ICMR Dietary Guidelines Part 11: ಅತಿಯಾಗಿ ಉಪ್ಪು ಸೇವಿಸಿದರೆ ಆರೋಗ್ಯಕ್ಕೆ ಅಪಾಯ ಖಂಡಿತ, ಎಚ್ಚರಿಸಿದ ಐಸಿಎಂಆರ್
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ನ್ಯಾಷನಲ್ ಆಫ್ ನ್ಯೂಟ್ರಿಷನ್ ಇತ್ತೀಚೆಗೆ ಬಿಡುಗಡೆ ಮಾಡಿದ 17 ಆಹಾರ ಮಾರ್ಗಸೂಚಿಯಲ್ಲಿ ಅತಿಯಾದ ಉಪ್ಪು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಹೀಗಾಗಿ ಉಪ್ಪಿನ ಬಳಕೆ ಮಿತವಾಗಿರಲಿ ಎಂದು ತಿಳಿಸಿದೆ.
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ. ಈ ಮಾತಿನಂತೆ ಯಾವುದೇ ಅಡುಗೆಗೆ ರುಚಿ ಬರಬೇಕಾದರೆ ಉಪ್ಪು ಇರಲೇಬೇಕು. ಆದರೆ ಕೆಲವರು ಆಹಾರದಲ್ಲಿ ಅತಿಯಾಗಿ ಉಪ್ಪು ಬಳಕೆ ಮಾಡುತ್ತಾರೆ. ದೇಹಕ್ಕೆ ತೀರಾ ಅಗತ್ಯವಾದ ಪೌಷ್ಟಿಕಾಂಶವೆನಿಸಿದ ಈ ಸೋಡಿಯಂನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆ, ಟ್ರಿಪಲ್ ವೆಸೆಲ್ ಡಿಸೀಸ್ ಪಾಶ್ವವಾಯು, ಅಧಿಕ ರಕ್ತದೊತ್ತಡ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಡಯಟ್ ಚಾರ್ಟ್ ನಲ್ಲಿ ತಿಳಿಸಿದೆ.
ದಿನಕ್ಕೆ ಎಷ್ಟು ಉಪ್ಪು ಬಳಕೆ ಮಾಡಬಹುದು?
ದಿನಕ್ಕೆ ಉಪ್ಪು ಸಾಮಾನ್ಯ ಸೇವನೆಯು ದಿನಕ್ಕೆ 5 ಗ್ರಾಂಗಿಂತ ಹೆಚ್ಚಿರಬಾರದು. (ಸೋಡಿಯಂ ದಿನಕ್ಕೆ 2 ಗ್ರಾಂಗಿಂತ ಹೆಚ್ಚಿರಬಾರದು ). ಆದರೆ ಈ ಚಿಪ್ಸ್, ಸಾಸ್, ಬಿಸ್ಕತ್ತುಗಳು, ಬೇಕರಿ ಉತ್ಪನ್ನಗಳು ಮತ್ತು ಮನೆಯಲ್ಲಿ ತಯಾರಿಸಿದ ಆಹಾರಗಳಾದ ಖಾರದ ತಿಂಡಿಗಳು ಹಾಗೂ ಉಪ್ಪಿನಕಾಯಿಗಳಂತಹ ಆಹಾರಗಳು ಹೆಚ್ಚಿನ ಪ್ರಮಾಣದ ಉಪ್ಪನ್ನು ಹೊಂದಿರುತ್ತವೆ ಎಂದು ಐಸಿಎಂಆರ್ ಹೇಳಿದೆ.
ಇದನ್ನೂ ಓದಿ: ಸೀಲಿಯಾಕ್ ಕಾಯಿಲೆ ಎಂದರೇನು? ರೋಗಲಕ್ಷಣಗಳೇನು?
ಉಪ್ಪು ಸೇವನೆಯನ್ನು ಕಡಿಮೆ ಮಾಡಲು ಈ ಸಲಹೆಯನ್ನು ಅನುಸರಿಸಿ
* ತಾಜಾ ಆಹಾರವನ್ನು ಸೇವಿಸಿ: ಹೆಚ್ಚಿನ ಸಂಸ್ಕರಿತ ಆಹಾರಗಳಲ್ಲಿ ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಲಾಗುತ್ತದೆ. ಹೀಗಾಗಿ ಹೆಚ್ಚು ತಾಜಾ ಆಹಾರವನ್ನು ಸೇವಿಸುವುದರಿಂದ ಹೆಚ್ಚುವರಿ ಉಪ್ಪನ್ನು ಆಹಾರದಿಂದ ಹೊರಹಾಕಲು ಸಹಾಯ ಮಾಡುತ್ತದೆ.
* ಲೇಬಲ್ ಗಳನ್ನು ಎಚ್ಚರಿಕೆಯಿಂದ ಓದಿ: ಯಾವುದೇ ಆಹಾರ ಉತ್ಪನ್ನವನ್ನು ಖರೀದಿಸುವ ಮೊದಲು, ಲೇಬಲ್ಗಳನ್ನು ಎಚ್ಚರಿಕೆಯಿಂದ ಓದಿ. ಪರೋಕ್ಷವಾಗಿ ಎಷ್ಟು ಉಪ್ಪನ್ನು ಸೇವಿಸುತ್ತಿದ್ದೀರಿ ಎಂದು ತಿಳಿಯಲು ಸಹಾಯಕವಾಗಿದೆ.
* ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಬಳಸಿ: ಕಡಿಮೆ ಉಪ್ಪಿಯಿರುವ ಆಹಾರವನ್ನು ಸೇವಿಸುವುದು ಕಷ್ಟವಾಗುತ್ತದೆ. ಹೀಗಾಗಿ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಸೇರಿಸುವುದು ರುಚಿಯನ್ನು ಹೆಚ್ಚಿಸುತ್ತದೆ.
* ವಾಣಿಜ್ಯ ಉತ್ಪನ್ನಗಳನ್ನು ಮಿತಿಗೊಳಿಸಿ: ಸಾಸ್‌ಗಳು ಹಾಗೂ ತ್ವರಿತ ಉತ್ಪನ್ನಗಳಂತಹ ಅನೇಕ ವಾಣಿಜ್ಯ ಉತ್ಪನ್ನಗಳಲ್ಲಿ ಹೆಚ್ಚಿನ ಸೋಡಿಯಂ ಅಂಶವಿದೆ. ಈ ಉತ್ಪನ್ನಗಳನ್ನು ಸೇವಿಸುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ