6.75 ಕೋಟಿ ರೂಪಾಯಿ ಬೆಲೆಯ ರೇಸ್ ಕಾರು ಖರೀದಿಸಿದ ಅಜಿತ್ ಕುಮಾರ್
ಹೊಸ ಕಾರಿನ ಎದುರು ನಿಂತು ಅಜಿತ್ ಕುಮಾರ್ ಅವರು ಬಹಳ ಹೆಮ್ಮೆಯಿಂದ ಪೋಸ್ ನೀಡಿದ್ದಾರೆ. ಈ ಕಾರಿನ ಬೆಲೆ 6.75 ಕೋಟಿ ರೂಪಾಯಿ ಎನ್ನಲಾಗಿದೆ. ಫೋಟೋ ವೈರಲ್ ಆಗಿದೆ. ಮೆಕ್ಲೆರೆನ್ ಸೆನ್ನಾ ಕಾರನ್ನು ಖರೀದಿಸಿದ ಅಜಿತ್ ಕುಮಾರ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್ (Ajith Kumar) ಅವರು ಬೇರೆ ನಟರ ರೀತಿ ಅಲ್ಲ. ಸಿನಿಮಾದ ಜೊತೆಗೆ ಅವರಿಗೆ ಕಾರ್ ರೇಸ್ನಲ್ಲಿ ಅತಿ ಉತ್ಸಾಹ ಇದೆ. ಸಿನಿಮಾ ಅವರ ವೃತ್ತಿ. ಕಾರ್ ರೇಸ್ ಅವರ ಪ್ರವೃತ್ತಿ. ಎರಡಕ್ಕೂ ಅಜಿತ್ ಕುಮಾರ್ ಅವರು ಸಮಯ ನೀಡುತ್ತಾರೆ. ದುಡಿದ ಹಣದಲ್ಲಿ ಅವರು ದುಬಾರಿ ಕಾರುಗಳನ್ನು ಖರೀದಿ ಮಾಡುತ್ತಾರೆ. ಈಗ ಅವರ ಕಾರ್ ಸಂಗ್ರಹಕ್ಕೆ ಇನ್ನೊಂದು ಐಷಾರಾಮಿ ಕಾಡು ಸೇರ್ಪಡೆ ಆಗಿದೆ. ಹೌದು, ಅಜಿತ್ ಕುಮಾರ್ ಅವರು ಮೆಕ್ಲೆರೆನ್ ಸೆನ್ನಾ (McLaren Senna) ಕಾರನ್ನು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 6.75 ಕೋಟಿ ರೂಪಾಯಿ!
ಇದು ಲಿಮಿಟೆಟ್ ಎಡಿಷನ್ ಹಾಗೂ ಎಕ್ಸ್ಕ್ಲೂಸೀವ್ ಎಡಿಷನ್. ಆ ಕಾರಣದಿಂದ ಮೆಕ್ಲೆರೆನ್ ಸೆನ್ನಾ ಕಾರಿನ ಬೆಲೆ ಇಷ್ಟು ದುಬಾರಿ ಆಗಿದೆ. ಅಜಿತ್ ಕುಮಾರ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕಾರಿನ ಫೋಟೋ ಹಂಚಿಕೊಂಡಿದ್ದಾರೆ. ಅಜಿತ್ ಕುಮಾರ್ ಅವರು ಹೆಮ್ಮೆಯಿಂದ ಮೆಕ್ಲೆರೆನ್ ಸೆನ್ನಾ ಕಾರಿನ ಎದುರು ನಿಂತು ಪೋಸ್ ನೀಡಿದ್ದಾರೆ.
ಅಜಿತ್ ಕುಮಾರ್ ಅವರು ಖರೀದಿ ಮಾಡಿರುವ ಮೆಕ್ಲೆರೆನ್ ಸೆನ್ನಾ ಕಾರು ಆಕರ್ಷಕವಾಗಿದೆ. ಕೆಂಪು ಮತ್ತು ಸಿಲ್ವರ್ ಬಣ್ಣದ ಕಾರಿನ ಫೋಟೋ ವೈರಲ್ ಆಗುತ್ತಿದೆ. ಇದು ದುಬಾರಿ ಕಾರು ಆದ ಕಾರಣ ಭಾರತದಲ್ಲಿ ಇದನ್ನು ಖರೀದಿಸಲು ಸಾಧ್ಯವಿಲ್ಲ. ವಿದೇಶದಲ್ಲಿ ಇದನ್ನು ಖರೀದಿಸಲಾಗಿದೆ. ದುಬಾರಿ ಕಾರಿನ ಒಡೆಯನಾಗಿರುವ ಅಜಿತ್ ಕುಮಾರ್ ಅವರಿಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
Senna brought to life with Ajith Kumar bringing the Mc Laren Senna home! pic.twitter.com/fexdJ9c27d
— Suresh Chandra (@SureshChandraa) June 4, 2025
ಅಂದಹಾಗೆ, ಅಜಿತ್ ಕುಮಾರ್ ಬಳಿ ಇರುವ 2ನೇ ಅತಿ ದುಬಾರಿ ಕಾರು ಮೆಕ್ಲೆರೆನ್ ಸೆನ್ನಾ. ಇದಕ್ಕೂ ಮುನ್ನ ಅವರು ಫೆರಾರಿ ಎಸ್ಎಫ್90 ಕಾರು ಖರೀದಿಸಿದ್ದರು. ಅದರ ಬೆಲೆ ಬರೋಬ್ಬರಿ 9 ಕೋಟಿ ರೂಪಾಯಿ. ಅಜಿತ್ ಕುಮಾರ್ ಅವರಿಗೆ ರೇಸ್ ಕಾರಿನ ಬಗ್ಗೆ ಎಷ್ಟು ಕ್ರೇಜ್ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಅಜಿತ್ ಅವರು ತಮ್ಮದೇ ರೇಸಿಂಗ್ ತಂಡವನ್ನು ಹೊಂದಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಅಜಿತ್ ಕುಮಾರ್; ಈ ಪರಿಸ್ಥಿತಿ ಬರಲು ಅಭಿಮಾನಿಗಳೇ ಕಾರಣ
ಈಗಾಗಲೇ ಹಲವು ರೇಸ್ಗಳಲ್ಲಿ ಭಾಗವಹಿಸಿ ಅಜಿತ್ ಕುಮಾರ್ ಅವರು ಟ್ರೋಫಿ ಗೆದ್ದಿದ್ದಾರೆ. ಸಿನಿಮಾದ ಕೆಲಸಗಳ ನಡುವೆ ಅವರು ರೇಸ್ ಸಲುವಾಗಿಯೂ ಸಮಯ ಮೀಸಲಿಡುತ್ತಿದ್ದಾರೆ. ಈ ವರ್ಷ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಸಿಕ್ಕಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








