
ದೇವನಹಳ್ಳಿ, ಅಕ್ಟೋಬರ್ 11: ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ಹೋಗಿದ್ದ ಕುಟುಂಬ ವಾಪಸ್ ಮನೆಗೆ ಬಂದಾಗ ಶಾಕ್ ಕಾದಿತ್ತು. ಮನೆ ಮಂದಿ ಸಿನಿಮಾಗೆ ಹೋಗಿರುವುದನ್ನೇ ಬಂಡವಾಳ ಮಾಡಿಕೊಂಡ ಖದೀಮ ಮನೆಗೆ ನುಗ್ಗಿ 120 ಗ್ರಾಂ ಚಿನ್ನ ಕದಿದ್ದಾನೆ. ಆದರೆ ಕಳ್ಳನ ಹಣೆಬರಹ ಸರಿ ಇರಲಿಲ್ಲ, ಮನೆಯವರ ಕೈಗೆ ಸಿಕ್ಕಿಬಿದಿದ್ದಾನೆ. ಸದ್ಯ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ವಿಜಯಪುರ ಪೊಲೀಸರು ತನಿಖೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೊಬ್ಬರ ಗುಂಟೆ ಗ್ರಾಮದ ಕೃಷ್ಣಪ್ಪ ಎಂಬುವವರ ಮನೆಯಲ್ಲಿ ಅಜಯ್ ಎಂಬಾತ ಕಳ್ಳತನಕ್ಕೆ ಯತ್ನಿಸಿದ್ದಾನೆ. ನಿನ್ನೆ ಕುಟುಂಬಸ್ಥರು ‘ಪ್ರೇಮದ ಊರಲಿ’ ಸಿನಿಮಾ ನೋಡಲು ಹೋಗಿದ್ದರು. ಇತ್ತ ಮನೆಯಲ್ಲಿ ಯಾರು ಇಲ್ಲದನ್ನು ಕಂಡ ಅಜಯ್, ಮಧ್ಯಾಹ್ನ 1.50ರ ಸುಮಾರಿಗೆ ಮನೆಗೆ ನುಗ್ಗಿದ್ದಾನೆ. ಮನೆಯಲ್ಲಿದ್ದ 120 ಗ್ರಾಂ ಚಿನ್ನವನ್ನು ಕದಿದ್ದಾನೆ.
ಇತ್ತ ಕುಟುಂಬಸ್ಥರು ಮನೆಗೆ ವಾಪಸ್ ಆಗುತ್ತಿದ್ದಂತೆ ಅನುಮಾನ ಮೂಡಿದಿದೆ. ಸಿನಿಮಾಗೆ ಹೋಗುವಾಗ ಹೊರಗಡೆಯಿಂದ ಆಗಿದ್ದ ಲಾಕ್, ಇದೀಗ ಒಳಗಡೆಗೆ ಹೇಗೆ ಲಾಕ್ ಆಯಿತು ಅಂತ ಅನುಮಾನ ಮೂಡಿದೆ. ಹೀಗಾಗಿ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಆರೋಪಿ ಮನೆ ಒಳಗಡೆ ನುಗ್ಗಿದು, ಹೊರಗಡೆ ಬಾರದಿರುವುದು ಗೊತ್ತಾಗಿದೆ. ಹೀಗಾಗೆ ಕೂಡಲೇ ಅಲರ್ಟ್ ಆದ ಕುಟುಂಬಸ್ಥರು, ಮನೆಯನ್ನ ಸುತ್ತುವರೆದು ಮನೆಯಲ್ಲಿದ್ದ ಕಳ್ಳನಿಗಾಗಿ ಶೋಧ ನಡೆಸಿದಾಗ ಮಂಚದ ಕೆಳಗಡೆ ಅವಿತಿರುವುದು ಗೊತ್ತಾಗಿದೆ. ಮನೆ ಮಂದಿ ಕಳ್ಳನನ್ನ ಸೆರೆಹಿಡಿದು ಥಳಿಸಿದ್ದಾರೆ.
ಬಂಧಿತ ಅಜಯ್ ಮೂಲತಃ ಕೇರಳದ ತ್ರಿಶೂರ್‌ನ ಚಿತ್ತಿಲಪಲ್ಲಿ ಮೂಲದವನು. ಕೆಲಸ ಅರಸಿ ಕೇರಳದಿಂದ ಬೆಂಗಳೂರಿಗೆ ಬಂದಿದ್ದು, ಯಲಹಂಕ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದ. ಇನ್ನು ಈ ಅಜಯ್ ಕಳ್ಳತನಕ್ಕೂ ಮುನ್ನ ಎರಡು ಮೂರು ದಿನಗಳಿಂದ ಮನೆಯವರ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಎಂಬುವುದು ವಿಜಯಪುರ ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಸದ್ಯ ಚಿನ್ನಾಭರಣಗಳನ್ನ ವಿಜಯಪುರ ಪೊಲೀಸರು ವಶಕ್ಕೆ ಪಡೆದು ಮನೆ ಮಾಲೀಕರಿಗೆ ವಾಪಸ್ ನೀಡಿದ್ದಾರೆ. ಇನ್ನೂ ಮನೆಯವರ ಸಮಯ ಪ್ರಜ್ನೆಯಿಂದ ಸಿಕ್ಕಿಬಿದ್ದ ಕಳ್ಳನನ್ನ ವಿಜಯಪುರ ಪೊಲೀಸರು ವಶಕ್ಕೆ ಪಡೆದು ಬೇರೆ ಎಲ್ಲಿಯಾದರೂ ಕೃತ್ಯವೆಸಗಿದ್ದಾನಾ ಅಂತ ವಿಚಾರಣೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:24 pm, Sun, 11 October 26