ಬಾಗಲಕೋಟೆ: ಮತ್ತೆ ಶುರುವಾಯ್ತು ಚಾಲುಕ್ಯ, ರನ್ನ ಉತ್ಸವದ ಕೂಗು
ಉತ್ತರಭಾರತದವರೆಗೂ ಪರಾಕ್ರಮ ಮೆರೆದು ಘರ್ಜಿಸಿದ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿ ನಾಡು ಬಾಗಲಕೋಟೆ. ಇನ್ನೊಂದು ಕಡೆ ಗದಾಯುದ್ಧ ಬರೆದ ಮಹಾಕವಿ ರನ್ನ ಹುಟ್ಟಿದ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಬರುವಷ್ಟರಲ್ಲಿ ಚಾಲುಕ್ಯ, ರನ್ನ ಉತ್ಸವ ಮಾಡಿ ಎಂಬ ಕೂಗು ಪುನಃ ಶುರುವಾಗಿದೆ.

ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ ಶುರುವಾಗಿದೆ ಚಾಲುಕ್ಯ ರನ್ನ ಉತ್ಸವದ ಕೂಗು, ಐಹೊಳೆ, ಪಟ್ಟದಕಲ್ಲು, ಮಹಾಕೂಟಕ್ಕೆ ಕಾಲಿಟ್ಟರೆ ಚಾಲುಕ್ಯರ ಕುರುಹುಗಳು ಕಣ್ಮನ ಸೆಳೆಯುತ್ತವೆ. ದೇಗುಲಗಳ ದರ್ಶನ ಮನಸ್ಸಿಗೆ ಮುದ ನೀಡುತ್ತದೆ. ಚಾಲುಕ್ಯರ ಗತಕಾಲದ ವೈಭವ ಕಣ್ಣಿಗೆ ರಾಚುತ್ತದೆ. ಇನ್ನು ಗದಾಯುದ್ಧ ಕವಿ ರನ್ನ ಕೂಡ ಹುಟ್ಟಿದ್ದು ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಗ್ರಾಮದಲ್ಲಿ. ಈ ಇಬ್ಬರು ಮಹಾನ್ ವ್ಯಕ್ತಿಗಳ ನೆನಪಿಗಾಗಿ ನಡೆಯುತ್ತಿದ್ದ ಚಾಲುಕ್ಯ ಉತ್ಸವ, ರನ್ನ ಉತ್ಸವ ಕಳೆದ ಏಳು ವರ್ಷದಿಂದ ನಡೆದಿಲ್ಲ. ಇದರಿಂದ ಮಹಾನ್ ಪುರುಷರ ಸ್ಮರಣೆಯನ್ನು ಮರೆಮಾಚುವಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ಎರಡು ವರ್ಷ ಕೋವಿಡ್ ಜೊತೆಗೆ ಅನುದಾನದ ಕೊರತೆ ಎಂದು ಕಾರಣ ನೀಡಿ ಜಿಲ್ಲೆಯ ಜನರ ಬೇಡಿಕೆಯನ್ನ ತಳ್ಳಿ ಹಾಕಿದ್ದರು. ಆದರೆ ಈ ವರ್ಷ ಇದರ ಸುದ್ದಿಯೇ ಇಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟಿಲ್ ಇದರ ಕಡೆ ಗಮನಹರಿಸುತ್ತಿಲ್ಲ. ತಮ್ಮ ತವರು ಜಿಲ್ಲೆಯಲ್ಲಿ ಲಕ್ಕುಂಡಿ ಉತ್ಸವ ಮಾಡಿದ ಸಿಸಿ ಪಾಟಿಲ್, ಬಾಗಲಕೋಟೆ ಜಿಲ್ಲೆಯಲ್ಲಿ ಚಾಲುಕ್ಯ ಹಾಗೂ ರನ್ನ ಉತ್ಸವದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರವಿದ್ದಾಗ ಉತ್ಸವ ಮಾಡಲಾಗಿತ್ತು ಬಿಜೆಪಿ ಬಂದ ಮೇಲೆ ಉತ್ಸವಕ್ಕೆ ಬರ ಬಿದ್ದಿದ್ದು, ಚುನಾವಣಾ ನೀತಿ ಸಂಹಿತೆಗೂ ಮುನ್ನ ಬಾಗಲಕೋಟೆ ಜಿಲ್ಲೆಯಲ್ಲಿ ಚಾಲುಕ್ಯ ರನ್ನ ಉತ್ಸವ ಮಾಡಿ ಅಂತಿದ್ದಾರೆ ಕೈ ನಾಯಕರು.
ಜಿಲ್ಲೆಯಲ್ಲಿ ಈ ಉತ್ಸವ ಕೊನೆಗೆ ನಡೆದದ್ದು 2015 ರಲ್ಲಿ ಅಂದು ನಡೆದ ಉತ್ಸವಗಳನ್ನು ಮುಂದೆ ಮೂರು ವರ್ಷ ಬರಗಾಲದ ನೆಪ ನೀಡಿ ಮುಂದುವರೆಸಲಾಗಿತ್ತು. ನಂತರ ಕೋವಿಡ್ ಕಾರಣ ನೀಡಿ ಉತ್ಸವ ಮಾಡಿಲ್ಲ. ಜೊತೆಗೆ ಅನುದಾನದ ಕೊರತೆ ಅಂತಾನೂ ಕಾರಣ ನೀಡಿದ್ದರು. ಈ ಬಗ್ಗೆ ಪ್ರತಿ ವರ್ಷ ಸ್ಥಳೀಯರು ಮನವಿ ಮಾಡುತ್ತಾ ಬಂದರೂ ಉತ್ಸವ ಆಚರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಚಾಶಕ್ತಿ ತೋರಿಸುತ್ತಿಲ್ಲ. ಜಿಲ್ಲೆಯ ಚಾಲುಕ್ಯ ರನ್ನ ಉತ್ಸವಕ್ಕೆ ಮಾತ್ರ ಸಾಂಸ್ಕೃತಿಕ ಬರ ಬಿದ್ದಿದೆ. ಉತ್ಸವದಿಂದ ನಮ್ಮ ಇತಿಹಾಸದ ಮಹತ್ವ ಮುಂದಿನ ಪೀಳಿಗೆಗೆ ತಿಳಿಸಿದಂತಾಗುತ್ತದೆ. ಚಾಲುಕ್ಯ, ರನ್ನ ಉತ್ಸವ ಮಾಡುವ ಮೂಲಕ ಮಹಾನ್ ನಾಯಕರಿಗೆ ಗೌರವ ಸಲ್ಲಿಸಬೇಕು. ಉತ್ಸವದಿಂದ ಸಾಕಷ್ಟು ಕಲಾವಿದರಿಗೆ ಸಾಹಿತಿಗಳಿಗೆ ವೇದಿಕೆಯಾಗುತ್ತದೆ. ಕಲಾವಿದರಿಗೆ ಉತ್ಸವಗಳು ಆಸರೆಯಾಗಲಿವೆ. ಇನ್ನು ಈ ಬಗ್ಗೆ ಮಾತಾಡಿದ ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ ಚಾಲುಕ್ಯ ರನ್ನ ಉತ್ಸವ ಮಾಡುತ್ತೇವೆ. ಈ ಬಗ್ಗೆ ಉಸ್ತುವಾರಿ ಸಚಿವರು, ಅಧಿಕಾರಿಗಳ ಜೊತೆ ಚರ್ಚಿಸಿ ಈ ವರ್ಷ ನಿಶ್ಚಿತವಾಗಿ ಚಾಲುಕ್ಯ ಹಾಗೂ ರನ್ನ ಉತ್ಸವ ಮಾಡೋದಾಗಿ ಹೇಳಿದರು.
ಇದನ್ನೂ ಓದಿ:Hampi Utsava 2023: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಏಳು ವರ್ಷ ವಿವಿಧ ಕಾರಣ ನೀಡಿ ಮುಂದೆ ಸಾಗಿದ ಚಾಲುಕ್ಯ , ರನ್ನ ಉತ್ಸವ ಈ ಬಾರಿ ನಡೆಯಬೇಕೆಂಬ ಕೂಗು ಶುರುವಾಗಿದೆ. ಸಂಸದರು ಉತ್ಸವ ನಡೆಸುವ ಬಗ್ಗೆ ತಕ್ಕಮಟ್ಟಿಗೆ ಭರವಸೆ ನೀಡಿದ್ದು ಇದು ಎಷ್ಟರಮಟ್ಟಿಗೆ ಈಡೇರುತ್ತೊ ಎಂದು ಕಾದು ನೋಡಬೇಕಿದೆ.
ವರದಿ: ರವಿ ಮೂಕಿ ಟಿವಿ9 ಬಾಗಲಕೋಟೆ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




