ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಬಳಿ ರಸ್ತೆ ಗುಂಡಿಗಳ ನರ್ತನ: ಟೋಲ್ ಪ್ರಾಧಿಕಾರ ವಿರುದ್ಧ ಜನಾಕ್ರೋಶ
ಬೆಂಗಳೂರಿನ ಹೆಬ್ಬಾಗಿಲಿನಂತಿರುವ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಬಳಿಯೇ ಗುಂಡಿಗಳಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ನೆಲಮಂಗಲ: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ (potholes) ಒಂದಲ್ಲ ಒಂದು ಅವಾಂತರಗಳು ನಡೆಯುತ್ತಿವೆ. ಇದೇ ಬೆಂಗಳೂರಿನ ಹೆಬ್ಬಾಗಿಲಿನಂತಿರುವ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಬಳಿಯೇ ಗುಂಡಿಗಳಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನೈಸ್ ರಸ್ತೆ ಸೇರುವ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮುಂಭಾಗದ ರಸ್ತೆಯಲ್ಲಿ, ಪ್ರತಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಬಿಐಇಸಿಯಲ್ಲಿ ಒಂದು ತಿಂಗಳಲ್ಲಿ ಕನಿಷ್ಟವೆಂದರು ದೊಡ್ಡಮಟ್ಟದ ವಸ್ತು ಪ್ರದರ್ಶನಗಳು ನಡೆಯುತ್ತವೆ. ಹೀಗಾಗಿ ಇಲ್ಲಿಗೆ ಅಂತರಾಷ್ಟ್ರೀಯ ಪ್ರಜೆಗಳು ಕೂಡ ಭಾಗಿಯಾಗುತ್ತಾರೆ. ಇನ್ನೂ ಕಾರ್ಯಕ್ರಮ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿಗಳು ಬಂದು ಹೋಗುತ್ತಾರೆ. ಆದರೆ ಇಲ್ಲಿರುವ ಸಮಸ್ಯೆ ಬಗ್ಗೆ ತಲೆ ಕೆಡಸಿಕೊಳ್ಳಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ರಸ್ತೆ ಗುಂಡಿಗಳನ್ನ ಮುಚ್ಚಿ ಓಡಾಟಕ್ಕೆ ಅನುಕೂಲ ಮಾಡುವಂತೆ ಆಗ್ರಹಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48ರ ರಸ್ತೆಯ ಸರ್ವಿಸ್ ರಸ್ತೆಗಳೆಲ್ಲ ಗುಂಡಿಗಳಿಂದ ತುಂಬಿಹೋಗಿವೆ. ರಸ್ತೆ ಗುಂಡಿ ಮುಚ್ಚಲು ಟೋಲ್ ಪ್ರಾಧಿಕಾರ ಮುಂದಾಗಿಲ್ಲ. ಸಾಕಷ್ಟು ಭಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಇದು ಜನರ ಆಕ್ರೋಶಕ್ಕೂ ಕಾರಣವಾಗಿದೆ. ರಸ್ತೆ ಗುಂಡಿಯಿಂದಾಗಿ ಪ್ರಾಣದ ಹಂಗು ತೊರೆದು ವಾಹನ ಸವಾರರು ಓಡಾಡುವಂತ್ತಾಗಿದೆ.
ಇನ್ನು ಬೆಂಗಳೂರು ನಗರಕ್ಕೆ ಬೆಳಿಗ್ಗೆ 6 ರಿಂದ ಸಾಯಂಕಾಲ 8 ಗಂಟೆವರೆಗೆ ಭಾರಿ ಸರಕು ಸಾಗಾಟ ವಾಹನಗಳಿಗೆ ಪ್ರವೇಶವಿಲ್ಲ. ಎಂಟನೇ ಮೈಲಿ ಇಂದ ಗೊರಗುಂಟೆಪಾಳ್ಯವರೆಗೆ ಇರುವ ಪೀಣ್ಯ ಪ್ಲೈ ಓವರ್ ಮೇಲೆ ಕೂಡ ಭಾರಿ ವಾಹನಗಳಿಗೆ ಪ್ರವೇಶವಿಲ್ಲ. ಹೀಗಾಗಿ ಎಲ್ಲ ಗೂಡ್ಸ್ ಸೇರಿದಂತೆ, ಭಾರಿ ವಾಹನಗಳು ಸರ್ವಿಸ್ ರಸ್ತೆಯಲ್ಲಿಯೇ ಓಡಾಡುತ್ತವೆ. ಈ ಎಲ್ಲ ವಾಹನಗಳು ನೈಸ್ ರಸ್ತೆ ಮೂಲಕ ಹೋಗುವುದರಿಂದ ಸಾಕಷ್ಟು ವಾಹನ ದಟ್ಟಣೆ ಉಂಟಾಗುತ್ತದೆ. ಹೀಗಿರುವಾಗ ರಸ್ತೆ ಎರಡು ಅಡಿವರೆಗೆ ಗುಂಡಿ ಇದ್ದು ಬೈಕ್ ಸವಾರರಂತು ಇಲ್ಲಿ ಓಡಾಡಲು ಕಷ್ಟಸಾಧ್ಯವಾಗಿದೆ. ಇನ್ನು ಮಳೆಗಾಲ ಸಂದರ್ಭದಲ್ಲಿ ರಸ್ತೆ ಯಾವುದೋ ಗುಂಡಿ ಯಾವುದೋ ಅನ್ನೋದು ಕೂಡ ಗೊತ್ತಾಗದೆ ರಸ್ತೆಯಲ್ಲಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಟೋಲ್ ನವರು, ಸರ್ಕಾರ ಯಾವ ಮೂಲಗಳಿಂದ ಆದಾಯ ಬರುತ್ತೆ ಅನ್ನೋದನ್ನ ಮಾತ್ರ ಮಾಡುತ್ತಿವೆ ಹೊರತು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ.
ನಗರ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜನರ ಜೀವದೊಂದಿಗೆ ಚೆಲ್ಲಟವಾಡುತ್ತದೆ. ಇನ್ನೂ ಎಷ್ಟು ನರಬಲಿ ಬೇಕೆಂಬಂತೆ ರಸ್ತೆಗಳಲ್ಲಿ ಗುಂಡಿಗಳು ಬಾಯಿ ತೆರದು ನಿಂತಿದ್ದು, ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಮಂತ್ರಿ ಮಹೋದಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೇ ನಿರ್ಲಕ್ಷ ವಹಿಸುತ್ತಿರುವುದಕ್ಕೆ ಸಾರ್ವಜನಿಕರು ಪರದಾಡುವಂತಾಗಿರುವುದು ವಿಪರ್ಯಾಸ.
ವರದಿ: ವಿನಾಯಕ್ ಗುರವ್, ಟಿವಿ9, ನೆಲಮಂಗಲ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:56 pm, Wed, 26 October 22




