ಬೇಲೆಕೇರಿ ಕೇಸ್: ಶಾಸಕ ಸತೀಶ್ ಸೈಲ್ ಸೇರಿ ಇತರೆ ಅಪರಾಧಿಗಳಿಗೆ ಹೈಕೋರ್ಟ್ ರಿಲೀಫ್

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹೀಗಾಗಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಇತರೆ ಅಪರಾಧಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಬೇಲೆಕೇರಿ ಕೇಸ್: ಶಾಸಕ ಸತೀಶ್ ಸೈಲ್ ಸೇರಿ ಇತರೆ ಅಪರಾಧಿಗಳಿಗೆ ಹೈಕೋರ್ಟ್ ರಿಲೀಫ್
ಕಾಂಗ್ರೆಸ್ ಶಾಸಕ ಸತೀಶ್ ಸೈಲ್
Follow us
Ramesha M
| Updated By: ರಮೇಶ್ ಬಿ. ಜವಳಗೇರಾ

Updated on:Nov 13, 2024 | 4:36 PM

ಬೆಂಗಳೂರು, (ನವೆಂಬರ್ 13): ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಇತರೆ ಅಪರಾಧಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ಹೈಕೋರ್ಟ್​ ನ್ಯಾಯಮೂರ್ತಿ ಎಂ.ನಾಗಪ್ರಸನ್ನರಿದ್ದ ಪೀಠ ಆದೇಶಿಸಿದೆ.   ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್​, ಆರೋಪಿಗಳಿಗೆ ಒಟ್ಟುನ ಆರು ಪ್ರಕರಣಗಳಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಜನ ಪ್ರತಿನಿಧಿ ಕೋರ್ಟ್​ ನೀಡಿದ್ದ ಶಿಕ್ಷೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

6 ವಾರದಲ್ಲಿ ದಂಡದ ಮೊತ್ತದಲ್ಲಿ ಶೇ.25ರಷ್ಟು ಠೇವಣಿ ಕೋರ್ಟ್​​ನಲ್ಲಿ ಇಡುವಂತೆ ಅಪರಾಧಿಗಳಿಗೆ ಸೂಚಿಸಿ ಶಿಕ್ಷೆ ಅಮಾನತಿನಲ್ಲಿಟ್ಟು ಆದೇಶಿಸಿದೆ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಇತರೆ ಅಪರಾಧಿಗಳು ನಾಳೆ(ನವೆಂಬರ್ 14) ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸತೀಶ್ ಸೈಲ್​ಗೆ ಜೈಲು ಶಿಕ್ಷೆ: ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ? ಇಲ್ಲಿದೆ ವಿವರ

ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್​, ಶಾಸಕ ಸತೀಶ್​ ಸೈಲ್​​ ಸೇರಿದಂತೆ ಏಳು ಅಪರಾಧಿಗಳಿಗೆ ಶಿಕ್ಷಿ ವಿಧಿಸಿ ತೀರ್ಪು ನೀಡಿತ್ತು. ಒಟ್ಟು ಆರು ಪ್ರಕರಣದಲ್ಲಿ ಶಾಸಕ ಸತೀಶ್​ ಸೈಲ್​​ಗೆ 3ನೇ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು. ಇದಲ್ಲದೆ ಉಳಿದ 5 ಪ್ರಕರಣಗಳಲ್ಲಿಯೂ ಶಿಕ್ಷೆ ಪ್ರಮಾಣ ಹಾಗೂ ದಂಡ ವಿಧಿಸಿತ್ತು. ಒಟ್ಟಾರೆಯಾಗಿ ಒಳಸಂಚಿಗೆ 5 ವರ್ಷ, ವಂಚನೆಗೆ 7 ವರ್ಷ, ಕಳ್ಳತನಕ್ಕೆ 3 ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು.

ಏನಿದು ಪ್ರಕರಣ?

ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ: 1 ಭಾರಿ ಪ್ರಮಾ ಣದ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗುತ್ತಿತ್ತು. 2010ರ ಮಾ.20 ರಂದು ಅರಣ್ಯ ಇಲಾಖೆ 350 ಕೋಟಿ ರೂ. ಮೌಲ್ಯದ ಬರೋಬ್ಬರಿ 8.5 ಲಕ್ಷ ಮೆಟ್ರಿಕ್ ಟನ್‌ ಅದಿರು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಅದಿರನ್ನು ಕಾಯ್ದುಕೊಳ್ಳುವಂತೆ ಬೇಲೆಕೇರು ಬಂದರು ನಿರ್ವಹಿಸುತ್ತಿದ್ದ ಬಂದರು ಇಲಾಖೆಗೆ ಅರಣ್ಯ ಇಲಾಖೆಯು ಸೂಚನೆಯನ್ನು ನೀಡಿತ್ತು. ಕೆಲವು ತಿಂಗಳ ಬಳಿಕ ಅರಣ್ಯ ಇಲಾಖೆ ತಂಡ ಮರು ಪರಿಶೀಲಿಸಿದಾಗ ಬಂದರಿನಲ್ಲಿ ಕೇವಲ 2 ಲಕ್ಷ ಮೆಟ್ರಿಕ್ ಟನ್ ಅದಿರು ಮಾತ್ರ ಇತ್ತು. 250 ಕೋಟಿ ರೂ. ಅದಿರು ನಾಪತ್ತೆ ಬಗ್ಗೆ ಬಂದರು ಅಧಿಕಾರಿ, ಅದಿರು ಸಾಗಣೆ ಕಂಪನಿಗಳ ವಿರುದ್ಧ ಅರಣ್ಯ ಇಲಾಖೆಯು ದೂರು ನೀಡಿತ್ತು.

ಈ ಅಕ್ರಮವೆಸಗಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿ ಒತ್ತಾಯ ಮಾಡಿದ್ದರು. ಆಗ ಹಗರಣ ಬೆಳಕಿಗೆ ಬಂದಿತ್ತು. 2010ರ ಜೂ.23ರಂದು ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. 2011ರಲ್ಲಿ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿತ್ತು. ಸುಪ್ರೀಂಕೋರ್ಟ್ 2009 ರಿಂದ ಮೇ 2010ರ ನಡುವೆ ರಾಜ್ಯದಲ್ಲಿನ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ಸಾಗಣೆ ಕುರಿತು ತನಿಖೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಸಿಬಿಐ 2013ರ ಸೆ.13 ರಂದು ಕೇಸ್‌ ದಾಖಲಿಸಿ ತನಿಖೆಕೈಗೊಂಡಿತ್ತು.

ಸತೀಶ್ ಮಾಲಿಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್‌ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ತನಿಖೆಯಲ್ಲಿ ಕಂಡುಬಂತು. ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್‌ ಅದಿರನ್ನು 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ರವಾನೆ ಮಾಡಲಾಗಿತ್ತು ಎಂಬುದನ್ನು ಕೇಂದ್ರೀಯ ಸಮಿತಿ ಪ್ರಾಧಿಕಾರ (ಸಿಇಸಿ) ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆರೋಪಿಗಳ ಜತೆ ಸಂಚು ರೂಪಿಸಿ ಸತೀಶ್ ಸೈಲ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದರು. ಹೀಗೆ ರಫ್ತಾಗಿರುವ ಅದಿರಿನಲ್ಲಿ 7.23 ಲಕ್ಷ ಮೆಟ್ರಿಕ್ ಟನ್‌ ಅದಿರನ್ನು ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ. ಕಂಪನಿಯೇ ರಫ್ತು ಮಾಡಿತ್ತು ಎಂದು ಸಿಬಿಐ ಆರೋಪಿಸಿತ್ತು.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:32 pm, Wed, 13 November 24