ಸುಂದರ ಉದ್ಯಾನವನದೊಂದಿಗೆ ಕಂಗೋಳಿಸುತ್ತಿದೆ ಡಂಪಿಂಗ್ ಯಾರ್ಡ್; ರಾಜ್ಯಕ್ಕೆ ಮಾದರಿಯಾದ ಸ್ವಚ್ಛ ಸಂಕೀರ್ಣ

ಗ್ರಾಮದ ಹೊರವಲಯದಲ್ಲಿ 2 ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನವನ. ಶಿಲೆಗಳ ಜೊತೆಗೆ ಕಸ ವಿಂಗಡಣೆ ಮಾಡಿ ಸ್ಥಳದಲ್ಲೇ ಗೊಬ್ಬರ ಮಾಡುವ ಮೂಲಕ ವಿನೂತನ ಕಸ ಸಂಸ್ಕರಣ ಘಟಕವನ್ನು ಮಾಡಿದ್ದಾರೆ. ಈ ನೂತನ ಘಟಕದಲ್ಲಿ 42 ಬಗೆಯ ಕಸದ ವಸ್ತು ಬೇರ್ಪಡಿಸಿ, ಹಸಿ-ಒಣ ಕಸ ವಿಂಗಡಿಸಲಾಗುತ್ತದೆ

ಸುಂದರ ಉದ್ಯಾನವನದೊಂದಿಗೆ ಕಂಗೋಳಿಸುತ್ತಿದೆ ಡಂಪಿಂಗ್ ಯಾರ್ಡ್; ರಾಜ್ಯಕ್ಕೆ ಮಾದರಿಯಾದ ಸ್ವಚ್ಛ ಸಂಕೀರ್ಣ
ಕಸದ ಡಂಪಿಂಗ್ ಯಾರ್ಡ್
Follow us
TV9 Web
| Updated By: preethi shettigar

Updated on: Feb 07, 2022 | 8:58 AM

ದೇವನಹಳ್ಳಿ: ಕಸ ಸಂಸ್ಕರಣ ಘಟಕ ಅಂದರೆ ಸಾಕು ಗಬ್ಬೇದ್ದು ನಾರುವ ದುರ್ವಾಸನೆ ಮತ್ತು ಗಲೀಜು ತುಂಬಿರುವ ದೃಶ್ಯಗಳು ಕಾಣುವುದು ಸಾಮಾನ್ಯ. ಆದರೆ ಇಲ್ಲೊಂದು ಘಟಕದಲ್ಲಿ ಮಾತ್ರ ಕಸದಿಂದಲೆ(Garbage) ರಸ ಎನ್ನುವ ಹಾಗೆ ಲಕ್ಷ ಲಕ್ಷ ರೂಪಾಯಿ ಆದಾಯ ಹರಿದು ಬರುವ ಜೊತೆಗೆ ಉತ್ತಮ ಪ್ರವಾಸಿ ತಾಣವಾಗಿಯು(Tourist place) ನೋಡುಗರ ಕಣ್ಮನ ಸೆಳೆಯುತ್ತಿದೆ. ಬೆಟ್ಟ ಗುಡ್ಡಗಳ ನಡುವೆ ಹಚ್ಚ ಹಸಿರಿನ ಸುಂದರ ಉದ್ಯಾನವನದ(Park) ಜೊತೆಗೆ ದೇಶ ಕಾಯುವ ವೀರ ಯೋಧ ಮತ್ತು ಅನ್ನ ನೀಡುವ ದೇಶದ ರೈತ ಹಾಗೂ ಜೊಡೆತ್ತುಗಳು. ಮತ್ತೊಂದೆಡೆ ಗ್ರಾಮೀಣ ಸೊಗಡಿನ ಕುರಿ, ಮೇಕೆ ಜೊತೆಗೆ ದನ ಕಾಯುವ ಸುಂದರ ದೃಶ್ಯಗಳೊಂದಿಗೆ ಕಂಗೋಳಿಸುತ್ತಿದೆ.

ಕಸದ ಡಂಪಿಂಗ್ ಯಾರ್ಡ್ ಆದರೂ ಯಾವುದೇ ದುರ್ವಾಸನೆಯಿಲ್ಲದೆ ಸುಂದರ ಉದ್ಯಾನವನದೊಂದಿಗೆ ಕಂಗೋಳಿಸುತ್ತಿರುವ ಈ ಕಸದ ಘಟಕವಿರುವುದು ಯಾವುದೋ ದೂರದ ಊರಿನಲ್ಲಲ್ಲ. ಬದಲಾಗಿ ಕಸದ ಸಮಸ್ಯೆಯಿಂದಲೇ ಬಳಲಿ ಬೆಂಡಾಗಿದ್ದ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಯಲಹಂಕ ತಾಲೂಕಿನ ಅರಕೆರೆ ಗ್ರಾಮ ಪಂಚಾಯತಿಯಲ್ಲಿ. ಹೌದು ಗ್ರಾಮದಲ್ಲಿ ಕಸ ಸುರಿಯಲು ಜಾಗವಿಲ್ಲದೆ ಜನರ ಸಮಸ್ಯೆಗಳಿಗೆ ಅಂತ್ಯವಾಡಲು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸ್ಥಳಿಯ ಶಾಸಕ ಎಸ್. ಆರ್. ವಿಶ್ವನಾಥ್ ನಗರದಲ್ಲೇ ಮಾದರಿ ಕಸ ಸಂಸ್ಕರಣ ಘಟಕವನ್ನು ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಗ್ರಾಮದ ಹೊರವಲಯದಲ್ಲಿ 2 ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನವನ. ಶಿಲೆಗಳ ಜೊತೆಗೆ ಕಸ ವಿಂಗಡಣೆ ಮಾಡಿ ಸ್ಥಳದಲ್ಲೇ ಗೊಬ್ಬರ ಮಾಡುವ ಮೂಲಕ ವಿನೂತನ ಕಸ ಸಂಸ್ಕರಣ ಘಟಕವನ್ನು ಮಾಡಿದ್ದಾರೆ. ಈ ನೂತನ ಘಟಕದಲ್ಲಿ 42 ಬಗೆಯ ಕಸದ ವಸ್ತು ಬೇರ್ಪಡಿಸಿ, ಹಸಿ-ಒಣ ಕಸ ವಿಂಗಡಿಸಲಾಗುತ್ತದೆ. ಜೊತೆಗೆ ಪ್ಲಾಸ್ಟಿಕ್ ಕಸ, ಕಬ್ಬಿಣ, ಅಲ್ಯೂಮಿನಿಯಂ, ತೆಂಗಿನಚಿಪ್ಪು, ಕಾಟನ್ ರಟ್ಟು, ಪ್ಲಾಸ್ಟಿಕ್ ಚೀಲ, ವಾಟರ್ ಬಾಟಲ್, ನಾನಾ ಪ್ಲಾಸ್ಟಿಕ್ ವಸ್ತು ವಿಲೇವಾರಿ ಮಾಡಲಾಗುತ್ತಿದ್ದು, ಕಸದಿಂದ ರಸ ಎಂಬಂತೆ ಪ್ರತಿ ತಿಂಗಳು ಒಂದೂವರೆ ಲಕ್ಷಕ್ಕೂ ಅಧಿಕ ಆದಾಯ ಇದೀಗ ಪಂಚಾಯತಿಯ ಭೊಕ್ಕಸಕ್ಕೆ ಬಂದು ಸೇರುತ್ತಿದೆ.

ಈ ಸ್ವಚ್ಛ ಸಂಕೀರ್ಣ ಕಸದ ವಸ್ತು ಬೇರ್ಪಡಿಸುವ ಜತೆಗೆ ಒಂದೊಂದು ಕಂಟೈನರ್​ನಲ್ಲಿ ಬೇರ್ಪಡಿಸಿದ ವಸ್ತುಗಳನ್ನು ಹಾಕಿ ಅದನ್ನು ಪ್ರತಿ ತಿಂಗಳು ಮಾರಾಟ ಮಾಡಲಾಗುತ್ತಿದೆ. ಹಸಿ ಕಸವನ್ನು ಮನೆ ಮನೆಯಲ್ಲಿ ಸಂಗ್ರಹಿಸುವ ಪಂಚಾಯತಿ, ನಂತರ ಅದನ್ನು ಕಾಂಪೋಸ್ಟ್ ಗೊಬ್ಬರ ಮಾಡಲು ಜಮರ್ನಿಯಿಂದ ತಂದಿರುವ ವಿಶೇಷ ಮಿಷನ್ ಮೂಲಕ ಕಾಂಪೊಸ್ಟ್ ಸಾವಯವ ಗೊಬ್ಬರ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಗೊಬ್ಬರದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಗೊಂದಲ ನಿವಾರಿಸಲು ಸ್ವಚ್ಛ ಸಂಕೀರ್ಣ ಆವರಣದ ಪಾರ್ಕ್​ನಲ್ಲಿ ಗಿಡ ಮತ್ತು ತರಕಾರಿ ಗಿಡಗಳಿಗೆ ಬಳಸುತ್ತಿದ್ದು, ರೈತರಿಗೆ ಗೊಬ್ಬರವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಈ ಸಂಕೀರ್ಣದಲ್ಲಿ ಮಳೆನೀರು ಕೊಯ್ಲು ಸಹ ಇನ್ನೊಂದು ವಿಶೇಷ. ಮಳೆ ಬಂದಾಗ ಒಂದೂವರೆ ಲಕ್ಷ ನೀರು ಸಂಗ್ರಹಕ್ಕೆ ಟ್ಯಾಂಕ್ ನಿರ್ಮಿಸಲಾಗಿದೆ. ಇನ್ನೂ ಮೀನು ಸಾಕಾಣಿಕೆಗೆ ಕುಂಟೆಯೂ ತಲೆ ಎತ್ತಿದ್ದು, ಎರೆಹುಳ ಗೊಬ್ಬರವನ್ನು ಕೂಡ ತೊಟ್ಟಿಯಲ್ಲಿ ಹಾಕಿ ಸಿದ್ಧ ಮಾಡಲಾಗುತ್ತಿದೆ. ಪಕ್ಕದಲ್ಲೇ 50 ಬಗೆಯ ವನೌಷಧ ಗಿಡ ನೆಡಲಾಗಿದ್ದು, ಸುತ್ತಮುತ್ತ 5000 ಗಿಡಗಳನ್ನು ನೆಡಲಾಗಿದೆ. ಕಸ ವಿಲೇವಾರಿಯೊಂದಿಗೆ ಪಾರ್ಕ್ ಮತ್ತು ಕಾರ್ಯ ಚಟುವಟಿಕೆ ವೀಕ್ಷಿಸಲು ಅಕ್ಕಪಕ್ಕದ ಗ್ರಾಮಸ್ಥರು ಬರುತ್ತಿದ್ದಾರೆ.

ಒಟ್ಟಾರೆ ಬೆಂಗಳೂರಿನ ಕಸದ ರಾಶಿಗಳ ಗಬ್ಬುನಾಥದಿಂದ ಕಸದ ಘಟಕಗಳು ಎಂದರೆ ಸಾಕು ಎಂದು ವಿರೋಧ ಮಾಡುವವರ ನಡುವೆ ಅರಕೆರೆ ಗ್ರಾಮ ಪಂಚಾಯತಿಯ ಸದಸ್ಯರು ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಜೀವ ವೈವಿದ್ಯ ಉದ್ಯಾನವನ ತಾಣದಲ್ಲಿ ಸ್ವಚ್ಛ ಸಂಕೀರ್ಣ ಮಾಡಿ ತೋರಿಸಿದ್ದಾರೆ. ಇದೇ ಕಸ ವಿಲೇವಾರಿ ಘಟಕಗಳನ್ನು ಇಡೀ ರಾಜ್ಯದ ಪಂಚಾಯತಿಗಳಲ್ಲಿ ಮಾಡಿದರೆ, ಕಸದ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತದೆ.

ವರದಿ: ನವೀನ್

ಇದನ್ನೂ ಓದಿ: ಗಾರ್ಬೇಜ್ ಸಿಟಿಯಾಗಿರುವ ರಾಯಚೂರು ನಗರ; ಒಂದೇ ಒಂದು ರಸ್ತೆ ಬಿಟ್ಟು ಉಳಿದೆಲ್ಲಾ ರಸ್ತೆಗಳು ಕಸಮಯ, ಜಿಲ್ಲಾಡಳಿತದ ನಡೆಗೆ ಜನರ ಆಕ್ರೋಶ

ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಅಗ್ನಿ ಅವಘಡ; ಕಸದ ರಾಶಿಯಿಂದ ಹರಡಿದ ಬೆಂಕಿ