ಸೆಂಚುರಿ ಬಾರಿಸಿದ ಬಿಳಿಜೋಳ: ಉತ್ತರ ಕರ್ನಾಟಕದ ರೊಟ್ಟಿ ಇನ್ಮುಂದೆ ತುಟ್ಟಿ
ಉತ್ತರ ಕರ್ನಾಟಕದಲ್ಲಿ ಜೋಳದ ಬೆಲೆ ಕೆಜಿಗೆ 100 ರೂ ಗಡಿ ದಾಟಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದುಬಾರಿ ಎನ್ನಲಾಗುತ್ತಿದೆ. ಇದರಿಂದ ರೈತರಿಗೆ ಬಂಪರ್ ಲಾಭವಾದರೂ, ರೊಟ್ಟಿ ಪ್ರಿಯರು ಮತ್ತು ಖಾನಾವಳಿ ಮಾಲೀಕರಿಗೆ ದರ ಏರಿಕೆ ಬಿಸಿ ತಟ್ಟಿದೆ. ಮಾರುಕಟ್ಟೆಯಲ್ಲಿ ಜೋಳದ ಕೊರತೆ ಎದುರಾಗಿದೆ.

ಮುಖ್ಯಾಂಶಗಳು
- ಕೆಜಿಗೆ 100 ರೂ ಗಡಿ ದಾಟಿದ ಜೋಳದ ಬೆಲೆ
- ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದುಬಾರಿ
- ರೈತರು ಕಬ್ಬು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳತ್ತ ಮುಖ
ಬಾಗಲಕೋಟೆ, ನವೆಂಬರ್ 18: ಉತ್ತರ ಕರ್ನಾಟಕದ ಜನರ ನೆಚ್ಚಿನ ಆಹಾರವಾದ ಜೋಳದ ರೊಟ್ಟಿಗೆ ಇದೀಗ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಶುರುವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬಿಳಿಜೋಳದ ಬೆಲೆ ಕೆಜಿಗೆ 100 ರೂ ಗಡಿ ದಾಟಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 100ರಿಂದ 110 ರೂಪಾಯಿವರೆಗೆ ಮಾರಾಟವಾಗುತ್ತಿದೆ. ರೈತರು ಬೆಳೆದ ಜೋಳಕ್ಕೆ ಬಂಪರ್ ಬೆಲೆ ಸಿಕ್ಕಿದ್ದರೂ, ಗ್ರಾಹಕರು ಮಾತ್ರ ದುಬಾರಿ ದರದಿಂದ ಶಾಕ್ ಆಗಿದ್ದಾರೆ.
ಕ್ವಿಂಟಲ್‌ಗೆ 10 ಸಾವಿರ ರೂ ದಾಟಿದ ಬೆಲೆ
ಕಳೆದ ದಿನಗಳಲ್ಲಿ ಪ್ರತಿ ಕ್ವಿಂಟಲ್‌ಗೆ ಸುಮಾರು 5 ಸಾವಿರ ರೂ ಇದ್ದ ಜೋಳದ ಬೆಲೆ ಇದೀಗ ದ್ವಿಗುಣಗೊಂಡಿದೆ. ಪ್ರಸ್ತುತ ಕ್ವಿಂಟಲ್‌ಗೆ 10 ಸಾವಿರ ರೂ ದಾಟಿದ್ದು, ಕೆಜಿಗೆ 100ರಿಂದ 110 ರೂ. ವರೆಗೆ ತಲುಪಿದೆ. ಹಿಂದೆ ಕೆಜಿಗೆ 40ರಿಂದ 50 ರೂ, ಇದ್ದ ಜೋಳದ ಬೆಲೆ ಈಗ ದುಪ್ಪಟ್ಟಾಗಿರುವುದು ಮಾರುಕಟ್ಟೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಜೋಳದ ಬಿತ್ತನೆ ಪ್ರಮಾಣದಲ್ಲಿ ಭಾರೀ ಇಳಿಕೆ
ಬಾಗಲಕೋಟೆ ಜಿಲ್ಲೆಯಲ್ಲಿ ಈ ಹಿಂದೆ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆದರೆ ಇದೀಗ ಜೋಳದ ಬಿತ್ತನೆ ಪ್ರಮಾಣ 30ರಿಂದ 40 ಸಾವಿರ ಹೆಕ್ಟೇರ್‌ಗೆ ಸೀಮಿತವಾಗಿದೆ. ರೈತರು ಜೋಳದ ಬದಲಿಗೆ ಕಬ್ಬು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಬರಗಾಲದ ಪರಿಣಾಮವೂ ಜೋಳದ ಇಳುವರಿ ಮತ್ತು ಉತ್ಪಾದನೆಯ ಮೇಲೆ ಬೀರಿದೆ.
ಮಾರುಕಟ್ಟೆಯಲ್ಲಿ ಜೋಳದ ಖರೀದಿ ಪ್ರಮಾಣ ಇಳಿಕೆ
ಜೋಳದ ಬೆಲೆ ಹೆಚ್ಚಳದಿಂದಾಗಿ ಮಾರುಕಟ್ಟೆಯಲ್ಲಿ ಖರೀದಿಯೂ ಕಡಿಮೆಯಾಗಿದೆ. ಈ ಹಿಂದೆ ದಿನಕ್ಕೆ 2ರಿಂದ 3 ಕ್ವಿಂಟಲ್ ಜೋಳ ಮಾರಾಟವಾಗುತ್ತಿತ್ತು. ಆದರೆ ಈಗ ಗರಿಷ್ಠ ಒಂದು ಕ್ವಿಂಟಲ್ ಮಾತ್ರ ಮಾರಾಟವಾಗುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಮತ್ತೊಂದೆಡೆ, ಬಿತ್ತನೆ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಜೋಳ ಪೂರೈಕೆಯಾಗುತ್ತಿಲ್ಲ.
ರೊಟ್ಟಿ ಊಟದ ಬೆಲೆಯೂ ಹೆಚ್ಚಳ ಆತಂಕ
ಇನ್ನು ಜೋಳದ ಬೆಲೆ ಏರಿಕೆಯಿಂದ ಉತ್ತರ ಕರ್ನಾಟಕದ ಜನರ ನೆಚ್ಚಿನ ಜೋಳದ ರೊಟ್ಟಿ ಊಟದ ಬೆಲೆಯೂ ಹೆಚ್ಚಾಗುವ ಆತಂಕ ಎದುರಾಗಿದೆ. ಈಗಾಗಲೇ ಜೋಳ ಖರೀದಿಸಲು ಹೆಚ್ಚಿನ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರೊಟ್ಟಿ ಊಟದ ದರವನ್ನೂ ಜಾಸ್ತಿ ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ ಖಾನಾವಳಿ ಮಾಲೀಕರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Wed, 18 November 26




