Neutering dogs: ಬೌ ಬೌ ನಾಯಿಗಳದ್ದೆ ಸುದ್ದಿ! ಮಧ್ಯೆ, ಶ್ವಾನಗಳ ಸಂತಾನಹರಣ ಲೆಕ್ಕದಲ್ಲೂ ಬಳ್ಳಾರಿ ಮಹಾನಗರ ಪಾಲಿಕೆಯಿಂದ ನಡೆಯಿತಾ ಲಕ್ಷ ಲಕ್ಷ ಲೂಟಿ?
Dog castration: ಸಾವಿರಾರು ಬೀದಿ ನಾಯಿಗಳಿಗೆ ಸಂತಾನ ಶಸ್ತ್ರಚಿಕಿತ್ಸೆ ಮಾಡಿದರೂ ಅವುಗಳ ಅಟ್ಟಹಾಸ ನಿಂತಿಲ್ಲ. ಅಲ್ಲದೇ ನಾಯಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದವರಿಗೂ ಹಣ ಪಾವತಿ ಮಾಡಲಾಗಿಲ್ಲ. ಹೀಗಾಗಿ ಶ್ವಾನಗಳ ಸಂತಾನಹರಣದ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿ ಆಗಿದೆಯಾ? ಅನ್ನೋದು ಸದ್ಯದ ಪ್ರಶ್ನೆ
ಬಳ್ಳಾರಿ ಜನರು ಭಯಬೀತರಾಗಿದ್ದಾರೆ. ಮನೆಯಿಂದ ಆಚೆ ಬಂದ್ರೆ ಆ ದಂಡು ದಾಳಿ ಮಾಡಿಬಿಡುತ್ತೆ ಅಂತಾ ಆತಂಕಕ್ಕೆ ಒಳಗಾಗಿದ್ದಾರೆ. ಮನೆ ಮುಂದೆ ಮಲಗಿದ್ದರೂ, ಏರಿಯಾದಲ್ಲೇ ಓಡಾಡುತ್ತಿದ್ದರೂ ಅಟ್ಟಾಡಿಸಿ ದಾಳಿ (dog bite) ಮಾಡೋ ದಂಡು ದಾಳಿ ತಡೆಯಲು ಕೋಟಿಗಟ್ಟಲೇ ಖರ್ಚು ಮಾಡಿದರೂ ಉಪಯೋಗ ಇಲ್ಲದಾಗಿದೆ. ಆ ದಾಳಿಕೋರರ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ರಾ ಅನ್ನೋ ಅನುಮಾನ ಸಹ ಶುರುವಾಗಿದೆ. ಅಷ್ಟಕ್ಕೂ ಅದ್ಯಾವ ದಂಡಿನಿಂದ ನಡೆಯುತ್ತಿರುವ ದಾಳಿಯದು? ಯಾರಿಗಾಗಿ ಕೋಟಿಗಟ್ಟಲೇ ಖರ್ಚು ಮಾಡಲಾಗಿದೆ? ಈ ಕುರಿತಾದ ಒಂದು ವರದಿ ಓದಿ. ಕೈ,ಕಾಲು, ಮೈಗೆ ಹೀಗೆ ಎಲ್ಲೆಂದರಲ್ಲಿ ಅಲ್ಲಿ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿರುವ ಸ್ಥಳೀಯರು. ಗಾಯಾಳುಗಳ ವಿಚಾರಣೆ ಮಾಡ್ತಿರೋ ಅಧಿಕಾರಿಗಳು (ballari city corporation). ಬಿಕೋ ಅಂತಾ ಖಾಲಿ ಖಾಲಿಯಾಗಿರುವ ಗಲ್ಲಿಗಳು… ಯೆಸ್. ಒಂದೆಡೆ ಬಳ್ಳಾರಿಯಲ್ಲೀಗ ಬೀದಿನಾಯಿಗಳ ಅಟ್ಟಹಾಸಕ್ಕೆ ಜನರು ಭಯಬೀತರಾಗಿದ್ದಾರೆ. ಇನ್ನೊಂದೆಡೆ ಬೀದಿ ನಾಯಿಗಳ (dog) ಸಂತಾನಹರಣದ (neutering dogs) ಹೆಸರಿನಲ್ಲೆ ಲಕ್ಷ ಲಕ್ಷ ಹಣ ಲೂಟಿ ಮಾಡಿದ್ರಾ ಅನ್ನೋ ಅನುಮಾನ ಎದ್ದಿದೆ.
ಬಳ್ಳಾರಿಯಲ್ಲೀಗ ಬೌ ಬಾ ನಾಯಿಗಳದ್ದೆ ಸುದ್ದಿ. ನಗರದಲ್ಲಿ ಎರಡು ದಿನಗಳ ಹಿಂದೆ ಹುಚ್ಚುನಾಯಿಯೊಂದು ಕಂಡ ಕಂಡವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಬೀದಿನಾಯಿಗಳ ಅಟ್ಟಹಾಸಕ್ಕೆ ತುತ್ತಾದ 35ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಮಹಾನಗರ ಪಾಲಿಕೆ ಮಾತ್ರ ಬೀದಿ ನಾಯಿಗಳ ಸಂತಾನಹರಣದ ಹೆಸರಿನಲ್ಲಿ ಪ್ರತಿ ವರ್ಷ ಟೆಂಡರ್ ಕರೆದು ಸಂತಾನಹರಣ ಕ್ರಿಯೆ ಮಾಡಿಸಿದರೂ, ನಾಯಿಗಳ ಅಟ್ಟಹಾಸ ಕಡಿಮೆಯಾಗುತ್ತಿಲ್ಲ.
ಹೀಗಾಗಿ ಶ್ವಾನಗಳ ಸಂತಾನಹರಣದ ಹೆಸರಿನಲ್ಲೂ ಲಕ್ಷ ಲಕ್ಷ ಹಣ ಲೂಟಿ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಜೊತೆಗೆ ಪಾಲಿಕೆ ವತಿಯಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ಶ್ವಾನ ಪ್ರಿಯರಿಗೂ ಪಾಲಿಕೆ ಹಣ ಪಾವತಿ ಮಾಡದೇ ಮೋಸ ಮಾಡಿದೆಯಂತೆ. ಹೀಗಾಗಿ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ನಾಯಿಗಳ ಹೆಸರಿನಲ್ಲೂ ಅಕ್ರಮ ನಡೆದಿರುವ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ.
ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ ಶ್ವಾನಗಳ ಸಂತಾನಹರಣವೂ ಮಾಡದೇ.. ಇತ್ತ ಟೆಂಡರ್ ಪಡೆದು ಕೆಲಸ ಮಾಡಿದವರಿಗೆ ಹಣ ಪಾವತಿ ಮಾಡದೇ ಲಕ್ಷ ಲಕ್ಷ ಹಣ ಲೂಟಿ ಮಾಡಿದ್ಯಾರು ಅನ್ನೋ ಅನುಮಾನ ಶುರುವಾಗಿದೆ. ಕಳೆದ ವರ್ಷ ಪಾಲಿಕೆ ವತಿಯಿಂದ 52 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂರೂವರೆ ಸಾವಿರ ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಆದರೂ ಬೀದಿನಾಯಿಗಳ ಅಟ್ಟಹಾಸ ನಿಂತಿಲ್ಲ.
ಈ ಕುರಿತು ಪಾಲಿಕೆ ಆಯುಕ್ತರನ್ನ ಕೇಳಿದ್ರೆ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 20 ಸಾವಿರ ಬೀದಿನಾಯಿಗಳಿವೆ. ಅವುಗಳಿಗೆಲ್ಲಾ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಈ ಬಾರಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗುತ್ತಿದೆ ಅಂತಿದ್ದಾರೆ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್.
ಸಾವಿರಾರು ಬೀದಿ ನಾಯಿಗಳಿಗೆ ಸಂತಾನ ಶಸ್ತ್ರಚಿಕಿತ್ಸೆ ಮಾಡಿದರೂ ಬೀದಿ ನಾಯಿಗಳ ಅಟ್ಟಹಾಸ ನಿಂತಿಲ್ಲ. ಅಲ್ಲದೇ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದವರಿಗೂ ಹಣ ಪಾವತಿ ಮಾಡಲಾಗಿಲ್ಲ. ಹೀಗಾಗಿ ಪಾಲಿಕೆಯಲ್ಲಿನ ಅಧಿಕಾರಿಗಳು. ಜನಪ್ರತಿನಿಧಿಗಳು ಶ್ವಾನಗಳ ಸಂತಾನಹರಣದ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿ ಮಾಡಿದ್ರಾ ಅನ್ನೋ ಆರೋಪ ಕೇಳಿ ಬಂದಿದೆ. ಅಲ್ಲದೇ ಡೆಡ್ಲಿ ಡಾಗ್ ಅಟ್ಯಾಕ್ ತಡೆಯುವಂತೆ ಸ್ಥಳೀಯರು ಆಕ್ರೋಶಭರಿತರಾಗಿ ಆಗ್ರಹಿಸುತ್ತಿದ್ದಾರೆ.
ವರದಿ: ವೀರೇಶ್ ದಾನಿ, ಟಿವಿ9, ಬಳ್ಳಾರಿ