Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 27ರ ದಿನಭವಿಷ್ಯ
ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
- ಜನ್ಮಸಂಖ್ಯೆ 1: ಮನೆಯಲ್ಲಿ ಮದುವೆ ಪ್ರಸ್ತಾವ ಬರಬಹುದು. ಸಂಬಂಧದಲ್ಲಿಯೇ ಸೂಕ್ತ ವಧು/ವರ ದೊರೆಯುವ ಸಾಧ್ಯತೆಗಳಿವೆ, ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ವಾಹನ- ಮನೆ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ, ಔತಣಕೂಟಗಳಿಗೆ ಆಹ್ವಾನ ಬರಲಿದೆ. ಸ್ವಂತ ಮನೆ ಇದ್ದಲ್ಲಿ ದುರಸ್ತಿಗೆ ಯೋಜನೆ ರೂಪಿಸುತ್ತೀರಿ.
- ಜನ್ಮಸಂಖ್ಯೆ 2: ಇನ್ನೊಬ್ಬರಿಗೆ ಯಾವುದಾದರೂ ಕೆಲಸ ಮಾಡಿಕೊಡುವುದಾಗಿ ಮಾತು ನೀಡುವ ಮುನ್ನ ನಿಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಭಾವನಾತ್ಮಕವಾಗಿ ಆಲೋಚಿಸುವುದಕ್ಕಿಂತ ವಾಸ್ತವ ನೆಲೆಗಟ್ಟಿನಲ್ಲಿ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆಗಳನ್ನು ಇಡಿ. ಊಟ- ತಿಂಡಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
- ಜನ್ಮಸಂಖ್ಯೆ 3: ಬೇರೆ ಯಾರೋ ನಿಮಗೆ ಸಹಾಯ ಮಾಡುತ್ತಾರೆ ಎಂಬ ಅತಿಯಾದ ನಿರೀಕ್ಷೆ ಬೇಡ, ನಿಮ್ಮ ಶ್ರಮ ನಿಮಗೆ, ಅಷ್ಟೇ. ಈ ಹಿಂದಿನ ಕಹಿ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದ್ವೇಷ ಸಾಧನೆ ಮಾಡದಿರಿ. ಜ್ವರ, ನೆಗಡಿ, ಕಫದಂಥ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಗತ್ಯ ಕಂಡುಬಂದಲ್ಲಿ ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ.
- ಜನ್ಮಸಂಖ್ಯೆ 4: ಬೇರೆಯವರ ವೈಯಕ್ತಿಕ ವಿಚಾರಗಳಿಗೆ ತಲೆ ಹಾಕಬೇಡಿ. ಮೌನವಾಗಿದ್ದಷ್ಟೂ ನೆಮ್ಮದಿಯಾಗಿರುತ್ತೀರಿ. ನಿಮ್ಮ ಸಾಮರ್ಥ್ಯವನ್ನು ಮೂದಲಿಸಿ, ಸಿಟ್ಟಿಗೆಬ್ಬಿಸುವ ಪ್ರಯತ್ನಗಳನ್ನು ಶತ್ರುಗಳು ಮಾಡುತ್ತಾರೆ, ಆದ್ದರಿಂದ ತಾಳ್ಮೆಯಿಂದ ಇರುವುದು ಬಹಳ ಮುಖ್ಯವಾಗುತ್ತದೆ. ಗಣಪತಿ ಆರಾಧನೆ ಮಾಡಿ.
- ಜನ್ಮಸಂಖ್ಯೆ 5: ನಿಮಗೆ ಬರಬೇಕಾದ ಹಣಕ್ಕೆ ಈಗ ಪ್ರಯತ್ನಿಸಿದಲ್ಲಿ ವಾಪಸ್ ಬರಲಿದೆ. ಆದರೆ ಬಲವಾದ ಪ್ರಯತ್ನವನ್ನು ಹಾಕಬೇಕು. ಹೂಡಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಆಲೋಚಿಸುತ್ತಿದ್ದಲ್ಲಿ ಅನುಭವಿಗಳು, ತಜ್ಞರ ಜತೆಗೆ ಚರ್ಚಿಸಿ ಮುಂದಿನ ಹೆಜ್ಜೆಗಳನ್ನು ಇಡಿ. ಇತರರಿಗೆ ಆರ್ಥಿಕ ನೆರವು ನೀಡಲಿದ್ದೀರಿ.
- ಜನ್ಮಸಂಖ್ಯೆ 6: ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಹಣ ಉಳಿತಾಯ ಮಾಡಲು ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಈ ಹಿಂದಿನ ಅನಾರೋಗ್ಯ ಸಮಸ್ಯೆಗಳು ಚಿಂತೆಗೆ ಗುರಿ ಮಾಡುತ್ತವೆ. ಮನೆಯಲ್ಲಿ ಇರುವ ಅಮೂಲ್ಯ ವಸ್ತುಗಳು, ಅಗತ್ಯ ದಾಖಲೆ- ಪತ್ರಗಳ ಬಗ್ಗೆ ನಿಗಾ ಇರಲಿ. ಗುಟ್ಟಿನ ವಿಚಾರವನ್ನು ಅಪರಿಚಿತರ ಜತೆ ಹಂಚಿಕೊಳ್ಳಬೇಡಿ.
- ಜನ್ಮಸಂಖ್ಯೆ 7: ಅತಿಯಾದ ಸುಖ ಬಯಸುವ ಮನಸ್ಸನ್ನು ಹತೋಟಿಯಲ್ಲಿ ಇಡಬೇಕಾದದ್ದು ನಿಮ್ಮ ಜವಾಬ್ದಾರಿ. ಇಲ್ಲದಿದ್ದಲ್ಲಿ ಸ್ಥೂಲಕಾಯದಂಥ ಸಮಸ್ಯೆ ಎದುರಾಗಬಹುದು. ಆ ಮೂಲಕ ಸ್ಥೂಲಕಾಯಕ್ಕೆ ತಳುಕು ಹಾಕಿಕೊಂಡಂಥ ಇತರ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಮದ್ಯಪಾನದ ಅಭ್ಯಾಸ ಇರುವವರು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ.
- ಜನ್ಮಸಂಖ್ಯೆ 8: ನೀವು ಹಾಕಿಕೊಂಡಂಥ ಯೋಜನೆಗಳಿಗೆ ಹಣಕಾಸು ಹೊಂದಿಸಲು ದಾರಿ ಗೋಚರ ಆಗುತ್ತದೆ. ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿರುವವರಿಗೆ ಸೂಕ್ತ ವ್ಯಕ್ತಿ, ಸಂಸ್ಥೆಯ ಪರಿಚಯ ಸಿಗಬಹುದು. ನಿಮ್ಮಲ್ಲಿ ಹೊಸ ಆತ್ಮವಿಶ್ವಾಸ ಮೂಡುವ ಸಮಯ ಇದು. ಒತ್ತಡಗಳನ್ನು ಮೀರುತ್ತೀರಿ.
- ಜನ್ಮಸಂಖ್ಯೆ 9: ಎಲ್ಲದರ ಮೇಲೆ ಅಂಧ ನಂಬಿಕೆ, ವಿಶ್ವಾಸ ಇಡುವುದು ಸರಿಯಲ್ಲ. ಯಾವುದೇ ವ್ಯಕ್ತಿಗೂ ಮಿತಿಗಳಿರುತ್ತವೆ. ಅದನ್ನು ಅರಿತು ನೀವು ಅವರ ಮೇಲೆ ವಿಶ್ವಾಸ ಇಡಬೇಕೋ ಬೇಡವೋ ನಿರ್ಧರಿಸಿ. ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆಯ ಮಾತುಗಳನ್ನಾಡಿ. ನಾಲಗೆ ಹರಿಬಿಟ್ಟರೆ ಅವಮಾನದ ಪಾಲಾಗುತ್ತೀರಿ.
ಲೇಖನ- ಎನ್.ಕೆ.ಸ್ವಾತಿ
Published On - 6:05 am, Tue, 27 December 22




