ಕಬ್ಬು ಬೆಳೆಗಾರರಿಗೆ 202 ಕೋಟಿ ರೂ. ಉಪ ಉತ್ಪನ್ನದ ಲಾಭಾಂಶ: ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಸ್ಪಷ್ಟನೆ
ಸಕ್ಕರೆ ಇಲಾಖೆ ಸಚಿವ ಶಂಕರ ಪಾಟೀಲ್ ಮಾತನಾಡಿ ಕಬ್ಬು ಬೆಳೆಗಾರರಿಗೆ ಸಂತೋಷದ ಸುದ್ದಿ ಕೊಟ್ಟಿದ್ದಾರೆ. ಕಬ್ಬಿನ 202 ಕೋಟಿ ರೂ ಉಪ ಉತ್ಪನ್ನದ ಲಾಭಾಂಶವನ್ನು ಕಬ್ಬು ಬೆಳೆಗಾರರಿಗೆ ಕೊಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಬೆಂಗಳೂರು: ಕಬ್ಬಿನ 202 ಕೋಟಿ ರೂ. ಉಪ ಉತ್ಪನ್ನದ ಲಾಭಾಂಶವನ್ನು ಕಬ್ಬು ಬೆಳೆಗಾರರಿಗೆ ಕೊಡಲು ನಿರ್ಧರಿಸಿದ್ದೇವೆ. ರೈತರಿಗೆ 19,624 ಕೋಟಿ ರೂ. ಬಾಕಿ ಹಣ ನೀಡಿದ್ದೇವೆ. ಯಾವುದೇ ಒಂದು ರೂಪಾಯಿ ಹಣ ಬಾಕಿ ಉಳಿಸಿಕೊಂಡಿಲ್ಲ. ಬಿಎಸ್ಎಸ್ ಸ್ಕೇಲ್ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳುತ್ತಿದ್ದು, ಬಿಜೆಪಿ ಹೊಸ ಬದಲಾವಣೆ ತರುವ ಕೆಲಸ ಮಾಡುತ್ತಿದೆ ಎಂದು ಸಕ್ಕರೆ ಇಲಾಖೆ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
ಇಂದು(ಡೆಸೆಂಬರ್ 12) ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷದಲ್ಲಿ ರೈತರ ಯಾವುದೇ ಬಾಕಿ ಉಳಿಸಿಕೊಳ್ಳದೇ ಎಲ್ಲ ಹಣವನ್ನ ರೈತರಿಗೆ ಕೊಟ್ಟಿದ್ದೇವೆ. ಈ ಹಿಂದೆ ಬ್ಯಾಲೆನ್ಸ್ ಕೊಡಬೇಕು ಎಂದು ರೈತರು ಹೋರಾಟ ಮಾಡುತ್ತಿದ್ದರು. ಆದರೆ ನಾವು ಕಳೆದ 2 ವರ್ಷಗಳಿಂದ ಯಾವುದೇ ಬ್ಯಾಲೆನ್ಸ್ ಇಟ್ಟಿಕೊಳ್ಳದೇ ಕೊಟ್ಟಿದ್ದೇವೆ. ಸಕ್ಕರೆ ಕಾರ್ಖಾನೆಗಳು ಬಹುತೇಕ ಬಂದ್ ಆಗಿದ್ದು, ಈಗ ಅವರೇ ಮತ್ತೆ ರೀ ಓಪನ್ ಮಾಡುತ್ತೇವೆ ಎಂದು ಮುಂದೆ ಬಂದಿದ್ದಾರೆ ಎಂದರು ಹೇಳಿದರು.
ಉಪ ಉತ್ಪನ್ನದಲ್ಲಿ ಲಾಭಾಂಶ ಕೊಡಬೇಕು ಎಂದು ಚಿಂತನೆ ಮಾಡುತ್ತಿದ್ದೇವೆ. ಸರ್ಕಾರದ ನಿರ್ಣಯಕ್ಕೆ ನಾವೂ ಕೂಡ ಸ್ಪಂದಿಸುತ್ತೇವೆ ಎಂದು ಖಾಸಗಿ ಶುಗರ್ ಫ್ಯಾಕ್ಟರಿ ಮಾಲೀಕರು ಹೇಳಿದ್ದಾರೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿದ್ದವು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾರ್ಖಾನೆಗಳು ಲಾಭದಲ್ಲಿ ಇವೆ. ರೈತರಿಗೂ ಯಾವುದೇ ಬಾಕಿಯನ್ನು ಕಾರ್ಖಾನೆಗಳು ಉಳಿಸಿಕೊಂಡಿಲ್ಲ. ಹಿಂದೆಲ್ಲ ಬಾಕಿ ಪಾವತಿಗೆ ಪ್ರತಿಭಟನೆಗಳು ನಡೀತಿದ್ದವು, ಇದೀಗ 44 ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನ ಇಥೆನಾಲ್ ತಯಾರಿಸಲು ಮುಂದೆ ಬಂದಿವೆ ಎಂದಿದ್ದಾರೆ.
ನಮ್ಮ ಸರ್ಕಾರ ರೈತರ ಪರ ಇದೆ. ಕಬ್ಬು ಸಾಗಾಣಿಕೆ ವೆಚ್ಚ ಮತ್ತು ತೂಕದಲ್ಲಿ ಏರುಪೇರು ಗೊಂದಲ ನಿವಾರಣೆಗೆ ಸಮಿತಿ ಮಾಡಿದ್ದೇವೆ. ಸಮಿತಿ ವರದಿ ಬಂದ ಬಳಿಕ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ 6.22 ಲಕ್ಷ ಮೆಟ್ರಿಕ್ ಟನ್ ಕಬ್ಬು ಕ್ರಷಿಂಗ್ ಮಾಡಿದ್ದು, ಈ ವರ್ಷ ಇನ್ನೂ ಹೆಚ್ಚಿನ ಕಬ್ಬು ಕ್ರಷಿಂಗ್ ಮಾಡುವ ನಿರೀಕ್ಷೆ ಹೊಂದಿದ್ದೇವೆ. ಪ್ರತೀ ಟನ್ ಗೆ 50 ರೂ ನಂತೆ ಲಾಂಭಾಂಶ ನೀಡುತಿದ್ದು, ಪ್ರಥಮ ಕಂತಿನಲ್ಲಿಯೇ ರೈತರಿಗೆ 202 ಕೋಟಿ ರೂ. ಲಾಭಾಂಶ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:Sugercane Crop: ಕಬ್ಬು ಬೆಳೆಗಾರರಿಗೆ ಬಂಪರ್ ಗಿಫ್ಟ್: ರಾಜ್ಯ ಸರ್ಕಾರಿಂದ 204.47 ಕೋಟಿ ರೂ ಬಿಡುಗಡೆ
ಇನ್ನು ಇದೇ ಸಂದರ್ಭದಲ್ಲಿ ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಮೀಸಲಾತಿ ಬಗ್ಗೆ ನಾನು ಮಾತಾಡಲ್ಲ.ಪಂಚಮಸಾಲಿ ಹೋರಾಟದಲ್ಲಿ ಸ್ವಾಮಿಜಿಗಳು ಪರಸ್ಪರ ಹೇಳಿಕೆ ನೀಡದಂತೆ ಮನವಿ ಮಾಡಿದ್ದೇವೆ. ಬಹಳ ವರ್ಷಗಳಿಂದ ಈ ಸಮಸ್ಯೆ ಇದ್ದು, ಸರ್ಕಾರ ಸಮಸ್ಯೆಯನ್ನ ಬಗೆಹರಿಸುತ್ತದೆ. ಸ್ವಾಮೀಜಿಗಳ ಬಗ್ಗೆ ಯಾರು ಹೇಳಿಕೆ ಕೊಡುವುದು ಬೇಡ ಎಂದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Mon, 12 December 22