AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ದುರ್ಘಟನೆ ಬಗ್ಗೆ ರಮ್ಯಾ, ಸಪ್ತಮಿ ಪ್ರತಿಕ್ರಿಯೆ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಂಟಾದ ಕಾಲ್ತುಳಿತದಿಂದ ಹಲವರು ನಿಧನರಾಗಿದ್ದಾರೆ. ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಬಂದವರು ಕಾಲ್ತುಳಿದಲ್ಲಿ ನಿಧನರಾಗಿದ್ದಾರೆ. ಈ ಘಟನೆ ಬಗ್ಗೆ ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಟಿ ಸಪ್ತಮಿ ಗೌಡ ಅವರು ವಿವರಿಸಿದ್ದಾರೆ.

ಆರ್​ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ದುರ್ಘಟನೆ ಬಗ್ಗೆ ರಮ್ಯಾ, ಸಪ್ತಮಿ ಪ್ರತಿಕ್ರಿಯೆ
Sapthami Gowda, Ramya
ಮದನ್​ ಕುಮಾರ್​
|

Updated on: Jun 04, 2025 | 7:45 PM

Share

ಸಂಭ್ರಮಿಸಬೇಕಾದ ಜಾಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಐಪಿಎಲ್ (IPL) ಫೈನಲ್ ಪಂದ್ಯದಲ್ಲಿ ಜಯ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಜೊತೆ ಸಂಭ್ರಮಾಚರಣೆ ಮಾಡಲು ಬೆಂಗಳೂರಿನಲ್ಲಿ ಲಕ್ಷಾಂತರ ಅಭಿಮಾನಿಗಳು ಸೇರಿದ್ದರು. ಆದರೆ ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ ಈವರೆಗೆ 11 ಜನರು ನಿಧನರಾಗಿದ್ದಾರೆ. ಈ ಘಟನೆ ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ನಟಿ ರಮ್ಯಾ ದಿವ್ಯ ಸ್ಪಂದನಾ (Ramya) ಅವರು ಕೂಡ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

‘ಇಂದು ಆರ್​ಸಿಬಿ ಸೆಲೆಬ್ರೇಷನ್ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಇದು ಹೃದಯ ವಿದ್ರಾವಕ ಘಟನೆ’ ಎಂದು ರಮ್ಯಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಸೂಕ್ತ ತಯಾರಿ ಇಲ್ಲದೇ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಭಾಗವಹಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಬಂದಿದ್ದರು. ಗೇಟ್ ಓಪನ್ ಆಗುತ್ತಿದ್ದಂತೆಯೇ ಒಮ್ಮೆಲೇ ಜನರು ನುಗ್ಗಿದ್ದಾರೆ. ಇದರಿಂದ ಕ್ರೀಡಾಂಗಣದಲ್ಲಿ ನೂಕುನುಗ್ಗಲು ಉಂಟಾಯಿತು. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ
Image
Stampede: RCB ವಿಜಯ ಸಂಭ್ರಮಾಚರಣೆ ವೇಳೆ ಸಂಭವಿಸಿದ ದುರಂತಕ್ಕೆ ಕಾರಣವೇನು?
Image
ಐಪಿಎಲ್ ಸಂಭ್ರಮದಲ್ಲಿ ಸೂತಕ; ಯಡವಟ್ಟಾಗಿದ್ದೆಲ್ಲಿ, ಹೊಣೆ ಯಾರು?
Image
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Image
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ

ನಟಿ ಸಪ್ತಮಿ ಗೌಡ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅಲ್ಲಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ‘ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹೋಗಲು ಬಯಸಿರುವವರು ಎಚ್ಚರಿಕೆಯಿಂದಿರಿ. ನಾನು ಕೂಡ ಅಲ್ಲಿಗೆ ಹೋಗಿದ್ದೆ. ಅನುಮತಿ ಇದ್ದರೂ ಕೂಡ ನಾವು ಕ್ರೀಡಾಂಗಣದ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ನಮ್ಮೆಲ್ಲರಿಗಾಗಿ ಪೊಲೀಸರು ಕಷ್ಟಪಡುತ್ತಿದ್ದಾರೆ. ಅವರಿಗೆ ಸಹಕರಿಸಿ’ ಎಂದು ಸಪ್ತಮಿ ಗೌಡ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾಲ್ತುಳಿತ; ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣವೆಂದ ಬಿಜೆಪಿ

‘ನಮ್ಮ ತಂಡದ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲು ನಾವು ಪ್ರಯತ್ನಿಸಿದೆವು. ಆದರೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿದೆ. ಸ್ಟೇಡಿಯಂ ಹೊರಗಿನ ವಾತಾವರಣ ಭಯ ಬೀಳಿಸುವಂತಿದೆ. ಸ್ಟೇಡಿಯಂನಿಂದ ದೂರ ಇದ್ದು ಕೂಡ ನೀವು ಸೆಲೆಬ್ರೇಟ್ ಮಾಡಬಹುದು. ಮನೆಯಲ್ಲಿ ಇದ್ದು ಎಂಜಾಯ್ ಮಾಡಿ. ಸುರಕ್ಷಿತವಾಗಿ ಮನೆಗೆ ಹೋಗಿ’ ಎಂದು ಸಪ್ತಮಿ ಗೌಡ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.