ಮಹದಾಯಿ ಯೋಜನೆಗೆ ವಿಘ್ನವಾಗುತ್ತಾ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ಆದೇಶ?
ಈಗಾಗಲೇ ನೆನಗುದಿಗೆ ಬಿದ್ದಿರುವ ಕಳಸಾ-ಬಂಡೂರಿ ಮಹದಾಯಿ ಯೋಜನೆಗೆ ಕಂಟಕ ಎದುರಾಗುವ ಸಾಧ್ಯತೆ ಇದೆ. ಇನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ಆದೇಶ ಮೂರು ರಾಜ್ಯಗಳನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಸಾಧ್ಯತೆ ಇದೆ.
ಬೆಳಗಾವಿ: ಕರ್ನಾಟಕದ ಗಡಿಗೆ ಹೊಂದಿಕೊಂಡು ಗೋವಾದಲ್ಲಿರುವ ಮಹದಾಯಿ (Mahadayi) ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ (Tiger Reserve Forest) ಎಂದು ಘೋಷಿಸಿ ಅಧಿಸೂಚನೆ ಹೊರಡಿಸುವಂತೆ ಬಾಂಬೆ ಹೈಕೋರ್ಟ್‌ನ ಗೋವಾ (Goa) ಪೀಠವು ಸೋಮವಾರ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಬಗ್ಗೆ ಗೋವಾ ಸರ್ಕಾರ ಮೂರು ತಿಂಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಇದರಿಂದ ಈಗಾಗಲೇ ನೆನಗುದಿಗೆ ಬಿದ್ದಿರುವ ಕಳಸಾ-ಬಂಡೂರಿ ಮಹದಾಯಿ ಯೋಜನೆಗೆ ಕಂಟಕ ಎದುರಾಗುವ ಸಾಧ್ಯತೆ ಇದೆ. ಇನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ಆದೇಶವನ್ನು ಪ್ರಶ್ನಿಸಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಲು ಚಿಂತನೆ ನಡೆಸಿದೆ.
ಮಹದಾಯಿ ಕಣಿವೆಯಲ್ಲೇ ಬರುವ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದರೇ ಅದರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟದ ಕೆಲ ಭಾಗಗಳು ಮತ್ತು ಉದ್ದೇಶಿತ ಕಳಸಾ-ಬಂಡೂರಾ ನಾಲಾ ಯೋಜನೆಯ ಪ್ರದೇಶವೂ ಬರುವುದರಿಂದ ಮಹದಾಯಿ ಯೋಜನೆಗೆ ಅಡ್ಡಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಬೆಳಗಾವಿ ಅರಣ್ಯ ಪ್ರದೇಶದಲ್ಲಿ ಮದ್ಯದ ಪಾರ್ಟಿ ಪ್ರಕರಣ: ಉಳಿದ ನಾಲ್ವರ ವಿರುದ್ಧವೂ ತನಿಖೆಗೆ ಡಿ.ಸಿ. ಸೂಚನೆ
ಗೋವಾ ಫೌಂಡೇಶನ್ ಎಂಬ ಎನ್‌ಜಿಒ ‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಈ ಹಿಂದೆ ವಿನಂತಿಸಿದಂತೆ ರಾಜ್ಯದಲ್ಲಿ ಹುಲಿಗಳು ಹೆಚ್ಚಿರುವ ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ವಲಯ ಎಂದು ಘೋಷಿಸಬೇಕು. ಈ ಮೂಲಕ ಹುಲಿ ಬೇಟೆಗೆ ಕಡಿವಾಣ ಹಾಕಿ ಅವುಗಳ ರಕ್ಷಣೆ ಮಾಡಬೇಕು’ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿತ್ತು. ಇದನ್ನು ಬಾಂಬೆ ಹೈಕೋರ್ಟ್ ಗೋವಾ ಪೀಠ ಸಮ್ಮತಿಸಿ ಆದೇಶ ಹೊರಡಿಸಿದೆ.
ಒಂದು ವೇಳೆ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದರೇ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಕಷ್ಟ ಎದುರಾಗಲಿದೆ. ಗೋವಾ-ಮಹಾರಾಷ್ಟ್ರ ನಡುವಿನ ಜಂಟಿ ಯೋಜನೆಯಾದ ತಿಲಾರಿ ಯೋಜನೆಗೂ ಎಪೆಕ್ಟ್ ಆಗಲಿದೆ.
ಆಗಸ್ಟ್ 14, 2018ರಂದು ಮಹದಾಯಿ ನ್ಯಾಯಾಧೀಕರಣವು 13.7ಟಿಎಂಸಿ ನೀರು ಕರ್ನಾಟಕ ಬಳಸಬಹುದು ಎಂದು ಅನುಮತಿ ನೀಡಿತ್ತು. ಇದಾದ ಬಳಿಕ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ಸಾವಿರ ಕೋಟಿ ರೂ ಬಜೆಟ್ನಲ್ಲಿ ಮೀಸಲು ಇಟ್ಟಿತ್ತು. ಯೋಜನೆ ಪರಿಷ್ಕೃತ ಡಿಪಿಆರ್ ಸಿದ್ದಪಡಿಸಿ ಅನುಮತಿಗಾಗಿ ಸಲ್ಲಿಕೆ ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ