Headache: ಆಗಾಗ ತಲೆನೋವು ಬರುತ್ತಾ? ತಲೆನೋವಿನಿಂದ ಸುಲಭವಾಗಿ ಮುಕ್ತಿ ಹೊಂದಲು ಹೀಗೆ ಮಾಡಿ
Health Tips for Headache: ಮನೆಮದ್ದುಗಳ ಮೂಲಕ ತಲೆನೋವನ್ನು ಗುಣಪಡಿಸಲು ಅಥವಾ ತಡೆಗಟ್ಟಲು ಸಾಧ್ಯವಿದೆ. ತಲೆನೋವಿಗೆ ಸುಲಭವಾಗಿ ಪರಿಹಾರ ನೀಡುವ ಮನೆಮದ್ದುಗಳ ಮಾಹಿತಿ ಇಲ್ಲಿದೆ.
ಶೀತ, ಕೆಮ್ಮು, ತಲೆನೋವೆಲ್ಲ ಮನುಷ್ಯರಾದವರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ. ಆದರೆ, ಈ ಸಾಮಾನ್ಯ ರೋಗಗಳೇ ಕೆಲವೊಮ್ಮೆ ನಿಮಗೆ ಅತಿಯಾದ ಕಿರಿಕಿರಿಯನ್ನು ಕೂಡ ಉಂಟುಮಾಡಬಹುದು. ನಿಮಗೆ ಆಗಾಗ ತಲೆನೋವು (Headache) ಅಥವಾ ಮೈಗ್ರೇನ್ ಕಾಣಿಸಿಕೊಳ್ಳುತ್ತಿದ್ದರೆ ಅವುಗಳನ್ನು ತಡೆಗಟ್ಟಲು ಯಾವುದಾದರೂ ಮಾರ್ಗವಿದೆಯೇ? ಎಂದು ನೀವು ಆಶ್ಚರ್ಯ ಪಡಬಹುದು. ತಲೆನೋವಿಗೆ ಮನೆಯಲ್ಲಿಯೇ (Home Remedies) ಹಲವಾರು ಪರಿಹಾರಗಳಿವೆ. ನೀವು ಸೇವಿಸುವ ಆಹಾರ, ಪಾನೀಯಗಳ ಬಗ್ಗೆ ಎಚ್ಚರ ವಹಿಸಿದರೆ ತಲೆನೋವಿನಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
ಮನೆಮದ್ದುಗಳ ಮೂಲಕ ತಲೆನೋವನ್ನು ಗುಣಪಡಿಸಲು ಅಥವಾ ತಡೆಗಟ್ಟಲು ಸಾಧ್ಯವಿದೆ. ತಲೆನೋವಿಗೆ ಸುಲಭವಾಗಿ ಪರಿಹಾರ ನೀಡುವ ಮನೆಮದ್ದುಗಳ ಮಾಹಿತಿ ಇಲ್ಲಿದೆ. ಈ ಕ್ರಮವನ್ನು ಅನುಸರಿಸಿದರೆ ಮೈಗ್ರೇನ್ ಮತ್ತು ತಲೆನೋವಿನಿಂದ ಮುಕ್ತಿ ಪಡೆಯಲು ಸಾಧ್ಯವಿದೆ.
1. ಹೈಡ್ರೇಟೆಡ್ ಆಗಿರಿ: ತಲೆನೋವನ್ನು ನಿವಾರಿಸಲು ನೀವು ಅನುಸರಿಸಬೇಕಾದ ಮೊದಲ ವಿಷಯವೆಂದರೆ ದೇಹದಲ್ಲಿ ತೇವಾಂಶ ಹೆಚ್ಚಿಸಿಕೊಳ್ಳುವುದು. ಅದಕ್ಕಾಗಿ ದಿನವೂ ಸಾಕಷ್ಟು ನೀರು ಕುಡಿಯಿರಿ. ಅನೇಕ ಬಾರಿ, ನಿರ್ಜಲೀಕರಣವು ನಿಮ್ಮ ತಲೆನೋವಿಗೆ ಕಾರಣವಾಗಬಹುದು. ನೀರಿನ ಅಂಶ ಕಡಿಮೆಯಾಗುವುದರಿಂದ ಅಸಹನೀಯ ತಲೆನೋವು ಉಂಟಾಗುತ್ತದೆ. ಸಕ್ಕರೆ ಅಂಶ ಹೆಚ್ಚಿಲ್ಲದ ಮತ್ತು ಉತ್ತಮ ಪ್ರಮಾಣದ ವಿಟಮಿನ್ ಸಿ ಹೊಂದಿರುವ ಎಲೆಕ್ಟ್ರೋಲೈಟ್ ಅನ್ನು ಸೇವಿಸಿ.
2. ಶುಂಠಿ ಚಹಾ: ಶುಂಠಿ ಚಹಾ ಕುಡಿಯುವುದರಿಂದ ತಲೆನೋವನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ಮೈಗ್ರೇನ್ ತಲೆನೋವುಗಳನ್ನು ನಿವಾರಿಸಿಕೊಳ್ಳಲು ಶುಂಠಿ ಚಹಾ ಸಹಕಾರಿ. ಶುಂಠಿಯು ಉರಿಯೂತ ನಿರೋಧಕವಾಗಿದ್ದು, ಮೈಗ್ರೇನ್ ದಾಳಿಯ ಸಮಯದಲ್ಲಿ ನೋವು ಮತ್ತು ತಲೆನೋವು ಉಂಟುಮಾಡುವ ಪ್ರೋಸ್ಟಗ್ಲಾಂಡಿನ್‌ಗಳನ್ನು ತಡೆಯುತ್ತದೆ. ಮೈಗ್ರೇನ್ ತಲೆನೋವು ಕೆಲವೊಮ್ಮೆ ತುಂಬಾ ಕೆಟ್ಟದಾಗಿರಬಹುದು. ಅದರಿಂದ ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬಹುದು. ಶುಂಠಿಯು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಮತ್ತು ವಾಕರಿಕೆ ಮತ್ತು ವಾಂತಿಯ ತೀವ್ರ ದಾಳಿಯನ್ನು ತಡೆಯಲು ಸಹಾಯ ಮಾಡುತ್ತದೆ.
3. ಧ್ಯಾನವನ್ನು ಅಭ್ಯಾಸ ಮಾಡಿ: ನೀವು ದೀರ್ಘಕಾಲದ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದರೆ, ನೀವು ಪ್ರತಿದಿನ ಪ್ರಾಣಾಯಾಮ ಮಾಡಿ ನೋಡಿ. ಅನುಲೋಮ್ ವಿಲೋಮ್ (ನಿಯಂತ್ರಿತ ಉಸಿರಾಟ) ಮತ್ತು ಭ್ರಮರಿ ಪ್ರಾಣಾಯಾಮವು ನಮ್ಮ ಮನಸ್ಸನ್ನು ಶಾಂತಗೊಳಿಸುವಲ್ಲಿ ಪರಿಣಾಮಕಾರಿ ಎಂದು ಯೋಗ ತಜ್ಞರು ಹೇಳಿದ್ದಾರೆ. ಈ ಪ್ರಾಣಾಯಾಮವು ಮೆದುಳು ಮತ್ತು ಹಣೆಯ ಭಾಗದ ಸುತ್ತಲಿನ ನರಗಳ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ತಲೆನೋವು, ವಿಶೇಷವಾಗಿ ಮೈಗ್ರೇನ್ ಮತ್ತು ಒತ್ತಡದ ತಲೆನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಪ್ರಾಣಾಯಾಮವನ್ನು ಪ್ರತಿದಿನ ಮಾಡುವುದರಿಂದ ಒತ್ತಡ, ಉದ್ವೇಗ, ಹತಾಶೆಯಿಂದ ಬಿಡುಗಡೆ ಹೊಂದಲು, ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
4. ಕೆಫೇನ್ ಸೇವಿಸಿ: ಕೆಫೇನ್ ಅನೇಕ ರೀತಿಯ ತಲೆನೋವುಗಳನ್ನು ವಿಶೇಷವಾಗಿ ಕ್ಲಸ್ಟರ್ ತಲೆನೋವು ಮತ್ತು ಮೈಗ್ರೇನ್‌ಗಳ ಪರಿಹಾರಕ್ಕೆ ಸಹಾಯ ಮಾಡುತ್ತದೆ. ಒಂದು ಕಪ್ ಕಾಫಿ ಅಥವಾ ಚಹಾವು ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮೆದುಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಕೆಫೇನ್ ರಕ್ತನಾಳಗಳ ಸಂಕುಚನದ ಗುಣಲಕ್ಷಣಗಳನ್ನು ಹೊಂದಿದೆ. ಅಂದರೆ ರಕ್ತದ ಹರಿವನ್ನು ನಿಯಂತ್ರಿಸಲು ರಕ್ತನಾಳಗಳು ಕಿರಿದಾಗುತ್ತವೆ, ಇದು ತೀವ್ರ ತಲೆನೋವಿನಿಂದ ಪರಿಹಾರಕ್ಕೆ ಸಹಾಯ ಮಾಡುತ್ತದೆ. ಆದರೆ ದಯವಿಟ್ಟು ಗಮನಿಸಿ, ಕೆಫೇನ್ ಅನ್ನು ಜಾಸ್ತಿ ಪ್ರಮಾಣದಲ್ಲಿ ಸೇವಿಸಿದರೆ ಅದು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಅದರಿಂದ ತೀವ್ರ ತಲೆನೋವು ಉಂಟುಮಾಡಬಹುದು. ಆದ್ದರಿಂದ, ನೀವು ದಿನಕ್ಕೆ ಗರಿಷ್ಠ 2 ಅಥವಾ 3 ಕಪ್ ಕಾಫಿ ಅಥವಾ ಚಹಾ ಮಾತ್ರ ಸೇವಿಸಿ.
5. ಜೀವಸತ್ವಗಳು ಮತ್ತು ಖನಿಜಗಳು: ಅನೇಕ ಬಾರಿ ವಿಟಮಿನ್ ಮತ್ತು ಖನಿಜಗಳ ಕೊರತೆಯಿಂದ ತಲೆನೋವು ಬರುತ್ತದೆ. ಉದಾ: ಸರಿಯಾದ ಪ್ರಮಾಣದ ಮೆಗ್ನೀಸಿಯಮ್ ಸೇವಿಸುವುದರಿಂದ ರಕ್ತನಾಳಗಳು ವಿಶ್ರಾಂತಿ ಹೊಂದಲು ಸಹಾಯವಾಗುತ್ತದೆ. ವಿಟಮಿನ್ ಬಿ 2, ಬಿ 12 ತಲೆನೋವನ್ನು ಗುಣಪಡಿಸಲು ಅಥವಾ Coq10 ಪುನರಾವರ್ತಿತ ತಲೆನೋವಿನ ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಉಪವಾಸವಿರಬೇಡಿ, ಸಮತೋಲಿತ ಆಹಾರವನ್ನು ಸೇವಿಸಲು ಪ್ರಯತ್ನಿಸಿ.
6. ಆಲ್ಕೋಹಾಲ್ ತ್ಯಜಿಸಿ: ಹೆಚ್ಚಿನ ಜನರು ಮದ್ಯಪಾನದ ನಂತರ ತೀವ್ರವಾದ ತಲೆನೋವು ಅನುಭವಿಸದಿದ್ದರೂ ಆರೋಗ್ಯದ ಬೇರೆ ಬೇರೆ ಕಿರಿಕಿರಿಗಳನ್ನು ಅನುಭವಿಸುತ್ತಾರೆ. ಇತ್ತೀಚಿನ ಅಧ್ಯಯನಗಳು ತಲೆನೋವಿನಿಂದ ಬಳಲುತ್ತಿರುವ ಸುಮಾರು 1/3ರಷ್ಟು ಜನರಲ್ಲಿ ಆಲ್ಕೋಹಾಲ್ ಸೇವನೆ ಮೈಗ್ರೇನ್ ಅನ್ನು ಉಂಟುಮಾಡುತ್ತದೆ ಎಂದು ತಿಳಿಸಿದೆ. ಆಲ್ಕೋಹಾಲ್ ವಾಸೋಡಿಲೇಟರ್ ಆಗಿ ಕಾರ್ಯ ನಿರ್ವಹಿಸುತ್ತದೆ ಅದು ನಿಮ್ಮ ರಕ್ತನಾಳಗಳನ್ನು ವಿಸ್ತರಿಸುತ್ತದೆ ಮತ್ತು ಹೆಚ್ಚು ರಕ್ತವನ್ನು ಮುಕ್ತವಾಗಿ ಹರಿಯುವಂತೆ ಮಾಡುತ್ತದೆ. ಇದು ನಿಮ್ಮ ಮೆದುಳಿನ ನರಗಳಲ್ಲಿ ಹಠಾತ್ ಒತ್ತಡವನ್ನು ಉಂಟುಮಾಡಬಹುದು ಮತ್ತು ತಲೆನೋವಿಗೆ ಕಾರಣವಾಗಬಹುದು. ಮದ್ಯಪಾನದಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದರಿಂದಾಗಿ ನಿರ್ಜಲೀಕರಣ ಉಂಟಾಗುತ್ತದೆ.
7. ನಿದ್ರೆ ಮಾಡಿ: ದಿನಕ್ಕೆ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರು ಆಗಾಗ ಮತ್ತು ತೀವ್ರ ತಲೆನೋವು ಅನುಭವಿಸುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಹಾಗೇ ಹೆಚ್ಚು ನಿದ್ರೆ ಮಾಡುವುದರಿಂದಲೂ ತಲೆನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿ ರಾತ್ರಿ ಪರಿಪೂರ್ಣವಾದ 7ರಿಂದ 8 ಗಂಟೆಗಳ ನಿದ್ರೆ ಮಾಡಿ.
ಇದನ್ನೂ ಓದಿ: Health Tips: ಆ್ಯಸಿಡಿಟಿ, ಅಜೀರ್ಣದಿಂದ ಬಳಲುತ್ತಿದ್ದೀರಾ?; ಆಯುರ್ವೇದದಲ್ಲಿದೆ ಸುಲಭ ಪರಿಹಾರ
Weight Loss: ಸುಖವಾದ ನಿದ್ರೆಯಿಂದಲೂ ತೂಕ ಇಳಿಸಿಕೊಳ್ಳಬಹುದೆಂದು ನಿಮಗೆ ಗೊತ್ತಾ?
Published On - 4:34 pm, Thu, 17 February 22