
ಬೆಂಗಳೂರು/ಮಂಗಳೂರು, ಸೆಪ್ಟೆಂಬರ್ 07: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ವಿರುದ್ಧ 108 ಆ್ಯಂಬುಲೆನ್ಸ್ ನೌಕರರು ಸಮರ ಸಾರಿದ್ದು, 15 ದಿನದೊಳಗೆ ಬೇಡಿಕೆ ಈಡೇರದೆ ಇದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಪ್ರತಿ ವರ್ಷ 108 ಆ್ಯಂಬುಲೆನ್ಸ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು, 3 ಪಾಳಿಯಲ್ಲಿ ಆ್ಯಂಬುಲೆನ್ಸ್ ವಾಹನದ ಸೌಕರ್ಯ ಮಾಡಬೇಕು ಮತ್ತು ವಲಯವಾರು ವಿಂಗಡಣೆ ಮಾಡಿ ನಿಗದಿ ಮಾಡಿರೋ ವೇತನ ರದ್ದು ಪಡಿಸಿ ಏಕರೂಪ ವಲಯವಾಗಿ ಬದಲಾವಣೆ ಮಾಡಬೇಕೆಂಬುದು ನೌಕರರ ಆಗ್ರಹವಾಗಿದೆ.
ಇದನ್ನೂ ಓದಿ: ಸಿಕ್ಕ ಸಿಕ್ಕ ಕ್ಲಿನಿಕ್ಗೆ ಹೋಗುವ ಮುನ್ನ ಎಚ್ಚರ! ರಾಜ್ಯದಲ್ಲಿದ್ದಾರೆ 583 ಕ್ಕೂ ಹೆಚ್ಚು ನಕಲಿ ವೈದ್ಯರು
108 ಆ್ಯಂಬುಲೆನ್ಸ್ ಸಿಬ್ಬಂದಿ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್,
ಸಿಬ್ಬಂದಿ ಮುಷ್ಕರ ಮಾಡಲಿ. ಆದರೆ ರೋಗಿಗಳಿಗೆ ಸಮಸ್ಯೆಯಾದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ. 108 ಆ್ಯಂಬುಲೆನ್ಸ್ ವಾಹನಗಳ ನಿರ್ವಹಣೆ ಮಾಡೋಡದು ನಾವಲ್ಲ. ಕಂಪನಿಯು ಸಿಬ್ಬಂದಿಯ ವೇತನ ಸೇರಿ ಎಲ್ಲಾ ಕೆಲಸ ಮಾಡುತ್ತೆ. ಚಾಲಕರಿಗೆ ಸಮಸ್ಯೆ ಇದ್ದರೆ ಕಂಪನಿ ಜೊತೆ ಮಾತನಾಡಬೇಕು. ಅವರು ಸಮಸ್ಯೆ ಬಗೆಹರಿಸದಿದ್ದರೆ ನಮ್ಮ ಬಳಿ ಮಾತನಾಡಲಿ. ಈ ವಿಚಾರದಲ್ಲಿ ನಮಗೂ, ಕಂಪನಿಗೂ ಯಾವುದೇ ಸಂಬಂಧ ಇರಲ್ಲ. ಹೀಗಾಗಿ ನಮಗೆ ಆ್ಯಂಬುಲೆನ್ಸ್ ಸಿಬ್ಬಂದಿ ಮುಷ್ಕರ ನಡೆಸಿ ಸಮಸ್ಯೆ ಮಾಡಬಾರದು. ಸಿಬ್ಬಂದಿ ಮುಷ್ಕರ ಅಲ್ಲ ಏನೇ ಮಾಡಿದರೂ ನಾವು ಜವಾಬ್ದಾರಿ ಅಲ್ಲ. ಸಿಬ್ಬಂದಿಯನ್ನು ನಿಭಾಯಿಸಲು ಆಗದಿದ್ದರೆ ಕಂಪನಿಯು ಬಿಟ್ಟುಹೋಗಲಿ. ನಾವು ಬೇರೆ ಕಂಪನಿಗೆ ಟೆಂಡರ್ ಕೊಡುತ್ತೇವೆ. ಆ್ಯಂಬುಲೆನ್ಸ್ ಸಿಬ್ಬಂದಿ ವರ್ಗದವರು ನಮ್ಮ ಸಹೋದರರು ಇದ್ದಂತೆ. ಆದರೆ ಅವರಿಗಿಂತ ನಮಗೆ ರೋಗಿಗಳ ಆರೋಗ್ಯ ಮುಖ್ಯ. ಮುಷ್ಕರದ ವೇಳೆ ರೋಗಿಗೆ ಸಮಸ್ಯೆಯಾದರೆ ನಾವು ಸುಮ್ಮನಿರಲ್ಲ. ಮುಷ್ಕರದಲ್ಲಿ ಭಾಗಿಯಾಗುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತೆ. ರೋಗಿಗಳ ನೆರವಿಗೆ ಬರದಿದ್ದರೆ ಸಿಬ್ಬಂದಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕೂಡಲೇ ಕ್ರಮಕೈಗೊಳ್ಳಬೇಕಾಗುತ್ತೆ ಎಂದು ಸಚಿವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:34 pm, Mon, 7 September 26