ಮಾಜಿ ಗೃಹ ಸಚಿವರಿಗೆ ಹಾರ ಹಾಕಿ ಜನ್ಮದಿನ ಶುಭಾಶಯ ಕೋರಿದ ರೌಡಿ ಶೀಟರ್, ನೆಲಮಂಗಲದ ಕಡೆ ಹೆಜ್ಜೆ ಹಾಕಿದರಾ ಪರಮೇಶ್ವರ್?
ಒಂದಲ್ ರವಿ ಈ ಹಿಂದೆ ಒಂದಷ್ಟು ಸಣ್ಣ ಪುಟ್ಟ ರೌಡಿ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಪಾತಕ ಲೋಕದಲ್ಲಿ ಅಷ್ಟೇನು ಇತಿಹಾಸ ಇರಲಿಲ್ಲ, ಆದರೆ ಬೆಮೆಲ್ ಕೃಷ್ಣಪ್ಪ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ ರೌಡಿ ಶೀಟರ್ ಇವನಾಗಿದ್ದಾನೆ.
ನೆಲಮಂಗಲ: ಮಾಜಿ ಗೃಹ ಸಚಿವ, ಮಾಜಿ ಡಿಸಿಎಂ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರಿಗೆ ನಿನ್ನೆ 70ನೇ ವರ್ಷದ ಜನ್ಮ ದಿನ ಸಂಭ್ರಮ. ಮಾಜಿ ಗೃಹ ಸಚಿವರಿಗೆ ನೆಲಮಂಗಲದ ರೌಡಿ ಶೀಟರ್ ಒಂದಲ್ ರವಿ ಹೂಮಾಲೆ ಹಾಕಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದು, ರೌಡಿ ಶೀಟರ್ ಒಬ್ಬ ಮಾಜಿ ಗೃಹ ಸಚಿವರಿಗೆ ಶುಭ ಕೋರಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸ್ವಜಾತಿ ಅಭಿಮಾನ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ರೌಡಿ ಶೀಟರ್ ಒಂದಲ್ ರವಿ ಹಾಗೂ ಪರಮೇಶ್ವರ್ ಒಂದೇ ಸಮುದಾಯದವರಾಗಿದ್ದು ಸ್ವಜಾತಿ ಅಭಿಮಾನದಿಂದ ರೌಡಿ ಶೀಟರ್ ರವಿ ಶುಭಾಶಯ ಕೋರಿದ್ದು, ರವಿ ಸಹ ಪರಮೇಶ್ವರ್ ಸಹಕಾರದಿಂದ ರಾಜಕೀಯದಲ್ಲಿ ಸಕ್ರಿಯಗೊಳ್ಳುವ ಯೋಜನೆಯಲ್ಲಿದ್ದು ಪರಮೇಶ್ವರ್ ಒಡನಾಟ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ.
ಪರಮೇಶ್ವರ್ ವಲಸೆ ಗುಮಾನಿ: ಡಾ ಜಿ ಪರಮೇಶ್ವರ್ ಸದ್ಯ ತುಮಕೂರು ಜಿಲ್ಲೆ ಕೊರಟಗೆರೆ ಕ್ಷೇತ್ರದ ಶಾಸಕರಾಗಿದ್ದು, 2013 ರ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡ ನಂತರ 2018 ಚುನಾವಣೆಗೆ ಪರಮೇಶ್ವರ್ ನೆಲಮಂಗಲ ಕ್ಷೇತ್ರವನ್ನ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು ಎನ್ನುವ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಲೇ ಇವೆ. ಹೀಗಿರುವಾಗ ಸದ್ಯದ ತುಮಕೂರು ರಾಜಕೀಯ ವಿದ್ಯಾಮಾನಗಳಲ್ಲಿ ಪರಮೇಶ್ವರ್ 2023 ವಿಧಾನಸಭಾ ಚುನಾವಣೆಗೆ ಮತ್ತೆ ನೆಲಮಂಗಲ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಗುಮಾನಿ ಎದ್ದಿದ್ದು, ನೆಲಮಂಗಲ ಒಡನಾಟ ಹಾಗೂ ನೆಲಮಂಗಲ ರೌಡಿ ಶೀಟರ್ ಭೇಟಿ ವಲಸೆ ಗುಮಾನಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಬೆಮೆಲ್ ಕೃಷ್ಣಪ್ಪ ಮರ್ಡರ್ ಪ್ರಕರಣದ ಆರೋಪಿ ಒಂದಲ್ ರವಿ: ಇನ್ನು ಒಂದಲ್ ರವಿ ಈ ಹಿಂದೆ ಒಂದಷ್ಟು ಸಣ್ಣ ಪುಟ್ಟ ರೌಡಿ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಪಾತಕ ಲೋಕದಲ್ಲಿ ಅಷ್ಟೇನು ಇತಿಹಾಸ ಇರಲಿಲ್ಲ, ಆದರೆ ಬೆಮೆಲ್ ಕೃಷ್ಣಪ್ಪ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ ರೌಡಿ ಶೀಟರ್ ಇವನಾಗಿದ್ದಾನೆ.
ಆರ್‌ಟಿಐ ಕಾರ್ಯಕರ್ತ ಅನ್ನೋ ಹಣೆ ಪಟ್ಟಿ: ಇನ್ನು ರೌಡಿ ಶೀಟರ್ ಒಂದಲ್ ರವಿ ತನಗೆ ಅಂಟಿರುವ ಕಪ್ಪು ಮಸಿಯನ್ನ ತೊಳೆದು ಹಾಕಿಕೊಳ್ಳಲು ಸಾಮಾಜಿಕ ಕಾರ್ಯಗಳನ್ನ ಮಾಡುತ್ತಿರುವ ಹಾಗೆ ನಡೆದುಕೊಳ್ಳುತ್ತಿದ್ದು, ಮಾಹಿತಿ ಹಕ್ಕು ಕಾಯಿದೆಯಡಿ ಸರ್ಕಾರದ ವಿವಿಧ ಇಲಾಖೆಗಳಿಗೆ ಒಂದಷ್ಟು ಆರ್‌ಟಿಐ ಅರ್ಜಿಗಳನ್ನ ಹಾಕುತ್ತ ಅಧಿಕಾರಿಗಳನ್ನ ಬೆದರಿಸುತ್ತಿರುವ ಆರೋಪ ಕೇಳಿಬಂದಿದೆ. ಆರ್‌ಟಿಐ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುತ್ತೇನೆ ಎಂದು ತನಗೆ ತಾನೆ ಹಣೆಪಟ್ಟಿ ಹಾಕಿಕೊಂಡಿರುವ ಬಗ್ಗೆ ಹಲವರು ಆರೋಪಿಸುತ್ತಿದ್ದಾರೆ.
(rowdy sheeter ondal ravi birthday wishes to Former DCM Dr G Parameshwara in nelamangala)