ಭದ್ರಾ ಮೆಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಅಸ್ತು ಎಂದ ಕೇಂದ್ರ ಸರ್ಕಾರ

ಸದ್ಯ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಸಿಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯ ಉಳಿದ ಕಾಮಗಾರಿಗಾಗಿ ಕೇಂದ್ರ ಸರ್ಕಾರ 16.125 ಕೋಟಿ ರೂಪಾಯಿ ನೀಡಲು ಟೆಕ್ನಿಕಲ್ ಅಡ್ವೈಸರ್ ಕಮಿಟಿಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಕೇಂದ್ರ ಸಂಪುಟ ಸಭೆಯ ತೀರ್ಮಾನ ಮಾತ್ರ ಬಾಕಿಯಿದೆ.

  • TV9 Web Team
  • Published On - 18:15 PM, 2 Apr 2021
ಭದ್ರಾ ಮೆಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಅಸ್ತು ಎಂದ ಕೇಂದ್ರ ಸರ್ಕಾರ
ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸಲು ಒಪ್ಪಿಗೆ

ಚಿತ್ರದುರ್ಗ: ಬಯಲು ಸೀಮೆಯ ಜನರ ಕನಸಿನ ಕೂಸಾದ ಭದ್ರಾ ಮೇಲ್ದಂಡೆ ಯೋಜನೆ ದಶಕವೇ ಕಳೆದರೂ ಪೂರ್ಣಗೊಂಡಿಲ್ಲ. ಸದ್ಯ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯ ವ್ಯಾಪ್ತಿಗೊಳಪಡಿಸಲು ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ದುರ್ಗದ ಜನರ ಮೊಗದಲ್ಲಿ ಖುಷಿ ಮನೆ ಮಾಡಿದೆ.ಬಯಲು ಸೀಮೆಯ ಜನರ ದಶಕಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂದಿದೆ. ಭದ್ರಾ ಜಲಾಶಯದಿಂದ ಬಯಲು ಸೀಮೆಯ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ ಜಿಲ್ಲೆಯ ನೀರು ಹರಿಸುವ ಯೋಜನೆ ರೂಪುಗೊಂಡಿದೆ. ಭದ್ರಾ ಜಲಾಶಯದಿಂದ ಸುಮಾರು 29.5 ಟಿಎಂಸಿ ನೀರನ್ನು ಭದ್ರಾ ಮೇಲ್ದಂಡೆ ಮೂಲಕ ಹರಿಸುವುದು. ಬಯಲು ಸೀಮೆಯ 2 ಲಕ್ಷ ಹೆಕ್ಟೇರ್​ಗೆ ಸೂಕ್ಷ್ಮ ನೀರಾವರಿ ಜತೆಗೆ 367 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.

ಆದರೆ ಯೋಜನೆ ಆರಂಭವಾಗಿ ಒಂದೂವರೆ ದಶಕ ಕಳೆದರೂ ಸಹ ಯೋಜನೆ ಮಾತ್ರ ಪೂರ್ಣಗೊಂಡಿರಲಿಲ್ಲ. ರಾಜ್ಯ ಸರ್ಕಾರದಿಂದ ಅನುದಾನದ ಕೊರತೆ ಕಾರಣ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಸದ್ಯ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈಗ ಕೇಂದ್ರ ಸರ್ಕಾರ ಈ ಯೋಜನೆಗೆ ಸಮ್ಮತಿಸಿದೆ. ಕೇಂದ್ರ ಜಲ ಆಯೋಗವು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಿ ₹16000 ಕೋಟಿ ಹಣಕಾಸು ನೆರವು ನೀಡಲು ಸಮ್ಮತಿಸಿದೆ. ಹೀಗಾಗಿ, ಬರದನಾಡು ಚಿತ್ರದುರ್ಗದ ಜನರಿಗೆ ಇದು ಖುಷಿ ವಿಚಾರ ಎಂದು ಮುರುಘಾಮಠ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ಇನ್ನು ಬರದನಾಡು ಚಿತ್ರದುರ್ಗದ ಜನರಿಗೆ ಅತ್ಯಗತ್ಯವಾದ ಈ ಯೋಜನೆ ಚುರುಕುಗೊಳ್ಳಲಿದ್ದು, ಆರಂಭದಲ್ಲಿ 12.430 ಕೋಟಿ ರೂಪಾಯಿ ವೆಚ್ಚದ ಅಂದಾಜಿನಲ್ಲಿ ಆರಂಭಿಸಿದ ಯೋಜನೆ ಈಗ 21.473 ಕೋಟಿ ರೂಪಾಯಿ ವೆಚ್ಚಕ್ಕೆ ಏರಿಕೆ ಆಗಿದೆ. ಹೀಗಾಗಿ, ಇಷ್ಟು ದೊಡ್ಡ ಮೊತ್ತದ ಯೋಜನೆಗೆ ರಾಜ್ಯ ಸರ್ಕಾರವೊಂದೇ ಖರ್ಚು ಭರಿಸುವುದು ಕಷ್ಟ ಸಾಧ್ಯವಾಗಿತ್ತು. ಸದ್ಯ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಸಿಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯ ಉಳಿದ ಕಾಮಗಾರಿಗಾಗಿ ಕೇಂದ್ರ ಸರ್ಕಾರ 16.125 ಕೋಟಿ ರೂಪಾಯಿ ನೀಡಲು ಟೆಕ್ನಿಕಲ್ ಅಡ್ವೈಸರ್ ಕಮಿಟಿಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಕೇಂದ್ರ ಸಂಪುಟ ಸಭೆಯ ತೀರ್ಮಾನ ಮಾತ್ರ ಬಾಕಿಯಿದೆ. ಕೇಂದ್ರ ಯೋಜನೆಯಾಗುವುದರಿಂದ ಭದ್ರಾ ಕಾಮಗಾರಿ ವೇಗ ಪಡೆಯಲಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿ ಶಿವಪ್ರಸಾದ್ ಭರವಸೆ ನೀಡಿದ್ದಾರೆ.

badra project

ಭದ್ರಾ ಯೋಜನೆ

ಒಟ್ಟಾರೆಯಾಗಿ ಕೋಟೆನಾಡಿನ ಜನರ ಪಾಲಿಗೆ ಭಗೀರಥನಾಗಿ ಬರುತ್ತಿರುವ ಭದ್ರಾ ಯೋಜನೆ ರಾಷ್ಟ್ರೀಯ ಯೋಜನೆ ಪಟ್ಟಿಗೆ ಸೇರಿದೆ. ಹೀಗಾಗಿ, ಕೇಂದ್ರದಿಂದ ಹೆಚ್ಚಿನ ಅನುದಾನ ಸಿಕ್ಕು ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ ಎಂಬ ಹೊಸ ಆಸೆ ರೈತರಲ್ಲಿ ಮೂಡಿದೆ.

(ವರದಿ: ಬಸವರಾಜ ಮುದನೂರ್- 9980914116)

ಇದನ್ನೂ ಓದಿ: ಶಾಸಕ ಸಂಗಮೇಶ್ ಬೆನ್ನಿಗೆ ನಿಂತ ‘ಕೈ’ ಪಡೆ: ಮಾ.10ರಂದು ಭದ್ರಾವತಿಯಲ್ಲಿ ಧರಣಿ ನಡೆಸಲು ನಿರ್ಧಾರ

(government has agreed to make Bhadra Meldande project as national project in chitradurga)