ಬೆಳಗಾವಿ ಡಿಸಿಸಿ ಬ್ಯಾಂಕ್ಗೆ ನೂತನ ಅಧ್ಯಕ್ಷರ ಆಯ್ಕೆ, ಸತೀಶ್ ಜಾರಕಿಹೊಳಿ ಕೈ ಮೇಲುಗೈ
ರಾಜ್ಯ ರಾಜಕಾರಣದಲ್ಲೇ ಸಂಚಲನಕ್ಕೆ ಕಾರಣವಾಗಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆಯಾಗಿದೆ. ಜಾರಕಿಹೊಳಿ ಬ್ರದರ್ಸ್ ಒಂದುಗೂಡಿ ಒಬ್ಬರನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರ ಸೂಚಿಸಿದ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಅಚ್ಚರಿ ಮೂಡಿಸಿದೆ.
ಬೆಳಗಾವಿ, ನವೆಂಬರ್ 13): ಕೊನೆಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಅಪ್ಪಾಸಾಹೇಬ್ ಕುಲಗೋಡೆ ಅವರೇ ಬೆಳಗಾವಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ತಲಾ ಒಬ್ಬೊಬ್ಬರನ್ನು ಸೂಚಿಸಿದ್ದರು. ಆದ್ರೆ, ಅಂತಿಮವಾಗಿ ಸಭೆಯಲ್ಲಿ ಚರ್ಚೆ ಮಾಡಿ ಸತೀಶ್ ಜಾರಕಿಹಿಳಿ ಸೂಚಿಸಿದ ಅಪ್ಪಾಸಾಹೇಬ್ ಕುಲಗೋಡೆ ಅವರನ್ನೇ ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇನ್ನು ಬಾಲಚಂದ್ರ ಜಾರಕಿಹೊಳಿ ಸೂಚಿಸಿದ ಸುಭಾಷ್ ಢವಳೇಶ್ವರ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮೂವರು ಜಾರಕಿಹೊಳಿ ಬ್ರದರ್ಸ್ ಒಪ್ಪಂದ ಮಾಡಿಕೊಂಡು ಅಪ್ಪಾಸಾಹೇಬ್ ಕುಲಗೊಡೆ ಅವರನ್ನು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ನಿರ್ದೇಶರಾಗಿದ್ದ ಅಪ್ಪಾಸಾಹೇಬ್ ಕಲಗೋಡೆ ರಾಯಭಾಗದ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಶತಮಾನಗಳ ಇತಿಹಾಸ ಇರುವ ಡಿಸಿಸಿ ಬ್ಯಾಂಕ್ಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕನಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಇದರಲ್ಲಿ ಜಾರಕಿಹೊಳಿ ಬ್ರದರ್ಸ್ ಪ್ರಮುಖ ಪಾತ್ರವಹಿಸಿದ್ದಾರೆ.
ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಪ್ರಭಾರಿ ಅಧ್ಯಕ್ಷ ಸುಭಾಷ್ ಡವಳೇಶ್ವರ ಮಧ್ಯೆ ತೀವ್ರ ಪೈಪೋಟಿ ನಿರ್ಮಾಣವಾಗಿತ್ತಯ. ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಕೆಲವು ನಿರ್ದೇಶಕರ ಒಪ್ಪದೇ ವಿರೋಧಿಸಿದ್ದಾರೆ ಎನ್ನಲಾಗಿದೆ. ಇದೆಲ್ಲ ಬೆಳವಣಿಗೆ ಮಧ್ಯೆ ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಚರ್ಚೆ ನಡೆಸಿದ್ದು, ಅಂತಿಮವಾಗಿ ಸತೀಶ್ ಜಾರಕಿಹೊಳಿ ಸೂಚಿಸಿದ ರಾಯಭಾಗ ಮೂಲದ ಕಾಂಗ್ರೆಸ್ ನಾಯಕ ಅಪ್ಪಾಸಾಹೇಬ್ ಕುಲಗೊಡೆ ಅವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸುಭಾಷ್ ಢವಳೇಶ್ವರ್ ಅವರೇ ಮುಂದುವರೆಯಲಿದ್ದಾರೆ.
ಸದ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಅವಧಿ ಪೂರ್ಣಗೊಳ್ಳಲು ಒಂದೇ ವರ್ಷ ಬಾಕಿ ಇದೆ. ಹೀಗಿದ್ದರೂ ಆ ಸ್ಥಾನ ಪಡೆದುಕೊಳ್ಳಲು ಪ್ರತಿಷ್ಠೆಯಾಗಿ ಭಾವಿಸಿದ್ದಾರೆ. ಮಂತ್ರಿ ಸ್ಥಾನಕ್ಕೆ ಸಮನಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಅತಿದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಪಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Wed, 13 November 24