
ಬೆಂಗಳೂರು, ಆಗಸ್ಟ್ 22: ಸರ್ಕಾರದ 6ನೇ ಗ್ಯಾರಂಟಿ ‘ಭೂ ಗ್ಯಾರಂಟಿ’ (guarantee Property) ಅಡಿಯಲ್ಲಿ ನನ್ನ ಖಾತಾ ನನ್ನ ಹಕ್ಕು ಯೋಜನೆಯನ್ನು ಜನರಿಗೆ ನೀಡಲಾಗಿತ್ತು. ಆದರೆ ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತಿಸಿಕೊಳ್ಳಲು ಜಿಬಿಎ ನೀಡಿದ್ದ ಗಡುವು ಮುಕ್ತಾಯದ ಹಂತಕ್ಕೆ ಬಂದಿದೆ. ಅಧಿಕಾರಿಗಳ ಬೇಜವಾಬ್ದಾರಿ ಮತ್ತು ತಾಂತ್ರಿಕ ಎಡವಟ್ಟುಗಳಿಂದಾಗಿ ಲಕ್ಷಾಂತರ ಆಸ್ತಿ ಮಾಲೀಕರು ‘ಎ-ಖಾತೆ’ ಸೌಲಭ್ಯದಿಂದ ವಂಚಿತರಾಗುವ ಭೀತಿ ಎದುರಾಗಿದೆ. ನಗರದಲ್ಲಿ ಲಕ್ಷಾಂತರ ಬಿ-ಖಾತೆ ಆಸ್ತಿಗಳಿದ್ದರೂ, ಅರ್ಜಿ ಸಲ್ಲಿಕೆಗೆ ನೀಡಿರುವ ಕಾಲಾವಕಾಶ ಮಾತ್ರ ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಸಿಲಿಕಾನ್ ಸಿಟಿಯ ನಿವಾಸಿಗಳಿಗೆ ‘ಎ’ ಖಾತೆ ನೀಡಲು ಸರ್ಕಾರ ಆರಂಭಿಸಿದ ಯೋಜನೆ ಈಗ ಅಧಿಕಾರಿಗಳ ಕಳ್ಳಾಟ ಹಾಗೂ ನಿರ್ಲಕ್ಷ್ಯಕ್ಕೆ ಸಿಲುಕಿದೆ. 2026ರ ಮೇ 16ರಂದು ಅದ್ಧೂರಿಯಾಗಿ ಚಾಲನೆ ಪಡೆದ ಈ ಯೋಜನೆಗೆ ಸಾರ್ವಜನಿಕರಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ನಗರದಲ್ಲಿ ಇಲ್ಲಿಯವರೆಗೆ ಸುಮಾರು 66 ಸಾವಿರ ಜನರು ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತಿಸಲು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದರಲ್ಲಿ ಎ ಖಾತೆ ಸಿಕ್ಕಿರೋದು ಕೇವಲ 25 ಸಾವಿರ ಜನರಿಗೆ ಮಾತ್ರ. ಇನ್ನುಳಿದ ಬೃಹತ್ ಸಂಖ್ಯೆಯ 41 ಸಾವಿರ ಅರ್ಜಿಗಳು ಅಧಿಕಾರಿಗಳ ಟೇಬಲ್ ಮೇಲೆ ಪೆಂಡಿಂಗ್ ಬಿದ್ದಿವೆ. ಆರಂಭದಲ್ಲಿ ಈ ಯೋಜನೆಗೆ ಮಾರ್ಗಸೂಚಿ ಮೌಲ್ಯದ 5% ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ತನ್ನ ನಿರ್ಧಾರ ಬದಲಿಸಿ ಶುಲ್ಕವನ್ನು 5% ರಿಂದ 2% ಗೆ ಇಳಿಕೆ ಮಾಡಿತ್ತು. ಶುಲ್ಕ ಕಡಿತಗೊಳ್ಳುತ್ತಿದ್ದಂತೆಯೇ ಏಕಾಏಕಿ ಅರ್ಜಿಗಳ ಸಂಖ್ಯೆ ಕೂಡ ಏರಿಕೆಯಾಯಿತು.
ಇದನ್ನೂ ಓದಿ: 6ನೇ ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್, ಬೆಂಗಳೂರಿಗರಿಗೆ ಬಂಪರ್ ಗಿಫ್ಟ್!
ಮಾರ್ಗಸೂಚಿ ಮೌಲ್ಯದ ಶೇಕಡ 2ರಷ್ಟು ಶುಲ್ಕ ವಿಧಿಸಿ ಬಿ-ಖಾತೆಯನ್ನು ಎ-ಖಾತೆಗೆ ಬದಲಾಯಿಸಿಕೊಳ್ಳಬಹುದು ಎಂದು ಜಿಬಿಎ ಭರವಸೆ ನೀಡಿತ್ತು. ಕಳೆದ ಮೂರು ತಿಂಗಳಿನಿಂದ ಈ ಯೋಜನೆ ಜಾರಿಯಲ್ಲಿದ್ದರೂ, ಅಧಿಕಾರಿಗಳ ಕಳಪೆ ಯೋಜನಾ ಸಂಘಟನೆಯಿಂದಾಗಿ ಯೋಜನೆಯ ಲಾಭ ಹೆಚ್ಚಿನ ಜನರಿಗೆ ತಲುಪಿಲ್ಲ. ನಗರದಲ್ಲಿ ವಿವಿಧ ವಲಯಗಳಲ್ಲಿ ಲಕ್ಷಾಂತರ ಬಿ-ಖಾತೆ ಆಸ್ತಿಗಳಿದ್ದರೂ, ಈವರೆಗೆ ಸಲ್ಲಿಕೆಯಾಗಿರುವುದು ಕೇವಲ 66 ಸಾವಿರ ಅರ್ಜಿಗಳು ಮಾತ್ರ, ಅದರಲ್ಲಿಯೂ ವಿಲೇವಾರಿಯಾಗಿರುವುದು ಕೇವಲ 25 ಸಾವಿರ ಅರ್ಜಿಗಳು ಎಂದರೆ ಅಧಿಕಾರಿಗಳ ಆಮೆನಡಿಗೆಯ ಕಾರ್ಯವೈಖರಿ ಎಷ್ಟರ ಮಟ್ಟಿಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇನ್ನು ಅರ್ಜಿ ಸಲ್ಲಿಕೆಗೆ ಆಗಸ್ಟ್ 23 ಕೊನೆಯ ದಿನವಾಗಿದೆ.
ಮೂಲಸೌಕರ್ಯಗಳ ಕೊರತೆ ಮತ್ತು ವೆಬ್‌ಸೈಟ್ ಸರ್ವರ್ ಡೌನ್ ಸಮಸ್ಯೆಯಿಂದ ಸಾವಿರಾರು ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಲು ಹೆಣಗಾಡುತ್ತಿದ್ದಾರೆ. ಮಾರ್ಗಸೂಚಿ ಮೌಲ್ಯದ ಶೇ. 2ರಷ್ಟು ಶುಲ್ಕ ಸಂಗ್ರಹಿಸಿ ಖಜಾನೆ ತುಂಬಿಸಿಕೊಳ್ಳಲು ಮುಂದಾಗಿರುವ ಆಡಳಿತ ವ್ಯವಸ್ಥೆ, ಸಾರ್ವಜನಿಕರಿಗೆ ಸೂಕ್ತ ಕಾಲಾವಕಾಶ ಹಾಗೂ ತಾಂತ್ರಿಕ ನೆರವು ನೀಡಲು ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅರ್ಜಿ ವಿಲೇವಾರಿಯನ್ನೂ ಪೂರ್ಣಗೊಳಿಸದೆ, ಸರ್ವರ್ ಸಮಸ್ಯೆಯನ್ನೂ ಬಗೆಹರಿಸದೆ ಗಡುವು ಮುಗಿಯಿತು ಎಂದು ಕೈತೊಳೆದುಕೊಳ್ಳಲು ಮುಂದಾಗಿರುವ ಅಧಿಕಾರಿಗಳ ಧೋರಣೆಗೆ ಆಸ್ತಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸಿ, ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.