Covid Symptoms: ಕೊರೊನಾ ದೇಹವನ್ನು ಪ್ರವೇಶಿಸಿದ ಸರಾಸರಿ 5 ದಿನಗಳ ನಂತರ ಕಂಡುಬರುವ ಈ ಬದಲಾವಣೆಗಳನ್ನು ಕಡೆಗಣಿಸಲೇಬೇಡಿ

Coronavirus Symptoms: ಕೊರೊನಾ ದೇಹದಲ್ಲಿ ಪರಿಣಾಮ ಬೀರಲಾರಂಭಿಸಿ ಗಂಟಲುರಿ, ಗಂಟಲು ನೋವು, ಕಫ, ಜ್ವರ, ಮೈಕೈನೋವು ಇತ್ಯಾದಿ ಲಕ್ಷಣಗಳನ್ನು ತೋರ್ಪಡಿಸಲಾರಂಭಿಸಿ ಎರಡು ಮೂರು ದಿನಗಳ ತನಕ ಕೊಂಚ ಸುಧಾರಿಸಿದಂತೆ ಕಾಣಬಹುದು. ಅಂದರೆ ಮೊದಲ ದಿನ ಸ್ವಲ್ಪ ಜಾಸ್ತಿಯಿದ್ದ ಜ್ವರ, ಎರಡು, ಮೂರನೇ ದಿನವೂ ಹಾಗೆಯೇ ಇದ್ದು ನಾಲ್ಕನೇ ದಿನಕ್ಕೆ ಇಳಿಮುಖವಾಗುವ ಸಾಧ್ಯತೆ ಇರುತ್ತದೆ.

  • Updated On - 10:02 am, Wed, 19 May 21 Edited By: Apurva Kumar
Covid Symptoms: ಕೊರೊನಾ ದೇಹವನ್ನು ಪ್ರವೇಶಿಸಿದ ಸರಾಸರಿ 5 ದಿನಗಳ ನಂತರ ಕಂಡುಬರುವ ಈ ಬದಲಾವಣೆಗಳನ್ನು ಕಡೆಗಣಿಸಲೇಬೇಡಿ
ಪ್ರಾತಿನಿಧಿಕ ಚಿತ್ರ


ಕೊರೊನಾ ಬಗ್ಗೆ ಕಳೆದ ಒಂದೂವರೆ ವರ್ಷದಿಂದಲೂ ಸಾಕಷ್ಟು ವಿಚಾರಗಳನ್ನು ಕೇಳುತ್ತಲೇ ಇದ್ದೇವೆ. ಕೇಳುವುದಿಲ್ಲವೆಂದರೂ ಅದು ಕಿವಿಗೆ ಬಂದು ಅಪ್ಪಳಿಸುವ ಮಟ್ಟಿಗೆ ನಮ್ಮನ್ನು ಆವರಿಸಿಕೊಂಡಿದೆ. ಬೆರಳೆಣಿಕೆ ಪ್ರಮಾಣದ ಸೋಂಕು ದೇಶದಲ್ಲಿ ಕಾಣಿಸಿಕೊಂಡಾಗ ಉಂಟಾಗಿದ್ದ ತಲ್ಲಣವನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಸೋಂಕು ಊರು ಕೇರಿಗಳಿಗೆಲ್ಲಾ ಹಬ್ಬಿ ಲಕ್ಷ, ಕೋಟಿಯ ಲೆಕ್ಕದಲ್ಲಿ ಬೃಹದಾಕಾರವಾಗಿ ಬೆಳೆದುನಿಂತಿದೆ. ಆದರೆ, ಇಂದಿಗೂ ಕೊವಿಡ್ 19 ಬಗ್ಗೆ ನಮ್ಮಲ್ಲಿ ನಿವಾರಣೆಯಾಗದ ಸಾಕಷ್ಟು ಗೊಂದಲಗಳಿವೆ. ಒಂದು ವೈರಾಣು ದೇಹವನ್ನು ಪ್ರವೇಶಿಸಿ ಕ್ಷಿಪ್ರವಾಗಿ ಹಬ್ಬುವುದು ಹೇಗೆ? ದೇಹದಲ್ಲಿ ಅದು ಯಾವ ಬದಲಾವಣೆಗಳನ್ನು ಉಂಟುಮಾಡುತ್ತದೆ? ನಮ್ಮೊಳಗೆ ಏನು ವ್ಯತ್ಯಾಸ ಆಗುತ್ತದೆ? ಉಸಿರನ್ನೇ ನಿಲ್ಲಿಸುವ ಮಟ್ಟಿಗೆ ಸೋಂಕು ಉಲ್ಬಣಿಸುವುದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಇನ್ನೂ ಹಲವು ಜನಸಾಮಾನ್ಯರಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದನ್ನು ದೆಹಲಿಯ ಸೇಂಟ್ ಸ್ಟೀಫನ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಮ್ಯಾಥ್ಯೂ ವರ್ಗೀಸ್ ಸರಳವಾಗಿ ವಿವರಿಸಿದ್ದಾರೆ. ಅವರ ಮಾತುಗಳ ಕನ್ನಡ ಭಾವಾನುವಾದ ಇಲ್ಲಿದೆ.

ಕೊರೊನಾ ನಮ್ಮನ್ನು ಕಾಡಲು ಶುರುವಾಗಿ ಒಂದೂವರೆ ವರ್ಷ ಆಗಿಹೋಗಿದೆ. ಸದ್ಯದ ಮಟ್ಟಿಗೆ ಪರಿಸ್ಥಿತಿ ನಿರಾಶದಾಯಕವಾಗಿ ಕಾಣುತ್ತಿದೆಯಾದರೂ ವೈರಾಣುವಿನ ಬಗ್ಗೆ ಅನೇಕ ವಿಚಾರಗಳನ್ನು ವೈದ್ಯಲೋಕ ಅರ್ಥ ಮಾಡಿಕೊಂಡಿದೆ ಹಾಗೂ ಕೊವಿಡ್ 19 ಜನರನ್ನು ಹೇಗೆ ಸತಾಯಿಸುತ್ತದೆ ಎನ್ನುವುದು ಗೊತ್ತಾಗಿದೆ ಎನ್ನುವುದು ಸಮಾಧಾನಕರ. ಎಲ್ಲಕ್ಕಿಂತ ಮಿಗಿಲಾಗಿ ಈಗಾಗಲೇ ಕೊರೊನಾಕ್ಕೆ ಬೇರೆ ಬೇರೆ ಬಗೆಯ ಲಸಿಕೆಯನ್ನೂ ಕಂಡುಹಿಡಿದಾಗಿದೆ. ಇಷ್ಟಾದರೂ ಈಗ ಎರಡನೇ ಅಲೆ ವ್ಯಾಪಿಸುತ್ತಿರುವ ಹೊತ್ತಿನಲ್ಲಿ ಕೊರೊನಾ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದರೆ ಅದು ನಮ್ಮ ದೇಹದಲ್ಲಿ ಹೇಗೆ ವರ್ತಿಸುತ್ತದೆ ಎನ್ನುವ ಬಗ್ಗೆ ಅರಿತುಕೊಳ್ಳುವುದು ಮುಖ್ಯ.

ಕೊರೊನಾ ವೈರಾಣು ಉಸಿರಿನ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿ ನಮ್ಮದೇ ಜೀವಕೋಶಗಳ ಒಳಗೆ ಸೇರಿಕೊಳ್ಳುತ್ತದೆ. ಹೀಗೆ ಸೇರಿಕೊಳ್ಳುವ ವೈರಾಣು ನಮ್ಮ ಜೀವಕೋಶಗಳ ಭಾಗವಾಗಿ ಅಲ್ಲಿನ ರಾಸಾಯಾನಿಕ ಪ್ರಕ್ರಿಯೆಗಳನ್ನೇ ಬಳಸಿಕೊಂಡು ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಆದರೆ, ಇದು ನಮ್ಮ ಗಮನಕ್ಕೆ ಬರುವ ಮುನ್ನವೇ ಒಂದೆರೆಡು ದಿನದಲ್ಲೇ ಅಸಂಖ್ಯಾತ ಪ್ರಮಾಣದಲ್ಲಿ ವೈರಾಣುಗಳು ದೇಹದೊಳಗೆ ಹಬ್ಬಿಕೊಳ್ಳುತ್ತವೆ. ಈ ವೈರಾಣುವಿನ ಪ್ರಮಾಣ ಹೆಚ್ಚಾದಾಗ ನಮ್ಮ ದೇಹ ತಕ್ಷಣವೇ ಎಚ್ಚೆತ್ತು ಪ್ರತಿಕಾಯಗಳನ್ನು ಅದರ ವಿರುದ್ಧದ ಹೋರಾಟಕ್ಕಿಳಿಸುತ್ತದೆ. ನಮ್ಮ ದೇಹದಲ್ಲಿನ ಪ್ರತಿಕಾಯಗಳು ಅಪಾಯಕಾರಿ ವೈರಾಣುವನ್ನು ಆಚೆಗಟ್ಟಲು ನೋಡುತ್ತವೆ. ಇದು ಕೊರೊನಾ ಮಾತ್ರವಲ್ಲದೇ ಬೇರೆ ಯಾವುದೇ ರೀತಿಯ ವೈರಾಣು ನಮ್ಮ ದೇಹವನ್ನು ಪ್ರವೇಶಿಸಿದರೂ ಆಗುವ ಸಾಮಾನ್ಯ ಪ್ರಕ್ರಿಯೆ. ನಮ್ಮ ದೇಹವನ್ನು ಪ್ರವೇಶಿಸುವ ಅಪಾಯಕಾರಿ ವೈರಾಣುಗಳನ್ನು ಪ್ರತಿಕಾಯಗಳೇ ಆಚೆಗಟ್ಟುವುದೇ ವಿನಃ ಲಸಿಕೆಗಳಾಗಲೀ, ಔಷಧಗಳಾಗಲೀ ಅಲ್ಲ ಎನ್ನುವುದು ಗಮನಾರ್ಹ. ಆದರೆ, ಅತಿ ಕಡಿಮೆ ಸಮಯದಲ್ಲಿ ಅಸಂಖ್ಯಾತ ವೈರಾಣುಗಳು ದೇಹದೊಳಗೆ ಹಬ್ಬಿಕೊಂಡಾಗ ಪ್ರತಿಕಾಯಗಳು ಹಾಗೂ ಅವುಗಳ ನಡುವಿನ ಸಂಘರ್ಷದಲ್ಲಿ ರಾಸಾಯನಿಕಗಳು (ಸೈಟೋಕೈನ್ಸ್) ರಕ್ತಕ್ಕೆ ಬಿಡುಗಡೆಯಾಗುತ್ತಾ ಬರುತ್ತವೆ. ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಜ್ವರಕ್ಕೆ ಕಾರಣವಾಗುತ್ತದೆ. ಈ ವೈರಾಣು ದೇಹದ ಯಾವ ಭಾಗದಲ್ಲಿ ಹೆಚ್ಚಿರುತ್ತದೋ ಅಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಗಂಟಲಲ್ಲಿ ಬಂದು ಕುಳಿತರೆ ಗಂಟಲುರಿ, ಊತ, ಕಿರಿಕಿರಿ ಉಂಟಾಗುತ್ತದೆ.

ದೇಹ ಪ್ರವೇಶಿಸಿದ ನಂತರ ಐದು ದಿನಗಳಲ್ಲಿ ಪರಿಣಾಮ ಬೀರುತ್ತದೆ ವೈರಾಣು
ಈ ವೈರಾಣು ನಮ್ಮ ದೇಹವನ್ನು ಪ್ರವೇಶಿಸಿದ ನಂತರ ಪರಿಣಾಮ ಬೀರಲು ಹಾಗೂ ಮೊದಲ ಗುಣಲಕ್ಷಣಗಳು ಕಾಣಿಸಿಕೊಳ್ಳಲು ಸರಾಸರಿ ಐದು ದಿನಗಳನ್ನು ತೆಗೆದುಕೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ ಒಂದೆರೆಡು ದಿನಗಳು ಹೆಚ್ಚೂಕಡಿಮೆಯೂ ಆಗಬಹುದು. ಕಳೆದ ಬಾರಿ ಕೊರೊನಾ ಶುರುವಾದಾಗ ಜನರಿಗೆ ದೇಹದಲ್ಲಿ ಒಂಚೂರು ಏರುಪೇರಾದರೂ ಇದಕ್ಕೆ ಏನು ಕಾರಣ ಎಂದು ತಿಳಿಯಲು ಅವಕಾಶವಿತ್ತು. ಇಂತಹ ದಿನ ಈ ಕಾರ್ಯಕ್ರಮಕ್ಕೆ ಹೋಗಿದ್ದೆ, ಆಸ್ಪತ್ರೆಗೆ ಹೋಗಿದ್ದೆ, ಇನ್ನೆಲ್ಲೋ ಜನ ಸೇರುವಲ್ಲಿಗೆ ತೆರಳಿದ್ದೆ ಎಂದು ಹೇಳುತ್ತಿದ್ದರು. ಆದರೆ, ಈ ಎರಡನೇ ಅಲೆಯಲ್ಲಿ ಸಮಸ್ಯೆಯ ಮೂಲ ಯಾವುದು, ಎಲ್ಲಿಂದ ಬಂತು ಎಂದು ಕಂಡುಹಿಡಿಯುವುದುದೇ ಅಸಾಧ್ಯ ಎನ್ನುವಂತಾಗಿದೆ. ಹೀಗಾದಾಗ ನಮ್ಮಲ್ಲಿ ವೈರಾಣು ದೇಹ ಪ್ರವೇಶಿಸಿ ಕಾರ್ಯಾರಂಭಿಸಲು ಶುರುಮಾಡಿದ್ದು ಯಾವಾಗ ಎನ್ನುವುದನ್ನು ನಿಖರವಾಗಿ ಹೇಳುವುದು ಕಷ್ಟ. ಒಂದುವೇಳೆ ಇದು ಗೊತ್ತಾಗದಿದ್ದರೂ ನಮ್ಮಲ್ಲಿ ಅದು ಮೊದಲು ಪರಿಣಾಮ ಬೀರಲಾರಂಭಿಸಿದ್ದು ಯಾವಾಗ ಎನ್ನುವುದನ್ನು ಗೊತ್ತುಮಾಡಿಕೊಳ್ಳಬೇಕು. ಗಂಟಲುರಿ, ಕಿರಿಕಿರಿ, ಕಫ, ಮೈಕೈ ನೋವು, ತಲೆನೋವು ಅಥವಾ ಕೆಲವೊಮ್ಮೆ ಬೇಧಿ ಹೀಗೆ ಇವುಗಳಲ್ಲಿ ಯಾವುದೇ ಕಾಣಿಸಿಕೊಂಡರೂ ಅದನ್ನು ಗಣನೆಗೆ ತೆಗೆದುಕೊಳ್ಳಬೇಕು.

ಆದರೆ, ಬಹುತೇಕರು ತಪ್ಪು ಮಾಡುವುದೇ ಇಲ್ಲಿ. ಆರೋಗ್ಯದಲ್ಲಿ ಏರುಪೇರಾದರೂ ಆ ಲಕ್ಷಣವನ್ನು ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಯಾವಾಗ ಅದು ತೀವ್ರ ಮಟ್ಟದಲ್ಲಿ ಕಾಡಲಾರಂಭಿಸುತ್ತದೋ ಆಗ ಎಚ್ಚೆತ್ತುಕೊಳ್ಳುತ್ತಾರೆ. ಅಷ್ಟಾದ ನಂತರ ಅವರಿಗೆ ಅನಾರೋಗ್ಯದ ಮೊದಲ ಲಕ್ಷಣ ಯಾವಾಗ ಕಾಣಿಸಿಕೊಂಡಿದ್ದು ಎಂದು ಗಮನದಲ್ಲೇ ಇರುವುದಿಲ್ಲವಾದ್ದರಿಂದ ನಿಖರವಾಗಿ ಹೇಳುವುದು ಸಾಧ್ಯವಾಗುವುದಿಲ್ಲ. ಹೀಗಾದಾಗ ಸಮಸ್ಯೆಯನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ನೆಪಿರಲಿ, ಈ ವಿಚಾರದಲ್ಲಿ ಅನಾರೋಗ್ಯಕ್ಕೀಡಾದ ಬಗ್ಗೆ ಹೇಳುವಾಗ ಒಂದೆರೆಡು ದಿನ ಹೆಚ್ಚುಕಮ್ಮಿಯಾದರೂ ಹೊರಗಡೆ ಆರಾಮಾಗಿದ್ದು ಗುಣಮುಖರಾಗಬಹುದಾದ ನೀವು ಐಸಿಯು ಸೇರುವ ಸ್ಥಿತಿ ಎದುರಾಗಬಹುದು.

ಕೊರೊನಾ ದೇಹದಲ್ಲಿ ಪರಿಣಾಮ ಬೀರಲಾರಂಭಿಸಿ ಗಂಟಲುರಿ, ಗಂಟಲು ನೋವು, ಕಫ, ಜ್ವರ, ಮೈಕೈನೋವು ಇತ್ಯಾದಿ ಲಕ್ಷಣಗಳನ್ನು ತೋರ್ಪಡಿಸಲಾರಂಭಿಸಿ ಎರಡು ಮೂರು ದಿನಗಳ ತನಕ ಕೊಂಚ ಸುಧಾರಿಸಿದಂತೆ ಕಾಣಬಹುದು. ಅಂದರೆ ಮೊದಲ ದಿನ ಸ್ವಲ್ಪ ಜಾಸ್ತಿಯಿದ್ದ ಜ್ವರ, ಎರಡು, ಮೂರನೇ ದಿನವೂ ಹಾಗೆಯೇ ಇದ್ದು ನಾಲ್ಕನೇ ದಿನಕ್ಕೆ ಇಳಿಮುಖವಾಗುವ ಸಾಧ್ಯತೆ ಇರುತ್ತದೆ. ಆಗ ದೇಹದ ಬಿಸಿ ತಗ್ಗಿ ಸಾಮಾನ್ಯ ಉಷ್ಣಾಂಶದ ಮಟ್ಟಕ್ಕೆ ಬರಬಹುದು. ಶೇ.80ರಷ್ಟು ಪ್ರಕರಣಗಳಲ್ಲಿ ಕೊರೊನಾ ವೈರಾಣುವಿನ ಅಂತಿಮ ಘಟ್ಟವೇ ಇದು ಎಂದು ಹೇಳಬಹುದು. ಹೀಗಾಗಿ ಮೂರ್ನಾಲ್ಕು ದಿನಗಳ ನಂತರ ಜನ ಗುಣಮುಖರಾದಂತಾಗಿ ಮೊದಲಿನಂತೆ ಓಡಾಡಲು ಆರಂಭಿಸುತ್ತಾರೆ. ಆದರೆ, ಇದೇ ಹಂತದಲ್ಲಿ ಕಾಯಿಲೆ ಶೇ.15ರಿಂದ ಶೇ.20ರಷ್ಟು ಪ್ರಮಾಣದಲ್ಲಿ ಅಪಾಯಕಾರಿ ತಿರುವನ್ನು ತೆಗೆದುಕೊಂಡುಬಿಡುತ್ತದೆ.

ಅಪಾಯಕಾರಿ ತಿರುವು ಎಂದರೆ ಏನು?
ಕಡಿಮೆಯಾಗಿದ್ದ ಜ್ವರ ವಾಪಾಸು ಕಾಣಿಸಿಕೊಳ್ಳುತ್ತದೆ, ಒಂದೇ ತೆರನಾಗಿ ಇದ್ದ ಜ್ವರ ಇದ್ದಕ್ಕಿದ್ದಂತೆ ಏರಲಾರಂಭಿಸುತ್ತದೆ ಅಥವಾ ಜ್ವರವೇ ಇಲ್ಲದಿದ್ದರೂ ಏಕಾಏಕಿ ಅತಿ ಎನ್ನುವ ಮಟ್ಟಿಗೆ ಏರುತ್ತದೆ. ಕಡಿಮೆ ಪ್ರಮಾಣದಲ್ಲಿದ್ದ ಕೆಮ್ಮು ಉಸಿರಾಟಕ್ಕೆ ಸಮಸ್ಯೆ ಆಗುವ ಮಟ್ಟಿಗೆ ಕಾಡಲಾರಂಭಿಸುತ್ತದೆ. ಬಹುಮುಖ್ಯವಾಗಿ ಈ ಹಂತದಲ್ಲಿ ಜ್ವರ, ಎದೆನೋವು, ಉಸಿರಾಟದ ಸಮಸ್ಯೆ ಹಾಗೂ ಅತಿಯಾದ ಕೆಮ್ಮು ಕಾಣಿಸಿಕೊಳ್ಳುವುದು ಕಾಯಿಲೆ ಅಪಾಯಕಾರಿ ತಿರುವು ಪಡೆಯುತ್ತಿದೆ ಎಂಬುದರ ಸೂಚಕವಾಗಿರುತ್ತವೆ. ಈ ಹಂತಕ್ಕೆ ತಲುಪದಂತೆ ಎಚ್ಚರಿಕೆ ವಹಿಸುವುದು ಹಾಗೂ ಒಂದುವೇಳೆ ತಲುಪಿದರೆ ತಡಮಾಡದೇ ಚಿಕಿತ್ಸೆಗೆ ಒಳಗಾಗುವುದು ಅತ್ಯವಶ್ಯಕವಾಗಿರುತ್ತದೆ.

ಈ ಎಲ್ಲಾ ಮಾಹಿತಿಗಳ ಜತೆಗೆ ಸ್ಟೀರಾಯ್ಡ್ ಬಳಕೆ, ಅದರಿಂದ ಉಂಟಾಗಬಹುದಾದ ಅಡ್ಡಪರಿಣಾಮ, ಆ ಹಂತದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಬಗ್ಗೆಯೂ ವಿವರಣೆ ಇದ್ದು ಈ ಕೆಳಗಿನ ವಿಡಿಯೋದಲ್ಲಿ ಅದನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ:
ಧೈರ್ಯಂ ಸರ್ವತ್ರ ಸಾಧನಂ.. ಕೊರೊನಾ ಮುಕ್ತರಾಗಲು ಮೊದಲು ಭಯ ಬಿಡಬೇಕು