ಬೆಂಗಳೂರು ಕಾಲ್ತುಳಿತ: ಹೈಕೋರ್ಟ್ ಮೆಟ್ಟಿಲೇರಿದ ಡಿಎನ್ಎ ಎಂಟರ್ಟೈನ್ಮೆಂಟ್, ಸರ್ಕಾರದ ವಿರುದ್ಧ ಗಂಭೀರ ಆರೋಪ
ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಯೋಜನೆ ಮಾಡಿದ್ದು KSCA. ತಪ್ಪು ಅವರದ್ದೇ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಸರ್ಕಾರವೇ ಸನ್ಮಾನದ ಪ್ರಸ್ತಾಪ ಮಾಡಿದ್ದು, ಅವರಿಂದಲೇ ಲೋಪವಾಗಿದೆ ಎಂದಯ KSCA ಹೇಳುತ್ತಿದೆ. ಈ ಆರೋಪ ಪ್ರತ್ಯಾರೋಪಗಳ ಮಧ್ಯೆ ಜೀವ ಕಳೆದುಕೊಂಡ 11 ಜನರ ಕುಟುಂಬಗಳು ಕಣ್ಣೀರಿಡುತ್ತಿವೆ. ಇದರ ನಡುವೆ ಎಫ್ಐಆರ್ ರದ್ದು ಕೋರಿ ಡಿಎನ್ಎ ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರದ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದೆ.

ಬೆಂಗಳೂರು, (ಜೂನ್ 09): ಬೆಂಗಳೂರಿನ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ (Bengaluru stampede Case) ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ ಮತ್ತು ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್ ಗೆ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿವೆ. ಅದರಲ್ಲೂ ಡಿಎನ್ಎ ಎಂಟರ್ಟೈನ್ಮೆಂಟ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂನ ಕಾರ್ಯಕ್ರಮದ ಪ್ಲ್ಯಾನ್ ಸರ್ಕಾರ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (KSCA) ನದ್ದು. ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಸರ್ಕಾರವೇ ಕರೆ ಕೊಟ್ಟಿತ್ತು ಎಂದು ರಿಟ್ ಅರ್ಜಿಯಲ್ಲಿ ಸ್ಫೋಟಕ ಅಂಶಗಳನ್ನು ಉಲ್ಲೇಖಿಸಿದೆ.
ಭಾರತ ಟಿ20 ವಿಶ್ವಕಪ್ ಗೆದ್ದಾಗ ಮುಂಬೈನಲ್ಲಿ ವಿಕ್ಟರಿ ಪರೇಡ್ ನಡೆಸಲಾಗಿತ್ತು.DNA ಆಯೋಜಿಸಿದ್ದ ಪರೇಡ್ ನಲ್ಲಿ 3 ಲಕ್ಷ ಜನರಿದ್ದರೂ ಯಾವುದೇ ಅವಘಡಗಳಾಗಿರಲಿಲ್ಲ. ವಾಂಖೆಡೆ ಸ್ಟೇಡಿಯಂನ ಪ್ರೇಕ್ಷಕರ ಸಾಮರ್ಥ್ಯ 32,000 ಇದ್ರೂ ಸಮಸ್ಯೆ ಆಗಿರಲಿಲ್ಲ ಎಂದು ಡಿಎನ್ಎ ಎಂಟರ್ಟೈನ್ಮೆಂಟ್ ಎಂದು ಹೈಕೋರ್ಟ್ ಗೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತಕ್ಕೆ DPRA ನಿರ್ಲಕ್ಷ್ಯ ಬಯಲು, ಅಪಾಯದ ಎಚ್ಚರಿಕೆ ನೀಡಿದ್ದ ಡಿಸಿಪಿ..!
ಆರ್‌ಸಿಬಿ ವಿಕ್ಟರಿ ಪರೇಡ್ ನಡೆಸಲು ಅನುಮತಿಗಾಗಿ ಜೂನ್ 3ರಂದು ಪತ್ರ ಬರೆಯಲಾಗಿತ್ತು. ತೆರೆದ ಬಸ್ ನಲ್ಲಿ ಪರೇಡ್ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರು. ರಾಜ್ಯ ಸರ್ಕಾರ ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ನಿರ್ಧರಿಸಿತು.ಪೊಲೀಸರು ವಿಧಾನಸೌಧದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಿದರು. ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಗತ್ಯವಿದ್ದಷ್ಟು ಪೊಲೀಸರು ಇರಲಿಲ್ಲ. ಡಿಎನ್ಎ ಸಂಸ್ಥೆಯಿಂದಲೇ 584 ಖಾಸಗಿ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಬಂಧನಕ್ಕೆ ಆದೇಶಿಸಿದೆ ಎಂದು ಆರೋಪಿಸಿದೆ.
ಸಿಎಂ ಸೂಚನೆ ಮೇರೆಗೆ DNA ಸಂಸ್ಥೆಯ ಇಬ್ಬರು ಸಿಬ್ಬಂದಿ ಬಂಧಿಸಲಾಗಿದೆ. ಘಟನೆ ದಿನ ಪೊಲೀಸರಿಗೆ 2,450 ಆಹಾರ ಪೊಟ್ಟಣ ಸಿದ್ಧಪಡಿಸಲಾಗಿತ್ತು. ಆದರೆ ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಜೂನ್ 4ರಂದು ಮಧ್ಯಾಹ್ನ 600 ಆಹಾರ ಪೊಟ್ಟಣ ಮಾತ್ರ ಸ್ವೀಕರಿಸಿದರು. ರಾತ್ರಿ ಭೋಜನಕ್ಕೆ ಮಾತ್ರ 2,450 ಆಹಾರ ಪೊಟ್ಟಣ ಸ್ವೀಕರಿಸಿದರು. ಮಧ್ಯಾಹ್ನ 3.30ಕ್ಕೆ ಗೇಟ್ ತೆರೆದ ಬಳಿಕವೂ ಅಭಿಮಾನಿಗಳ ದಟ್ಟಣೆ ಇತ್ತು. ಬಳಿಕ ಬಂದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತವಾಗಿದೆ ಎಂದು ಡಿಎನ್ಎ ತನ್ನ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದೆ.
ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂನ ಕಾರ್ಯಕ್ರಮದ ಪ್ಲ್ಯಾನ್ ಸರ್ಕಾರ, KSCAನದ್ದು. ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಸರ್ಕಾರವೇ ಕರೆ ಕೊಟ್ಟಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಚರ್ಚಿಸಿ ಕ್ಷಣಕ್ಷಣದ ಪ್ಲ್ಯಾನ್ ರೂಪಿಸಿದ್ದರು. ಸರ್ಕಾರ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ಕಾಲ್ತುಳಿತವಾಗಿದೆ. ಲಕ್ಷಾಂತರ ಜನ ವಿಧಾನಸೌಧಕ್ಕೆ ಬಂದು, ಸ್ಟೇಡಿಯಂಗೂ ಬಂದಿದ್ದೇ ಈ ಘಟನೆ ಕಾರಣ ಎಂದು ತಿಳಿಸಿದೆ.
ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ 4 ರಿಟ್ ಅರ್ಜಿ
ಆರ್‌ಸಿಬಿ ಸಿಒಒ ರಾಜೇಶ್ ಮೆನನ್, ನಿಖಿಲ್ ಸೋಸಲೆ, ಡಿಎನ್‌ಎ, ಸುನೀಲ್, ಕಿರಣ್ ಕುಮಾರ್, ಶಮಂತ್ ಮಾವಿನಕೆರೆ ಎಫ್‌ಐಆರ್ ರದ್ದು ಕೋರಿ ರಿಟ್ ಅರ್ಜಿಗಳ ಸಲ್ಲಿಕೆ ಮಾಡಿದ್ದು, ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ. ಹಾಗೇ ಕಾರ್ಯಕ್ರಮ ಆಯೋಜನೆಯಲ್ಲಿ ಸರ್ಕಾರದ ಪಾತ್ರ, ಸಿಎಂ ಟ್ವೀಟ್, ಡಿಸಿಎಂ ಹೇಳಿಕೆಗಳನ್ನೇ ಆಧಾರವನ್ನಾಗಿಸಿ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಅರ್ಜಿ ವಿಚಾರಣೆ ಇಂದು (ಜೂನ್ 09) ನಡೆಯಲಿದ್ದು, ಕೋರ್ಟ್ ಏನು ಹೇಳಿಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:40 pm, Mon, 9 June 25







