Fish farming ಅರೆ ಮಲೆನಾಡು ಧಾರವಾಡದಲ್ಲಿಯೂ ಇದೆ ಮೀನುಗಾರರ ಸಹಕಾರ ಸಂಘ: ಆದರೆ…?

ಮುಗದ ಗ್ರಾಮದ ಕೆರೆ ಬಳಿ ಇರುವ ಭೋವಿ ಸಮುದಾಯದ ಬಹುತೇಕರು ಮೀನುಗಾರಿಕೆ ಮಾಡುತ್ತಿದ್ದಾರೆ. ತಾವೇ ಒಂದು ಸಹಕಾರಿ ಸಂಘವನ್ನು ರಚಿಸಿಕೊಂಡು ಆ ಮೂಲಕ ಮೀನು ಉತ್ಪಾದನೆ ಹಾಗೂ ಮಾರಾಟ ಸಹ ಮಾಡುತ್ತಿದ್ದಾರೆ. Fish farming

Fish farming ಅರೆ ಮಲೆನಾಡು ಧಾರವಾಡದಲ್ಲಿಯೂ ಇದೆ ಮೀನುಗಾರರ ಸಹಕಾರ ಸಂಘ: ಆದರೆ...?
ಮುಗದ ಗ್ರಾಮದ ಬಳಿ ಇರುವ ಕರೆ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Feb 11, 2021 | 11:02 AM

ಧಾರವಾಡ: ಅರೆ ಮಲೆನಾಡು ಜಿಲ್ಲೆಯಾದ ಧಾರವಾಡದಲ್ಲಿ ಯಾವುದೇ ನದಿ, ಸಮುದ್ರ ಹಾಗೂ ದೊಡ್ಡ ಮಟ್ಟದ ಜಲ ಸಂಪನ್ಮೂಲ ಇಲ್ಲದೇ ಇದ್ದರೂ ಕಳೆದ ಐದು ದಶಕಗಳಿಂದಲೂ ಒಂದು ಗ್ರಾಮದ ಜನಾಂಗ ತಮ್ಮೂರಿನ ಕೆರೆಯಲ್ಲಿ ಮೀನುಗಾರಿಕೆಯನ್ನೇ ಉದ್ಯೋಗ ಮಾಡಿಕೊಂಡಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳು, ಆಡಳಿತದ ನಿರ್ಲಕ್ಷ್ಯದಿಂದ ಈ ಮೀನಿಗೆ ಸಾಕಷ್ಟು ಬೇಡಿಕೆ ಇದ್ದರೂ ಸರಿಯಾದ ಸೌಲಭ್ಯಗಳಿಲ್ಲದ ಕಾರಣ, ಈ ಗ್ರಾಮದಲ್ಲಿಯ ಸಮುದಾಯವೊಂದು ಇನ್ನೂ ಬಡತನದಿಂದಲೇ ಜೀವನ ನಡೆಸುವಂತಾಗಿದೆ.

ಪುರುಷರು ಹಾಗೂ ಮಹಿಳೆಯರಿಂದ ಮೀನುಗಾರಿಕೆ: ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ದಶಕಗಳ ಹಿಂದೆ ಅಂದರೆ 1966 ರಲ್ಲಿಯೇ ಮೀನುಗಾರರ ಸಹಕಾರ ಸಂಘವನ್ನು ಆರಂಭಿಸಲಾಯಿತು. ಒಟ್ಟು 152 ಸದಸ್ಯರನ್ನು ಹೊಂದಿರುವ ಈ ಸಂಘ ಇಷ್ಟೊತ್ತಿಗೆ ದೊಡ್ಡ ಮಟ್ಟದ ಮೀನು ಉತ್ಪಾದನಾ ಸಂಘವಾಗಿ ಹೊರಹೊಮ್ಮಬೇಕಿತ್ತು. ಆದರೆ ಸರ್ಕಾರದ ಸೌಲಭ್ಯಗಳು, ಪ್ರೋತ್ಸಾಹ ನಿರೀಕ್ಷಿತ ಮಟ್ಟದಲ್ಲಿ ಸಿಗದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲು ಸಾಧ್ಯವಾಗಲೇ ಇಲ್ಲ.

ಗ್ರಾಮದಲ್ಲಿ ಕೆರೆ ಬಳಿ ಇರುವ ಭೋವಿ ಸಮುದಾಯದ ಬಹುತೇಕರು ಮೀನುಗಾರಿಕೆ (Fish farming) ಮಾಡುತ್ತಿದ್ದಾರೆ. ತಾವೇ ಒಂದು ಸಹಕಾರಿ ಸಂಘವನ್ನು ರಚಿಸಿಕೊಂಡು ಆ ಮೂಲಕ ಮೀನು ಉತ್ಪಾದನೆ ಹಾಗೂ ಮಾರಾಟ ಸಹ ಮಾಡುತ್ತಿದ್ದಾರೆ. ಪುರುಷರು ಕೆರೆಗೆ ಹೋಗಿ ಮೀನು ಹಿಡಿದು ತಂದರೆ, ಮಹಿಳೆಯರು ಮೀನನ್ನು ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುವ ಮೂಲಕ ತಮ್ಮ ಜೀವನ ನಡೆಸುತ್ತಿದ್ದಾರೆ. ಈ ಜನಾಂಗಕ್ಕೆ ಮೀನುಗಾರಿಕೆ ಉತ್ತಮ ಉದ್ಯೋಗ ಹೌದು. ಆದರೆ, ಅತಿಯಾದ ಮಳೆಯಾದಾಗ, ಮಳೆಯೇ ಆಗದೇ ಇದ್ದಾಗ ಮೀನು ಉತ್ಪಾದನೆ ಆಗದೇ ತೀವ್ರವಾಗಿ ಇಲ್ಲಿನ ಜನಾಂಗ ಪರದಾಡುವಂತಾಗಿದೆ.

fisherman dharwad

ಮೀನುಗಳು

ಪ್ರತಿವರ್ಷ 2 ಲಕ್ಷ ಮೀನು ಮರಿ: ಸಿಹಿ ನೀರಿನಲ್ಲಿ ಬೆಳೆಯುವ ಕಾಟ್ಲಾ, ಮೃಗಾಲ, ಕನಡಿ, ರೋಹೂ ಅಂತಹ ಮೀನುಗಳನ್ನು ಈ ಕೆರೆಯಲ್ಲಿ ಬಿಡಲಾಗಿದೆ. ಪ್ರತಿ ವರ್ಷ 2 ಲಕ್ಷ ಮೀನು ಮರಿಗಳನ್ನು ಬಿಡುವ ಸಂಘದ ಸದಸ್ಯರು ನಾಲ್ಕೈದು ದಿನಗಳಿಗೊಮ್ಮೆ ಮೀನು ಹಿಡಿದು ತಮ್ಮ ಜೀವನದ ಬಂಡಿ ದೂಡುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅತಿಯಾದ ಮಳೆಯಿಂದ ಮೀನು ಸಿಗದೇ ಪರದಾಡಿದ್ದಾರೆ.

ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಲು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು, ಮೀನು ಮಾರಾಟದಿಂದ ಬಂದ ಶೇ. 75 ರಷ್ಟು ಆದಾಯವನ್ನು ಮೀನು ಹಿಡಿದವರಿಗೆ ನೀಡಲಾಗುತ್ತದೆ. ಉಳಿದ ಶೇ. 25 ರಷ್ಟು ಆದಾಯವನ್ನು ಸಂಘದ ಚಟುವಟಿಕೆಗೆ ಬಳಸಲಾಗುತ್ತಿದೆ. ಸರ್ಕಾರದಿಂದ ಹೆಚ್ಚಿನ ಸೌಲಭ್ಯ ನೀಡಿದರೆ ಸಂಘವನ್ನು ಮಾದರಿ ಸಂಘವನ್ನಾಗಿ ಮಾಡಬಹುದು ಎನ್ನುವುದು ಹಿರಿಯ ಸದಸ್ಯರ ಅಭಿಪ್ರಾಯ.

fisherman dharwad

ಮುಗದ ಗ್ರಾಮದ ಚಿತ್ರಣ

ಯಾರೂ ತಮ್ಮತ್ತ ನೋಡುತ್ತಲೇ ಇಲ್ಲ ಎನ್ನುವ ಕೊರಗು: ಈ ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಪಡೆದು 2017 ರಲ್ಲಿ ಮೀನುಗಾರಿಕೆ ಖಾತೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದು, ಬಿಟ್ಟರೆ ಮತ್ಯಾರೂ ಇತ್ತ ತಲೆಯನ್ನೇ ಹಾಕಿಲ್ಲ. ಇದುವರೆಗೂ ಸಂಘಕ್ಕೆ ಹೇಳಿಕೊಳ್ಳುವಂತಹ ಯಾವುದೇ ಅನುಕೂಲತೆಗಳು ಆಗಿಲ್ಲ. ಮೀನುಗಾರಿಕೆ ಇಲಾಖೆ ಪ್ರತಿ ಬಾರಿ ಬಲೆಗಳನ್ನು ನೀಡುವುದನ್ನು ಬಿಟ್ಟರೆ ಮತ್ತಾವ ಪ್ರೋತ್ಸಾಹವನ್ನೂ ನೀಡಿಲ್ಲ ಎಂಬ ಕೊರಗು ಸಂಘದ ಸದಸ್ಯರದ್ದು.

ಸಂಘದ ಸದಸ್ಯರ ಮನೆಗಳಿಗೆ 1.20 ಲಕ್ಷ ರೂಪಾಯಿ ನೀಡಲಾಗಿದೆಯಾದರೂ, ಮನೆ ನಿರ್ಮಿಸಿಕೊಳ್ಳಲು ಆ ಮೊತ್ತ ಸಾಲದಾಗಿದೆ. ಹೀಗಾಗಿ ಮೂರು ವರ್ಷಗಳಾದರೂ ಹಲವು ಮನೆಗಳು ಪೂರ್ಣಗೊಂಡಿಲ್ಲ. ಇನ್ನು, ಮೀನು ಮಾರಾಟಕ್ಕೆ ವಾಹನ, ಉತ್ತಮ ಬೋಟ್‌ನ ಅಗತ್ಯತೆ ಇದೆ. ಅವುಗಳನ್ನಾದರೂ ಒದಗಿಸಿದರೆ ಕೊಂಚ ನೆಮ್ಮದಿಯಿಂದ ಬದುಕು ನಡೆಸಬಹುದು ಎನ್ನುತ್ತಾರೆ ಸದಸ್ಯರು.

ನಮಗೆ ಯಾರಿಂದಲೂ ಪ್ರೋತ್ಸಾಹವೇ ಇಲ್ಲವಾಗಿದೆ: ಜಿಲ್ಲೆಯಲ್ಲಿ ಮೀನುಗಾರಿಕೆ ಮಾಡುತ್ತಿರುವ ಅತೀ ಹಳೆಯ ಸಂಘ ನಮ್ಮದು. ಸದಸ್ಯರು ಮೀನುಗಾರಿಕೆಗೆ ಸಾಕಷ್ಟು ಉತ್ಸುಕರಿದ್ದರೂ ಜನಪ್ರತಿನಿಧಿಗಳು ಹಾಗೂ ಸರ್ಕಾರದಿಂದ ತಮಗೆ ಪ್ರೋತ್ಸಾಹವೇ ಇಲ್ಲವಾಗಿದೆ. ಮೀನು ಮರಿ ತರಲು ದೂರದ ಹೊಸಪೇಟೆಗೆ ಹೋಗಬೇಕು. ಕೆರೆಯ ಬಳಿಯೇ ಮೀನು ಮರಿ ಉತ್ಪಾದನಾ ಕೇಂದ್ರ (Pisciculture) ಮಾಡುವುದು, ಮೀನು ಮಾರಾಟಕ್ಕೆ ವಾಹನ ಸೇರಿದಂತೆ ಸದಸ್ಯರಿಗೆ ಇನ್ನಿತರೆ ಸೌಲಭ್ಯಗಳನ್ನು ನೀಡಿದರೆ ಸಂಘ ಅತಿ ಹೆಚ್ಚು ಮೀನು ಉತ್ಪಾದನೆಯಲ್ಲಿ ತೊಡಗಬಹುದು ಎಂದು ಮೀನುಗಾರರ ಸಂಘದ ಕಾರ್ಯದರ್ಶಿ ಶಿವರಾಯಪ್ಪ ಕುಂಬಾರ ಹೇಳಿದ್ದಾರೆ.

ಒಟ್ಟಾರೆ ಐದು ದಶಕಗಳಿಂದ ನಿರಂತರವಾಗಿ ಮೀನುಗಾರಿಕೆ ಸಂಘ ನಡೆಸಿಕೊಂಡು ಬಂದಿದ್ದು, 150 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಹ ದೊರಕಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಸಂಘದ ಚಟುವಟಿಕೆಗೆ ಪ್ರೋತ್ಸಾಹ ನೀಡಿದರೆ ಇದೊಂದು ಮಾದರಿ ಸಂಘ ಆಗುವುದರಲ್ಲಿ ಎರಡು ಮಾತಿಲ್ಲ.

ಕಂದು ಮೀನು ಗೂಬೆ, ನಕ್ಷತ್ರ ಆಮೆ ಮಾರಲು ಯತ್ನಿಸಿದ ಕಿರಾತಕರು ಅಂದರ್​