ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ: ಹಿರಿಯೂರು ಉಪಚುನಾವಣೆ ಗೆಲ್ಲಲು ರಣತಂತ್ರ, SIR ವಿವಾದವಾಗಿ ಹೋರಾಟ ತೀವ್ರಕ್ಕೂ ನಿರ್ಧಾರ
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಿರಿಯೂರು ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸುವ ರಣತಂತ್ರ ಹಾಗೂ ಎಸ್‌ಐಆರ್ ವಿವಾದದ ವಿರುದ್ಧ ಹೋರಾಟ ತೀವ್ರಗೊಳಿಸುವ ಕುರಿತು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ರಾಜ್ಯ ಬಿಜೆಪಿ ಸಹ ಉಸ್ತುವಾರಿ ವೆಂಕಟೇಶ್ವರಲು ಅವರನ್ನು ಬಿಜೆಪಿಗರು ಸನ್ಮಾನಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 11: ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಹಿರಿಯೂರು ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಬಿಜೆಪಿಯಿಂದಲೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ. ಮಿತ್ರ ಪಕ್ಷ ಜೆಡಿಎಸ್ ವಿಶ್ವಾಸದೊಂದಿಗೆ ಬಿಜೆಪಿ ಅಭ್ಯರ್ಥಿ ಸ್ಫರ್ಧೆಯ ಸಾಧಕ ಬಾಧಕಗಳ ಬಗ್ಗೆ ನಾಯಕರು ಚರ್ಚಿಸಿದ್ದು, ಮೂರ್ನಾಲ್ಕು ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ದಪಡಿಸುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ಕೋರ್ ಕಮಿಟಿ ನೀಡಿದೆ.
ಅಲ್ಲದೆ ಹಿರಿಯೂರು ಉಪಚುನಾವಣೆಗೆ ಸಂಬಂಧಿಸಿದಂತೆ ಸಮನ್ವಯ ಸಮಿತಿ ರಚಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದ್ದು, ಜಿ.ಪಂ.ಮತ್ತು ತಾ.ಪಂ. ಚುನಾವಣೆಗೆ ಪ್ರತಿ ಜಿಲ್ಲೆಗಳಿಗೂ ಉಸ್ತುವಾರಿಗಳು ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿಗೆ ಸ್ವಲ್ಪ ಹಿನ್ನೆಡೆಯಾಗಿದೆ ಎಂಬ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಹಿನ್ನೆಡೆಯಾಗಿರುವ ಕಡೆ ಹೆಚ್ಚು ಗಮನ ಹರಿಸಲು ನಿರ್ಧರಿಸಲಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಎಫ್ಐಆರ್ ಮುಂದುವರಿದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ನನಗೆ ಮೇಲ್ಜಾತಿಯವರ ವೋಟುಗಳು ಬೇಡ; ನನ್ನ ಕ್ಷೇತ್ರಕ್ಕೆ ನಾನೇ ಬಾಸ್; ಪ್ರದೀಪ್ ಈಶ್ವರ್ ಭಾಷಣದ ವಿಡಿಯೋ ವೈರಲ್
ಕೋರ್ ಕಮಿಟಿ ಸಭೆಯಲ್ಲಿ ಯಾರೆಲ್ಲ ಭಾಗಿ?
ಬಿಜೆಪಿ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ, ಶ್ರೀ ಡಿ. ವಿ. ಸದಾನಂದ ಗೌಡ, ಶ್ರೀ ಬಸವರಾಜ ಎಸ್. ಬೊಮ್ಮಾಯಿ, ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸಹ ಉಸ್ತುವಾರಿಗಳಾದ ಡಾ. ಕಾಸಂ ವೆಂಕಟೇಶ್ವರಲು, ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರೊ. ಎಂ. ನಾಗರಾಜ್, ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ, ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್, ಮಾಜಿ ಸಚಿವರಾದ ಶ್ರೀ ಸಿ. ಟಿ. ರವಿ, ಶ್ರೀ ಬಿ. ಶ್ರೀರಾಮುಲು, ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮಾಜಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ನಿರ್ಮಲ್ ಕುಮಾರ್ ಸುರಾನ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಿ. ರಾಜೀವ್ ಅವರು ಉಪಸ್ಥಿತರಿದ್ದರು.
— BJP Karnataka (@BJP4Karnataka) October 11, 2026
ರಾಜ್ಯ ಬಿಜೆಪಿ ಸಹ ಉಸ್ತುವಾರಿ ವೆಂಕಟೇಶ್ವರಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬೊಮ್ಮಾಯಿ, ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರೊ. ಎಂ. ನಾಗರಾಜ್, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಸಿ. ಟಿ. ರವಿ, ಬಿ. ಶ್ರೀರಾಮುಲು, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಉಪಸ್ಥಿತರಿದ್ದರು.
ಡಾ. ಕಾಸಂ ವೆಂಕಟೇಶ್ವರಲುಗೆ ಸನ್ಮಾನ
ಬೆಂಗಳೂರಿಗೆ ಆಗಮಿಸಿದ ರಾಜ್ಯ ಬಿಜೆಪಿ ಸಹ ಉಸ್ತುವಾರಿ ವೆಂಕಟೇಶ್ವರಲು ಅವರನ್ನು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಬಿಜೆಪಿ ನಾಯಕರು ಅಧ್ದೂರಿಯಾಗಿ ಬರಮಾಡಿಕೊಂಡರು. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿ ತಮ್ಮೇಶ್ ಗೌಡ ವೆಂಕಟೇಶ್ವರಲು ಅವರನ್ನು ಸ್ವಾಗತಿಸಿದರು. ಆ ಬಳಿಕ ಕೋರ್ ಕಮಿಟಿ ಸಭೆ ಆರಂಭಕ್ಕೂ ಮುನ್ನ ಅವರನ್ನು ರಾಜ್ಯ ಬಿಜೆಪಿ ಘಟಕದಿಂದ ಸನ್ಮಾನಿಸಲಾಯಿತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:16 pm, Sun, 11 October 26




