ಸ್ಮರಣ ಶಕ್ತಿ ಕುಂದಿಸಿ, ಅರಿವಿನ ದುರ್ಬಲತೆ ಉಂಟು ಮಾಡಬಹುದು ಕೊವಿಡ್ 19; ಯುಕೆಯಲ್ಲಿ ನಡೆದ ಅಧ್ಯಯನ ವರದಿ
ಯಾವುದೇ ಒಬ್ಬ ವ್ಯಕ್ತಿಗೆ ಕೊವಿಡ್ 19 ಸೋಂಕಿನಿಂದ ಆಗುವ ಅರಿವಿನ ದುರ್ಬಲತೆ, ಸಾಮಾನ್ಯವಾಗಿ 50-70ರ ನಡುವಿನ ವಯಸ್ಸಿನಲ್ಲಿ ಉಂಟಾಗುವ ಅರಿವಿನ ದುರ್ಬಲತೆಯಂತೇ ಇರುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
ಕೊವಿಡ್ 19 ಎಂಬುದು ಜನರ ಆರೋಗ್ಯದ ಮೇಲೆ ಬೇರೆಬೇರೆ ಸ್ವರೂಪದ ಪರಿಣಾಮಗಳನ್ನು ಬೀರುತ್ತಿದೆ. ಕೊರೊನಾ ಮಿದುಳಿನ ಮೇಲೆ ಕೂಡ ಪ್ರಭಾವ ಬೀರುತ್ತದೆ ಎಂಬುದನ್ನು ಈ ಹಿಂದೆಯೇ ಆರೋಗ್ಯ ತಜ್ಞರು ಹೇಳಿದ್ದರು. ಹಾಗೇ, ಈಗ ಯುಕೆಯಲ್ಲಿ ನಡೆದ ಅಧ್ಯಯನ ಇನ್ನೊಂದು ಮಹತ್ವದ ವರದಿ ನೀಡಿದೆ. ಕೊರೊನಾ ಮಿದಳಿನ ಮೇಲೆ ಪ್ರಭಾವ ಬೀರಬಹುದು, ಅದರಲ್ಲೂ ಸ್ಮರಣಶಕ್ತಿ, ಗಮನ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಮಾಡುವ ರಚನೆಗಳ ಮೇಲೆ ಶಾಶ್ವತವಾಗಿ ದುಷ್ಪರಿಣಾಮ ಬೀರುತ್ತದೆ. ಈ ರೀತಿ ಯಾರಿಗೆ ಆಗುತ್ತದೆಯೋ ಅವರ ಮಿದಳು 20 ವರ್ಷದವರಂತೆ ಕೆಲಸ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಈ ಸ್ಟಡಿ ಹೇಳಿದೆ.
ಯೂನಿವರ್ಸಿಟಿ ಆಫ್ ಕೆಂಬ್ರಿಡ್ಜ್ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜು ನಡೆಸಿದ ಈ ಅಧ್ಯಯನ ಇನ್ನೊಂದು ವಿಷಯವನ್ನೂ ಹೇಳಿದೆ. ಗಂಭೀರ ಸ್ವರೂಪದ ಕೊವಿಡ್ 19 ಕಾಯಿಲೆ ಮಿದುಳಿನಲ್ಲಿ ಅರಿವಿನ ದುರ್ಬಲತೆಯನ್ನೂ ಉಂಟು ಮಾಡಬಹುದು. ಯಾವುದೇ ಒಬ್ಬ ವ್ಯಕ್ತಿಗೆ ಕೊವಿಡ್ 19 ಸೋಂಕಿನಿಂದ ಆಗುವ ಅರಿವಿನ ದುರ್ಬಲತೆ, ಸಾಮಾನ್ಯವಾಗಿ 50-70ರ ನಡುವಿನ ವಯಸ್ಸಿನಲ್ಲಿ ಉಂಟಾಗುವ ಅರಿವಿನ ದುರ್ಬಲತೆಯಂತೇ ಇರುತ್ತದೆ. ಅಂದರೆ ಆತ 10 ಐಕ್ಯೂ ಪಾಯಿಂಟ್ಗಳನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳಿದೆ. ಕೆಲವರಲ್ಲಿ ನರ ದೌರ್ಬಲ್ಯದಿಂದ ಅರಿವಿನ ಮಟ್ಟ ಬೆಳೆಯುವುದಿಲ್ಲ. ಅವರಿಗೆ ಏನೂ ತಿಳಿಯುವುದಿಲ್ಲ. ಬುದ್ಧಿ ಮಾಂದ್ಯರಲ್ಲಿ, ವಯಸ್ಸಾದವರಲ್ಲಿ ಇದು ಸಹಜ. ಆದರೆ ಕೊವಿಡ್ 19ನಿಂದ ಉಂಟಾಗುವ ಅರಿವಿನ ದುರ್ಬಲತೆ ಅತ್ಯಂತ ವಿಭಿನ್ನವಾಗಿರುತ್ತದೆ ಎಂದೂ ಅಧ್ಯಯನ ಹೇಳಿದೆ. ಅಂದಹಾಗೇ, ಅಧ್ಯಯನ ವರದಿ eClinicalMedicine ಎಂಬ ಜರ್ನಲ್ನಲ್ಲಿ ಪಬ್ಲಿಶ್ ಆಗಿದೆ.
ಕೊರೊನಾ ಬಂದಾಕ್ಷಣ ಮಿದುಳಿಗೆ ತೊಂದರೆಯಾಗುತ್ತದೆ ಎಂದಲ್ಲ. ಕೆಲವರಲ್ಲಿ ದೀರ್ಘಾವಧಿ ವರೆಗೆ ಸೋಂಕು ದೇಹದಲ್ಲೇ ಉಳಿಯುತ್ತದೆ. ಹಾಗೇ, ಒಮ್ಮೊಮ್ಮೆ ಕೊರೊನಾ ನೆಗೆಟಿವ್ ಬಂದರೂ ಮತ್ತೆ ಒಂದೆರಡು ತಿಂಗಳ ವರೆಗೂ ಅದರ ಪ್ರಭಾವ ಮುಂದುವರಿಯುತ್ತಲೇ ಇರುತ್ತದೆ. ಅಂಥವರು ಜಾಗ್ರತೆ ವಹಿಸಬೇಕು ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್‌ನಲ್ಲಿ ಬ್ರೈನ್ ಸೈನ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಆ್ಯಡಮ್ ಹ್ಯಾಂಪ್ಶೈರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಮಗಳಿಗೆ ಕೊಲೆ ಬೆದರಿಕೆ; ಸಾಗರದಲ್ಲಿ ಕೇಸ್ ದಾಖಲು
Published On - 6:35 pm, Wed, 4 May 22