆ. ಪ್ರಾರಂಭಿಕವಾಗಿ ಈ ಜಂತುನಾಶಕ ವಸ್ತುವಿಗೆ ಏವರ್ಮೆಕ್ಟಿನ್ ಎಂದು ನಾಮಕರಣವಾದರೂ ನಂತರ ಇದರಲ್ಲಿ ಅನೇಕ ರಾಸಾಯನಿಕಗಳ ಸಂಕೀರ್ಣವೇ ಇದೆ ಎಂದು ತಿಳಿಯಿತು. ಅದರಲ್ಲೊಂದಾದ ವಸ್ತುವೇ ಮುಂದೆ ಐವೆರ್ಮೆಕ್ಟಿನ್ ಹೆಸರಿನಲ್ಲಿ ಮರ್ಕ್ ಕಂಪನಿಯಿಂದ 1981 ನೇ ಸಾಲಿನಲ್ಲಿ ಮಾರುಕಟ್ಟೆಗೆ ಬಂದಿತು. ಸೋಜಿಗವೆಂದರೆ ಈವತ್ತಿಗೂ ಸಹ ಈ ಔಷಧಿಯ ನೈಸರ್ಗಿಕ ಮೂಲ ಸ್ಟ್ರೆಪ್ಟೋಮೈಸಿಸ್ ಎವರ್ಮೆಕ್ಟಾಲಿಸ್. ಮರ್ಕ್ ಕಂಪನಿಯು ಮುಂದೆ ಇದರ ಬಗ್ಗೆ ಜಾಸ್ತಿ ಸಂಶೋಧನೆ ಮಾಡಿದಾಗ ಇದಕ್ಕೆ ಉಣ್ಣೆನಾಶಕ, ಚರ್ಮರೋಗಕಾರಕ ಜೀವಿನಾಶಕ ಗುಣವಿದೆಯೆಂದು ಪತ್ತೆ ಮಾಡಿ ಜಾನುವಾರುಗಳಲ್ಲಿ ಇದರ ಬಳಕೆಯ ಬಗ್ಗೆ ರಹದಾರಿ ಪಡೆಯಿತು. ಪಶುಚಿಕಿತ್ಸೆಯಲ್ಲಿ ಈ ಔಷಧಿ ಅತ್ಯಂತ ಪ್ರಸಿದ್ಧವಾದದ್ದು ಇತಿಹಾಸ. ವಿಶೇಷವೆಂದರೆ ಜಾನುವಾರುಗಳಲ್ಲಿ ಬೊವೈನ್ ಪ್ಯಾಪಿಲೋನಾ ವೈರಸ್ಸಿನಿಂದ ಬರುವ ನೆರೂಳಿ (ವಾರ್ಟ್ಸ್) ಕಾಯಿಲೆಯಲ್ಲಿ ಐವರ್ಮೆಕ್ಟಿನ್ ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ. ಕಾರಣ ಇದರ ವೈರಾಣುನಾಶಕ ಗುಣ ಹೊಸದೇನೂ ಅಲ್ಲ.

ಮನುಷ್ಯರ ಮೇಲೆ ಪ್ರಯೋಗವಾಗಿದ್ದು ಹೇಗೆ? ಈ ಔಷಧಿ ಮನುಜರ ರೋಗ ಚಿಕಿತ್ಸೆಯಲ್ಲಿ ಕಾಣಿಸಿಕೊಂಡಿದ್ದೂ ಸಹ ಒಂದು ಆಕಸ್ಮಿಕ. 1985 ರ ಆಸುಪಾಸಿನಲ್ಲಿ ಆಫ್ರಿಕಾದ ಸಹರಾ ಬಳಿಯ ನದಿ ದಡದ ಮೇಲಿನ್ ಜನಕ್ಕೆ ಇದ್ದಕ್ಕಿದ್ದಂತೆ ಕುರುಡುತನವಾಗತೊಡಗಿತು. ಇದೊಂದು ನೊಣ ಕಚ್ಚುವುದರಿಂದ ಬರುವ ಕಾಯಿಲೆ ಎಂದು ಪತ್ತೆ ಮಾಡಿದರೂ ಸಹ ಇದಕ್ಕೆ ಒಳ್ಳೆಯ ಔಷಧಿ ಇರಲಿಲ್ಲ. ಈ ರೋಗಕ್ಕೆ ವಿಜ್ಞಾನಿಗಳು ನದಿ ಕುರುಡುತನ ರೋಗ ಅಥವಾ ಆಂಕೋಸರ್ಕೋಸಿಸ್ ಎಂದು ಹೆಸರಿಟ್ಟರು. ಮರ್ಕ್ ಔಷಧ ಕಂಪನಿಯ ವಿಜ್ಞಾನಿ ವಿಲಿಯಮ್ ಕ್ಯಾಂಬೆಲ್ ಈ ಕಾಯಿಲೆಗೆ ಐವೆರ್ಮೆಕ್ಟಿನ್ ಔಷಧಿ ಬಳಸಲು ವಿನಂತಿಸಿದ. ಮೊದಲಿಗೆ ದನದ ಔಷಧಿಯನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಅವನ ಸಹವರ್ತಿಗಳು ಹಿಂಜರಿದರೂ ಪ್ರಯೋಗ ಪ್ರಾರಂಭಿಸಿಯೇ ಬಿಟ್ಟರು. ಈ ಕಾಯಿಲೆ ಲ್ಯಾಟಿನ್ ಅಮೆರಿಕಾ ಮತ್ತು ಯೆಮೆನ್ ದೇಶಗಳ ಕೆಲವೆಡೆ ವರದಿಯಾಯ್ತು. ಆಶ್ಚರ್ಯವೆಂಬಂತೆ ಐವೆರ್ಮೆಕ್ಟಿನ್ ನದಿಗುರುಡು ಕಾಯಿಲೆಯ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಬಿಟ್ಟಿತು.

ಆಗಲೇ ಈ ಔಷಧಿ ಮನುಜ ಔಷಧಿ ರಂಗಕ್ಕೆ ಕಾಲಿಟ್ಟಿದ್ದು. ಈ ಔಷಧಿಯು ಪ್ರಾಣಿಗಳಲ್ಲಿ ಮತ್ತು ಮನುಷ್ಯನಲ್ಲಿ ಅತಿ ಕಡಿಮೆ ಪ್ರಮಾಣದ ಅಡ್ಡ ಪರಿಣಾಮವನ್ನುಂಟು ಮಾಡಿದ್ದು ಇದರ ಜನಪ್ರಿಯತೆ ಜಾಸ್ತಿಯಾಗಲು ಕಾರಣವಾಯ್ತು. ನೊಣ ಕಚ್ಚಿದ ಗಾಯದಿಂದ ದೇಹ ಸೇರಿ ತೊಂದರೆ ಕೊಡುವ ಲಾರ್ವಾಗಳು ದೇಹದಲ್ಲೆಲ್ಲಾ ಓಡಾಡಿ ದೃಷ್ಟಿ ಮಾಂದ್ಯಗೊಳಿಸಿ, ತುರಿಕೆಯುಕ್ತ ಚರ್ಮರೋಗ ಮಾಡುವುದು ಸಂಪೂರ್ಣ ನಿಂತೇ ಹೋಯಿತು. ಇದಾದ ಮೇಲೆ ಇದನ್ನು ಕಂಡು ಹಿಡಿದ ಮರ್ಕ್ ಕಂಪನಿಯು ಈ ಕಾಯಿಲೆ ಸಂಪೂರ್ಣ ನಿರ್ನಾಮವಾಗುವವರೆಗೆ ಔಷಧವನ್ನು ಉಚಿತವಾಗಿ ನೀಡಿತು. ಕೇವಲ ಒಂದೇ ಚಿಕಿತ್ಸೆಯಲ್ಲಿ ಆನೆಕಾಲು ರೋಗದಲ್ಲಿಯೂ ಸಹ ಇದು ಪರಿಣಾಮಕಾರಿಯೆಂದು ಸಾಬೀತಾಯಿತು. ಮನುಜಕುಲದ ಉಳಿವಿಗೆ ಯೋಗದಾನ ನೀಡಿದ ಐವೆರ್ಮೆಕ್ಟಿನ್ ಸಂಶೋಧನೆಗಾಗಿ 2015 ರಲ್ಲಿ ವಿಲಿಯಮ್ ಕ್ಯಾಂಬೆಲ್ ನೊಬೆಲ್ ಪ್ರಶಸ್ತಿ ಪಡೆದ.

ಈ ಔಷಧಿಯ ಕಾರ್ಯನಿರ್ವಹಣೆ ಸಹ ವಿಭಿನ್ನ. ಚರ್ಮದಡಿ ಮತ್ತು ಬಾಯಿಯ ಮೂಲಕ ನೀಡಬಹುದಾದ ಈ ಔಷಧ ರಕ್ತಕ್ಕೆ ಬೇಗನೇ ಸೇರಿ ದೇಹದಲ್ಲಿಂದ ಸಂಪೂರ್ಣ ವಿಸರ್ಜನೆಯಾಗಲು 15 ದಿನ ಬೇಕು. ಈ ಔಷಧಿ ಜಂತು ಹುಳಗಳ ನರಮಂಡಲದಲ್ಲಿರುವ ಗ್ಲುಟಾಮೇಟ್ ಕ್ಲೋರೈಡ್ ಕಾಲುವೆಯನ್ನು ತೆರೆದು ಜಾಸ್ತಿ ಕ್ಲೋರೈಡ್ ನರಕೋಶದ ಒಳನುಗ್ಗುವಂತೆ ಮಾಡುತ್ತದೆ. ಇದರಿಂದ ಅಕರೇಶುಕ ಹುಳಗಳಿಗೆ ಪಾರ್ಶ್ವವಾಯು ಬಡಿದು ಸತ್ತು ಹೋಗುತ್ತವೆ. ಆದರೆ ಕಶೇರುಕಗಳಾದ ಪ್ರಾಣಿ ಮತ್ತು ಮಾನವನಲ್ಲಿ ಈ ಕ್ರಿಯೆ ವಿಭಿನ್ನವಾಗಿರುತ್ತದೆ.

ಈ ಔಷಧಿಗೆ ಅದ್ಭುತ ಔಷಧಿಯ ಪಟ್ಟ ಸಿಕ್ಕಿದ್ದು ಇದರ ಬಹುಮುಖ ಪ್ರತಿಭೆಯಿಂದ. ಇತ್ತೀಚೆಗಷ್ಟೇ ಹಿಂದಿನ ವರ್ಷ (2020)ದಲ್ಲಿ ಕೊರೋನಾ ಮಹಾಮಾರಿಯ ಆಗಮನವಾದಾಗ ಇದರ ರಂಗಪ್ರವೇಶವಾಯಿತು. ಈ ವರ್ಷದ ಜನವರಿ ತಿಂಗಳಿನಲ್ಲಷ್ಟೇ ಈ ಔಷಧಿಯನ್ನು ಡಾಕ್ಸಿಸೈಕ್ಲಿನ್ ಜೀವನಿರೋಧಕದ ಜೊತೆ ಪ್ರಯೋಗಕ್ಕೆ ಒಪ್ಪಿಗೆ ನೀಡಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯು ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ದತ್ತಾಂಶದ ಅಗತ್ಯವಿದೆ ಎಂದಿದ್ದು, ಇದರ ಪೂರ್ಣ ಪ್ರಮಾಣದ ಬಳಕೆಗೆ ಹಸಿರು ನಿಶಾನೆ ನೀಡದಿದ್ದರೂ ಸಹ, ಕೆಲ ದೇಶಗಳಲ್ಲಿ ಇದರ ಬಳಕೆ ಈಗಾಗಲೇ ಪ್ರಾರಂಭವಾಗಿದೆ. ಈ ಔಷಧಿ ಕೊರೊನಾ ವೈರಾಣು ದೇಹದ ಜೀವಕೋಶಕ್ಕೆ ಅಂಟಿಕೊಳ್ಳುವುದನ್ನು ತಡೆಗಟ್ಟಿ ವೈರಸ್ಸಿನ ಬೆಳವಣಿಗೆಗೆ ತಡೆಯುಂಟು ಮಾಡುತ್ತದೆ ಎಂದು ಹೇಳಲಾಗಿದೆ.

ಸದ್ಯಕ್ಕೆ ರೆಮ್​ಡೆಸಿವಿರ್ ಮಾತ್ರ ಕೊವಿಡ್ ಚಿಕಿತ್ಸೆಯಲ್ಲಿ ಅನುಮತಿ ದೊರಕಿದ ಔಷಧಿಯಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ಮತ್ತು ಆಸ್ಪತ್ರೆ ಸೇರಿದ ರೋಗಿಗಳಲ್ಲಿ ಕಾಯಿಲೆಯ ಪ್ರಾರಂಭಿಕ ಹಂತದಲ್ಲಿ ಇದರ 12 ಮಿಲಿಗ್ರಾಂ ಮಾತ್ರೆಯನ್ನು ದಿನಕ್ಕೊಂದು ಬಾರಿಯಂತೆ ಮೂರು ದಿನ ಸೇವಿಸಲು ಸೂಚಿಸಲಾಗುತ್ತಿದೆ. ರೆಮ್​ಡೆಸಿವಿರ್ ಕೊರತೆಯ ಈ ಕಾಲಘಟ್ಟದಲ್ಲಿ ಇದನ್ನು ಸಹ ಪರ್ಯಾಯವಾಗಿ ಕೆಲವೆಡೆ ಬಳಸಲಾಗುತ್ತಿದೆ. ಬಹುಶಃ ಮುಂದಿನ ದಿನಗಳಲ್ಲಿ ಇದೊಂದು ಪರ್ಯಾಯ ಕೊವಿಡ್ 19 ಔಷಧಿಯಾಗಿ ಹೊರ ಹೊಮ್ಮಲೂಬಹುದು. ಕಾದು ನೋಡೋಣ.

ಲೇಖಕರು: ಡಾ. ಎನ್.ಬಿ.ಶ್ರೀಧರ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

ಇದನ್ನೂ ಓದಿ: ಕೊರೊನಾ ಲಸಿಕೆ ಪೂರೈಕೆಗೆ ಪೇಟೆಂಟ್ ಸಡಿಲಿಕೆ ಜೊತೆಗೆ ಸಹಭಾಗಿತ್ವ ಕೂಡ ಮುಖ್ಯ; ಭಾರತ್ ಬಯೋಟೆಕ್ ಜಂಟಿ ನಿರ್ದೇಶಕಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್