AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹದಲ್ಲಿ ಆಮ್ಲಜನಕದ ಕೊರತೆ ಹೇಗಾಗುತ್ತದೆ? ಕೊರೊನಾ ವೈರಾಣುವಿಗೂ ಇದಕ್ಕೂ ಏನು ಸಂಬಂಧ?

ರಕ್ತನಾಳಕ್ಕೆ ಹಾನಿಯಾದಾಗ ರಕ್ತದ ಕಣಗಳು ಅಲ್ಲಲ್ಲಿ ಕಟ್ಟಿಕೊಳ್ಳಲಾರಂಭಿಸಿ ರಕ್ತ ಸರಾಗವಾಗಿ ಹರಿಯುವುದಕ್ಕೆ ಸಮಸ್ಯೆಯಾಗಿ, ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತವೆ. ಹೀಗೆ ದೇಹದಲ್ಲಿ ರಕ್ತದ ಹರಿವಿಗೆ ತಡೆಯಾದಾಗ ಶ್ವಾಸಕೋಶದ ಮೂಲಕ ರಕ್ತಕ್ಕೆ ಆಮ್ಲಜನಕ ಪೂರೈಕೆಯಾಗುವುದು ಕಡಿಮೆಯಾಗುತ್ತದೆ.

ದೇಹದಲ್ಲಿ ಆಮ್ಲಜನಕದ ಕೊರತೆ ಹೇಗಾಗುತ್ತದೆ? ಕೊರೊನಾ ವೈರಾಣುವಿಗೂ ಇದಕ್ಕೂ ಏನು ಸಂಬಂಧ?
ಪಲ್ಸ್​ ಆಕ್ಸಿಮೀಟರ್​
Skanda
|

Updated on: May 18, 2021 | 10:28 AM

Share

ಕೊರೊನಾ ಬಂದು ಒಂದೂವರೆ ವರ್ಷದಿಂದ ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವೇನೋ ಎಂಬಂತೆ ಆಗಿದೆ. ಬಿಟ್ಟರೂ ಬಿಡದೀ ಮಾಯೆ ಎಂಬಂತೆ ನಾವೆಷ್ಟೇ ಕಿವಿಮುಚ್ಚಿಕೊಂಡರೂ ಕೊರೊನಾ ಕುರಿತಾದ ಸುದ್ದಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಬೆರಳೆಣಿಕೆ ಪ್ರಮಾಣದ ಸೋಂಕು ದೇಶದಲ್ಲಿ ಕಾಣಿಸಿಕೊಂಡಾಗ ಉಂಟಾಗಿದ್ದ ತಲ್ಲಣವನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಸೋಂಕು ಊರು ಕೇರಿಗಳಿಗೆಲ್ಲಾ ಹಬ್ಬಿ ಲಕ್ಷ, ಕೋಟಿಯ ಲೆಕ್ಕದಲ್ಲಿ ಬೃಹದಾಕಾರವಾಗಿ ಬೆಳೆದುನಿಂತಿದೆ. ಈಗ ಎರಡನೇ ಅಲೆಯಲ್ಲಿ ಕೊರೊನಾ ಎಂದರೆ ಆಮ್ಲಜನಕದ ಕೊರತೆ ಎನ್ನುವಷ್ಟರ ಮಟ್ಟಿಗೆ ಸೋಂಕಿತರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾದರೆ, ಕೊರೊನಾದಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದು ಹೇಗೆ? ಈ ವೈರಾಣು ನಮ್ಮ ಶ್ವಾಸಕೋಶವನ್ನು ಘಾಸಿಗೊಳಿಸುತ್ತದಾ? ಉಸಿರಾಟದ ಸಮಸ್ಯೆಗೆ ಮುಖ್ಯ ಕಾರಣವೇನು? ಇತ್ಯಾದಿ ಪ್ರಶ್ನೆಗಳಿಗೆ ದೆಹಲಿಯ ಸೇಂಟ್ ಸ್ಟೀಫನ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಮ್ಯಾಥ್ಯೂ ವರ್ಗೀಸ್ ಸರಳವಾಗಿ ವಿವರಿಸಿದ್ದಾರೆ. ಅವರ ಮಾತುಗಳ ಕನ್ನಡ ಭಾವಾನುವಾದ ಇಲ್ಲಿದೆ.

ಕೊರೊನಾ ವೈರಾಣು ಮನುಷ್ಯನ ದೇಹ ಪ್ರವೆಶಿಸಿದ ನಂತರ ಸಾಕಷ್ಟು ಸಮಸ್ಯೆಗಳನ್ನುಂಟು ಮಾಡಿ ದೇಹದ ಆರೋಗ್ಯ ಹದಗೆಡುವಂತೆ ಮಾಡುತ್ತದೆ. ಆದರೆ, ಅನೇಕರಲ್ಲಿ ಮೊದಲ ಹಂತದ ಅಪಾಯಕ್ಕಿಂತಲೂ ಹೆಚ್ಚಿನ ಗಂಭೀರತೆ ಎರಡನೇ ಹಂತದಲ್ಲಿ ಉಂಟಾಗುತ್ತದೆ. ವಿಪರ್ಯಾಸವೆಂದರೆ ಇದರಲ್ಲಿ ಎರಡನೆಯ ಅಪಾಯಕಾರಿ ತಿರುವು ಕೊರೊನಾ ವೈರಾಣುವಿನಿಂದ ಉಂಟಾಗುವುದಿಲ್ಲ ಎನ್ನುವುದು ಗಮನಾರ್ಹ. ಇಂದಿಗೂ ಅನೇಕ ಜನರು ಕೊರೊನಾ ವೈರಾಣು ನ್ಯುಮೋನಿಯಾಕ್ಕೆ ಕಾರಣವಾಗಿ ಸಮಸ್ಯೆ ತಂದೊಡ್ಡುತ್ತದೆ ಎಂದು ಭಾವಿಸಿದ್ದಾರೆ. ಮೊದಲ ಅಲೆ ಸಂದರ್ಭದಲ್ಲಿ ಕೆಲ ಎಕ್ಸ್​ರೇ ಕಾಪಿಗಳನ್ನು ನೋಡಿ ಹೀಗೆ ಭಾವಿಸಿದವರ ಸಂಖ್ಯೆ ದೊಡ್ಡದಿದೆ. ಆದರೆ, ಇದು ತಪ್ಪು ತಿಳುವಳಿಕೆಯಾಗಿದೆ. ಅಸಲಿಗೆ ಅದು ನ್ಯಮೋನಿಯಾ ಆಗಿರದೇ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದಾಗಿರುತ್ತದೆ ಎನ್ನುವುದು ಕೆಲ ಮರಣೋತ್ತರ ಪರೀಕ್ಷೆಗಳಿಂದ ಸಾಬೀತಾಗಿದೆ.

ವೈರಾಣು ಎರಡನೇ ಹಂತದಲ್ಲಿ ಉಂಟು ಮಾಡಬಹುದಾದ ತೊಂದರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ವೈರಾಣುವಿನ ರಚನೆಯಿಂದ ಗಮನ ಹರಿಸುತ್ತಾ ಬರಬೇಕು. ನಮ್ಮ ದೇಹ ಕೊರೊನಾವನ್ನು ಹೊರಗಿನ ವಸ್ತು ಎಂದು ಗುರುತಿಸಲು ಮುಖ್ಯ ಕಾರಣ ವೈರಾಣವಿನ ಮೇಲ್ಮೈಯನ್ನು ಆವರಿಸಿರುವ ಪ್ರೊಟೀನ್​ಗಳು. ಈ ಪ್ರೋಟೀನ್​ಗಳನ್ನು ನಮ್ಮ ದೇಹದಲ್ಲಿರುವ ಪ್ರತಿಕಾಯಗಳು ಗುರುತಿಸಿ ಅವುಗಳ ವಿರುದ್ಧ ಹೋರಾಡುತ್ತವೆ. ಇವೆಲ್ಲವುಗಳ ರಚನೆ ಒಂದಕ್ಕಿಂತ ಒಂದು ಭಿನ್ನವಾಗಿದ್ದು ಮನುಷ್ಯರನ್ನು ಹೇಗೆ ಬೆರಳಚ್ಚಿನಿಂದ ಗುರುತಿಸಬಹುದೋ ಹಾಗೆಯೇ ಅವುಗಳ ಗುರುತಿಸುವಿಕೆಗೆ ಸಹಕಾರಿಯಾಗಿರುತ್ತವೆ. ಆದರೆ, ಕೆಲವೊಮ್ಮೆ ಜೀವಕೋಶಗಳಲ್ಲಿನ ಪ್ರೋಟೀನ್​ ಹಾಗೂ ವೈರಾಣುವಿನ ಪ್ರೋಟಿನ್​ಗೆ ಆಕಸ್ಮಿಕವಾಗಿ ಒಂದಷ್ಟು ಸಾಮತ್ಯೆಗಳು ಕಂಡುಬಂದು ಪ್ರತಿಕಾಯಗಳು ಮೋಸಹೋಗುವಂತಾಗುತ್ತದೆ. ಈ ತೆರನಾದ ಪ್ರೋಟೀನ್ ರಚನೆಗಳನ್ನು ಹೊಂದಿದ ಜೀವಕೋಶಗಳು ನಮ್ಮ ಶ್ವಾಸಕೋಶದ ಬಳಿಯಿರುವ ರಕ್ತನಾಳ, ಕರುಳು, ಲಿವರ್, ಕಿಡ್ನಿ ಸೇರಿದಂತೆ ಅಲ್ಲಲ್ಲಿ ಕಂಡುಬರುತ್ತವೆ.

ಆಮ್ಲನಕದ ಕೊರತೆಗೆ ಕಾರಣವೇನು? ಜೀವಕೋಶ ಹಾಗೂ ಕೊರೊನಾ ವೈರಾಣುವಿನ ಮೇಲಿನ ಪ್ರೋಟೀನ್​ಗಳಲ್ಲಿ ಸಾಮ್ಯತೆ ಕಂಡುಬಂದಾಗ ದೇಹದೊಳಗಿನ ಪ್ರತಿಕಾಯಗಳು ಗೊಂದಲಕ್ಕೊಳಗಾಗಿ ಹೊರಗಿನ ಅಪಾಯಕಾರಿ ವೈರಾಣುಗಳ ಜತೆಗೆ ನಮ್ಮದೇ ಜೀವಕೋಶಗಳ ಮೇಲೆ ದಾಳಿ ಆರಂಭಿಸುತ್ತವೆ. ಈ ತಿಕ್ಕಾಟದಿಂದ ನಮ್ಮ ಜೀವಕೋಶಗಳಿಗೆ ಹಾನಿಯಾಗಿ ರಕ್ತನಾಳಗಳಲ್ಲಿ ಕೆಲ ಸಣ್ಣಪುಟ್ಟ ಗಾಯಗಳಂತೆ ಆಗಿ, ಮೃದುತ್ವ ಕಳೆದುಕೊಂಡು ಒರಟಾಗುತ್ತವೆ. ರಕ್ತನಾಳಕ್ಕೆ ಹಾನಿಯಾದಾಗ ರಕ್ತದ ಕಣಗಳು ಅಲ್ಲಲ್ಲಿ ಕಟ್ಟಿಕೊಳ್ಳಲಾರಂಭಿಸಿ ರಕ್ತ ಸರಾಗವಾಗಿ ಹರಿಯುವುದಕ್ಕೆ ಸಮಸ್ಯೆಯಾಗಿ, ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತವೆ. ಹೀಗೆ ದೇಹದಲ್ಲಿ ರಕ್ತದ ಹರಿವಿಗೆ ತಡೆಯಾದಾಗ ಶ್ವಾಸಕೋಶದ ಮೂಲಕ ರಕ್ತಕ್ಕೆ ಆಮ್ಲಜನಕ ಪೂರೈಕೆಯಾಗುವುದು ಕಡಿಮೆಯಾಗುತ್ತದೆ.

ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾದಾಗ ಸಹಜವಾಗಿ ಸ್ಯಾಚುರೇಶನ್ ಮಟ್ಟ ಕಡಿಮೆಯಾಗಲಾರಂಭಿಸುತ್ತದೆ. ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಇದು ನೇರವಾಗಿ ಶ್ವಾಸಕೋಶದ ಮೇಲೂ ಪರಿಣಾಮ ಬೀರಿ ಅದಕ್ಕೆ ಹಾನಿಯುಂಟು ಮಾಡುವ ಕಾರಣ ಪರಿಸ್ಥಿತಿ ಗಂಭೀರವಾಗುತ್ತಾ ಹೋಗುತ್ತದೆ. ಇದ್ಯಾವುದೂ ವೈರಾಣು ಶ್ವಾಸಕೋಶದೊಳಗೆ ಹೋರಾಡಿ ಆಗುವ ಹಾನಿಯಲ್ಲ. ಬದಲಾಗಿ ವೈರಾಣುವಿನ ಕಾರಣದಿಂದ ದೇಹದೊಳಗೇ ಆಗುವ ಬದಲಾವಣೆ ಹಾಗೂ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಉಂಟಾಗುವ ಸಮಸ್ಯೆ. ಈ ಎಲ್ಲವನ್ನೂ ಗಮನಿಸಿದಾಗ ದೇಹದೊಳಗಾಗುವ ತೊಂದರೆ ನ್ಯುಮೋನಿಯಾದಿಂದ ಅಲ್ಲ. ಬದಲಾಗಿ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಆಮ್ಲಜನಕದ ಕೊರತೆ ಉಂಟಾಗಿ ಆಗುವ ಸಮಸ್ಯೆ ಎನ್ನುವುದು ಸುಸ್ಪಷ್ಟ.

ಒಬ್ಬೊಬ್ಬರಲ್ಲಿ ಈ ಸಮಸ್ಯೆ ಒಂದೊಂದು ಪ್ರಮಾಣದಲ್ಲಿ ಆಗುವುದಕ್ಕೆ ದೇಹ ಪ್ರಕೃತಿಯಿಂದ ಹಿಡಿದು ರೋಗ ನಿರೋಧಕ ಶಕ್ತಿಯ ತನಕ ಹಲವು ಕಾರಣಗಳಿರಬಹುದು. ಆದರೆ, ಮೊದಲ ಹಂತದಲ್ಲಿ ಇದಕ್ಕೆ ಚಿಕಿತ್ಸೆ ನೀಡದೆ, ನಿರ್ಲಕ್ಷಿಸಿದರೆ ಬಹುತೇಕರು ಗಂಭೀರ ಪರಿಣಾಮಕ್ಕೆ ತುತ್ತಾಗುತ್ತಾರೆ. ಕಡೆಗಣಿಸಿದಷ್ಟೂ ಹೆಚ್ಚೆಚ್ಚು ರಕ್ತನಾಳಗಳು ಬಂದ್ ಆಗುತ್ತಾ ಹೋಗುವುದರಿಂದ ದೇಹಕ್ಕೆ ಹಂತಹಂತವಾಗಿ ಕೃತಕ ಉಸಿರಾಟ ಅನಿವಾರ್ಯವಾಗುತ್ತದೆ ಹಾಗೂ ವೆಂಟಿಲೇಟರ್ ಬೇಕಾಗುವ ಸ್ಥಿತಿ ನಿರ್ಮಾಣವಾಗುತ್ತದೆ.

ಈ ಎಲ್ಲಾ ಮಾಹಿತಿಗಳ ಜತೆಗೆ ಸ್ಟೀರಾಯ್ಡ್ ಬಳಕೆ, ಅದರಿಂದ ಉಂಟಾಗಬಹುದಾದ ಅಡ್ಡಪರಿಣಾಮ, ಆ ಹಂತದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಬಗ್ಗೆಯೂ ವಿವರಣೆ ಇದ್ದು ಈ ಕೆಳಗಿನ ವಿಡಿಯೋದಲ್ಲಿ ಅದನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: ಕೊರೊನಾ ದೇಹವನ್ನು ಪ್ರವೇಶಿಸಿದ ಸರಾಸರಿ 5 ದಿನಗಳ ನಂತರ ಕಂಡುಬರುವ ಈ ಬದಲಾವಣೆಗಳನ್ನು ಕಡೆಗಣಿಸಲೇಬೇಡಿ