ಕೊಲನ್ ಕ್ಯಾನ್ಸರ್ ಎಷ್ಟು ಅಪಾಯಕಾರಿ ಗೊತ್ತಾ? ಹೇಗಿರುತ್ತೆ ಇದರ ಲಕ್ಷಣಗಳು? ಡಾ ಅನುರಾಗ್ ಶೆಟ್ಟಿ ನೀಡಿರುವ ಮಾಹಿತಿ ಇಲ್ಲಿದೆ
ಮೊದಲೆಲ್ಲಾ ಕ್ಯಾನ್ಸರ್ ಎಂಬ ಪದವೇ ಭಯ ಹುಟ್ಟಿಸುತ್ತಿತ್ತು. ಆದರೆ ಈಗ ಈ ಆರೋಗ್ಯ ಸಮಸ್ಯೆ ಅತಿ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು ಜನ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ತಿಳಿದುಕೊಳ್ಳುವುದಕ್ಕೆ ಆರಂಭ ಮಾಡಿದ್ದಾರೆ. ಆದರೆ ಕೆಲವು ಕ್ಯಾನ್ಸರ್ ಬಗ್ಗೆ ತಿಳಿದುಕೊಂಡಷ್ಟು ಸಾಲುವುದಿಲ್ಲ. ಅಂತವುಗಳಲ್ಲಿ ಕೊಲನ್ ಕ್ಯಾನ್ಸರ್ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಕೂಡ ಒಂದು. ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್ ಗಳಲ್ಲಿ ಇದು ಒಂದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡಾ ಅನುರಾಗ್ ಶೆಟ್ಟಿ ಅವರು ನೀಡಿದ್ದು, ಲಕ್ಷಣಗಳು, ರೋಗ ಪತ್ತೆ ಮಾಡುವುದು ಹೇಗೆ ಎಂಬುದನ್ನು ಹೇಳಿದ್ದಾರೆ.

ಕೊಲನ್ ಕ್ಯಾನ್ಸರ್ (Colon Cancer) ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಬಗ್ಗೆ ನೀವು ಕೇಳಿರಬಹುದು. ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್ ಗಳಲ್ಲಿ ಇದು ಒಂದಾಗಿದೆ. ಜಾಗತಿಕವಾಗಿ ಕ್ಯಾನ್ಸರ್ (Cancer) ನಿಂದ ಸಂಭವಿಸುವ ಸಾವುಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ. ಇದನ್ನು “ಸೈಲೆಂಟ್” ಕ್ಯಾನ್ಸರ್ ಎಂದು ಕೂಡ ಕರೆಯಲಾಗುತ್ತದೆ, ಏಕೆಂದರೆ ಇದರ ಆರಂಭಿಕ ಹಂತಗಳಲ್ಲಿ ಯಾವುದೇ ರೀತಿಯ ಲಕ್ಷಣಗಳು ಕೂಡ ಕಂಡುಬರುವುದಿಲ್ಲ. ಆದರೆ ಈ ರೀತಿ ಕಂಡು ಬರುವ ಕ್ಯಾನ್ಸರ್ ಗೆ ಕಾರಣವೇನು, ಲಕ್ಷಣಗಳನ್ನು ಗುರುತಿಸುವುದು ಹೇಗೆ, ಕೊಲನ್ ಕ್ಯಾನ್ಸರ್ ಗುಣಪಡಿಸಬಹುದೇ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಈ ಬಗ್ಗೆ ತಿಳಿದಿದ್ದಾಗ ಸಮಸ್ಯೆಗಳನ್ನು ಮುಂಚಿತವಾಗಿಯೇ ಗುರುತಿಸಿ ಅದನ್ನು ತಡೆಯಬಹುದು. ಮಂಗಳೂರು ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್, ಡಾ ಅನುರಾಗ್ ಶೆಟ್ಟಿ ಅವರು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೊಲನ್ ಕ್ಯಾನ್ಸರ್ ಲಕ್ಷಣಗಳು:
ಕರುಳಿನ ಕಾರ್ಯದಲ್ಲಿ ಬದಲಾವಣೆಗಳು (ಮಲಬದ್ಧತೆ ಅಥವಾ ಅತಿಸಾರ), ಮಲದ ಗಾತ್ರದಲ್ಲಿ ಬದಲಾವಣೆ, ಮಲದಲ್ಲಿ ರಕ್ತ ಬರುವುದು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಹೊಟ್ಟೆ ನೋವು, ದೌರ್ಬಲ್ಯ, ಕಡಿಮೆ ಹಿಮೋಗ್ಲೋಬಿನ್ (ರಕ್ತಹೀನತೆ), ಕರುಳಿನ ಅಡಚಣೆಯಿಂದ ಉಂಟಾಗುವ ನಿರಂತರ ವಾಂತಿ ಅಥವಾ ಮಲ ವಿಸರ್ಜನೆ ಇವು ಕೊಲನ್ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ಕಾಣಿಸಬಹುದಾದ ಲಕ್ಷಣಗಳಾಗಿವೆ.
ಜೀವನಶೈಲಿಯೂ ಕಾರಣವಾಗಬಹುದೇ?
ದೊಡ್ಡ ಕರುಳಿನ ಕ್ಯಾನ್ಸರ್ ವಿಷಯದಲ್ಲಿ ಜೀವನಶೈಲಿ ಅಂಶಗಳು ಸಹ ಮಹತ್ವದ ಪಾತ್ರ ವಹಿಸುತ್ತವೆ. ಬೊಜ್ಜು ಮತ್ತು ಜಡ ಜೀವನಶೈಲಿ ಅಪಾಯಕಾರಕ ಅಂಶಗಳಾಗಿವೆ, ಆದರೆ ದೈಹಿಕ ಚಟುವಟಿಕೆ ಕೊಲನ್ ಕ್ಯಾನ್ಸರ್ ಅಪಾಯವನ್ನು 19–24% ರಷ್ಟು ಕಡಿಮೆ ಮಾಡಬಹುದು. ರೋಗ ತಡೆಗಟ್ಟುವ ಕ್ರಮಗಳಲ್ಲಿ ಸಮರ್ಪಕ ಫೈಬರ್ ಮತ್ತು ದ್ರವ ಸೇವನೆ, ಮುಖ್ಯವಾಗಿವೆ ಹಾಗೇ ಸಂಸ್ಕರಿಸಿದ ಆಹಾರಗಳು ಮತ್ತು ಕೆಂಪು ಮಾಂಸದ ಸೇವನೆಯನ್ನು ಕಡಿಮೆ ಮಾಡುವುದು, ಧೂಮಪಾನ ಮತ್ತು ಮದ್ಯಪಾನ ನಿಲ್ಲಿಸುವುದು ಕೂಡ ಒಳಗೊಂಡಿದೆ.
ಇದನ್ನೂ ಓದಿ: ಮೌತ್ ಕಾಂಡೋಮ್ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?
ರೋಗ ಪತ್ತೆ ಹೇಗೆ?
ಮಲ ಪರೀಕ್ಷೆ, ಕೊಲೊನೋಸ್ಕೊಪಿ ಮೂಲಕ ಆರಂಭಿಕ ಹಂತದಲ್ಲಿ ಪಾಲಿಪ್ಸ್‌ನಂತಹ ಕ್ಯಾನ್ಸರ್ ಪೂರ್ವ ಲಕ್ಷಣಗಳನ್ನು ಪತ್ತೆಹಚ್ಚಬಹುದಾಗಿದೆ. ಪಾಲಿಪ್ಸ್‌ಗಳು ಪತ್ತೆಯಾದಲ್ಲಿ ಎಂಡೊಸ್ಕೊಪಿ ಮೂಲಕ ತೆಗೆದುಹಾಕಬಹುದು ಇದರಿಂದ ಕ್ಯಾನ್ಸರ್ ಗೆ ಕಾರಣವಾಗುವುದನ್ನು ತಡೆಯಬಹುದು. ಪಾಶ್ಚಾತ್ಯ ಮಾರ್ಗಸೂಚಿಗಳ ಪ್ರಕಾರ 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಅಥವಾ ಹೆಚ್ಚಿನ ಅಪಾಯದಲ್ಲಿರುವವರು ಇನ್ನಷ್ಟು ಮುಂಚೆಯೇ ನಿಯಮಿತ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಒಳ್ಳೆಯದು. ಕುಟುಂಬದಲ್ಲಿ ಕೊಲನ್ ಕ್ಯಾನ್ಸರ್ ಇತಿಹಾಸ ಇರುವವರು, ಕರುಳಿನ ಉರಿಯೂತದ ಕಾಯಿಲೆ ಹೊಂದಿರುವವರು ಅಥವಾ ಕೆಲವು ಆನುವಂಶಿಕ ಸಿಂಡ್ರೋಮ್‌ಗಳನ್ನು ಹೊಂದಿರುವವರಲ್ಲಿ ಕೊಲನ್ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಅಧಿಕವಾಗಿರುತ್ತದೆ.
ಕೊಲನ್ ಕ್ಯಾನ್ಸರ್ ಗುಣಪಡಿಸಬಹುದೇ?
ಆರಂಭಿಕ ಹಂತದಲ್ಲೇ ಪತ್ತೆಯಾದಲ್ಲಿ ಕೊಲನ್ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ರೋಗ ಬೇಗ ಪತ್ತೆಯಾದಲ್ಲಿ ರೋಗಿ ಬದುಕುಳಿಯುವ ಸಾಧ್ಯತೆ ಶೇ. 92ರಷ್ಟಿದ್ದು, ರೋಗ ಮುಂದುವರೆದಲ್ಲಿ ಬದುಕುಳಿಯುವ ಸಾಧ್ಯತೆ ಶೇ. 16ಕ್ಕೆ ಕುಸಿಯುತ್ತದೆ. ಸಕಾಲಿಕ ತಪಾಸಣೆ, ಆರೋಗ್ಯಕರ ಜೀವನಶೈಲಿ ರೋಗ ಗುಣಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




