ಕೋಟ್ಯಂತರ ವಂಚನೆ ಕೇಸ್: ಖಾತೆಯಲ್ಲಿ ನೂರಾರು ಕೋಟಿ ಪತ್ತೆಯಾದ್ರೂ ಬ್ಯಾಂಕ್ ಗಪ್‌ಚುಪ್; ಶಿವಾನಂದನೊಂದಿಗೆ ಅಧಿಕಾರಿಗಳು ಶಾಮೀಲು?
ಸಾವಿರಾರು ಜನರಿಗೆ ಮೋಸ ಮಾಡಿರುವ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಅರೆಸ್ಟ್ ಆಗಿದ್ದಾನೆ. ಸದ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಹೀಗಿರುವಾಗಿ 2,500 ಕೋಟಿಗೂ ಹೆಚ್ಚು ಹಣ ಆನ್‌ಲೈನ್‌ನಲ್ಲಿ ಹೂಡಿಕೆಯಾಗಿದ್ದು, ಬ್ಯಾಂಕ್‌ಗಳು ಈ ದೊಡ್ಡ ಮೊತ್ತದ ವ್ಯವಹಾರದ ಬಗ್ಗೆ ಮೌನವಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬೆಳಗಾವಿ, ಮೇ 17: ಸಾವಿರಾರು ಕೋಟಿ ಒಡೆಯ ಅಂತೆಲ್ಲಾ ಬಿಲ್ಡಪ್ ಕೊಡುತ್ತಿದ್ದ ಶಿವಾನಂದ ನೀಲಣ್ಣವರ್ (Shivanand Neelannavar) ಅರೆಸ್ಟ್ ಆಗಿದ್ದಾನೆ. 4,500 ಕೋಟಿ ರೂ ವಂಚನೆ ಆರೋಪದಡಿ ಬೆಳಗಾವಿ ಪೊಲೀಸರು ಶಿವಾನಂದನನ್ನ ಲಾಕ್ ಮಾಡಿದ್ದಾರೆ. ಸದ್ಯ ಪೊಲೀಸರು 5 ದಿನ ಕಸ್ಟಡಿಗೆ ಪಡೆದು ತನಿಖೆ ನಡೆಸಿದ್ದಾರೆ. ಇನ್ನು ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ನಾಲ್ಕು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಒಂದೊಂದು ಅಕೌಂಟ್ನಲ್ಲಿ ನೂರಾರು ಕೋಟಿ ರೂ ಪತ್ತೆಯಾಗಿದೆ. ನೂರಾರು ಕೋಟಿ ರೂ ಅಕೌಂಟ್ನಲ್ಲಿ ಇದ್ದರೂ ಇ.ಡಿ ಮತ್ತು ಐಟಿ ಗಮನಕ್ಕೆ ತರಬೇಕಿದ್ದ ಬ್ಯಾಂಕ್ ಅಧಿಕಾರಿಗಳು ಮಾತ್ರ ಸೈಲೆಂಟ್ ಆಗಿದ್ದು, ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಮುಖ್ಯಾಂಶಗಳು
- ಆನ್ಲೈನ್ನಲ್ಲೇ ಎರಡೂವರೆ ಸಾವಿರ ಕೋಟಿಗೂ ಅಧಿಕ ಹಣ ಹೂಡಿಕೆ
- ಇಷ್ಟು ದೊಡ್ಡ ಮೊತ್ತದ ಹಣ ಹೂಡಿಕೆ ಆಗಿದ್ದರೂ ಬ್ಯಾಂಕ್ ಅಧಿಕಾರಿಗಳು ಗಪ್‌ಚುಪ್
- ಶಿವಾನಂದ ನೀಲಣ್ಣವರ್ ಜೊತೆಗೆ ಶಾಮೀಲಾದ್ರಾ ಬ್ಯಾಂಕ್ ಅಧಿಕಾರಿಗಳು?
ಬ್ಯಾಂಕ್‌ಗಳ ಅಧಿಕಾರಿಗಳು ಶಾಮೀಲು?
ಈ ಖಾತೆಗಳಿಗೆ ನಿತ್ಯ ಲಕ್ಷಾಂತರ ರೂಪಾಯಿ ಜಮೆಯಾಗುತ್ತಿದ್ದು, ಇದೇ ಖಾತೆಗಳಿಂದ ತಿಂಗಳಿಗೆ 75 ಕೋಟಿಗೂ ಅಧಿಕ ಹಣವನ್ನು 35 ಸಾವಿರ ಜನರಿಗೆ ಬಡ್ಡಿ ರೂಪದಲ್ಲಿ ಜಮಾ ಮಾಡಲಾಗುತ್ತಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗುತ್ತಿದ್ದರೂ ಬ್ಯಾಂಕ್ ಅಧಿಕಾರಿಗಳು ಇಡಿ ಮತ್ತು ಐಟಿ ಇಲಾಖೆ ಗಮನಕ್ಕೆ ತರದೆ ಸೈಲೆಂಟ್ ಆಗಿದ್ದರು. ಹೀಗಾಗಿ ನೀಲಣ್ಣವರ್ ಜೊತೆಗೆ ಬ್ಯಾಂಕ್‌ಗಳ ಅಧಿಕಾರಿಗಳು ಶಾಮೀಲಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಸಿಐಡಿ ತನಿಖೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಕಳ್ಳಾಟ ಬಯಲಾಗಲಿದೆಯೇ ಕಾದು ನೋಡಬೇಕಿದೆ.
ಇದನ್ನೂ ಓದಿ: ಇಡೀ ಕರ್ನಾಟಕವನ್ನೇ ನಡುಗಿಸಿದ 4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್ ಮಾಲೀಕ ಅರೆಸ್ಟ್
ಇನ್ನು ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಬೆಳಗಾವಿ ಕಮಿಷನರ್ ಕಚೇರಿಯಲ್ಲಿ ಇಂದು ಸಿಐಡಿ ಡಿಐಜಿಪಿ ಭೀಮಾಶಂಕರ ಗುಳೇದ್ ನೇತೃತ್ವದಲ್ಲಿ ಸ್ಥಳೀಯ ಅಧಿಕಾರಿಗಳ ಜೊತೆ 2 ಗಂಟೆ ಕಾಲ ಸಭೆ ಮಾಡಿದರು. ನೀಲಣ್ಣವರ್ ಕೇಸ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅಧಿಕೃತವಾಗಿ ಸಿಐಡಿಗೆ ಹಸ್ತಾಂತರಿಸಿದರು. ನಿನ್ನೆವರೆಗೆ ನಡೆಸಿದ ತನಿಖಾ ವರದಿ ಸೇರಿದಂತೆ ಎಲ್ಲಾ ಮಹತ್ವದ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ. ಪ್ರಕರಣದ ಬಗ್ಗೆ ಸುದೀರ್ಘವಾಗಿ ಮಾಹಿತಿ ಪಡೆದ ಸಿಐಡಿ ತಂಡ ಬಳಿಕ ಬೆಂಗಳೂರಿಗೆ ತೆರಳಿತು.
ಕಮಿಷನರ್ ಭೂಷಣ್ ಬೊರಸೆ ಹೇಳಿದ್ದಿಷ್ಟು
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಮಿಷನರ್ ಭೂಷಣ್ ಬೊರಸೆ, ಶಿವಂ ಅಸೋಸಿಯೇಟ್ ಮಾಲೀಕ ಶಿವಾನಂದ ನೀಲಣ್ಣವರ್ ಬಂಧನವಾಗಿದೆ. ಈ ಪ್ರಕರಣದ ವ್ಯಾಪ್ತಿ ಅಂತಾರಾಜ್ಯಕ್ಕೂ ವ್ಯಾಪಿಸಿದೆ. 50 ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ಆಗಿದೆ. ಈ ಕಾರಣಕ್ಕೆ ಡಿಜಿ-ಐಜಿಪಿ ಕೇಸ್ ಸಿಐಡಿಗೆ ವಹಿಸಿದ್ದಾರೆ. ಸಿಐಡಿ ಡಿಐಜಿ ಬಂದು ನಮ್ಮ ಬಳಿ ಮಾಹಿತಿ ಪಡೆದಿದ್ದಾರೆ. ನಾವು ಮಾಡಿರುವ ತನಿಖೆ ಅವರಿಗೆ ನೀಡಿದ್ದೇವೆ. ಅದರ ಆಧಾರದ ಮೇಲೆ ಸಿಐಡಿಗೆ ವರ್ಗಾವಣೆ ಮಾಡಿದ್ದಾರೆ. ಸಿಐಡಿ ಡಿಐಜಿ ಅವರು ಫಾರ್ಮಾಲಿಟಿ ಮುಗಿಸಿಕೊಂಡು ಹೋಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಕಲೆ ಹಾಕಿರುವ ಮಾಹಿತಿಯನ್ನ ಸಂಗ್ರಹಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
